Homeಕರ್ನಾಟಕಕೈಗಾರಿಕೆಗಳ ಬಳಿಯೇ ಕಾರ್ಮಿಕರಿಗೆ ವಸತಿ ಸೌಲಭ್ಯ: ಎಂ.ಬಿ. ಪಾಟೀಲ

ಕೈಗಾರಿಕೆಗಳ ಬಳಿಯೇ ಕಾರ್ಮಿಕರಿಗೆ ವಸತಿ ಸೌಲಭ್ಯ: ಎಂ.ಬಿ. ಪಾಟೀಲ

ಬೃಹತ್ ತಯಾರಿಕಾ ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ಕೆಲಸದ ಸ್ಥಳದ ಸಮೀಪದಲ್ಲೇ ಗುಣಮಟ್ಟದ ಹಾಗೂ ಕೈಗೆಟುಕುವ ದರದಲ್ಲಿ ವಸತಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಶ್ರಮಿಕ್ ನಿವಾಸ್’ ನೀತಿಯನ್ನು ಜಾರಿಗೆ ತಂದಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ (ನ.12) ಈ ಯೋಜನೆಯ ನೀತಿಯನ್ನು ಅನಾವರಣಗೊಳಿಸಿದ್ದು, ಮೊದಲ ಹಂತದಲ್ಲಿ 30 ಸಾವಿರ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಕೈಗಾರಿಕೆಗಳಲ್ಲಿ ಶ್ರಮಪಟ್ಟು ದುಡಿಯುವ ಉದ್ಯೋಗಿಗಳಿಗೆ ನೆಮ್ಮದಿಯ ಸೂರು ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ. ಇದರಿಂದ ಉದ್ಯೋಗಿಗಳು ಪ್ರತಿನಿತ್ಯ ದೂರದ ಊರುಗಳಿಂದ ಕೆಲಸದ ಸ್ಥಳಕ್ಕೆ ಸಂಚರಿಸುವ ತೊಂದರೆ ತಪ್ಪಲಿದೆ. ಜೊತೆಗೆ ಸಮಯ ಉಳಿತಾಯವಾಗಿ ಉತ್ಪಾದಕತೆಯೂ ಹೆಚ್ಚಲಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳನ್ನು ಹೊಂದಿರುವ ಕೈಗಾರಿಕೆಗಳ ಸಮೀಪದಲ್ಲೇ ಡಾರ್ಮಿಟರಿ, ಒಂದು ಬೆಡ್‌ರೂಮ್ ಮತ್ತು ಎರಡು ಬೆಡ್‌ರೂಮ್ ಮನೆಗಳನ್ನು ನಿರ್ಮಿಸಿ, ಕೈಗೆಟುಕುವ ಬಾಡಿಗೆ ದರದಲ್ಲಿ ಅಥವಾ ಉಚಿತವಾಗಿ ವಸತಿ ಕಲ್ಪಿಸಲಾಗುವುದು ಎಂದಿದ್ದಾರೆ.

ಶ್ರಮಿಕ್ ನಿವಾಸ್ ಯೋಜನೆಯಡಿ 100 ಉದ್ಯೋಗಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವ ಕೈಗಾರಿಕೆಗಳಿಗೆ ಒಂದು ಕೋಟಿ ರೂ. ಸಬ್ಸಿಡಿ ನೀಡಲಾಗುವುದು. 1,000 ಉದ್ಯೋಗಿಗಳಿಗೆ ವಸತಿ ಒದಗಿಸಿದರೆ 10 ಕೋಟಿ ರೂ. ಹಾಗೂ 2,500 ಉದ್ಯೋಗಿಗಳಿಗೆ ಸೂರು ಕಲ್ಪಿಸಿದರೆ ಗರಿಷ್ಠ 25 ಕೋಟಿ ರೂ. ಸಬ್ಸಿಡಿ ನೀಡಲಾಗುವುದು. ಬೃಹತ್ ಕೈಗಾರಿಕೆಗಳು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಯೋಜನೆಯಡಿ ಮೂರು ಮಾದರಿಯ ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಗರಿಷ್ಠ 10 ಚದರ ಮೀಟರ್ ವಿಸ್ತೀರ್ಣದ ಡಾರ್ಮಿಟರಿ, 30 ಚದರ ಮೀಟರ್ ವಿಸ್ತೀರ್ಣದವರೆಗಿನ ಒಂದು ಬೆಡ್‌ರೂಮ್ ಮನೆ ಹಾಗೂ 60 ಚದರ ಮೀಟರ್ ವಿಸ್ತೀರ್ಣದವರೆಗಿನ ಎರಡು ಬೆಡ್‌ರೂಮ್ ಮನೆಗಳನ್ನು ನಿರ್ಮಿಸಲು ಅವಕಾಶವಿದೆ. ಆದರೆ, ಉದ್ಯಮಿಗಳು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ತಮಗೆ ಮಂಜೂರಾಗಿರುವ ನಿವೇಶನದ ಒಳಗೇ ಈ ಮನೆಗಳನ್ನು ನಿರ್ಮಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.

ಡಾರ್ಮಿಟರಿಗಳಲ್ಲಿ ಹಾಸಿಗೆ, ಟೇಬಲ್, ಕಪಾಟು, ಲಾಕರ್‌ಗಳು, ಸಾಮೂಹಿಕ ಅಡುಗೆಮನೆ ಹಾಗೂ ಶೌಚಾಲಯಗಳ ವ್ಯವಸ್ಥೆ ಇರಲಿದೆ. ಒಂದು ಮತ್ತು ಎರಡು ಬೆಡ್‌ರೂಮ್ ಮನೆಗಳಲ್ಲಿ ಲಿವಿಂಗ್ ರೂಮ್, ಅಡುಗೆಮನೆ, ಸ್ನಾನದ ಮನೆ ಹಾಗೂ ಶೌಚಾಲಯ ಸೌಲಭ್ಯ ಕಲ್ಪಿಸಲಾಗುತ್ತದೆ. ಜತೆಗೆ ಕೈಗಾರಿಕೆಗಳಿಗೆ ಅನ್ವಯಿಸುವ ದರದಲ್ಲಿಯೇ ನೀರು ಮತ್ತು ವಿದ್ಯುತ್ ಪೂರೈಸಲಾಗುವುದು. ಉದ್ಯೋಗಿಗಳು ವಸತಿಯಲ್ಲಿ ನೆಲೆಸಲು ಆರಂಭಿಸಿದ ದಿನದಿಂದ ಲೆಕ್ಕಹಾಕಿ, ಸಬ್ಸಿಡಿ ಮೊತ್ತವನ್ನು ಮೂರು ವರ್ಷಗಳಲ್ಲಿ ಮೂರು ಸಮಾನ ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ವಿವರಿಸಿದ್ದಾರೆ.

ಪ್ರತಿ ವರ್ಷ ಗರಿಷ್ಠ 10 ಸಾವಿರ ಉದ್ಯೋಗಿಗಳಿಗೆ ವಸತಿ ಸೌಲಭ್ಯ ಒದಗಿಸುವ ಗುರಿ ಹೊಂದಲಾಗಿದೆ. ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳ ಬೇಡಿಕೆಯನ್ನು ಮುಂದಿನ ವರ್ಷಗಳಲ್ಲಿ ಪರಿಗಣಿಸಲಾಗುವುದು. ಆಯಾ ಕಂಪನಿಗಳ ಕಾಯಂ ಉದ್ಯೋಗಿಗಳು ಮಾತ್ರ ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗಿದ್ದು, ಅವರ ಅವಲಂಬಿತರಿಗೆ ಈ ಸೌಲಭ್ಯ ಅನ್ವಯಿಸುವುದಿಲ್ಲ. ಒಂದು ಕಂಪನಿಗೆ ಗರಿಷ್ಠ 25 ಕೋಟಿ ರೂ.ವರೆಗೆ ಸಬ್ಸಿಡಿ ನೀಡಲಾಗುವುದು ಎಂದು ಹೇಳಿದ್ದಾರೆ.

ಕಾರ್ಮಿಕರು ಕೈಗಾರಿಕೆಗಳ ಅವಿಭಾಜ್ಯ ಅಂಗ. ಶ್ರಮಪಟ್ಟು ದುಡಿಯುವ ಉದ್ಯೋಗಿಗಳು ನೆಮ್ಮದಿಯಿಂದ ಬದುಕಬೇಕು ಎನ್ನುವುದು ಸರ್ಕಾರದ ಆಶಯ. ವಸತಿ ಸೌಲಭ್ಯದಿಂದ ಕಾರ್ಮಿಕರ ಅನಗತ್ಯ ಪ್ರಯಾಣ ತಪ್ಪುವುದಲ್ಲದೆ, ಕೈಗಾರಿಕೆಗಳ ಉತ್ಪಾದಕತೆಯೂ ಹೆಚ್ಚಲಿದೆ. ಇದರಿಂದ ರಾಜ್ಯದ ಆರ್ಥಿಕತೆಗೂ ಅನುಕೂಲವಾಗಲಿದೆ. ಈ ಉದ್ದೇಶದಿಂದ ಶ್ರಮಿಕ್ ನಿವಾಸ್ ಯೋಜನೆ ಜಾರಿಗೆ ತರಲಾಗಿದೆ ಎಂದು ಎಂ.ಬಿ. ಪಾಟೀಲ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments