Homeಕರ್ನಾಟಕಮಾತು ಗೆಲ್ತು, ಪಕ್ಷ ಸೋಲ್ತು! ವಿದಾಯದ ಹೊಸ್ತಿಲಲ್ಲಿ ಜನನಾಯಕ ಸಿದ್ದರಾಮಯ್ಯ

ಮಾತು ಗೆಲ್ತು, ಪಕ್ಷ ಸೋಲ್ತು! ವಿದಾಯದ ಹೊಸ್ತಿಲಲ್ಲಿ ಜನನಾಯಕ ಸಿದ್ದರಾಮಯ್ಯ

ಕರ್ನಾಟಕದ ಜನನಾಯಕ ಪರಂಪರೆಯ ಕೊನೆಯ ಕೊಂಡಿ, ರಾಜಕಾರಣದ ವರ್ಣರಂಜಿತ ರಾಜಕಾರಣಿ ಈಗ ಚುನಾವಣೆ ರಾಜಕಾರಣದಿಂದ ತೆರೆಗೆ ಸರಿಯುವ ಸಮಯ. ದೇವರಾಜು ಅರಸು ಅವರ ದಾಖಲೆ ಮುರಿದು, ಕರ್ನಾಟಕದ ಅತ್ಯುತ್ತಮ ಮುಖ್ಯಮಂತ್ರಿ ಎಂಬ ಸಾಲಿನಲ್ಲಿ ಗುರುತಿಸಿಕೊಂಡ ಮತ್ತು ಗೌರವಿಸಲ್ಪಟ್ಟ ಮೇರು ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಲು ಒಪ್ಪಿಗೆ ಸೂಚಿಸಿದ್ದಾರೆ.

ಇಷ್ಟು ದಿನ ಕಾಂಗ್ರೆಸ್‌ನೊಳಗೆ, ಮಾಧ್ಯಮಗಳಿಂದ ಹಾಗೂ ಪ್ರತಿಪಕ್ಷಗಳಿಂದ ನಡೆಯುತ್ತಿದ್ದ ನಾಯಕತ್ವ ಬದಲಾವಣೆ ಎಂಬ ಆರ್ಕೆಸ್ಟ್ರಾ ರಾಜಕಾರಣಕ್ಕೆ ಮೊದಲ ಸುತ್ತಿನ ಗೆಲುವು ಸಿಕ್ಕಾಗಿದೆ. ಒಂದು ರೀತಿಯಲ್ಲಿ ಮಾತು ಗೆಲ್ತು, ಪಕ್ಷ ಸೋಲ್ತು ಎನ್ನುವ ಹಂತಕ್ಕೆ ಬೆಳವಣಿಗೆ ಬಂದು ನಿಂತಿದೆ.

2023ರಲ್ಲಿ 136 ಸ್ಥಾನಗಳೊಂದಿಗೆ ಚುನಾವಣೆ ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆ ಗಂಭೀರವಾಗಿ ನಡೆದಾಗ ಸಿದ್ದರಾಮಯ್ಯ ಅವರೇ ಸಿಎಂ ಎಂಬುದು ಖಚಿತವಾಗಿತ್ತು. ಆದರೆ ಅವರು ಎಷ್ಟು ಅವಧಿವರೆಗೂ ಸಿಎಂ ಆಗಿರುತ್ತಾರೆ ಎಂಬುದು ಸ್ಪಷ್ಟವಾಗಿರಲಿಲ್ಲ. ಅಲ್ಲಿಂದಲೇ ನಾಯಕತ್ವ ಬದಲಾವಣೆ ಎಂಬ ಸಂಗತಿಯೂ ಹರಳುಗಟ್ಟುತ್ತಲೇ ಬಂತು.

2023ರಲ್ಲಿ ಎರಡನೇ ಅವಧಿಗೆ ಸಿಎಂ ಸ್ಥಾನ ಖಚಿತಪಡಿಸಿಕೊಂಡು ದೆಹಲಿಯಿಂದ ಬೆಂಗಳೂರಿನತ್ತ ಸಿದ್ದರಾಮಯ್ಯ ಮುಖಮಾಡಿದಾಗಲೇ ಅಧಿಕಾರ ಸೂತ್ರ ತೀರ್ಮಾನವಾಗಿತ್ತು. ಸಿಎಂ ಆಪ್ತವಲಯದಲ್ಲಿ ಗುರುತಿಸಿಕೊಂಡವರನ್ನು ಅಂದು ಮಾತಿಗೆಳೆದಾಗ 3+2 ಎಂದು ಹೇಳಿದ್ದರು. ಈಗ ಅದು ನಿಜವಾಗಿದೆ.

ಸಿಎಂ ಸಿದ್ದರಾಮಯ್ಯ ಅಧಿಕಾರ ತ್ಯಾಗಕ್ಕೆ ಕೊನೆಗೂ ಒಪ್ಪಿದ್ದಾರೆ. ಅದು ರಾಹುಲ್ ಗಾಂದಿ ಅವರ ಒಂದೇ ಮಾತಿಗೆ! ಸದಾ ಪ್ರತಿಭಟನಾತ್ಮಕ ಮನೋಭಾವದ , ತಿರುಗಿ ಬೀಳುವ ಧೋರಣೆಯ ಸಿದ್ದರಾಮಯ್ಯ ಹೀಗೆ ಒಪ್ಪಿಕೊಂಡಿದ್ದೇ ಸೋಜಿಗ! ಸಿದ್ದರಾಮಯ್ಯ ಅವರನ್ನು ಹತ್ತಿರದಿಂದ ಬಲ್ಲವರು ಹೇಳುವ ಮಾತು ಒಂದೇ; “ಅವರೇನಾದರೂ (ಸಿದ್ದರಾಮಯ್ಯ) ಮಾತುಕೊಟ್ಟರೆ ಎಂತಹದ್ದೆ ಕಷ್ಟ ಬರಲಿ ಆ ಮಾತಿಗೆ ನಡೆದುಕೊಳ್ಳುತ್ತಾರೆ” ಎಂಬುದು. ಈಗ ಮಾತು ಸಹ ನಿಜವಾಗುತ್ತಿದೆ. ಅಧಿಕಾರ ಸೂತ್ರದ ಮಾತಿಗೆ ಸಿದ್ದರಾಮಯ್ಯ ನುಡಿದಂತೆ ನಡೆದುಕೊಳ್ಳುತ್ತಿದ್ದಾರೆ. ಇದು ರಾಹುಲ್ ಗಾಂಧಿಯವರ ಮಾತನ್ನು ಮೀರಲಾರೆ ಎಂಬ ಕೃತಜ್ಞತಾ ನಡೆ! ತಾವು ಎರಡು ಬಾರಿ ಮುಖ್ಯಮಂತ್ರಿಯಾಗುವುದಕ್ಕೆ ರಾಹುಲ್ ಗಾಂಧಿಯವರೇ ಕಾರಣ ಎಂಬ ಮನೋಭಾವ.

ಜನಮಾನಸಗಳಲ್ಲಿ ನೆಲೆಯೂರಿದ ಸಿದ್ದರಾಮಯ್ಯನವರ ಈ ವಿದಾಯವನ್ನು ಜನ ಹೇಗೆ ಸ್ವೀಕರಿಸುತ್ತಾರೆಂಬುದೇ ಪ್ರಶ್ನೆ. ಕಾಂಗ್ರೆಸ್ ಸಂದಿಗ್ಧತೆ ಎದುರಿಸುವ ಇಂದಿನ ಪರಿಸ್ಥಿತಿಯಲ್ಲಿ ಹೈಕಮಾಂಡ್ ಇಂತಹ ಒಂದು ನಿರ್ಧಾರಕ್ಕೆ ಹೇಗೆ ಕೈ ಹಾಕಿತು? ಒಬ್ಬ ವ್ಯಕ್ತಿಯ ಮಹೋನ್ನತ ಬಯಕೆಯೇ ಹೈಕಮಾಂಡ್‌ಗೆ ಪಕ್ಷಕ್ಕಿಂತ ಹೆಚ್ಚಾಯಿತೇ? ಅಹಿಂದ ನಾಯಕ ಹಣೆಪಟ್ಟಿ ಹೊತ್ತ ಸಿದ್ದರಾಮಯ್ಯ ಅವರನ್ನು ತೆರೆಗೆ ಸರಿಸಿದರೆ ಮುಂಬರುವ ಚುನಾವಣೆಯಲ್ಲಿ ಅಹಿಂದ ಮತಗಳು ಕಾಂಗ್ರೆಸ್‌ಗೆ ಬರುತ್ತವೆಯೇ? ಇದು ಯಾವ ರೀತಿಯ ಹೊಡೆತ ಕೊಡಬಹುದೆಂದು ಊಹಿಸಲಸಾಧ್ಯ!

ಮೂರು ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್‌ನ ಭವಿಷ್ಯದ ಬೆಳವಣಿಗೆಯನ್ನು ನೋಡದೇ ಸಿದ್ದರಾಮಯ್ಯ ಅವರನ್ನು ಹೀಗೆ ಒತ್ತಾಯ ಮಾಡಿ ಕೆಳಗಿಸೋದು, ಕಾಂಗ್ರೆಸ್‌ಗೆ ದೊಡ್ಡ ಹೊಡೆತ ಎಂದೇ ಈ ಬೆಳವಣಿಗೆಯನ್ನು ವಿಶ್ಲೇಷಿಸಲಾಗುತ್ತಿದೆ. ಮುಂದಿನ ಎಲೆಕ್ಷನ್ ನಲ್ಲಿ ಜಾರಕಿಹೋಳಿ ಅವರನ್ನೋ ಇತರೆ ನಾಯಕರನ್ನೋ ಮುಂದೆ ಇಟ್ಟುಕೊಂಡು ಓಟು ಕೇಳಬಹುದು. ಆದರೆ ಕರ್ನಾಟಕದ ಅಹಿಂದ ಜನಾಂಗಕ್ಕೆ ಬ್ರಾಹ್ಮಣ, ಒಕ್ಕಲಿಗ, ಲಿಂಗಾಯತರ ರಾಜಕೀಯ ಹೇಗೆ ಕೆಲಸ ಮಾಡತ್ತೆ ಅಂತ ಅರಿತುವರು ಸಿದ್ದರಾಮಯ್ಯ ಮಾತ್ರ. ಮತ್ತೊಬ್ಬ ಮಾಸ್ ಲೀಡರ್ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗುವುದೇ ಅನುಮಾನ.

ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಡಿ ಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗುವುದು ಬಹುತೇಕ ಖಚಿತ. ಮುಂದೆ ನಡೆಯವ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯ ಬೆಂಬಲಿಗರಿಂದ ಬಿರುಗಾಳಿಯೇ ಏಳಬಹುದು. ದಲಿತ ಮುಖ್ಯಮಂತ್ರಿ ವಿಚಾರ ಮುನ್ನೆಲೆಗೂ ಬರಬಹುದು. ಮುಂದಿನ ಬೆಳವಣಿಗೆ ಬಹಳ ಕೂತುಹಲದಿಂದ ಕೂಡಿದೆ. ಸಿದ್ದರಾಮಯ್ಯ ಅವರ ಪರದೆ ಹಿಂದಿನ ಆಟ ರಂಗೇರುತ್ತಾ? ಎಂಬುದೇ ಸದ್ಯದ ಪ್ರಶ್ನೆ.

ಸಿದ್ದಾರಮಯ್ಯ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ, ವಿರೋಧ ಪಕ್ಷದ ನಾಯಕ ಸ್ಥಾನವನ್ನೂ ನೀಡಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ ಎನ್ನಲಾಗುತ್ತಿದೆ. ಆದರೆ ಹಿಂದಿನಿಂದಲೂ ರಾಷ್ಟ್ರರಾಜಕಾರಣಕ್ಕೆ ತಾವು ಹೋಗುವುದಿಲ್ಲ ಎಂದು ಸಿದ್ದರಾಮಯ್ಯ ಅವರು ಸದಾ ಹೇಳುತ್ತಲೇ ಬಂದಿದ್ದಾರೆ. ಅದಕ್ಕಾಗಿಯೇ ಎರಡು ದಿನ ಸಮಯ ತೆಗೆದಿಕೊಂಡಿದ್ದಾರೆ ಎನ್ನುವ ಮಾತಿದೆ. ಸಿದ್ದರಾಮಯ್ಯ ಅವರು ರಾಷ್ಟ್ರರಾಜಕಾರಣಕ್ಕೆ ಮುಖಮಾಡುವ ಅವಕಾಶ ಬಹಳ ಕಡಿಮೆ ಎನ್ನುತ್ತವೆ ಮೂಲಗಳು. ಸಿದ್ದರಾಮಯ್ಯ ಅವರ ಮುಂದಿನ ನಡೆ ಏನು ಎಂಬುದು ಕಾದುನೋಡಬೇಕು. ಇದು ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ನೀಡಿದ ಗೌರವಪೂರ್ವಕ ವಿದಾಯವೇ? ನೀವೇ ನಿರ್ಧರಿಸಿ.

ಬರೆಹ: ಶರಣು ಚಕ್ರಸಾಲಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments