ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯ ಪ್ರಭಾರ ನಿರ್ದೇಶಕರಾಗಿ ಡಾ.ರವೀಂದ್ರನಾಥ್ ಅವರನ್ನು ನೇಮಕ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಡಾ.ಸಿ.ಎನ್.ಮಂಜುನಾಥ ಅವರ ಅವಧಿ ಮುಕ್ತಾಯ ಹಿನ್ನೆಲೆಯಲ್ಲಿ ಪ್ರಭಾರ ನಿರ್ದೇಶಕರನ್ನಾಗಿ ಡಾ.ರವೀಂದ್ರನಾಥ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
69 ವಯಸ್ಸಿನ ರವೀಂದ್ರನಾಥ್ ಅವರು ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಈ ಹಿಂದೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಬೆಂಗಳೂರಿನ ಪ್ರತಿಷ್ಠಿತ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿದ್ದ ಡಾ.ಸಿ.ಎನ್.ಮಂಜುನಾಥ್ ಅವರ ಅವಧಿ ಇಂದಿಗೆ (ಜನವರಿ 31) ಮುಕ್ತಾಯವಾಗಿದೆ. ಈಗಾಗಲೇ ಡಾ.ಮಂಜುನಾಥ್ ಅವರ ಸೇವಾವಧಿಯನ್ನು ನಾಲ್ಕು ಬಾರಿ ವಿಸ್ತರಿಸಲಾಗಿದ್ದು, ಈ ಬಾರಿ ಹೊಸ ನಿರ್ದೇಶಕರನ್ನು ನೇಮಕ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ಜಯದೇವ ಆಸ್ಪತ್ರೆಗೆ ಪ್ರಭಾರ ನಿರ್ದೇಶಕ ಸ್ಥಾನಕ್ಕೆ ಒಟ್ಟು 21 ಅರ್ಜಿಗಳು ಬಂದಿದ್ದವು. ಈ ಪೈಕಿ ಜಯದೇವ ಆಸ್ಪತ್ರೆಯಲ್ಲಿಯೇ ಕಾರ್ಡಿಯಾಲಜಿ ವಿಭಾಗದ ಮುಖ್ಯಸ್ಥರಾದ ಡಾ.ಕೆ.ಎಚ್.ಶ್ರೀನಿವಾಸ್ ಹಾಗೂ ಮೈಸೂರು ಜಯದೇವ ಕೇಂದ್ರದ ನಿರ್ದೇಶಕ ಡಾ.ಕೆ.ಎಸ್.ಸದಾನಂದ, ಡಾ.ದಿನೇಶ್ ಸಹಿತ ಹಲವರ ಹೆಸರುಗಳು ನಿರ್ದೇಶಕ ಹುದ್ದೆ ರೇಸ್ನಲ್ಲಿದ್ದವು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಸಲಾಗುವ ಜಯದೇವ ಹೃದ್ರೋಗ ಸಂಸ್ಥೆಯ ಬೋರ್ಡ್ ಮೀಟಿಂಗ್‌ನಲ್ಲಿ ಅಧಿಕೃತವಾಗಿ ನಿರ್ದೇಶಕರನ್ನು ಆಯ್ಕೆ ಮಾಡಲಾಗುತ್ತದೆ. ಆದ್ದರಿಂದ ಬೋರ್ಡ್ ಮೀಟಿಂಗ್ ನಡೆದು, ಶಾಶ್ವತ ನಿರ್ದೇಶಕರ ಆಯ್ಕೆಯವರೆಗೆ ಜಯದೇವ ಆಸ್ಪತ್ರೆಗೆ ಡಾ. ರವೀಂದ್ರನಾಥ್ ಅವರು ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.