ಕರ್ನಾಟಕದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಹಾಗೂ ರಾಜ್ಯದ ಐತಿಹಾಸಿಕ, ಸಾಂಸ್ಕೃತಿಕ ಮತ್ತು ನೈಸರ್ಗಿಕ ವೈವಿಧ್ಯತೆಯನ್ನು ದೇಶ-ವಿದೇಶದ ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶದಿಂದ ರೂಪಿಸಿರುವ ಪ್ರತಿಷ್ಠಿತ ‘ಗೋಲ್ಡನ್ ಚಾರಿಯಟ್’ 2026–27ನೇ ಸಾಲಿನ ಐಷಾರಾಮಿ ಯಾತ್ರೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶನಿವಾರ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಚಾಲನೆ ನೀಡಿದರು.
ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್, ಪ್ರವಾಸೋದ್ಯಮ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಸೇರಿದಂತೆ ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC), IRCTC ಮತ್ತು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕರ್ನಾಟಕದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಸರ್ಕಾರದ ಉದ್ದೇಶವಾಗಿದೆ. ಪ್ರಸಿದ್ಧ ಪ್ರವಾಸಿ ತಾಣಗಳ ಜೊತೆಗೆ ಹೊಸ ತಾಣಗಳನ್ನು ಗುರುತಿಸಿ ಪ್ರವಾಸಿಗರಿಗೆ ಪರಿಚಯಿಸುವ ಮೂಲಕ ರಾಜ್ಯದ ಪ್ರವಾಸೋದ್ಯಮವನ್ನು ಮತ್ತಷ್ಟು ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಗೋಲ್ಡನ್ ಚಾರಿಯಟ್ ರೈಲಿಗೆ ಹೊಸ ಪ್ರವಾಸಿ ಮಾರ್ಗಗಳನ್ನು ಪರಿಚಯಿಸಲಾಗಿದ್ದು, ‘Pride of Karnataka’, ‘Jewels of South’ ಮತ್ತು ‘Glimpses of Karnataka’ ಎಂಬ ಮೂರು ವಿಶೇಷ ಯಾತ್ರೆಗಳ ಮೂಲಕ ಪ್ರವಾಸಿಗರಿಗೆ ವಿಭಿನ್ನ ಅನುಭವಗಳನ್ನು ಒದಗಿಸಲಾಗುತ್ತಿದೆ. ಈ ಯಾತ್ರೆಗಳು ಕರ್ನಾಟಕದ ವನ್ಯಜೀವಿ ಸಂಪತ್ತು, ರಾಜವೈಭವ, ಹೊಯ್ಸಳ ವಾಸ್ತುಶಿಲ್ಪ, ಕಾಫಿ ಸಂಸ್ಕೃತಿ, ಹಂಪಿಯ ಐತಿಹಾಸಿಕ ಸ್ಮಾರಕಗಳು ಹಾಗೂ ಕರಾವಳಿಯ ವೈಶಿಷ್ಟ್ಯಗಳನ್ನು ಪರಿಚಯಿಸಲಿವೆ.
ಮೊದಲ ಯಾತ್ರೆಯಲ್ಲಿ 75 ಅತಿಥಿಗಳು
‘Pride of Karnataka’ ಹೆಸರಿನ ಐದು ರಾತ್ರಿ, ಆರು ದಿನಗಳ ಮೊದಲ ಯಾತ್ರೆಯಲ್ಲಿ 75 ಅತಿಥಿಗಳು ಭಾಗವಹಿಸಿದ್ದಾರೆ. ಸುಮಾರು 60 ಸಿಬ್ಬಂದಿ ರೈಲಿನಲ್ಲಿ ಆತಿಥ್ಯ ಹಾಗೂ ಇತರ ಸೇವೆಗಳನ್ನು ಒದಗಿಸಲಿದ್ದಾರೆ.
ಬಂಡೀಪುರ, ಮೈಸೂರು, ಹಳೇಬೀಡು, ಚಿಕ್ಕಮಗಳೂರು, ಹಂಪಿ ಮತ್ತು ಗೋವಾ ಸೇರಿದಂತೆ ಪ್ರಮುಖ ತಾಣಗಳನ್ನು ಈ ಯಾತ್ರೆಯಲ್ಲಿ ವೀಕ್ಷಿಸಬಹುದಾಗಿದೆ. ರೈಲಿನಲ್ಲಿ ಪ್ರತ್ಯೇಕ ಅತಿಥಿ ಕೊಠಡಿಗಳು, ಊಟದ ಬೋಗಿಗಳು, ಸ್ಪಾ ಸೇರಿದಂತೆ ವಿವಿಧ ಐಷಾರಾಮಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ರೈಲಿನ ಪ್ರಯಾಣದ ಜೊತೆಗೆ ಪ್ರತಿ ತಾಣದಲ್ಲಿಯೂ ಸ್ಥಳೀಯ ಸಂಸ್ಕೃತಿ, ಇತಿಹಾಸ ಮತ್ತು ಪ್ರವಾಸಿ ಆಕರ್ಷಣೆಗಳನ್ನು ಅನುಭವಿಸಲು ಅವಕಾಶವಿದೆ.
ಮೂರು ವಿಶೇಷ ಪ್ರವಾಸಿ ಮಾರ್ಗಗಳು
2026–27ನೇ ಸಾಲಿನಲ್ಲಿ ಗೋಲ್ಡನ್ ಚಾರಿಯಟ್ ಮೂಲಕ ಮೂರು ವಿಶೇಷ ಪ್ರವಾಸಿ ಮಾರ್ಗಗಳಲ್ಲಿ ಒಟ್ಟು 13 ಯಾತ್ರೆಗಳನ್ನು ಆಯೋಜಿಸಲಾಗಿದೆ.
Pride of Karnataka: ಐದು ರಾತ್ರಿ, ಆರು ದಿನಗಳ ಈ ಯಾತ್ರೆಯು ಬೆಂಗಳೂರು, ಬಂಡೀಪುರ, ಮೈಸೂರು, ಹಳೇಬೀಡು, ಚಿಕ್ಕಮಗಳೂರು, ಹಂಪಿ ಮತ್ತು ಗೋವಾ ತಾಣಗಳನ್ನು ಒಳಗೊಂಡಿದೆ.
Jewels of South: ಐದು ರಾತ್ರಿ, ಆರು ದಿನಗಳ ಈ ಪ್ರವಾಸದಲ್ಲಿ ಮೈಸೂರು, ಹಂಪಿ ಸೇರಿದಂತೆ ಮಹಾಬಲಿಪುರಂ, ತಂಜಾವೂರು, ಚೆಟ್ಟಿನಾಡು, ಕೊಚ್ಚಿ ಮತ್ತು ಕುಮಾರಕೋಂನಂತಹ ದಕ್ಷಿಣ ಭಾರತದ ಪ್ರಮುಖ ತಾಣಗಳನ್ನು ವೀಕ್ಷಿಸಬಹುದು.
Glimpses of Karnataka: ಮೂರು ರಾತ್ರಿ, ನಾಲ್ಕು ದಿನಗಳ ಈ ಯಾತ್ರೆಯು ಬಂಡೀಪುರ, ಮೈಸೂರು ಮತ್ತು ಹಂಪಿಯ ಪ್ರವಾಸಿ ಆಕರ್ಷಣೆಗಳನ್ನು ಒಳಗೊಂಡಿದೆ.
ಪರಂಪರೆ, ಪ್ರಕೃತಿ ಮತ್ತು ಸಂಸ್ಕೃತಿಯ ಅನಾವರಣ
ಬಂಡೀಪುರದಲ್ಲಿ ವನ್ಯಜೀವಿ ಸಫಾರಿ, ಮೈಸೂರಿನಲ್ಲಿ ಅರಮನೆಯ ರಾಜವೈಭವ ಹಾಗೂ ಶ್ರೀರಂಗಪಟ್ಟಣದ ಐತಿಹಾಸಿಕ ಹಿನ್ನೆಲೆ, ಬೇಲೂರು–ಹಳೇಬೀಡಿನ ಹೊಯ್ಸಳ ಶಿಲ್ಪಕಲೆ, ಚಿಕ್ಕಮಗಳೂರಿನ ಕಾಫಿ ತೋಟಗಳು ಮತ್ತು ಮಲೆನಾಡಿನ ಜೀವನಶೈಲಿಯನ್ನು ಪ್ರವಾಸಿಗರು ಹತ್ತಿರದಿಂದ ಅನುಭವಿಸಬಹುದು. ಹಂಪಿಯಲ್ಲಿ ವಿಜಯನಗರ ಸಾಮ್ರಾಜ್ಯದ ಸ್ಮಾರಕಗಳು ಹಾಗೂ ವಾಸ್ತುಶಿಲ್ಪದ ವೈಭವವನ್ನು ವೀಕ್ಷಿಸಬಹುದು. ಗೋವಾದಲ್ಲಿ ಐತಿಹಾಸಿಕ ಚರ್ಚುಗಳು ಮತ್ತು ಇಂಡೋ–ಪೋರ್ಚುಗೀಸ್ ಪರಂಪರೆಯ ಪರಿಚಯವೂ ದೊರೆಯಲಿದೆ.
ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಮಾತನಾಡಿ, ಗೋಲ್ಡನ್ ಚಾರಿಯಟ್ ಕೇವಲ ಐಷಾರಾಮಿ ರೈಲು ಯಾತ್ರೆಯಲ್ಲ; ಕರ್ನಾಟಕದ ವನ್ಯಜೀವಿ, ಪರಂಪರೆ, ಸಂಸ್ಕೃತಿ, ಕಾಫಿ ನಾಡು ಮತ್ತು ಆತಿಥ್ಯವನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ವಿಶಿಷ್ಟ ಪ್ರವಾಸೋದ್ಯಮ ಉತ್ಪನ್ನವಾಗಿದೆ. ಹೊಸ ಪ್ರವಾಸಿ ಅನುಭವಗಳನ್ನು ಪರಿಚಯಿಸುವ ಮೂಲಕ ದೇಶೀಯ ಹಾಗೂ ಅಂತರರಾಷ್ಟ್ರೀಯ ಪ್ರವಾಸೋದ್ಯಮ ಮಾರುಕಟ್ಟೆಯಲ್ಲಿ ಕರ್ನಾಟಕದ ಸ್ಥಾನವನ್ನು ಬಲಪಡಿಸಲಾಗುವುದು ಎಂದು ತಿಳಿಸಿದರು.
ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ರೈಲಿನಲ್ಲಿನ ಐಷಾರಾಮಿ ಸೌಲಭ್ಯಗಳು ಮತ್ತು ಪ್ರತಿ ನಿಲ್ದಾಣದಲ್ಲಿನ ಸ್ಥಳೀಯ ಪ್ರವಾಸಿ ಅನುಭವಗಳನ್ನು ಸಮಗ್ರವಾಗಿ ಜೋಡಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರವಾಸಿ ಸೇವೆಗಳು, ಮಾರುಕಟ್ಟೆ ಮತ್ತು ಕಾಯ್ದಿರಿಸುವಿಕೆ ವ್ಯವಸ್ಥೆಯನ್ನು ಬಲಪಡಿಸಿ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರವಾಸೋದ್ಯಮದ ಅಭಿವೃದ್ಧಿಯ ಮೂಲಕ ಸ್ಥಳೀಯ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು, ಪ್ರವಾಸಿ ತಾಣಗಳ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಹಾಗೂ ಕರ್ನಾಟಕದ ವೈವಿಧ್ಯಮಯ ಪ್ರವಾಸಿ ಆಕರ್ಷಣೆಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.


