Homeಕರ್ನಾಟಕಬಸವಜಯಂತಿ ಹೊತ್ತಿಗೆ ಆಧುನಿಕ ಅನುಭವಮಂಪಟ ಪೂರ್ಣ:ಈಶ್ವರ ಖಂಡ್ರೆ

ಬಸವಜಯಂತಿ ಹೊತ್ತಿಗೆ ಆಧುನಿಕ ಅನುಭವಮಂಪಟ ಪೂರ್ಣ:ಈಶ್ವರ ಖಂಡ್ರೆ

ಬಸವಕಲ್ಯಾಣದಲ್ಲಿ 750 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಆಧುನಿಕ ಅನುಭವ ಮಂಟಪ ಕಾಮಗಾರಿ ಬರುವ ಬಸವಜಯಂತಿಯ ವೇಳೆಗೆ ಪೂರ್ಣವಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಕೆ.ಆರ್.ನಗರದಲ್ಲಿಂದು ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಸಮಾಜದ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 770 ಅಮರಗಣಂಗಳ ಹೆಸರಿನಲ್ಲಿ 770 ಕಂಬಗಳ ಮೇಲೆ ಭವ್ಯ ಹಾಗೂ ದಿವ್ಯವಾದ ಅತ್ಯಾಧುನಿಕ ಅನುಭವ ಮಂಟಪವನ್ನು ನಿರ್ಮಿಸಲಾಗುತ್ತಿದ್ದು, ಬಹುತೇಕ ಶೇ.80ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ತಿಳಿಸಿದರು.

ತಾವು 2016ರಲ್ಲಿ ಪೌರಾಡಳಿತ ಸಚಿವರಾಗಿ ದ್ದಾಗ ಆತ್ಯಾಧುನಿಕ ಅನುಭವ ಮಂಪಟ ನಿರ್ಮಾಣ ಮಾಡುವಂತೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಿಯೋಗದಲ್ಲಿ ತೆರಳಿ ಮನವಿ ಅರ್ಪಿಸಿದಾಗ, ಖ್ಯಾತ ಚಿಂತಕ ಡಾ.ಗೊ.ರು. ಚನ್ನಬಸಪ್ಪ ಅವರ ನೇತೃತ್ವದ ತಜ್ಞರ ಸಲಹಾ ಸಮಿತಿ ರಚಿಸಿ, ಬಜೆಟ್ ನಲ್ಲಿ ಘೋಷಣೆಯನ್ನೂ ಮಾಡಿದ್ದರು.

ನಂತರ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಅನುಭವ ಮಂಟಪಕ್ಕೆ ಶಂಕುಸ್ಥಾಪನೆ ನೆರವೇರಿತ್ತು. ಬಸವ ಜಯಂತಿಯಂದೇ ಅಧಿಕಾರ ಸ್ವೀಕರಿಸಿದ್ದ ಸಿದ್ದರಾಮಯ್ಯನವರು ಬುದ್ಧ ಬಸವ ಅಂಬೇಡ್ಕರ್ ಅನುಯಾಯಿಗಳಾಗಿದ್ದು, ಮತ್ತೆ 2023ರಲ್ಲಿ ಮುಖ್ಯಮಂತ್ರಿಗಳಾದ ತರುವಾಯ 280 ಕೋಟಿ ರೂ. ಬಿಡುಗಡೆ ಮಾಡಿದ್ದು, ಕಾಮಗಾರಿ ಭರಸದಿಂದ ಸಾಗಿದೆ. ಇದಕ್ಕಾಗಿ ತಾವೆಲ್ಲರೂ ಅವರಿಗೆ ಆಭಾರಿಗಳಾಗಿದ್ದೇವೆ ಎಂದು ತಿಳಿಸಿದರು.

ಶರಣರ ಸಂಭಾಷಣೆಗೆ ರೊಬೋಟಿಕ್ ತಂತ್ರಜ್ಞಾನ ಬಳಕೆ:

ಜಗತ್ತಿಗೆ ಪ್ರಜಾಪ್ರಭುತ್ವ ಮತ್ತು ಸಂಸತ್ತಿನ ಪರಿಕಲ್ಪನೆಯನ್ನು ಕಟ್ಟಿಕೊಟ್ಟಿದ್ದೇ ಬಸವಕಲ್ಯಾಣದ ಅನುಭವ ಮಂಟಪ. 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ನಡೆಯುತ್ತಿದ್ದ ಶರಣರ ಚಿಂತನ ಮಂಥನವನ್ನು ಇಂದಿನ ಯುವಪೀಳಿಗೆಗೆ ದೃಶ್ಯ ಶ್ರವಣದ ಮೂಲಕ ತಲುಪಿಸುವ ಸಲುವಾಗಿ ರೊಬೋಟಿಕ್ ತಂತ್ರಜ್ಞಾನ ಬಳಸಲಾಗುತ್ತಿದೆ ಎಂದು ವಿವರಿಸಿದರು.

ಈ ತಂತ್ರಜ್ಞಾನದ ನೆರವಿನಿಂದ ಅಲ್ಲಮಪ್ರಭು, ಬಸವಣ್ಣ ಹಾಗೂ ಅಕ್ಕಮಹಾದೇವಿ ಸೇರಿದಂತೆ 20 ಶರಣರ ರೊಬೋಟ್ ಪುತ್ಥಳಿಗಳನ್ನು ನಿರ್ಮಿಸಲಾಗುತ್ತಿದ್ದು ಆ ರೊಬೋಟ್ ಪುತ್ಥಳಿಗಳು ಸಂಭಾಷಣೆಯನ್ನು ನಡೆಸುವ ಮೂಲಕ ಅಂದಿನ ಅನುಭವ ಮಂಟಪದ ಚಿತ್ರಣವನ್ನು ಸಾಕ್ಷಾತ್ಕರಿಸಲಿವೆ ಎಂದು ಈಶ್ವರ ಖಂಡ್ರೆ ವಿವರಿಸಿದರು.

ಇಷ್ಟಲಿಂಗಪೂಜೆಯ ವೈಜ್ಞಾನಿಕ ಅನುಭವಕ್ಕೂ ಅವಕಾಶ:

ಐಐಟಿ ಹೈದ್ರಾಬಾದ್ ಮತ್ತು ಐಐಟಿ ಖರಗ್ಪುರದ ನೆರವಿನಿಂದ ವೈದ್ಯಕೀಯ ಉಪಕರಣವೊಂದನ್ನು ವಿಶೇಷವಾಗಿ ರೂಪಿಸಲಾಗಿದ್ದು, ಅನುಭವ ಮಂಪಟಕ್ಕೆ ಬರುವ ಬಸವ ಭಕ್ತರಿಗೆ ಹಾಗೂ ಸಂದರ್ಶಕರಿಗೆ ವೈಜ್ಞಾನಿಕವಾಗಿ ಇಷ್ಟಲಿಂಗ ಪೂಜೆ ಮಾಡುವುದರಿಂದ ಮನಸ್ಸು, ಮೆದುಳು ಮತ್ತು ದೇಹದ ಮೇಲೆ ಆಗುವ ಪರಿಣಾಮದ ಸಾಕ್ಷಾತ್ ಅನುಭವ ಪಡೆಯುವ ಅವಕಾಶವನ್ನೂ ಕಲ್ಪಿಸಲಾಗಿದೆ.

ಇಲ್ಲಿ ಮೊದಲಿಗೆ ಸಂದರ್ಶಕರ ಹೃದಯ ಬಡಿತ, ನಾಡಿ ಮಿಡಿತ, ಮೆದುಳಿನ ರಕ್ತ ಸಂಚಾರ ಮೊದಲಾದ ಅಂಶಗಳನ್ನು ದಾಖಲಿಸಿ ನಂತರ ಅವರಿಗೆ ಇಷ್ಟ ಲಿಂಗ ಪೂಜೆ ಮಾಡಲು ಅವಕಾಶ ನೀಡಲಾಗುವುದು. ನಂತರ ನಾಡಿ ಮಿಡಿತ, ಹೃದಯ ಬಡಿತದ ಪರೀಕ್ಷೆ ಮಾಡಿ ಅವರಲ್ಲಾಗುವ ಶಾರೀರಿಕ ಬದಲಾವಣೆಯ ವಿವರವನ್ನು ತಿಳಿಸಲಾಗುವುದು. ಮನಸ್ಸನ್ನು ನಿರಾಳಗೊಳಿಸುವಲ್ಲಿ ಇಷ್ಟಲಿಂಗ ಪೂಜೆ ಎಷ್ಟು ಸಹಕಾರಿ ಎಂಬುದನ್ನು ಈ ವೈದ್ಯಕೀಯ ಉಪಕರಣ ಸಾಬೀತು ಪಡಿಸಲಿದೆ ಎಂದೂ ಈಶ್ವರ ಖಂಡ್ರೆ ತಿಳಿಸಿದರು.

ಆಧುನಿಕ ಅನುಭವ ಮಂಟಪ ಒಂದು ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಸಮ್ಮಿಲನದ ಕೇಂದ್ರವಾಗಿದ್ದು, ಯುವ ಪೀಳಿಗೆಯಲ್ಲಿ ಏಕಾಗ್ರತೆ, ಆತ್ಮಸ್ಥೈರ್ಯ ಹೆಚ್ಚಿಸಲಿದ್ದು, ಅನುಭವಮಂಟಪ ಲೋಕಾರ್ಪಣೆಯಾದ ಬಳಿಕ ದೇಶದ ಮಹತ್ವದ ಪ್ರವಾಸಿ ತಾಣಗಳಲ್ಲಿ ಒಂದಾಗಲಿದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments