Homeಕರ್ನಾಟಕರೈತರ ಆತ್ಮಹತ್ಯೆ ವಿಚಾರದಲ್ಲಿ ಕುಮಾರಸ್ವಾಮಿಯಿಂದ ರಾಜಕೀಯ ದುರುದ್ದೇಶ: ಚಲುವರಾಯಸ್ವಾಮಿ ಆರೋಪ

ರೈತರ ಆತ್ಮಹತ್ಯೆ ವಿಚಾರದಲ್ಲಿ ಕುಮಾರಸ್ವಾಮಿಯಿಂದ ರಾಜಕೀಯ ದುರುದ್ದೇಶ: ಚಲುವರಾಯಸ್ವಾಮಿ ಆರೋಪ

ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳ ಕುರಿತು ಕೆಲವು ಪತ್ರಿಕೆಗಳಲ್ಲಿ ಮಾನ್ಯ ಕೇಂದ್ರ ಸಚಿವರಾದ ಹೆಚ್ ಡಿ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆಗಳು ವಾಸ್ತವಾಂಶಗಳಿಗೆ ದೂರವಾಗಿದ್ದು. ಜನರಲ್ಲಿ ಅನಗತ್ಯ ಗೊಂದಲ ಮತ್ತು ಆತಂಕ ಸೃಷ್ಟಿಸುವ ಪ್ರಯತ್ನವಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿಯವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

National Crime Records Bureau (NCRB) ಪ್ರಕಟಿಸುವ ಅಂಕಿಅಂಶಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ FIR ಹಾಗೂ ಪ್ರಕರಣಗಳ ಆಧಾರದ ಮೇಲೆ ಸಂಗ್ರಹವಾಗುತ್ತವೆ. ಇದರಲ್ಲಿ ರೈತರು. ಕೃಷಿ ಕೂಲಿ ಕಾರ್ಮಿಕರು ಹಾಗೂ ಕೃಷಿ ಚಟುವಟಿಕೆಗೆ ಸಂಬಂಧಿಸಿದ ವಿವಿಧ ವರ್ಗಗಳ ಆತ್ಮಹತ್ಯೆ ಪ್ರಕರಣಗಳು ಸೇರಿರುತ್ತವೆ. ಈ ವಿಧಾನ ಹೊಸದೇನಲ್ಲ ಹಲವು ವರ್ಷಗಳಿಂದ ಇದೇ ಮಾನದಂಡದ ಆಧಾರದ ಮೇಲೆ NCRB ವರದಿಗಳು ಪ್ರಕಟವಾಗುತ್ತಿವೆ ಎಂದು ಹೇಳಿಕೆಯಲ್ಲಿ ತಿಳಿಸಿದರು.

ಈ ವಾಸ್ತವಾಂಶಗಳ ಬಗ್ಗೆ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿರುವ ಕೇಂದ್ರ ಸಚಿವರಿಗೆ ಸಂಪೂರ್ಣ ಅರಿವು ಇರಬೇಕಾಗಿತ್ತು. ಆದರೂ ರಾಜಕೀಯ ಲಾಭಕ್ಕಾಗಿ ಜನರನ್ನು ತಪ್ಪು ದಾರಿಗೆಳೆಯುವ ರೀತಿಯಲ್ಲಿ ಹೇಳಿಕೆ ನೀಡಿರುವುದು ಅತ್ಯಂತ ವಿಷಾದನೀಯ ಎಂದಿದ್ದಾರೆ.

ಕರ್ನಾಟಕ ಸರ್ಕಾರವು 2003ರಿಂದಲೇ ಪ್ರತ್ಯೇಕ ಮತ್ತು ಸ್ಪಷ್ಟ ಮಾನದಂಡದ ಆಧಾರದ ಮೇಲೆ “ರೈತರ ಆತ್ಮಹತ್ಯೆ” ಪ್ರಕರಣಗಳನ್ನು ದಾಖಲಿಸುತ್ತಿದೆ. ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡು, ಕೃಷಿ ಸಾಲಬಾಧೆ ಅಥವಾ ಕೃಷಿ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳನ್ನೇ ಸರ್ಕಾರ ರೈತರ ಆತ್ಮಹತ್ಯೆ ಎಂದು ಪರಿಗಣಿಸುತ್ತದೆ. ಈ ಮಾನದಂಡದ ಪ್ರಕಾರ 2023ರಲ್ಲಿ 1,090 ಹಾಗೂ 2024ರಲ್ಲಿ 1032 ಪ್ರಕರಣಗಳು ದಾಖಲಾಗಿವೆ. ನಮ್ಮ ಸರ್ಕಾರ ಯಾವುದೇ ಮಾಹಿತಿಯನ್ನು ಮುಚ್ಚಿಟ್ಟಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು, ಬೆಳೆ ಪರಿಹಾರ, ಬೆಳೆ ವಿಮೆ. ಸಾಲ ಸೌಲಭ್ಯಗಳು ಹಾಗೂ ರೈತ ಕಲ್ಯಾಣ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಜಾರಿಗೆ ಬಂದ ಪರಿಣಾಮ, 2025ರಲ್ಲಿ 644 ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದೆ. ರಾಜ್ಯದಲ್ಲಿ ರೈತ ಆತ್ಮಹತ್ಯೆ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿವೆ. ಇದು ನಮ್ಮ ಸರ್ಕಾರ ರೈತರ ಸಂಕಷ್ಟ ಪರಿಹಾರಕ್ಕೆ ಬದ್ಧವಾಗಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದಿದ್ದಾರೆ.

ರೈತರ ಆತ್ಮಹತ್ಯೆಯಂತಹ ಸೂಕ್ಷ್ಮ ಮತ್ತು ದುಃಖಕರ ವಿಚಾರಗಳಲ್ಲಿ ರಾಜಕೀಯ ಮಾಡುವುದಕ್ಕಿಂತ, ಸಂಕಷ್ಟದಲ್ಲಿರುವ ರೈತ ಕುಟುಂಬಗಳ ಜೊತೆ ನಿಲ್ಲುವುದು ಜನಪ್ರತಿನಿಧಿಗಳ ನೈತಿಕ ಜವಾಬ್ದಾರಿಯಾಗಿದೆ. ದುಃಖದಲ್ಲಿರುವ ಕುಟುಂಬಗಳ ನೋವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಪ್ರಯತ್ನಗಳನ್ನು ರಾಜ್ಯದ ಜನತೆ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments