ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ, ರಸ್ತೆ ಕುಸಿತ, ರಸ್ತೆ ಗುಂಡಿಗಳ ದುರಸ್ತಿ, ಮಳೆನೀರು ಚರಂಡಿ, ಒಳಚರಂಡಿ ವ್ಯವಸ್ಥೆ, ಮ್ಯಾನ್ಹೋಲ್ಗಳ ಅಳವಡಿಕೆ ಮತ್ತು ಮ್ಯಾನ್ಹೋಲ್ಗಳ ಮಟ್ಟ ಸರಿಪಡಿಸುವಿಕೆ ಹಾಗೂ ಜಲಮಂಡಳಿ, ಕೆಪಿಟಿಸಿಎಲ್ ಮತ್ತು ಬೆಸ್ಕಾಂ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳ ಪ್ರಗತಿ ಕುರಿತು ಅಪರ ಆಯುಕ್ತರಾದ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ರವರ ಅಧ್ಯಕ್ಷತೆಯಲ್ಲಿ ರಸ್ತೆ ಪುನಃಸ್ಥಾಪನೆ ಸಭೆ ನಡೆಯಿತು.
ಸಭೆಯಲ್ಲಿ ಈ ಹಿಂದೆ ನೀಡಿದ್ದ ನಿರ್ದೇಶನಗಳ ಅನುಷ್ಠಾನ ಹಾಗೂ ವಿವಿಧ ಇಲಾಖೆಗಳ ವತಿಯಿಂದ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದ ಅಪರ ಆಯುಕ್ತರು, ಸೂಚನೆಗಳ ಪಾಲನೆಯಲ್ಲಿ ವಿಳಂಬ ತೋರಿರುವ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಎಲ್ಲಾ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲು ಹಾಗೂ ಸಾರ್ವಜನಿಕರಿಗೆ ಎದುರಾಗುತ್ತಿರುವ ರಸ್ತೆ ಮತ್ತು ಮೂಲಸೌಕರ್ಯ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಸ್ತೆ ಅಗೆಯಲು ಯಾವುದೇ ಕಾರಣಕ್ಕೂ ಅನುಮತಿ ಇಲ್ಲ
ಹೊಸದಾಗಿ ಡಾಂಬರೀಕರಣಗೊಂಡ ರಸ್ತೆಗಳನ್ನು ಕನಿಷ್ಠ ಒಂದು ವರ್ಷದವರೆಗೆ ಅಗೆಯಲು ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಸೀಗೆಹಳ್ಳಿ, ಬಸವನಪುರ ಹಾಗೂ ಹೊರವರ್ತುಲ ರಸ್ತೆ (ಉಡುಪಿ ಸನ್ನಿಧಿ ಹೋಟೆಲ್ ಬಳಿ), ಗ್ರೀನ್ ಗ್ಲೆನ್ ಲೇಔಟ್, ಬೆಳ್ಳಂದೂರು ಮುಖ್ಯ ರಸ್ತೆ, ದೇವರಬೀಸನಹಳ್ಳಿಯಲ್ಲಿ ಜಲಮಂಡಳಿಯಿಂದ ರಸ್ತೆ ಅಗೆದಿರುವ ಸ್ಥಳಗಳನ್ನು ತಕ್ಷಣವೇ ದುರಸ್ತಿಪಡಿಸಿ ಪಾಲಿಕೆಗೆ ವರದಿ ಸಲ್ಲಿಸಲು ಸೂಚಿಸಲಾಯಿತು. ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳು ಹಾಗೂ ರಸ್ತೆ ಕುಸಿತದ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಬೇಕು. ರಸ್ತೆ ಅಗೆತದಿಂದ ಹಾನಿಗೊಳಗಾಗಿರುವ ಸ್ಥಳಗಳಲ್ಲಿ ಸಂಬಂಧಪಟ್ಟ ಇಲಾಖೆಗಳ ಸಮನ್ವಯದೊಂದಿಗೆ ರಸ್ತೆ ಮರುಸ್ಥಾಪನೆ ಕಾರ್ಯ ಕೈಗೊಳ್ಳಬೇಕು. ರಸ್ತೆ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡುವುದರ ಜೊತೆಗೆ, ಕಾಮಗಾರಿ ಪೂರ್ಣಗೊಂಡ ನಂತರ ಮತ್ತೆ ರಸ್ತೆ ಕುಸಿಯದಂತೆ ಅಗತ್ಯ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಏಜೆನ್ಸಿಯಿಂದ ವೆಚ್ಚ ವಸೂಲಿ ಮಾಡಿ ರಸ್ತೆ ಪುನಃಸ್ಥಾಪಿಸಿ
ನೆಕ್ಸಸ್ ಮಾಲ್ ಮುಂಭಾಗದಲ್ಲಿ ಚರಂಡಿ ಸಂಪರ್ಕದಿಂದ ನೀರು ಹಿಮ್ಮುಖವಾಗಿ ಹರಿಯುತ್ತಿದ್ದು, ಸೂಕ್ತ ಇಳಿಜಾರಿನೊಂದಿಗೆ ಮರುಸಂಪರ್ಕ ಕಲ್ಪಿಸಲು ಸೂಚಿಸಲಾಯಿತು. ಕಳಪೆ ಕಾಮಗಾರಿ ನಡೆಸಿದ ಏಜೆನ್ಸಿಯಿಂದ ವೆಚ್ಚ ವಸೂಲಿ ಮಾಡಿ ಪಾಲಿಕೆಯಿಂದಲೇ ರಸ್ತೆ ಪುನಃಸ್ಥಾಪಿಸುವಂತೆ ಅಪರ ಆಯುಕ್ತರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಿಯಮ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳ ವಿರುದ್ಧ ಕಾನೂನು ಕ್ರಮ
ಕೆಪಿಟಿಸಿಎಲ್ 220 ಕೆ.ವಿ ಟ್ರಾನ್ಸ್ ಮಿಷನ್ ಲೈನ್ ಕಾರಿಡಾರ್ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿ ನಿರ್ಮಿಸಲಾಗಿರುವ ಕಟ್ಟಡಗಳ ವಿರುದ್ಧ ಜಂಟಿ ತಂಡದಿಂದ ತಕ್ಷಣವೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಬೆಸ್ಕಾಂ ಕೇಬಲ್ ಅಳವಡಿಕೆ ವೇಳೆ ಜಲಮಂಡಳಿ ಕೊಳವೆ ಮಾರ್ಗಗಳಿಗೆ ಹಾನಿಯಾಗದಂತೆ ಬೆಸ್ಕಾಂ ಮತ್ತು ಜಲಮಂಡಳಿ ಅಧಿಕಾರಿಗಳು ಜಂಟಿ ಸಮನ್ವಯ ಸಾಧಿಸಬೇಕು. ವರ್ತೂರು ಕೋಡಿ ರಸ್ತೆಯಲ್ಲಿ ರಸ್ತೆ ಕುಸಿತ ತಡೆಯಲು ಹಾಗೂ ಡಾಂಬರೀಕರಣದ ನಂತರ ರಸ್ತೆ ಅಗೆಯುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆನೀರು ನಿಲುಗಡೆ ಸಮಸ್ಯೆಗೆ ಶಾಶ್ವತ ಪರಿಹಾರ
ಕಾಮಧೇನು ನಗರ ಹಾಗೂ ಹೈಡ್ರೋಸೈಟ್ ಕಾರಿಡಾರ್ – ವರ್ತೂರು ರಸ್ತೆ ಜಂಕ್ಷನ್ನಲ್ಲಿ ಪದೇ ಪದೆ ಮಳೆನೀರು ನಿಲುಗಡೆ ಸಮಸ್ಯೆ ಎದುರಾಗುತ್ತಿದೆ. ಜಲಮಂಡಳಿ, ಬಿ-ಸ್ಮೈಲ್ ಹಾಗೂ ಸಂಬಂಧಪಟ್ಟ ಸಂಸ್ಥೆಗಳು ಜಂಟಿ ಪರಿಶೀಲನೆ ನಡೆಸಿ ತಾಂತ್ರಿಕ ಪರಿಹಾರ ಕಂಡುಕೊಳ್ಳಬೇಕು. ಪ್ರಿಕಾಸ್ಟ್ ಮ್ಯಾನ್ಹೋಲ್ಗಳ ಅಳವಡಿಕೆ, ಮ್ಯಾನ್ಹೋಲ್ಗಳ ಮಟ್ಟ ಸರಿಪಡಿಸುವುದು ಮತ್ತು ರಸ್ತೆ ಮೇಲ್ಮೈಗೆ ಸಮನಾಗಿ ಅಳವಡಿಸುವ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ವರ್ತೂರು ಕೋಡಿ – ಬಳಗೆರೆ ಸಿವೇಜ್ ಟ್ರೀಟ್ಮೆಂಟ್ ಪ್ಲಾಂಟ್ (STP) ಬಳಿ ರಾಜಕಾಲುವೆ ಗಡಿಯನ್ನು ಗುರುತಿಸಬೇಕು. ಮಳೆನೀರು ನಿಲುಗಡೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಬಾಕಿ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕೈಗೊಳ್ಳಲಾಗಿರುವ ರಸ್ತೆ ಕಟಿಂಗ್, ನೀರು ಸೋರಿಕೆ, ಒಳಚರಂಡಿ ಹಾಗೂ ರಸ್ತೆ ಮರುಸ್ಥಾಪನೆಗೆ ಸಂಬಂಧಿಸಿದ ಬಾಕಿ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕಾಮಗಾರಿಗಳಿಗೆ ಅಗತ್ಯವಿರುವ ಅನುಮತಿಗಳು, ತಾಂತ್ರಿಕ ಪರಿಶೀಲನೆ ಹಾಗೂ ಇತರೆ ಪ್ರಕ್ರಿಯೆಗಳನ್ನು ವಿಳಂಬವಿಲ್ಲದೆ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಕಾಮಗಾರಿಗಳ ಪ್ರಗತಿ ವರದಿ ಸಲ್ಲಿಸಲು ಸೂಚನೆ
ಬೆಸ್ಕಾಂ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಪರಸ್ಪರ ಸಮನ್ವಯ ಸಾಧಿಸಿ, ಕಾಮಗಾರಿಗಳ ಅನುಷ್ಠಾನದಲ್ಲಿನ ಅಡಚಣೆಗಳನ್ನು ನಿವಾರಿಸಬೇಕು. ಬಾಕಿ ಇರುವ ಕಾಮಗಾರಿಗಳ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಿ, ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪರಿಶೀಲನೆಯಲ್ಲಿ ಗುರುತಿಸಲಾದ ಸಮಸ್ಯೆಗಳ ಕುರಿತು ಕೈಗೊಂಡ ಕ್ರಮಗಳು, ಬಾಕಿ ಉಳಿದಿರುವ ಕೆಲಸಗಳು ಹಾಗೂ ಅವುಗಳ ಪೂರ್ಣಗೊಳಿಸುವಿಕೆಯ ಕಾಲಮಿತಿಯ ವಿವರಗಳೊಂದಿಗೆ ಸಂಬಂಧಪಟ್ಟ ಅಧಿಕಾರಿಗಳು ಪ್ರಗತಿ ವರದಿ ಸಲ್ಲಿಸಬೇಕು ಎಂದು ಅಪರ ಆಯುಕ್ತರು ನಿರ್ದೇಶನ ನೀಡಿದರು.
ಖಾಸಗಿ ರಸ್ತೆಗಳನ್ನು ಸಾರ್ವಜನಿಕ ರಸ್ತೆಗಳೆಂದು ಘೋಷಿಸಲು ಕ್ರಮ
ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಖಾಸಗಿ ರಸ್ತೆಗಳನ್ನು ಸಾರ್ವಜನಿಕ ರಸ್ತೆಗಳೆಂದು ಘೋಷಿಸುವ ಪ್ರಸ್ತಾವನೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸಾರ್ವಜನಿಕರ ಅನುಕೂಲ, ಸುಗಮ ಸಂಚಾರ, ರಸ್ತೆ ಸಂಪರ್ಕ ಸುಧಾರಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಖಾಸಗಿ ರಸ್ತೆಗಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಪರ್ಯಾಯ ಸಂಪರ್ಕ ರಸ್ತೆಗಳ ಸಾಧ್ಯತೆಗಳನ್ನು ಪರಿಶೀಲಿಸುವುದು, ರಸ್ತೆಗಳನ್ನು ಸಾರ್ವಜನಿಕ ರಸ್ತೆಗಳೆಂದು ಘೋಷಿಸುವ ಮೊದಲು ನಗರ ಯೋಜನಾ ಇಲಾಖೆಯ ಪೂರ್ವಾನುಮತಿ ಪಡೆಯುವುದು ಹಾಗೂ ತಾಂತ್ರಿಕ ಪರಿಶೀಲನೆ ನಡೆಸಿ ನಿಯಮಗಳು ಮತ್ತು ಮಾರ್ಗಸೂಚಿಗಳಂತೆ ಮುಂದಿನ ಕ್ರಮ ಕೈಗೊಳ್ಳುವಂತೆ ಅಪರ ಆಯುಕ್ತರು ಸೂಚಿಸಿದರು.
ಬಾಕಿ ಇರುವ ಸಿಸಿಎಂಎಸ್ ದೂರುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ
ಇದೇ ವೇಳೆ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಿಸಿಎಂಎಸ್ ತಂತ್ರಾಂಶದಲ್ಲಿ ದಾಖಲಾಗಿರುವ ನ್ಯಾಯಾಲಯದ ಪ್ರಕರಣಗಳ ಪ್ರಗತಿ, ಬಾಕಿ ಪ್ರಕರಣಗಳ ತ್ವರಿತ ವಿಲೇವಾರಿ ಹಾಗೂ ಸೂಕ್ತ ನಿರ್ವಹಣೆ ಕುರಿತು ಚರ್ಚಿಸಲಾಯಿತು. ಅಧಿಕಾರಿಗಳ ಲಾಗಿನ್ನಲ್ಲಿ ಬಾಕಿ ಇರುವ ದೂರುಗಳು, ವಿವಿಧ ಇಲಾಖೆಗಳ ನ್ಯಾಯಾಲಯದ ಪ್ರಕರಣಗಳ ಪ್ರಸ್ತುತ ಸ್ಥಿತಿ, ಪ್ರಕರಣಗಳ ಹಂತವಾರು ಪ್ರಗತಿ, ಪ್ಯಾರಾವಾರು ಟಿಪ್ಪಣಿಗಳ ಸಿದ್ಧತೆ ಹಾಗೂ ಅಗತ್ಯ ದಾಖಲೆಗಳನ್ನು ವಕೀಲರಿಗೆ ಸಲ್ಲಿಸುವ ಕುರಿತು ಚರ್ಚಿಸಿ, ಪ್ರಕರಣಗಳ ನಿರ್ವಹಣೆಯಲ್ಲಿ ವಿಳಂಬವಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಬೆಸ್ಕಾಂ, ಕೆಪಿಟಿಸಿಎಲ್, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಕಾನೂನು ವಿಭಾಗ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.


