ರಾಜ್ಯದ ವಿಚಾರ ಬಂದಾಗ, ರಾಜ್ಯದ ಹಿತಕ್ಕಾಗಿ ನಾವೆಲ್ಲ ಒಟ್ಟಿಗೆ ಕೆಲಸ ಮಾಡೋಣ. ರಾಜ್ಯದ ಜನರ ಕಲ್ಯಾಣಕ್ಕೆ ಪಕ್ಷ ರಾಜಕಾರಣ ಪಕ್ಕಕ್ಕೆ ಇಡೋಣ.ರಾಜ್ಯದ ಪ್ರಗತಿಗೆ ನಿಮ್ಮ ಸಹಕಾರ ಬಯಸುತ್ತೇನೆ. ಕೇಂದ್ರ ಸರಕಾರದ ಮುಂದೆ ಬಾಕಿ ಉಳಿದಿರುವ ರಾಜ್ಯದ ನಾನಾ ಯೋಜನೆಗಳಿಗೆ ಅನುಮತಿ ದೊರಕಿಸಿಕೊಡಲು ನಿಮ್ಮ ಸಹಕಾರ ಬಹು ಮುಖ್ಯ ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಕರ್ನಾಟಕದ ಸಂಸದರನ್ನು ಕೋರಿದರು.
ನವದೆಹಲಿಯಲ್ಲಿ ಸೋಮವಾರ ಸಂಸದರ ಸಭೆಯಲ್ಲಿ ಸಿಎಂ ಡಿ ಕೆ ಶಿವಕುಮಾರ್ ಮಾತನಾಡಿ, “ನಾನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ್ದಾಗ ಈ ವರ್ಷ ತೀವ್ರ ಬರ ಪರಿಸ್ಥಿತಿ ಎದುರಾಗುವ ಬಗ್ಗೆ ಮುನ್ಸೂಚನೆ ಕೊಟ್ಟಿದ್ದರು. ಕರ್ನಾಟಕದಲ್ಲಿ ಆಲಮಟ್ಟಿ, ಹಾರಂಗಿ ಜಲಾಶಯ ಬಿಟ್ಟು ಉಳಿದ ಅಣೆಕಟ್ಟೆಗಳು ಬಹುತೇಕ ಖಾಲಿಯಾಗಿವೆ. ಇದೇ ಪರಿಸ್ಥಿತಿ ಮುಂದುವರೆದರೆ ಜನ, ಜಾನುವಾರಿಗೆ ಕುಡಿಯುವ ನೀರಿಗೂ ಸಮಸ್ಯೆ ಆಗುವ ಲಕ್ಷಣಗಳು ಇವೆ” ಎಂದರು.
“ರಾಜ್ಯದ ಪರಿಸ್ಥಿತಿ ಬಗ್ಗೆ ಪ್ರಧಾನಿ ಅವರಿಗೆ ಪತ್ರ ಬರೆದಿದ್ದೇನೆ. ಅಗತ್ಯ ನೆರವು ಕೋರಿದ್ದೇನೆ. ಅದು ಸಿಗಲು ನಿಮ್ಮ ಸಹಕಾರ ಬೇಕು. ರಾಜ್ಯದಲ್ಲಿ ಗಂಭೀರ ಬರ ಪರಿಸ್ಥಿತಿ ಇದೆ. ಅಣೆಕಟ್ಟೆಗಳಲ್ಲಿ ನೀರಿನ ಪ್ರಮಾಣ ನೋಡಿ ಬೆಳೆ ಹಾಕಿ ಅಂತ ರೈತರಿಗೆ ಮನವಿ ಮಾಡಿದ್ದೇನೆ. ಹೇಳಿದ್ದೇನೆ. ಜತೆಗೆ ಈ ಬಗ್ಗೆ ರೈತರಿಗೆ ಅರಿವು ಮೂಡಿಸುವಂತೆ ಅಧಿಕಾರಿಗಳಿಗೂ ಸೂಚನೆ ಕೊಟ್ಟಿದ್ದೇನೆ” ಎಂದು ಹೇಳಿದರು.
ತುಂಗಭದ್ರಾ ಕ್ರೆಸ್ಟ್ ಗೇಟ್ ಅಳವಡಿಕೆ ನೆಪದಲ್ಲಿ ಕೇಂದ್ರ ಜಲಶಕ್ತಿ ಸಚಿವ ಸಿ ಎಸ್ ಪಾಟೀಲ್ ಅವರ ಸಮ್ಮುಖದಲ್ಲಿ ನಾನು, ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು, ತೆಲಂಗಾಣ ಸಿಎಂ ರೇವಂತ್ ರೆಡ್ಡಿ – ಮೂವರು ಸಿಎಂಗಳು ಒಂದೆಡೆ ಸೇರಿದ್ದೆವು. ನಮ್ಮ ಮನವಿಗೆ ಓಗೊಟ್ಟು ಕೇಂದ್ರ ಸಚಿವರು ಈ ಕಾರ್ಯಕ್ರಮಕ್ಕೆ ಬಂದಿದ್ರು. 30 ಟಿಎಂಸಿ ನೀರು ಉಳಿಸಲು ತುಂಗಭದ್ರಾಕ್ಕೆ ನವಿಲೆ ಸಮತೋಲನ ಜಲಾಶಯ ಕಟ್ಟಲು ಕೇಂದ್ರ ಸಚಿವರ ಸಮ್ಮುಖದಲ್ಲಿ ಮೂವರು ಸಿಎಂಗಳು ಒಪ್ಪಿದ್ದೇವೆ. ಜತೆಗೆ ಗೋದಾವರಿ, ಕೃಷ್ಣ, ಪೆನ್ನಾರ್, ಕಾವೇರಿ ನದಿಗಳ ಜೋಡಣೆ ಯೋಜನೆಗೂ ನಾವು ಒಪ್ಪಿದ್ದೇವೆ. ಇದೊಂದು ಐತಿಹಾಸಿಕ ತೀರ್ಮಾನ” ಎಂದರು.
ತಮಿಳುನಾಡು ಸಿಎಂ ವಿಜಯ್ ಅವರು ನನ್ನನ್ನು ಭೇಟಿ ಮಾಡಲು ಬಯಸಿದ್ದಾರೆ
“ಮೇಕೆದಾಟು ಯೋಜನೆ ಕುರಿತು ಸುಪ್ರೀಂ ಕೋರ್ಟ್ ಎರಡೂ ರಾಜ್ಯಗಳಿಗೆ ಅನುಕೂಲ ಆಗುವ ತೀರ್ಪು ಕೊಟ್ಟಿದೆ. ಕರ್ನಾಟಕದ ಜಾಗದಲ್ಲಿ ಕರ್ನಾಟಕ ಸಮತೋಲನ ಅಣೆಕಟ್ಟೆ ಕಟ್ಟಲು ಬೇರೆ ರಾಜ್ಯಗಳ ಅನುಮತಿ ಅನಗತ್ಯ, ಆಕ್ಷೇಪ ವ್ಯಕ್ತಪಡಿಸಲು ಹಕ್ಕು ಇಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಇವತ್ತು ರಾಜ್ಯಸಭೆಯಲ್ಲಿ ಕೂಡ ಜಲಶಕ್ತಿ ಸಚಿವರು ತಮಿಳುನಾಡಿನ ಅನ್ಕುಮಾರ್ ರಾಮದಾಸ್ ಅವರ ಪ್ರಶ್ನೆಗೆ ಉತ್ತರ ಕೊಡುವಾಗ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ. ಇದಕ್ಕೆ ಕರ್ನಾಟಕದ ಪರವಾಗಿ ಧನ್ಯವಾದ ಹೇಳುತ್ತೇನೆ” ಎಂದರು.
ಕೃಷ್ಣ ನ್ಯಾಯಮಂಡಳಿಯ ನೀರು ಹಂಚಿಕೆ ತೀರ್ಮಾನ ಗೆಜೆಟ್ ನೋಟಿಫಿಕೇಶನ್ ಆಗಬೇಕಿತ್ತು. ಈ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ಬಾಕಿ ಉಳಿದಿತ್ತು. ಅದನ್ನು ಇತ್ಯರ್ಥ ಪಡಿಸಲು ವಿಶೇಷ ಪೀಠ ಸ್ಥಾಪನೆ ಕುರಿತು ಇವತ್ತು ಸುಪ್ರೀಂ ಕೋರ್ಟ್ನಲ್ಲಿ ತೀರ್ಮಾನ ಆಗಿದೆ. ಮಹದಾಯಿ ಯೋಜನೆ ಅಡೆತಡೆ ನಿವಾರಣೆಗೆ ನ್ಯಾಯವಾದಿಗಳ ಜತೆ ಸಮಾಲೋಚನೆ ನಡೆಸಿ, ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ನಮ್ಮ ರಾಜ್ಯದ ಬಾಕಿ ಯೋಜನೆಗಳ ನಿರ್ವಹಣೆಗೆ ಕರ್ನಾಟಕ ಭವನದಲ್ಲಿ ಹೊಸ ವ್ಯವಸ್ಥೆ ಜಾರಿಗೆ ತರಲಾಗುವುದು. ನಮ್ಮ ಯೋಜನೆ ಫಾಲೋ ಅಪ್ ಮಾಡಲು ಪ್ರತ್ಯೇಕ ರೆಸಿಡೆಂಟ್ ಕಮಿಷನರ್ ಸೇರಿದಂತೆ ಹೊಸ ತಂಡ ರಚಿಸಲಾಗುವುದು. ನಿಮಗೆ ಪೂರಕ ಮಾಹಿತಿ ಒದಗಿಸಲು ಈ ತಂಡ ಕೆಲಸ ಮಾಡಲಿದೆ ಎಂದು ತಿಳಿಸಿದರು.


