Homeಕರ್ನಾಟಕಮಹಿಳೆಯರ ಡಿಜಿಟಲ್ ಸುರಕ್ಷತೆ, ನಾಯಕತ್ವ ಬಲವರ್ಧನೆಗೆ ಆದ್ಯತೆ: ರಾಜ್ಯಪಾಲ ಡಾ. ಸುಧಾ ಯಾದವ್

ಮಹಿಳೆಯರ ಡಿಜಿಟಲ್ ಸುರಕ್ಷತೆ, ನಾಯಕತ್ವ ಬಲವರ್ಧನೆಗೆ ಆದ್ಯತೆ: ರಾಜ್ಯಪಾಲ ಡಾ. ಸುಧಾ ಯಾದವ್

ಮಹಿಳೆಯರ ಡಿಜಿಟಲ್ ಸುರಕ್ಷತೆ, ಗೌಪ್ಯತೆ ಮತ್ತು ನಾಯಕತ್ವವನ್ನು ಬಲಪಡಿಸಲು ಸುರಕ್ಷಿತ ಡಿಜಿಟಲ್ ವಾತಾವರಣ, ಬಲಿಷ್ಠ ಕಾನೂನು ರಕ್ಷಣೆ ಹಾಗೂ ಪರಿಣಾಮಕಾರಿ ಮಾರ್ಗದರ್ಶನ ವ್ಯವಸ್ಥೆ ರೂಪಿಸುವುದು ಅತ್ಯಗತ್ಯ ಎಂದು ರಾಜ್ಯಪಾಲರಾದ ಡಾ. ಸುಧಾ ಯಾದವ್ ಹೇಳಿದರು.

ಡೀಪ್‌ಫೇಕ್, ಸೈಬರ್ ಕಿರುಕುಳ ತಡೆಗೆ ಬಲಿಷ್ಠ ಕಾನೂನು ರಕ್ಷಣೆ ಅಗತ್ಯ | ಬೆಂಗಳೂರಿನಲ್ಲಿ ಕಾಮನ್‌ವೆಲ್ತ್ ಮಹಿಳಾ ಸಂಸದೀಯ ಪ್ರತಿನಿಧಿಗಳ ಪ್ರಥಮ ಸಮಾವೇಶ ಸಮಾರೋಪ

ವಿಧಾನಸೌಧದಲ್ಲಿ ನವೆಂಬರ್ 17 ಮತ್ತು 18ರಂದು ನಡೆದ ಕಾಮನ್‌ವೆಲ್ತ್ ಮಹಿಳಾ ಸಂಸದೀಯ ಪ್ರತಿನಿಧಿಗಳ (CWP) ಭಾರತ ವಲಯದ ಪ್ರಥಮ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೃತಕ ಬುದ್ಧಿಮತ್ತೆ (AI) ಆಧಾರಿತ ಡೀಪ್‌ಫೇಕ್‌ಗಳು, ಸುಳ್ಳು ಮಾಹಿತಿ ಪ್ರಸಾರ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿನ ಕಿರುಕುಳಗಳು ಮಹಿಳೆಯರಿಗೆ, ಅದರಲ್ಲೂ ಸಾರ್ವಜನಿಕ ಜೀವನದಲ್ಲಿರುವ ಮಹಿಳಾ ಜನಪ್ರತಿನಿಧಿಗಳಿಗೆ ಗಂಭೀರ ಸವಾಲಾಗಿವೆ. ಇಂತಹ ತಂತ್ರಜ್ಞಾನಗಳ ದುರ್ಬಳಕೆಯಿಂದ ಮಹಿಳೆಯರ ಧ್ವನಿಯನ್ನು ಅಡಗಿಸುವ ಮತ್ತು ಅವರ ನಾಯಕತ್ವದ ಮೇಲಿನ ವಿಶ್ವಾಸ ಕುಂದಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಸಾಮಾಜಿಕ ಮಾಧ್ಯಮ ವೇದಿಕೆಗಳ ಹೊಣೆಗಾರಿಕೆ ಹೆಚ್ಚಿಸುವುದು, ಕಾನೂನು ಮತ್ತು ಸಾಂಸ್ಥಿಕ ರಕ್ಷಣಾ ವ್ಯವಸ್ಥೆಗಳನ್ನು ಬಲಪಡಿಸುವುದು ಹಾಗೂ ಗ್ರಾಮೀಣ ಮತ್ತು ಹಿಂದುಳಿದ ವರ್ಗಗಳ ಮಹಿಳೆಯರಲ್ಲಿ ಡಿಜಿಟಲ್ ಸಾಕ್ಷರತೆ ಬೆಳೆಸುವುದು ಅಗತ್ಯ. ಅನುಭವಿ ಮಹಿಳಾ ಜನಪ್ರತಿನಿಧಿಗಳು ಹೊಸದಾಗಿ ಆಯ್ಕೆಯಾದವರಿಗೆ ಮಾರ್ಗದರ್ಶನ ನೀಡುವ ವ್ಯವಸ್ಥೆಯನ್ನೂ ರೂಪಿಸಬೇಕು ಎಂದು ಸಲಹೆ ನೀಡಿದರು.

ಮಹಿಳೆಯರ ಗೌಪ್ಯತೆ, ಘನತೆ ರಕ್ಷಣೆಗೆ ಆದ್ಯತೆ: ಹರಿವಂಶ್

ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ಮಾತನಾಡಿ, ಮಹಿಳೆಯರ ರಾಜಕೀಯ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದರ ಜೊತೆಗೆ ಡಿಜಿಟಲ್ ಜಗತ್ತಿನಲ್ಲಿ ಅವರ ಗೌಪ್ಯತೆ ಮತ್ತು ಘನತೆಯನ್ನು ಕಾಪಾಡುವುದು ಮುಖ್ಯವಾಗಿದೆ. ಸೈಬರ್ ಕಿರುಕುಳ, ಡೀಪ್‌ಫೇಕ್‌ಗಳು ಹಾಗೂ ಎಐ ಆಧಾರಿತ ದಾಳಿಗಳನ್ನು ತಡೆಯಲು ಕಾನೂನು ಅರಿವು, ಪರಿಣಾಮಕಾರಿ ಅನುಷ್ಠಾನ ಮತ್ತು ಸಾರ್ವಜನಿಕ ಜಾಗೃತಿ ಹೆಚ್ಚಿಸಬೇಕಿದೆ ಎಂದರು.

ಭಾರತದ ಪ್ರಜಾಪ್ರಭುತ್ವ ಪರಂಪರೆಯನ್ನು ಸ್ಮರಿಸಿದ ಅವರು, ಋಗ್ವೇದದ ಸಾಮೂಹಿಕ ಚಿಂತನೆಯ ಆಶಯಗಳು ಹಾಗೂ ಕರ್ನಾಟಕದ 12ನೇ ಶತಮಾನದ ಅನುಭವ ಮಂಟಪದ ವಿಚಾರ ವಿನಿಮಯ ಪರಂಪರೆ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಉತ್ತಮ ಉದಾಹರಣೆಗಳಾಗಿವೆ ಎಂದು ಹೇಳಿದರು.

ನಾರಿ ಶಕ್ತಿ ವಂದನ್ ಅಧಿನಿಯಮವು ಪ್ರಜಾಪ್ರಭುತ್ವದಲ್ಲಿ ಮಹಿಳೆಯರ ಪ್ರಾತಿನಿಧ್ಯ ಮತ್ತು ನಾಯಕತ್ವ ವಿಸ್ತರಣೆಗೆ ಮಹತ್ವದ ಹೆಜ್ಜೆಯಾಗಿದೆ. ಸ್ಥಳೀಯ ಸಂಸ್ಥೆಗಳಿಂದ ಸಂಸತ್ತಿನವರೆಗೆ ಮಹಿಳೆಯರು ಹೆಚ್ಚಿನ ಜವಾಬ್ದಾರಿ ವಹಿಸಲು ಇದು ಅವಕಾಶ ಕಲ್ಪಿಸಲಿದೆ ಎಂದು ತಿಳಿಸಿದರು.

ಡಿಜಿಟಲ್ ಸಬಲೀಕರಣಕ್ಕೆ ಸುರಕ್ಷತೆ ಪೂರಕ: ಪುರಂದೇಶ್ವರಿ

ಕಾಮನ್‌ವೆಲ್ತ್ ಮಹಿಳಾ ಸಂಸದೀಯ ಪ್ರತಿನಿಧಿಗಳ ಭಾರತ ವಲಯದ ಅಧ್ಯಕ್ಷೆ ಡಾ. ಡಿ. ಪುರಂದೇಶ್ವರಿ ಮಾತನಾಡಿ, ದೇಶದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಆಗಮಿಸಿದ್ದ 150ಕ್ಕೂ ಹೆಚ್ಚು ಪ್ರತಿನಿಧಿಗಳ ಭಾಗವಹಿಸುವಿಕೆಯಿಂದ ಸಮಾವೇಶ ಯಶಸ್ವಿಯಾಗಿದೆ ಎಂದರು.

ಮಹಿಳೆಯರ ಡಿಜಿಟಲ್ ಸಬಲೀಕರಣ ಮತ್ತು ಸುರಕ್ಷತೆಯನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಸೈಬರ್ ಸ್ಟಾಕಿಂಗ್, ಸಂಘಟಿತ ಟ್ರೋಲಿಂಗ್, ಆನ್‌ಲೈನ್ ಕಿರುಕುಳ, ವೈಯಕ್ತಿಕ ಮಾಹಿತಿಯ ದುರ್ಬಳಕೆ ಹಾಗೂ ಡೀಪ್‌ಫೇಕ್‌ಗಳು ಮಹಿಳಾ ನಾಯಕಿಯರ ಪ್ರತಿಷ್ಠೆ ಮತ್ತು ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸಕ್ಕೆ ಧಕ್ಕೆ ತರುತ್ತಿವೆ. ಈ ಸವಾಲುಗಳನ್ನು ಎದುರಿಸಲು ಸರ್ಕಾರ, ಶಾಸನಾಂಗಗಳು, ಪೊಲೀಸ್ ಇಲಾಖೆ, ತಂತ್ರಜ್ಞಾನ ಸಂಸ್ಥೆಗಳು ಹಾಗೂ ನಾಗರಿಕ ಸಮಾಜ ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಮೊದಲ ಬಾರಿಗೆ ಆಯ್ಕೆಯಾಗುವ ಮಹಿಳಾ ಜನಪ್ರತಿನಿಧಿಗಳಿಗೆ ಔಪಚಾರಿಕ ಮತ್ತು ಅನೌಪಚಾರಿಕ ಮಾರ್ಗದರ್ಶನ ವ್ಯವಸ್ಥೆ ರೂಪಿಸುವ ಅಗತ್ಯವನ್ನೂ ಅವರು ಪ್ರತಿಪಾದಿಸಿದರು.

ಮಹಿಳೆಯರ ನಿರ್ಣಯ ಕೈಗೊಳ್ಳುವ ಶಕ್ತಿ ಹೆಚ್ಚಬೇಕು: ಸಲೀಂ ಅಹಮದ್

ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್ ಮಾತನಾಡಿ, ಮಹಿಳಾ ಸಬಲೀಕರಣವೆಂದರೆ ಶಾಸನಾಂಗಗಳಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸುವುದಷ್ಟೇ ಅಲ್ಲ; ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಅವರ ಧ್ವನಿ, ಪ್ರಭಾವ ಮತ್ತು ನಾಯಕತ್ವವನ್ನು ಬಲಪಡಿಸುವುದಾಗಿದೆ ಎಂದರು.

ಸಮಾವೇಶದ ಯಶಸ್ಸನ್ನು ಇಲ್ಲಿ ನಡೆದ ಚರ್ಚೆಗಳಿಂದ ಮಾತ್ರ ಅಳೆಯದೆ, ಮುಂದಿನ ದಿನಗಳಲ್ಲಿ ಕೈಗೊಳ್ಳುವ ಕಾರ್ಯಗಳಿಂದ ಅಳೆಯಬೇಕು. ಮಹಿಳೆಯರಿಗೆ ಸುರಕ್ಷಿತ ಡಿಜಿಟಲ್ ವಾತಾವರಣ, ಹೊಸ ನಾಯಕಿಯರಿಗೆ ಮಾರ್ಗದರ್ಶನ ಹಾಗೂ ಪ್ರಜಾಸತ್ತಾತ್ಮಕ ಸಂಸ್ಥೆಗಳಲ್ಲಿ ಹೆಚ್ಚಿನ ಪ್ರಭಾವ ಕಲ್ಪಿಸುವುದು ನಮ್ಮ ಸಂಕಲ್ಪವಾಗಬೇಕು ಎಂದು ಹೇಳಿದರು.

ಎರಡು ದಿನಗಳ ಸಮಾವೇಶದಲ್ಲಿ ಸಂಸದರು, ವಿವಿಧ ರಾಜ್ಯಗಳ ಶಾಸನಕಾರರು ಹಾಗೂ ವಿಷಯ ತಜ್ಞರು ಮಹಿಳಾ ನಾಯಕತ್ವ, ಡಿಜಿಟಲ್ ಸುರಕ್ಷತೆ, ಕೃತಕ ಬುದ್ಧಿಮತ್ತೆಯ ದುರ್ಬಳಕೆ ಮತ್ತು ಮಹಿಳೆಯರ ರಾಜಕೀಯ ಪ್ರಾತಿನಿಧ್ಯ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments