Homeಕರ್ನಾಟಕಸಿಎಂ ಕ್ಲೀನ್‌ಚಿಟ್ ನೀಡಿದ ಮೇಲೆ ತನಿಖೆಯ ಮಾತೇಕೆ?:ಎಚ್.ಡಿ. ಕುಮಾರಸ್ವಾಮಿ

ಸಿಎಂ ಕ್ಲೀನ್‌ಚಿಟ್ ನೀಡಿದ ಮೇಲೆ ತನಿಖೆಯ ಮಾತೇಕೆ?:ಎಚ್.ಡಿ. ಕುಮಾರಸ್ವಾಮಿ

ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಕುರಿತು ತಮಗೆ ಲಭ್ಯವಾಗಿರುವ ವಾಟ್ಸ್‌ಆ್ಯಪ್ ಚಾಟ್ ದಾಖಲೆಗಳ ಬಗ್ಗೆ ಮಾತನಾಡಿದ್ದೇನೆಯೇ ಹೊರತು, ನಿರ್ದಿಷ್ಟ ವ್ಯಕ್ತಿಗಳು ಹಣ ಪಡೆದಿದ್ದಾರೆ ಎಂದು ಎಲ್ಲಿಯೂ ಆರೋಪ ಮಾಡಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಶ್ರೀ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಉಸ್ತುವಾರಿ ಸಚಿವರ ಹೆಸರನ್ನು ಉಲ್ಲೇಖಿಸಿ ತಾವು ಆರೋಪ ಮಾಡಿಲ್ಲ. ಜಿಲ್ಲಾಧಿಕಾರಿಯ ಆಪ್ತ ಸಹಾಯಕನ ವಾಟ್ಸ್‌ಆ್ಯಪ್ ಚಾಟ್ ದಾಖಲೆಗಳನ್ನು ಆಧರಿಸಿ ಮಾತನಾಡಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಮಾತ್ರ ಒತ್ತಾಯಿಸಿದ್ದೇನೆ ಎಂದರು.

ನಾನು ಯಾರ ಮೇಲೂ ನಿರ್ದಿಷ್ಟವಾಗಿ ಬೊಟ್ಟು ಮಾಡಿ ತೋರಿಸಿಲ್ಲ. ಆದರೆ ಕೆಲವರು ಪೈಪೋಟಿಗೆ ಬಿದ್ದವರಂತೆ ನನ್ನ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಹಾಗೂ ಸ್ಪಷ್ಟನೆಗಳನ್ನು ಕೊಡುತ್ತಿದ್ದಾರೆ. ಅವರ ವರ್ತನೆ ನನಗೆ ಆಶ್ಚರ್ಯ ಉಂಟುಮಾಡಿದೆ. ಚಾಟ್‌ನಲ್ಲಿರುವ ಹೆಸರುಗಳ ಸತ್ಯಾಸತ್ಯತೆ ಪರಿಶೀಲಿಸಿ ತನಿಖೆ ನಡೆಸುವಂತೆ ಕೇಳುವುದು ತಪ್ಪೇ ಎಂದು ಪ್ರಶ್ನಿಸಿದರು.

ವಾಟ್ಸ್‌ಆ್ಯಪ್ ಚಾಟ್‌ನಲ್ಲಿ ಉಲ್ಲೇಖವಾಗಿರುವ ಹೆಸರುಗಳ ಬಗ್ಗೆ ಮಾತ್ರ ಮಾತನಾಡಿದ್ದೇನೆ. ಯಾರಾದರೂ ಹಣ ಪಡೆದಿದ್ದಾರೆ ಎಂದು ನಾನೇನಾದರೂ ಹೇಳಿದ್ದೀನಾ? ಯಾರ ಮೇಲಾದರೂ ಆರೋಪ ಮಾಡಿದ್ದೀನಾ? ಚಾಟ್‌ನಲ್ಲಿರುವ ವಿಚಾರಗಳ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದೇನೆ. ಇದರಲ್ಲಿ ತಪ್ಪೇನಿದೆ? ನಾನು ಪ್ರತಿಪಕ್ಷದ ನಾಯಕನಾಗಿ ಇಂತಹ ವಿಚಾರಗಳ ಬಗ್ಗೆ ತನಿಖೆಗೆ ಒತ್ತಾಯಿಸುವುದು ನನ್ನ ಕರ್ತವ್ಯವಲ್ಲವೇ ಎಂದು ಹೇಳಿದರು.

ಹಣ ಹಂಚಿಕೆ ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬ ಹೆಸರುಗಳು ವಾಟ್ಸ್‌ಆ್ಯಪ್ ಚಾಟ್‌ನಲ್ಲಿ ಉಲ್ಲೇಖವಾಗಿವೆ. ಹೀಗಾಗಿ ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ಮೊಬೈಲ್ ಫೋನ್‌ಗಳನ್ನು ತಕ್ಷಣ ಜಪ್ತಿ ಮಾಡಿ ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿದ್ದೇನೆ. ಆದರೆ ತನಿಖೆ ನಡೆಸುವ ಬದಲು ನನ್ನನ್ನು ನಿಂದಿಸುವ ಮೂಲಕ ಜನರ ದಿಕ್ಕು ತಪ್ಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿಗಳು ತಮ್ಮ ಇತಿಮಿತಿಗಳನ್ನು ಮೀರಿ ನಡೆದುಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ ಅವರು ಜಿಲ್ಲಾಧಿಕಾರಿಗಳ ಪಕ್ಕದಲ್ಲಿ ಕುಳಿತು ಏನೆಲ್ಲ ಚರ್ಚೆ ನಡೆಸಿದ್ದಾರೋ ಗೊತ್ತಿಲ್ಲ. ಆದರೆ ತನಿಖೆ ಆರಂಭವಾಗುವ ಮೊದಲೇ ಮುಖ್ಯಮಂತ್ರಿ ಜಿಲ್ಲಾಧಿಕಾರಿ ಸೇರಿದಂತೆ ಇತರ ಅಧಿಕಾರಿಗಳಿಗೆ ಕ್ಲೀನ್‌ಚಿಟ್ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ತನಿಖೆಗೆ ಒತ್ತಾಯಿಸಿ ಏನು ಪ್ರಯೋಜನ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಅಧಿಕಾರಿಗಳು ಹೇಗೆ ನಡೆದುಕೊಳ್ಳಬೇಕು ಎಂಬುದಕ್ಕೆ ನಿಯಮಗಳಿವೆ. ಅವುಗಳನ್ನು ಮೀರಿ ನಡೆದುಕೊಳ್ಳಲು ರಾಜ್ಯ ಸರ್ಕಾರವೇ ಅಧಿಕಾರಿಗಳಿಗೆ ಕುಮ್ಮಕ್ಕು ನೀಡುತ್ತಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಯಾವ ಹಂತಕ್ಕೆ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.

ಜಿಲ್ಲಾಧಿಕಾರಿಗಳ ವಾಟ್ಸ್‌ಆ್ಯಪ್ ಸ್ಟೇಟಸ್‌ಗಳ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಂತಹ ಸ್ಟೇಟಸ್‌ಗಳಿಗೆಲ್ಲ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಈ ಸರ್ಕಾರದಲ್ಲಿ ಈಗ ಏನೂ ಆಗುವುದಿಲ್ಲ. ಅದಕ್ಕೆ ಕಾಲ ಬರಬೇಕು. ಕಾಲ ಬಂದಾಗ ಬದಲಾವಣೆಗಳಾಗುತ್ತವೆ. ಇಂದು ರಂಗನಾಥಸ್ವಾಮಿ ಸನ್ನಿಧಿಯಲ್ಲಿ ಕುಳಿತು ಹೇಳುತ್ತಿದ್ದೇನೆ, ಇಂತಹ ನಡವಳಿಕೆ ಹೊಂದಿರುವವರಿಗೆ ಅವರ ಕೃತ್ಯಗಳಿಗೆ ತಕ್ಕ ಫಲವನ್ನು ದೇವರೇ ನೀಡುತ್ತಾನೆ ಎಂದು ಹೇಳಿದರು.

ಮುಖ್ಯಮಂತ್ರಿಗಳೇ ಕ್ಲೀನ್‌ಚಿಟ್ ನೀಡಿರುವುದರಿಂದ ಈ ಪ್ರಕರಣದ ತನಿಖೆಯಲ್ಲಿ ಏನೂ ಆಗುವುದಿಲ್ಲ ಎಂಬುದು ನನಗೆ ಅರ್ಥವಾಗಿದೆ. ಹೀಗಾಗಿ ಈ ಬಗ್ಗೆ ಮತ್ತಷ್ಟು ಚರ್ಚೆ ನಡೆಸಿ ಪ್ರಯೋಜನವಿಲ್ಲ. ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments