Homeಕರ್ನಾಟಕಶಿಕ್ಷಣ, ಆರೋಗ್ಯ, ಕೌಶಲ್ಯಾಭಿವೃದ್ಧಿಗೆ ಸಿಎಸ್‌ಆರ್ ಹೂಡಿಕೆ ಹೆಚ್ಚಬೇಕು: ಸಂಸದೆ ಪ್ರಭಾ ಮಲ್ಲಿಕಾರ್ಜುನ್

ಶಿಕ್ಷಣ, ಆರೋಗ್ಯ, ಕೌಶಲ್ಯಾಭಿವೃದ್ಧಿಗೆ ಸಿಎಸ್‌ಆರ್ ಹೂಡಿಕೆ ಹೆಚ್ಚಬೇಕು: ಸಂಸದೆ ಪ್ರಭಾ ಮಲ್ಲಿಕಾರ್ಜುನ್

ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಎಂಬುದು ಕೇವಲ ದಾನಧರ್ಮದ ಪರಿಕಲ್ಪನೆಯಲ್ಲ. ಅದು ಉದ್ಯಮಗಳ ನೈತಿಕ ಹೊಣೆಗಾರಿಕೆ ಹಾಗೂ ರಾಷ್ಟ್ರ ನಿರ್ಮಾಣದ ಪ್ರಮುಖ ಸಾಧನವಾಗಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.

ಬೆಂಗಳೂರು ನಗರದ ಕೆ.ಜಿ. ರಸ್ತೆಯಲ್ಲಿರುವ ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಮಂಡಳಿ (FKCCI) ಹಾಗೂ ಯುನೈಟೆಡ್ ನೇಷನ್ಸ್ ಗ್ಲೋಬಲ್ ಕಾಂಪ್ಯಾಕ್ಟ್ ನೆಟ್‌ವರ್ಕ್ ಇಂಡಿಯಾ (UN GCNI) ಅವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಎಫ್‌ಕೆಸಿಸಿಐ ಜಾಗತಿಕ ಸಿಎಸ್‌ಆರ್ ಮತ್ತು ಸುಸ್ಥಿರತೆ ಶೃಂಗಸಭೆ–2026ರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಭಾರತದಲ್ಲಿ ಸಿಎಸ್‌ಆರ್ ಚೌಕಟ್ಟಿನ ಬೆಳವಣಿಗೆಯನ್ನು ಉಲ್ಲೇಖಿಸಿದ ಅವರು, 2013ರಲ್ಲಿ ಡಾ. ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ಜಾರಿಗೆ ಬಂದ ಕಂಪನಿಗಳ ಕಾಯ್ದೆಯ ಕಲಂ 135ರ ಮೂಲಕ ಭಾರತವು ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯನ್ನು ಕಾನೂನುಬದ್ಧಗೊಳಿಸಿದ ವಿಶ್ವದ ಮೊದಲ ಪ್ರಮುಖ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಹೇಳಿದರು. ಈ ಕಾನೂನಿನಡಿ ಅರ್ಹ ಕಂಪನಿಗಳು ತಮ್ಮ ಸರಾಸರಿ ನಿವ್ವಳ ಲಾಭದ ಶೇಕಡಾ 2ರಷ್ಟು ಮೊತ್ತವನ್ನು ಸಮಾಜಮುಖಿ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಡುವುದು ಕಡ್ಡಾಯವಾಗಿದ್ದು, ಇದರಿಂದ ಉದ್ಯಮಗಳ ಪಾತ್ರವು ಕೇವಲ ಸಂಪತ್ತಿನ ಸೃಷ್ಟಿಗೆ ಸೀಮಿತವಾಗದೆ ರಾಷ್ಟ್ರ ನಿರ್ಮಾಣದ ಪಾಲುದಾರಿಕೆಯಾಗಿ ರೂಪುಗೊಂಡಿದೆ ಎಂದು ತಿಳಿಸಿದರು.

ಸಿಎಸ್‌ಆರ್‌ನ ನೈತಿಕ ನೆಲೆಯನ್ನು ವಿವರಿಸಿದ ಅವರು, ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ ಟ್ರಸ್ಟೀಶಿಪ್ ತತ್ವ ಹಾಗೂ ಜಗಜ್ಯೋತಿ ಬಸವಣ್ಣನವರ ‘ಕಾಯಕ’, ‘ದಾಸೋಹ’ ಮತ್ತು ‘ಶರಣ’ ತತ್ವಗಳು ಸಮಾಜಮುಖಿ ಅಭಿವೃದ್ಧಿಗೆ ಮಾರ್ಗದರ್ಶಕವಾಗಿವೆ ಎಂದರು. “ಕಾಯಕವೇ ಕೈಲಾಸ” ಎಂಬ ಬಸವಣ್ಣರ ಸಂದೇಶವು ಪ್ರಾಮಾಣಿಕ ದುಡಿಮೆಯ ಮಹತ್ವವನ್ನು ಸಾರಿದರೆ, “ದಾಸೋಹ” ತತ್ವವು ಸಂಪತ್ತನ್ನು ಸಮಾಜದ ಹಿತಕ್ಕಾಗಿ ಹಂಚಿಕೊಳ್ಳುವ ಸಂಸ್ಕೃತಿಯನ್ನು ಬೆಳೆಸಿದೆ ಎಂದು ಹೇಳಿದರು.

ಸರ್ಕಾರ, ಕೈಗಾರಿಕೆ ಹಾಗೂ ಸಮಾಜದ ನಡುವಿನ ಸಹಭಾಗಿತ್ವದ ಮಹತ್ವದ ಕುರಿತು ಮಾತನಾಡಿದ ಸಂಸದರು ಸಮಾನ, ಪರಿಣಾಮಕಾರಿ ಹಾಗೂ ಸುಸ್ಥಿರ ಅಭಿವೃದ್ಧಿ ಸಾಧಿಸುವಲ್ಲಿ ಸಿಎಸ್‌ಆರ್ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು. ಶಿಕ್ಷಣ, ಆರೋಗ್ಯ, ಕೌಶಲ್ಯಾಭಿವೃದ್ಧಿ, ಪರಿಸರ ಸಂರಕ್ಷಣೆ ಹಾಗೂ ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಲ್ಲಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ ಮೂಲಕ ಇನ್ನಷ್ಟು ಪರಿಣಾಮಕಾರಿ ಮತ್ತು ದೀರ್ಘಕಾಲೀನ ಹೂಡಿಕೆಗಳು ಆಗಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಎಸ್‌.ಎಸ್‌. ಕೇರ್ ಟ್ರಸ್ಟ್ ಕೈಗೊಂಡಿರುವ ಸಮಾಜಮುಖಿ ಸೇವಾ ಕಾರ್ಯಗಳನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಅವರು, ಸಿಎಸ್‌ಆರ್ ಮೂಲಕ ಕೈಗೊಳ್ಳುವ ಹೂಡಿಕೆಗಳು ಜನಜೀವನದಲ್ಲಿ ಹೇಗೆ ನೇರ ಮತ್ತು ಶಾಶ್ವತ ಬದಲಾವಣೆ ತರಬಲ್ಲವು ಎಂಬುದನ್ನು ಟ್ರಸ್ಟ್‌ನ ಕಾರ್ಯಚಟುವಟಿಕೆಗಳು ಸ್ಪಷ್ಟವಾಗಿ ತೋರಿಸುತ್ತವೆ ಎಂದು ಹೇಳಿದರು. ಟ್ರಸ್ಟ್ ಮೂಲಕ 30 ಸಾವಿರಕ್ಕೂ ಹೆಚ್ಚು ಉಚಿತ ಡಯಾಲಿಸಿಸ್ ಸೇವೆಗಳನ್ನು ಒದಗಿಸಲಾಗಿದ್ದು, 1,500ಕ್ಕೂ ಹೆಚ್ಚು ತಾಯಂದಿರಿಗೆ ಮಾತೃತ್ವ ನೆರವು ನೀಡಲಾಗಿದೆ. ಅಲ್ಲದೆ, ಆರ್ಥಿಕವಾಗಿ ದುರ್ಬಲ ವರ್ಗದ ಅನೇಕ ರೋಗಿಗಳಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ನೆರವೇರಿಸಿ ಆರೋಗ್ಯ ಸೇವೆಯನ್ನು ಜನಸಾಮಾನ್ಯರಿಗೆ ತಲುಪಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಫ್‌ ಕೆಸಿಸಿ ಅಧ್ಯಕ್ಷರಾದ ಉಮಾರೆಡ್ಡಿ, ಐಐಎಂಬಿ ಪ್ರೋಫೆಸರ್‌ ಪಿ.ಡಿ ಜೋಸ್‌, ಟಿ.ಸಾಯಿರಾಮ್‌ ಪ್ರಸಾದ್‌, ಬಿ.ಪಿ ಶಶಿಧರ್‌ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments