ಸರ್ಕಾರವನ್ನು ದಿವಾಳಿ ಮಾಡಿದ ಕಾಂಗ್ರೆಸ್ಸಿನವರು ಜನರು ಬೀದಿಗಿಳಿಯುವ ಮೊದಲೇ ರಾಜೀನಾಮೆ ಕೊಟ್ಟು ಹೋಗುವುದು ಸೂಕ್ತ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇಶದಲ್ಲಿ ಕಾಂಗ್ರೆಸ್ ದಿವಾಳಿಯಾಗಿ ಬಹುಕಾಲ ಆಗಿದೆ. ನಿಮ್ಮ ಸರ್ಕಾರವೂ ಈಗ ದಿವಾಳಿಯಾಗಿ ಹೋಗಿದೆ. ದಿವಾಳಿ ಕಾಂಗ್ರೆಸ್‍ನ ಘೋಷಣೆ ಮಾಡಲಿಕ್ಕೆ ಗಂಜಿ ಕೇಂದ್ರಗಳನ್ನು ತೆರೆದು, ಸರ್ಕಾರಿ ಹಣ ದುರುಪಯೋಗ ಮಾಡಿ ನೀವು ಸರ್ಕಾರವನ್ನೂ ದಿವಾಳಿ ಮಾಡಿದ್ದೀರಿ ಎಂದು ಟೀಕಿಸಿದರು.
ಖಜಾನೆ ಖಾಲಿಯಾಗಿದೆ ಅಂತ ಹೇಳಲಿಕ್ಕೆ ಅಲ್ಲಿ ಹೋಗುವಿರಾ? ನಾವು ಶ್ವೇತಪತ್ರ ಕೊಡಿ ಎಂದು ಹಿಂದೆಯೇ ಹೇಳಿದ್ದೆವು. ನೀವು ಅವತ್ತಿಂದ ಬಾಯಿ ಬಿಡಲಿಲ್ಲ. ಖಜಾನೆ ತುಂಬಿ ತುಳುಕಾಡುತ್ತಿದೆ ಎಂದು ಹೇಳಿದವರು ಈಗ ಇದ್ದಕ್ಕಿದ್ದಂತೆ ನಿನ್ನೆ ಹೇಗೆ ಹಣ ಇಲ್ಲ ಅಂತ ಹೇಳಿಕೆ ಕೊಟ್ಟಿದ್ದೀರಲ್ಲವೇ ಎಂದು ಕೇಳಿದರು.
ಗಂಜಿ ಕೇಂದ್ರ ತೆರೆಯಲು ಸಾವಿರಾರು ಕೋಟಿ..
ರೈತರಿಗೆ ಹೇಗೆ ಹಣ ಕೊಡುತ್ತೀರಿ? ಕಾಂಗ್ರೆಸ್ ಕಾರ್ಯಕರ್ತರಿಗೆ, ನಿಮಗೆ ಬೇಕಾದವರಿಗೆ ಗಂಜಿ ಕೇಂದ್ರಗಳನ್ನು ತೆರೆಯಲಿಕ್ಕೆ ಸಾವಿರಾರು ಕೋಟಿ ಕೊಡುತ್ತಾ ಇದ್ದೀರಲ್ಲವೇ? ಭಾರತ್ ಜೋಡೋ ಹೆಸರಿನಲ್ಲಿ ಸಾವಿರಾರು ಕೋಟಿ ಅವರಿಗೆ ಕೊಡುವಂತಹ ಕೆಲಸ ಮಾಡಿದ್ದೀರಿ. ಗ್ಯಾರಂಟಿಗಳ ಹೆಸರಿನಲ್ಲಿ ಕಾರ್ಯಕರ್ತರಿಗೆ ನೀವು ಗಂಜಿ ಕೇಂದ್ರಗಳನ್ನು ತೆರೆದುಬಿಟ್ಟಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸರಕಾರದಿಂದ ಗ್ಯಾರಂಟಿ ಕಳ್ಳತನ…
ಎಸ್.ಐಆರ್ ನಲ್ಲಿ ವಿರೋಧ ಮಾಡುತ್ತೀರಿ. ನೀವು ಗ್ಯಾರಂಟಿಗಳ ಎಸ್.ಐಆರ್ ಶುರು ಮಾಡಿಬಿಟ್ಟಿದ್ದೀರಿ. ಯಾರ ವಿಳಾಸ ಸರಿಯಿಲ್ಲವೋ ಅವರದ್ದು ತೆಗೆದುಬಿಡಿ, ಯಾರ ಬ್ಯಾಂಕ್ ಖಾತೆ ಇಲ್ಲವೋ ಅವರದ್ದನ್ನು ತೆಗೆದುಬಿಡಿ, ಯಾರು ಆದಾಯ ತೆರಿಗೆ ಸರ್ಟಿಫಿಕೇಟ್ ಕೊಟ್ಟಿಲ್ಲ ಅವರನ್ನು ತೆಗೆದುಬಿಡಿ ಎನ್ನುತ್ತಿದ್ದಾರೆ. ಇವರು ಗ್ಯಾರಂಟಿ ಚೋರ್ ಆಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಸರ್ಕಾರಕ್ಕೆ ಆ ಪ್ರಜ್ಞೆ ಇಲ್ಲ..
ಮೀಸಲಾತಿ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, 56% ಮೀಸಲಾತಿ ಹಾಗೂ ಎಸ್ಸಿ, ಎಸ್ಟಿ. ಪರಿಶಿಷ್ಟ ಜಾತಿಯ ವರ್ಗಗಳ ಮೀಸಲಾತಿಗೂ 56% ಮೀಸಲಾತಿಗೂ ಸಂಬಂಧ ಇಲ್ಲ. ಪರಿಶಿಷ್ಟ ಜಾತಿ ವರ್ಗಗಳಿಗೆ ಸಂಬಂಧ ಇರತಕ್ಕಂತದ್ದು 24.1% ಎಂದು ನುಡಿದರು. ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿ ವರ್ಗಗಳಿಗೆ ಮೀಸಲಾತಿಯನ್ನು ಕೊಡಬೇಕು ಎಂಬುದು ಸಂವಿಧಾನಾತ್ಮಕವಾಗಿ ಬಂದಿದೆ.
ಸಂವಿಧಾನದಲ್ಲಿರುವ ಆ ಅಡಕದ ಜೊತೆಗೆ, ಕೂಲಂಕಷ ಚರ್ಚೆ ಮಾಡಿ ಹಿಂದಿನ ಬೊಮ್ಮಾಯಿ ಅವರ ಸರ್ಕಾರ ತೀರ್ಮಾನ ಮಾಡಿತ್ತು. 24% ಮೀಸಲಾತಿಯನ್ನು ಎಸ್ಸಿ, ಎಸ್ಟಿಗಳಿಗೆ ಕೊಡಬೇಕಾಗಿತ್ತು, ಕೊಟ್ಟಿದ್ದಾರೆ. ಅದು ಊರ್ಜಿತ ಕೂಡ ಆಗಿತ್ತು, ನಡೀತಾ ಇತ್ತು. ಅದನ್ನ ಯಾರೂ ಪ್ರಶ್ನೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.ಈ ಸರ್ಕಾರಕ್ಕೆ ಆ ಪ್ರಜ್ಞೆ ಇಲ್ಲ. 9ನೇ ಶೆಡ್ಯೂಲ್‍ಗೆ ಸೇರಿಸಿಲ್ಲ ಅನ್ನೋದು ಆಪಾದನೆ. 9ನೇ ಶೆಡ್ಯೂಲ್‍ಗೆ ಸೇರಿಸಿದ್ದು ನ್ಯಾಯಾಂಗದ ಪರಿಶೀಲನೆಗೆ ಹೋಗುವುದಿಲ್ಲವೇ? ಎಲ್ಲಾ ಹೋಗುತ್ತವೆ ಎಂದು ವಿವರಿಸಿದರು.
ನಾವು ಮಾಡಿದಾಗ ಏನೂ ಸಮಸ್ಯೆ ಇರಲಿಲ್ವಲ್ಲಾ? ಎಲ್ಲರಿಗೂ ಸಿಕ್ತಾ ಇತ್ತಲ್ಲಾ? ಇಂಜಿನಿಯರಿಂಗ್‍ನಲ್ಲಿ ಸೀಟ್ ಸಿಕ್ಕಿದೆ. ಮೆಡಿಕಲ್, ಡೆಂಟಲ್ ಸೀಟ್ ಸಿಕ್ಕಿದೆ. ಉದ್ಯೋಗ, ಬಡ್ತಿ ವಿಚಾರದಲ್ಲೂ ಪ್ರಯೋಜನ ಲಭಿಸಿದೆ. ಪ್ರಶ್ನೆ ಮಾಡಿದ್ದು ನೀವೇ. ಮಾಡಿ ಈಗ ನೀವೇ ಸಿಕ್ಕಿಬಿದ್ದಿದ್ದೀರಿ. ಅದರ ಪರಿಹಾರವನ್ನು ನೀವೇ ಕೊಡಿ ಎಂದು ಒತ್ತಾಯಿಸಿದರು. ಪರಿಶಿಷ್ಟ ಜಾತಿ ವರ್ಗಗಳಿಗೆ ಜನಸಂಖ್ಯೆ ಆಧಾರದ ಮೇಲೆ ನಾವು 24% ಕೊಡಲೇಬೇಕಾಗಿದೆ ಎಂದು ಮನವರಿಕೆ ಮಾಡಬೇಕಿತ್ತು ಎಂದರು.
ಸ್ಟಿಂಗ್- ದಿನಕ್ಕೊಂದು ಹೇಳಿಕೆ..
ಸ್ಟಿಂಗ್ ಆಪರೇಷನ್ ವಿವಾದ ಕುರಿತಂತೆ ಪ್ರಶ್ನಿಸಿದಾಗ, ಈಗ ದಿನಕ್ಕೊಂದು ಹೇಳಿಕೆ ಕೊಡಬಾರದು. ಎರಡು-ಮೂರು ದಿನದಲ್ಲಿ ಎಲ್ಲಾ ನಿಮಗೆ ಉತ್ತರ ಕೊಡ್ತೀವಿ ಅಂತ ಗೃಹ ಸಚಿವರು ಮೊದಲು ಹೇಳಿದ್ದರು. ಅದಾದ ನಂತರ ಯಾವಾಗ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಬೀದಿಗೆ ಬಂದು, ಇದರಲ್ಲಿ ಕಾಂಗ್ರೆಸ್‍ನವರೇ ಇದ್ದಾರೆ ಅಂತ ಯಾವತ್ತು ಹೇಳಿದರೋ, ಅದಾದ ಬಳಿಕ ಗೃಹ ಸಚಿವರು, ಎರಡು ತಿಂಗಳು ಆಗಬಹುದು, ಮೂರು ತಿಂಗಳು ಆಗಬಹುದು, ಸಮಯ ಹೇಳಲಾಗದು ಎಂದಿದ್ದರು. ಈಗ ಒಂದು ವಾರದಲ್ಲಿ ಹೇಳುವುದಾಗಿ ತಿಳಿಸಿದ್ದಾರೆ. ಅವರ ಯಾವ ಮಾತನ್ನು ನಂಬಬೇಕು? ಗೃಹ ಇಲಾಖೆ ಅವರ ಮಾತು ಕೇಳುತ್ತಿಲ್ಲವೇ? ಅವರ ಕೈಯಲ್ಲಿ ಅದನ್ನು ನಿಭಾಯಿಸಲಿಕ್ಕೆ ಆಗುತ್ತಿಲ್ಲವೇ ಎಂದು ಕೇಳಿದರು.
ಗೃಹ ಇಲಾಖೆ ಬಗ್ಗೆ ಉತ್ತರ ಇಲ್ಲ..
ಅವರು ಬಹುಶಃ ಬೇರೆ ಬೇರೆ ಖಾತೆಗಳ ಬಗ್ಗೆ ಮಾತಾಡುತ್ತಾರೆ. ಗೃಹ ಇಲಾಖೆ ಕುರಿತ ಪ್ರಶ್ನೆಗೆ ಒಂದಕ್ಕೂ ಅವರು ಉತ್ತರ ಕೊಡೋದಿಲ್ಲ ಎಂದು ಟೀಕಿಸಿದರು. ಸ್ಟಿಂಗ್ ಆಪರೇಷನ್ ಅನ್ನೋದೇ ಒಂದು ಕೆಟ್ಟ ಪರಂಪರೆ. ಯತೀಂದ್ರ ಸಿದ್ದರಾಮಯ್ಯನವರೇ ಕಾಂಗ್ರೆಸ್‍ನವರೇ ಇದರಲ್ಲಿ ಇದ್ದಾರೆ ಅಂತ ಹೇಳಿದ್ದಾರೆ ಎಂದು ಗಮನ ಸೆಳೆದರು.
ಜನತಾದಳದವರು ಇದರ ಹಿಂದೆ ಇದ್ದಾರೆ ಅಂತ ಹೇಗೆ ಹೇಳ್ತೀರಿ ನೀವು? ಅಥವಾ ಒಂದು ವಾರದಲ್ಲಿ ಹೇಳುವುದಿದ್ದರೆ ಜನತಾದಳದವರು ಇದ್ದಾರೆ ಅಂತ ಇವತ್ತೇ ಹೇಗೆ ತಿಳಿಸುತ್ತೀರಿ ಎಂದು ಪ್ರಶ್ನಿಸಿದರು. ಈ ರೀತಿ ಹೆದರಿಸಿ ರಾಜಕಾರಣ ಮಾಡುವುದನ್ನು ಕಾಂಗ್ರೆಸ್ ಮೊದಲು ಬಿಡಬೇಕು ಎಂದು ಆಗ್ರಹಿಸಿದರು.
12 ವರ್ಷದ ಹಿಂದೆ ನಡೆದುದು..
12 ವರ್ಷದ ಹಿಂದೆ ಅದು ಆಗಿದೆ ಎಂದು ನಿಮ್ಮ ಕೆಪಿಸಿಸಿ ಅಧ್ಯಕ್ಷರೇ ಹೇಳಿದ್ದಾರೆ. ಹಾಗಿದ್ದೂ ನೀವೇ ಮಾಡಿ ಹೀಗೆ ಬೇರೆ ಬೇರೆಯವರ ಮೇಲೆ ಯಾಕೆ ಹಾಕುತ್ತೀರಿ? ನಾವು ವಿರೋಧ ಪಕ್ಷದಲ್ಲಿ ಇರುವವರು. ಸರ್ಕಾರದ ಯಾವುದೇ ನ್ಯೂನತೆಗಳು ಬಂದಾಗ ಅದನ್ನ ನಾವು ಹೇಳಬೇಕು, ಅದು ನಮ್ಮ ಕರ್ತವ್ಯ. ಹಾಗಾಗಿ ಕುಮಾರಸ್ವಾಮಿ ಅವರು ಆ ಮಾತನ್ನು ಹೇಳಿರಬಹುದು. ಪದೇ ಪದೇ ಹೇಳುತಾರೆ. ಅದು ನಮ್ಮ ಹಕ್ಕು ಎಂದು ತಿಳಿಸಿದರು.
ಭ್ರಷ್ಟಾಚಾರದಲ್ಲಿ ಮುಳುಗಿದ ಕೆಪಿಎಸ್‍ಸಿ
ಕೆಪಿಎಸ್‍ಸಿ ಭ್ರಷ್ಟಾಚಾರದಲ್ಲಿ ಮುಳುಗಿಬಿಟ್ಟಿದೆ, ಕೆಪಿಎಸ್‍ಸಿಯನ್ನೇ ಮುಚ್ಚಬೇಕು ಅಂತ ಹೇಳಿದಿರಿ. ಕೊನೆಗೆ ನೀವೇ ಸಿಕ್ಕಿಬಿದ್ದುಬಿಟ್ಟಿದ್ದೀರಲ್ಲವೇ? ನಿಮ್ಮ ಹೆಸರುಗಳೇ ಹೊರಗಡೆ ಬರೋಕೆ ಶುರು ಆದ ಬಳಿಕ ತನಿಖೆ ಹಳ್ಳ ಹಿಡಿಸಲು ಮುಂದಾಗಿದ್ದೀರಿ ಎಂದು ಟೀಕಿಸಿದರು. ಆ ಜ್ಞಾನೇಂದ್ರಕುಮಾರ್ ನನಗೆ ತಿಳಿಸಿ ಊರಿಗೆ ಹೋಗಿದ್ದಾರೆ, ಅವರ ತಂದೆಗೆ ಹುಷಾರಿಲ್ಲ ಅಂದಿದ್ದರು. ನಾಲ್ಕೈದು ದಿನ ಬರ್ಲಿಲ್ಲ ಅನ್ನೋ ಕಾರಣಕ್ಕೆ, ನಮಗೆ ಗೊತ್ತೇ ಇಲ್ಲ, ಸಂಬಂಧ ಇಲ್ಲ ಅಂದರು ಎಂದು ಆರೋಪಿಸಿದರು.
ಕೆಲವರು ಬೆವತು ಹೋಗಿದ್ದಾರೆ. ಮಾಡಿದ ತಪ್ಪುಗಳನ್ನು ನೀವು ಮುಚ್ಚಿಕೊಳ್ಳಲಿಕ್ಕೆ ಆಗೋದಿಲ್ಲ. ಏನೇ ಇದ್ರೂ ಸರ್ಕಾರ ಮಾಡುವವರು ಸ್ವಲ್ಪ ತೆರೆದ ಹೃದಯದಿಂದ ಇರಬೇಕು. ತೆರೆದ ಮನಸ್ಸಿನಿಂದ ಮಾತಾಡಬೇಕು ಎಂದರಲ್ಲದೇ, ಬ್ಲಾಕ್‍ಮೇಲ್ ಎಲ್ಲಾ ಬಿಟ್ಟು ಸತ್ಯಗಳನ್ನು ಹೊರಗೆ ತರುವ ಕೆಲಸ ಮಾಡಿ ಎಂದು ಆಗ್ರಹಿಸಿದರು.
ಆರ್‍ಎಸ್‍ಎಸ್ ದೇಶಭಕ್ತಿ ಹೇಳಿಕೊಡುವ, ಎಲ್ಲರನ್ನು ಪ್ರೇರೇಪಣೆ ಮಾಡುವ ಒಂದು ಸಂಘಟನೆ. ಶಿಸ್ತನ್ನು ಜೀವನದಲ್ಲಿ ಕಲಿಸಿಕೊಡುವ ಸಂಘಟನೆ. ಎಲ್ಲಾ ಹಿಂದೂಗಳು ನಾವು ಒಂದಾಗಿರಬೇಕು, ದೇಶವೇ ಮುಖ್ಯ, ದೇಶ ಮೊದಲು, ದೇಶವಿಲ್ಲದೆ ನಾವಿಲ್ಲ, ಭಾರತ ಮಾತಾ ಅನ್ನುವುದು ನಮ್ಮ ಅಸ್ಮಿತೆ-ಇಂತವುಗಳನ್ನು ಹೇಳಿಕೊಡುವಂತಹ ಒಂದು ಸಂಘಟನೆ. ಅದನ್ನು ನಾವು ನೋಡಿದಾಗ ನಮಗೆ ಖುಷಿಯಾಗುತ್ತದೆ ಎಂದು ಈ ಕುರಿತ ಪ್ರಶ್ನೆಗೆ ಉತ್ತರ ನೀಡಿದರು.


