ಬೆಂಗಳೂರಿನಲ್ಲಿ ಮನೆ ಮಾಡಿರುವ ಶಾಸಕರು ಎರಡೆರಡು ಮದುವೆ ಮಾಡಿಕೊಂಡಿದ್ದಾರೆ ಎಂದು ಹೇಳಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶಾಸಕರ ಮನೆಗಳಲ್ಲಿ ಬೆಂಕಿ ಹಚ್ಚಿದ್ದಾರೆ. ಆದ್ದರಿಂದ ಬೆಂಕಿ ನಂದಿಸುವ ಕೆಲಸವನ್ನೂ ಮುಖ್ಯಮಂತ್ರಿಗಳೇ ಮಾಡಬೇಕು ಹಾಗೂ ಎರಡು ಮದುವೆ ಮಾಡಿಕೊಂಡವರ ಪಟ್ಟಿ ಬಿಡುಗಡೆ ಮಾಡಬೇಕು ಎಂದು ವಿಧಾನ ಪರಿಷತ್ ವಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡೆರಡು ಮದುವೆ ಮಾಡಿಕೊಂಡಿದ್ದಾರೆ ಎಂದು ಸಿಎಂ ಹೇಳಿದ್ದರಿಂದ ಶಾಸಕರ ಮನೆಗಳಿಗೆ ಬೆಂಕಿ ಬಿದ್ದಿದೆ. ಅವರನ್ನು ಸ್ವಕ್ಷೇತ್ರಗಳಲ್ಲಿ ಜನರು ಅನುಮಾನದಿಂದ ನೋಡುವ ಸ್ಥಿತಿ ಎದುರಾಗಿದೆ. ಶಾಸಕರು ನೆಮ್ಮದಿ ಕಳೆದುಕೊಂಡಿದ್ದಾರೆ. ಎರಡು ಮದುವೆ ಆದವರ ಪಟ್ಟಿಯನ್ನು ಸಿಎಂ ಬಿಡುಗಡೆ ಮಾಡಿದರೆ ಸತ್ಯ ತಿಳಿಯಲಿದೆ. ಅನುಮಾನ ಸಹ ಪರಿಹಾರ ಆಗಲಿದೆ ಎಂದರು.
ಪ್ರತಾಪ್ ಸಿಂಹ, ಸಿ.ಟಿ.ರವಿಗೆ ಭದ್ರತೆ ನೀಡಲಿ…
ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಸಿ.ಟಿ.ರವಿ. ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಕೇಂದ್ರದ ಹಲವಾರು ನಾಯಕರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪದ ಮೇಲೆ ಚಿಕ್ಕಬಳ್ಳಾಪುರದಲ್ಲಿ ಉಗ್ರರನ್ನು ಬಂಧಿಸಲಾಗಿದೆ. ಇದೊಂದು ಸೂಕ್ಷ್ಮ ವಿಚಾರ. ರಾಜ್ಯ ಸರ್ಕಾರ ಇದನ್ನು ಹಗುರವಾಗಿ ಪರಿಗಣಿಸಬಾರದರು. ಆದ್ದರಿಂದ ಈ ನಾಯಕರಿಗೆ ಹೆಚ್ಚಿನ ಭದ್ರತೆ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.
ಕಾನೂನು ದುರ್ಬಳಕೆ ಬೇಡ...
ಪ್ರತಾಪ್ ಸಿಂಹ ಅವರು ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ಪೊಲೀಸ್ ಅಧಿಕಾರಿ ಮಾತು ಖಂಡಿಸಿ ಹೋರಾಟ ಮಾಡಿದರು. ನೀಲಿಶಾಲಿನ ಬಗ್ಗೆ ಮಾತನಾಡಿದ್ದಾರೆ ಎಂದು ಆರೋಪಿಸಿ ಪ್ರತಾಪ್ ಸಿಂಹ ಅವರ ವಿರುದ್ಧ ದೌರ್ಜನ್ಯ ಕಾಯಿದೆಯಲ್ಲಿ ಎಫ್‍ಐಆರ್ ದಾಖಲಾಗಿದೆ ಎಂದು ತಿಳಿದಿದೆ. ದಲಿತ ಬಂಧುಗಳೇ ಈ ಘಟನೆಯನ್ನು ಬೆಳೆಸಬೇಡಿ. ಯಾರೂ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳಬೇಡಿ. ಇದನ್ನು ಇಲ್ಲಿಗೆ ಬಿಟ್ಟು ಸೌಹಾರ್ದದಿಂದ ಬಾಳೋಣ ಎಂದು ಮನವಿ ಮಾಡಿದರು.
ರಾಹುಲ್ ಗಾಂಧಿ ರಾಜೀನಾಮೆ ನೀಡಲಿ….
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಕಾಂಗ್ರೆಸ್ ಪಕ್ಷವು ಹಲವು ದೇಶದ್ರೋಹಿ ಚಟುವಟಿಕೆಗಳನ್ನು ಸೇರಿಸಿಕೊಂಡು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಮತ್ತು ಎಸ್‍ಐಆರ್ ವಿರುದ್ಧ ಪ್ರತಿಭಟನೆ ನಡೆಸಿ ಸಿಇಸಿ ಅವರ ರಾಜೀನಾಮೆಗೆ ಆಗ್ರಹಿಸುತ್ತಿವೆ. ಇದರ ಬದಲು ಕಾಂಗ್ರೆಸ್ ಪಕ್ಷವು ರಾಜೀವ್ ಗಾಂಧಿ ಅವರ ರಾಜೀನಾಮೆಗೆ ಆಗ್ರಹಿಸಲಿ ಎಂದು ಆರ್ಭಟಿಸಿದರು.
ಕಾಂಗ್ರೆಸ್ ಇಂತಹ ಪ್ರತಿಭಟನೆ ನಡೆಸಿ ದೇಶದಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಇದರಿಂದ ಯಾವುದೇ ಲೋಕಕಲ್ಯಾಣ ಆಗುವುದಿಲ್ಲ. ಕಾಂಗ್ರೆಸ್ ತಮ್ಮ ಪ್ರಚಾರದ ತೆವಲಿಗೆ ಈ ರೀತಿ ವರ್ತಿಸುತ್ತಿದೆ. ಈ ರೀತಿ ಅಜ್ಞಾನದಿಂದ ವರ್ತಿಸುವ ವಿರೋಧಪಕ್ಷದ ನಾಯಕನನ್ನು ದೇಶ ಈವರೆಗೆ ಕಂಡಿರಲಿಲ್ಲ ಎಂದು ಹೇಳಿದರು.
ಮೇಲ್ಮನೆ ಚುನಾವಣೆ ಕುರಿತು ಚರ್ಚೆ…
ವಿಧಾನ ಪರಿಷತ್‍ನ ಎರಡು ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬಂಧ ಎನ್‍ಡಿಎ ಮಿತ್ರ ಪಕ್ಷದ ನಾಯಕರ ಸಭೆ ಕರೆಯಲಾಗಿದೆ. ಚುನಾವಣಾ ಸಿದ್ಧತಾ ಸಭೆ ನಡೆಸಲಾಗುತ್ತಿದೆ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.


