ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆಗೆ ಮತ್ತಷ್ಟು ವೇಗ ನೀಡುವ ಉದ್ದೇಶದಿಂದ 2027ರ ಏಪ್ರಿಲ್ 20ರಿಂದ 22ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾಲ ಜಾಗತಿಕ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
ಡಿಜಿಟಲ್ ಕೈಗಾರಿಕಾ ಭೂಬ್ಯಾಂಕ್ಗೆ ಚಾಲನೆ
ಸಮಾವೇಶದ ಪೂರ್ವಭಾವಿಯಾಗಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೂತನ ವೈಮಾಂತರಿಕ್ಷ ಮತ್ತು ರಕ್ಷಣಾ ನೀತಿ (2026-31) ಹಾಗೂ ಕೆಐಎಡಿಬಿ ಡಿಜಿಟಲ್ ಕೈಗಾರಿಕಾ ಭೂಬ್ಯಾಂಕ್ ವ್ಯವಸ್ಥೆಗೆ ಚಾಲನೆ ನೀಡಲಾಗಿದೆ. ವೆಂಚುರೈಸ್ನ ಮೂರನೇ ಆವೃತ್ತಿಯನ್ನೂ ಆರಂಭಿಸಲಾಗಿದ್ದು, ಈ ಉಪಕ್ರಮಗಳು ನವೋದ್ಯಮಗಳ ಬೆಳವಣಿಗೆ ಮತ್ತು ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾಗಲಿವೆ ಎಂದರು.
ಹಿಂದಿನ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಕರ್ನಾಟಕದ ಮೇಲೆ ವಿಶ್ವಾಸವಿಟ್ಟು ಹೂಡಿಕೆದಾರರು ಸುಮಾರು ₹10.27 ಲಕ್ಷ ಕೋಟಿ ಹೂಡಿಕೆ ಮಾಡುವ ಬದ್ಧತೆ ವ್ಯಕ್ತಪಡಿಸಿದ್ದರು. ಈ ಪೈಕಿ ಉತ್ಪಾದನಾ ವಲಯದ ಸುಮಾರು ಶೇ.65ರಷ್ಟು ಹೂಡಿಕೆಗಳು ಈಗಾಗಲೇ ಕಾರ್ಯರೂಪಕ್ಕೆ ಬಂದಿವೆ. ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕುವುದಷ್ಟೇ ಸಮಾವೇಶದ ಯಶಸ್ಸಲ್ಲ; ಅವು ವಾಸ್ತವಿಕವಾಗಿ ಕೈಗಾರಿಕೆಗಳಾಗಿ ರೂಪುಗೊಂಡು ಉತ್ಪಾದನೆ ಆರಂಭಿಸುವುದೇ ನಿಜವಾದ ಯಶಸ್ಸು ಎಂದು ಹೇಳಿದರು.
ಡಿಎನ್ ಸೊಲ್ಯೂಷನ್ಸ್, ಕ್ರೋನ್ಸ್, ನಿಡೆಕ್ ಮತ್ತು ಫಾಕ್ಸ್ಕಾನ್ ಕಂಪನಿಗಳ ಹೂಡಿಕೆ ಯೋಜನೆಗಳು ದಾಖಲೆ ಅವಧಿಯಲ್ಲಿ ಕಾರ್ಯಾರಂಭ ಮಾಡಿವೆ. ಲ್ಯಾಮ್ ರಿಸರ್ಚ್, ಅಪ್ಲೈಡ್ ಮಟೇರಿಯಲ್ಸ್, ಎಂವೀ, ವಿಪ್ರೊ ಎಲೆಕ್ಟ್ರಾನಿಕ್ ಮಟೇರಿಯಲ್ಸ್, ಜಿಂದಾಲ್ ಅಲ್ಯುಮಿನಿಯಂ ಮತ್ತು ಮಹೀಂದ್ರಾ ಏರೋಸ್ಪೇಸ್ನ ಪ್ರಮುಖ ಯೋಜನೆಗಳು ಪ್ರಗತಿಯಲ್ಲಿವೆ ಎಂದು ವಿವರಿಸಿದರು.
ಕಲಬುರಗಿ, ಕೊಪ್ಪಳದಿಂದ ಬೆಳಗಾವಿ, ಕೋಲಾರ ಮತ್ತು ತುಮಕೂರಿನವರೆಗೆ ರಾಜ್ಯದ ವಿವಿಧ ಭಾಗಗಳಿಗೆ ಹೂಡಿಕೆಗಳು ಹರಿದುಬರುತ್ತಿವೆ. ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್, ವಿದ್ಯುತ್ ಚಾಲಿತ ವಾಹನಗಳು, ಉಕ್ಕು, ಸಿಮೆಂಟ್, ನವೀಕರಿಸಬಹುದಾದ ಇಂಧನ ಹಾಗೂ ಜೀವ ವಿಜ್ಞಾನ ಸೇರಿದಂತೆ ಹಲವು ವಲಯಗಳಲ್ಲಿ ಕೈಗಾರಿಕಾ ಬೆಳವಣಿಗೆ ಕಂಡುಬರುತ್ತಿದೆ. ಬೆಂಗಳೂರಿಗೆ ಸೀಮಿತವಾಗದೆ ರಾಜ್ಯದ ಎಲ್ಲ ಪ್ರದೇಶಗಳಿಗೂ ಕೈಗಾರಿಕಾ ಅಭಿವೃದ್ಧಿಯ ಫಲ ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದರು.
ಉತ್ತರ ಕರ್ನಾಟಕದಲ್ಲಿ ವಿಶೇಷ ಹೂಡಿಕೆದಾರರ ಸಮಾವೇಶ
2027ರ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ನಿಜವಾದ ಅರ್ಥದಲ್ಲಿ ಜಾಗತಿಕ ಮಟ್ಟದ ಕಾರ್ಯಕ್ರಮವನ್ನಾಗಿ ರೂಪಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ತಿಂಗಳುಗಳಲ್ಲಿ ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ, ಹೂಡಿಕೆದಾರರು ಇರುವ ಸ್ಥಳಗಳಿಗೇ ಕರ್ನಾಟಕದ ಹೂಡಿಕೆ ಅವಕಾಶಗಳನ್ನು ಕೊಂಡೊಯ್ಯಲಾಗುವುದು. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಕೈಗಾರಿಕಾ ಅವಕಾಶಗಳನ್ನು ಪರಿಚಯಿಸುವ ಉದ್ದೇಶದಿಂದ ಉತ್ತರ ಕರ್ನಾಟಕದಲ್ಲಿ ವಿಶೇಷ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗುವುದು ಎಂದು ತಿಳಿಸಿದರು.
ಹಿಂದಿನ ಸಮಾವೇಶದಲ್ಲಿ ನಿರೀಕ್ಷೆ ಮೀರಿ ಸಾಧನೆ ಮಾಡಿದ್ದು, ಈ ಬಾರಿ ಇನ್ನಷ್ಟು ದೊಡ್ಡ ಗುರಿ ಹೊಂದಲಾಗಿದೆ. ಹೆಚ್ಚಿನ ಹೂಡಿಕೆ ಆಕರ್ಷಿಸುವುದು, ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು, ಬೆಂಗಳೂರಿನ ಆಚೆಗೂ ಕೈಗಾರಿಕಾ ಬೆಳವಣಿಗೆ ವಿಸ್ತರಿಸುವುದು ಹಾಗೂ ಹೂಡಿಕೆದಾರರಿಗೆ ಸರಳ ಮತ್ತು ವೇಗವಾದ ಅನುಮೋದನಾ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಎಂ.ಬಿ. ಪಾಟೀಲ ಹೇಳಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಎಚ್. ಮುನಿಯಪ್ಪ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ, ರಿಜ್ವಾನ್ ಅರ್ಷದ್, ನರೇಂದ್ರಸ್ವಾಮಿ, ಬಸವರಾಜ ರಾಯರೆಡ್ಡಿ, ಬಸವಂತಪ್ಪ, ಅಜಯ್ ಸಿಂಗ್, ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ, ಮಾಜಿ ಸಚಿವ ಆರ್.ವಿ. ದೇಶಪಾಂಡೆ, ಡಾ. ದೇವಿ ಶೆಟ್ಟಿ, ವಿವಿಧ ದೇಶಗಳ ಕಾನ್ಸುಲ್ ಜನರಲ್ಗಳು, ಉದ್ಯಮ ಪ್ರಮುಖರು, ವಾಣಿಜ್ಯೋದ್ಯಮ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್ ಸ್ವಾಗತಿಸಿದರು. ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಖುಷ್ಬೂ ಜಿ. ಚೌಧರಿ ಪ್ರಾಸ್ತಾವಿಕವಾಗಿ ಮಾತನಾಡಿದರು.


