ಮತೀಯ ಗೂಂಡಾಗಿರಿ ಎಲ್ಲೇ ನಡೆದರೂ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸರ್ಕಾರ ಇದನ್ನು ಸಹಿಸುವುದಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಗುರುವಾರ ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, “ಮತೀಯ ಗೂಂಡಾಗಿರಿ ಘಟನೆಗಳನ್ನು ಹತ್ತಿಕ್ಕಲಾಗುವುದು. ತಪ್ಪಿತಸ್ಥರನ್ನು ಸುಮ್ಮನೆ ಬಿಡುವುದಿಲ್ಲ” ಎಂದು ಎಚ್ಚರಿಸಿದರು.
“ದೆಹಲಿಯ ಸಭೆಯಲ್ಲಿ ಏನೆಲ್ಲ ನಿರ್ದೇಶನ ನೀಡುತ್ತಾರೋ ನೋಡಬೇಕು. ಚುನಾವಣೆ ಹಿನ್ನೆಲೆಯಲ್ಲಿ ಜವಾಬ್ದಾರಿ ತೆಗೆದುಕೊಳ್ಳಬೇಕು. ಹೆಚ್ಚು ಸ್ಥಾನಗಳನ್ನು ಗೆಲ್ಲಿಸಬೇಕು ಎಂದು ಈಗಾಗಲೇ ಹೈಕಮಾಂಡ್ ಸೂಚನೆ ಕೊಟ್ಟಿದೆ” ಎಂದರು.
ರಾಮಮಂದಿರ ಉದ್ಘಾಟನೆಗೆ ಹೋಗದಿರಲು ತೀರ್ಮಾನಿಸಿರುವ ಪಕ್ಷದ ನಿಲುವಿನ ಕುರಿತು ಮಾತನಾಡಿ, “ರಾಮಮಂದಿರ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ. ಚುನಾವಣಾ ದೃಷ್ಟಿಯಿಂದ ತರಾತುರಿಯಲ್ಲಿ ಉದ್ಘಾಟನೆಗೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಹೈಕಮಾಂಡ್, ಉದ್ಘಾಟನೆಗೆ ಹೋಗದಿರಲು ನಿರ್ಧರಿಸಿದೆ. ಪಕ್ಷ ಹೇಳಿದ ಹಾಗೇ ಕೇಳಬೇಕು” ಎಂದು ತಿಳಿಸಿದರು.
“ಕೆ ಎನ್ ರಾಜಣ್ಣ ಅವರು ಸರ್ಕಾರ ರಚನೆಯಾದ ಆರಂಭದಿಂದಲೂ ಹೆಚ್ಚುವರಿ ಉಪಮುಖ್ಯಮಂತ್ರಿ ನೇಮಕದ ಕುರಿತು ಹೇಳಿಕೆ ನೀಡುತ್ತಿದ್ದಾರೆ. ಯಾಕೆ ನೇಮಕ ಮಾಡಬೇಕು ಎಂಬುದನ್ನೂ ಅವರು ವಿವರಣೆ ಕೊಟ್ಟಿದ್ದಾರೆ. ಈಗಾಗಲೇ ಎಐಸಿಸಿ ಅಧ್ಯಕ್ಷರು ಕೂಡಾ ಡಿಸಿಎಂ ನೇಮಕದ ಕುರಿತು ಸ್ಪಷ್ಟನೆ ನೀಡಿದ್ದು, ಅವರ ಮಾತಿನಂತೆ ನಡೆದುಕೊಳ್ಳಬೇಕು. ನಾನು ಹೆಚ್ಚುವರಿ ಉಪಮುಖ್ಯಮಂತ್ರಿ ನೇಮಕ ವಿಚಾರ ಸಭೆಯಲ್ಲಿ ಪ್ರಸ್ತಾಪಿಸುವುದಿಲ್ಲ” ಎಂದರು.