ಬೆಂಗಳೂರು: ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ರಾಜ್ಯಾದ್ಯಂತ ಬಡ ಕುಟುಂಬಗಳಿಗೆ ನಿರ್ಮಿಸಲಾಗಿರುವ 1.82 ಲಕ್ಷ ಮನೆಗಳ ಪೈಕಿ 36 ಸಾವಿರ ಮನೆಗಳನ್ನು ಮುಂದಿನ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿತರಣೆ ಮಾಡಲಿದ್ದು ಅದಕ್ಕೆ ಪೂರ್ವ ಬಾವಿಯಾಗಿ ಬೆಂಗಳೂರಿನಲ್ಲಿ ನಿರ್ಮಾಣ ವಾಗುತ್ತಿರುವ ಮನೆಗಳ ಕಾಮಗಾರಿಯನ್ನು ವಸತಿ ಸಚಿವ ಜಮೀರ್ ಅಹಮದ್ ಖಾನ್ ಬುಧವಾರ ಪರಿಶೀಲನೆ ನಡೆಸಿದರು.
ಕೆ ಆರ್ ಪುರದ ನಗರ ನಾಗೇನಹಳ್ಳಿ ಯಲ್ಲಿ ನಿರ್ಮಿಸುತ್ತಿರುವ 800 ಹಾಗೂ ಸರ್ವಜ್ಞ ನಗರ ಕ್ಷೇತ್ರದ ಚಟ್ಟಪ್ಪ ಗಾರ್ಡನ್ ನಲ್ಲಿ ನಿರ್ಮಿಸುತ್ತಿರುವ 209 ಮನೆಗಳ ಕಾಮಗಾರಿ ಪರಿಶೀಲನೆ ನಡೆಸಿದ ಸಚಿವರು ಫೆಬ್ರವರಿ 20 ರೊಳಗೆ ಮೂಲ ಸೌಕರ್ಯ ಸಹಿತ ಎಲ್ಲ ಕಾಮಗಾರಿ ಪೂರ್ಣ ಗೊಳಿಸಿ ಕಾಂಪೌಂಡ್ ಗೋಡೆ ಸಹಿತ ನಿರ್ಮಿಸಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿ ತಿಂಗಳಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದಿಂದ ಬಡವರಿಗೆ ನಿರ್ಮಿಸಲಾಗುತ್ತಿರುವ 2.32 ಲಕ್ಷ ಮನೆಗಳ ಪೈಕಿ ಮೊದಲ ಹಂತದಲ್ಲಿ 40 ಸಾವಿರ ಮನೆ ಏಕ ಕಾಲದಲ್ಲಿ ವಿತರಣೆ ಮಾಡಲಿದ್ದಾರೆ” ಎಂದರು.
“ಹತ್ತು ವರ್ಷಗಳಿಂದ ಸ್ವಂತ ಸೂರಿನ ಕನಸು ಕಾಣುತ್ತಿದ್ದ ಕುಟುಂಬಗಳು ನೆಮ್ಮದಿ ಕಾಣಲಿವೆ. ಒಂದು ಲಕ್ಷ ರೂ. ಫಲಾನುಭವಿ ಕೊಟ್ಟರೆ ಉಳಿದ ಮೊತ್ತ ಸರ್ಕಾರವೇ ಭರಿಸುತ್ತಿದೆ” ಎಂದು ವಿವರಿಸಿದರು.
ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ. ಆಯುಕ್ತ ವೆಂಕಟೇಶ್, ಪ್ರಧಾನ ಅಭಿಯಂತರ ಬಾಲರಾಜು ಉಪಸ್ಥಿತರಿದ್ದರು.