ಹಾವೇರಿ ಜಿಲ್ಲೆ ಹಾನಗಲ್‌ನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣವನ್ನು ಎಸ್ಐಟಿಗೆ ವಹಿಸುವಂತೆ ಜನವರಿ 20 ಹಾವೇರಿ ಎಸ್ಪಿ ಕಚೇರಿ ಎದುರು ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಪ್ರತಿಭಟನೆಯಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಸೇರಿದಂತೆ ಅನೇಕ ನಾಯಕರು ಹಾಗೂ ಜಿಲ್ಲಾ ಮುಖಂಡರು ಪಾಲ್ಗೊಳ್ಳಲಿದ್ದಾರೆ” ಎಂದರು.
“ಹಾವೇರಿಯಲ್ಲಿ ನೈತಿಕ ಪೊಲೀಸ್ ಗಿರಿ ಮಾಡಿ ಗ್ಯಾಂಗ್ ರೇಪ್ ಮಾಡಿರುವ ಪ್ರಕರಣವನ್ನು ಪೊಲೀಸರು ಮುಚ್ಚಿ ಹಾಕುವ ಯತ್ನ ಮಾಡಿದ್ದರು. ಹಾವೇರಿ ಎಸ್ಪಿ, ಹೊಮ್‌ಮಿನಿಸ್ಟರ್ ಅದನ್ನು ಒಪ್ಪಿಕೊಳ್ಳಲು ಸಿದ್ದರಿರಲಿಲ್ಲ. ಆದರೆ, ಈಗ ಹಾನಗಲ್ ಪೊಲೀಸರನ್ನು ಅವರೇ ಅಮಾನತು ಮಾಡಿದ್ದಾರೆ. ಹೀಗಾಗಿ ಪೊಲೀಸರಿಂದ ಲೋಪವಾಗಿರುವುದನ್ನು ಒಪ್ಪಿಕೊಂಡಂತಾಗಿದೆ” ಎಂದು ಹೇಳಿದರು.
“ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯಲ್ಲಿ ಕಾಪಾಡುವಲ್ಲಿ ರಾಜಕಾರಣ ಬಹಳ ಪಾತ್ರ ವಹಿಸುತ್ತಿದೆ. ಹಾನಗಲ್ ಪೊಲೀಸರು ಕಾನೂನು ಪ್ರಕಾರ ನಡೆದುಕೊಂಡಿಲ್ಲ. ಆ ಹೆಣ್ಣು ಮಗಳಿಗೆ ಸರಿಯಾದ ಚಕಿತ್ಸೆ ನೀಡುತ್ತಿಲ್ಲ. ಈ ಬಗ್ಗೆ ಸಿಎಂ ಕೂಡ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹೀಗಾಗಿ ಎಸ್ ಐಟಿ ತನಿಖೆ ನಡೆಸುವಂತೆ ಆಗ್ರಹಿಸಿ ಜನೇವರಿ 20 ರಂದು ಹಾವೇರಿ ಎಸ್ಪಿ ಕಚೇರಿ ಎದುರು ಪ್ರತಿಭಟನೆ ಮಾಡಲು ತೀರ್ಮಾನ ಮಾಡಿದ್ದೇವೆ.
ಸಿಎಂ ಎಸ್ ಐಟಿ ತನಿಖೆಗೆ ನಿರಾಕರಿಸಿರುವುದು ಅಪರಾಧ ಮಾಡುವವರಿಗೆ ಪುಷ್ಟಿ ಕೊಟ್ಟಂತೆ ಆಗುತ್ತದೆ” ಎಂದು ತಿಳಿಸಿದರು.
ಸಿಎಂಗೆ ಮೋದಿ ಫೋಬಿಯಾ
“ಸಿಎಂ ಸಿದ್ದರಾಮಯ್ಯ ಅವರಿಗೆ ಮೋದಿ ಫೋಬಿಯಾ ಇದೆ. ಇಡಿ ದೇಶದಲ್ಲಿ ಪ್ರಧಾನಿ ನರೇಂದ್ರ ಮೊದಿ ದಕ್ಷ ಆಡಳಿತ ನೀಡುತ್ತಿದ್ದಾರೆ. ಎಲ್ಲ ರೀತಿಯ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮತ್ತೆ ಮೂರನೆ ಬಾರಿಗೆ ಪ್ರಧಾನಿ ಆಗಲಿದ್ದಾರೆ. ಹೀಗಾಗಿ ಅದನ್ನು ಸಹಿಸಿಕೊಳ್ಳಲಾಗದೇ ಸಿದ್ದರಾಮಯ್ಯ ಅವರ ವಿರುದ್ದ ಅನಗತ್ಯ ಆರೋಪ ಮಾಡುತ್ತಾರೆ” ಎಂದು ಕಿಡಿಕಾರಿದರು.
ಸಿಎಂ ಪುತ್ರ ಯತೀಂದ್ರ ಅವರೇ ಹೇಳಿರುವುದನ್ನು ಕೇಳಿದರೆ, “ಕಾಂಗ್ರೆಸ್ ಹೆಚ್ಚು ಸೀಟು ಬಂದರೆ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುತ್ತಾರೆ ಅಂತ ಹೇಳಿದ್ದಾರೆ. ಕಡಿಮೆ ಸೀಟು ಬಂದರೆ ಸಿಎಂ ಸ್ಥಾನ ಹೋಗುವ ಆತಂಕ ಅವರಿಗೆ ಕಾಡುತ್ತಿದೆ. ಅದಕ್ಕಾಗಿ ರಾಜ್ಯಕ್ಕೆ ಮೋದಿ ಬಂದಾಗೊಮ್ಮೆ ಸುಳ್ಳು ದಾಖಲೆಗಳನ್ನು ನೀಡಿ ಜನರ ದಾರಿ ತಪ್ಪಿಸಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
“15 ನೇ ಹಣಕಾಸು ಆಯೋಗದಲ್ಲಿ ರಾಜ್ಯದ ಅನುದಾನ ಶೇ 4.7 ನಿಂದ ಶೇ 3.6 ಗೆ ಇಳಿಯಲು ಸಿದ್ದರಾಮಯ್ಯ ಅವರೇ ಕಾರಣ ಅವರು ಸರಿಯಾಗಿ ರಾಜ್ಯದ ವಸ್ತು ಸ್ಥಿತಿ ಬಗ್ಗೆ ಮಾಹಿತಿ ನೀಡಿಲ್ಲ. ನಮ್ಮ ಅವಧಿಯಲ್ಲಿಯೂ ಪ್ರವಾಹ ಬಂದಾಗ ಹಿಂದಿನ ಯುಪಿಎ ಸರ್ಕಾರ ಪರಿಹಾರ ನೀಡಿತ್ತಾ ? ನಾವು ಕೇಂದ್ರದ ಅನುದಾನಕ್ಕಾಗಿ ಕಾಯದೇ 2500 ಕೋಟಿ ರೂ. ಪರಿಹಾರ ನೀಡಿದ್ದೇವು. ಕರ್ನಾಟಕದ ಜನರು ನಿಮಗೆ ಮತ ಹಾಕಿದ್ದು, ಒಳ್ಳೆಯ ಆಡಳಿತ ನೀಡಲಿ ಎಂದು ಆದರೆ, ನೀವು ಅವೈಜ್ಞಾನಿಕ ಗ್ಯಾರೆಂಟಿ ಜಾರಿ ಮಾಡಿ ಆರ್ಥಿಕತೆ ಹಳಿ ತಪ್ಪಿಸುತ್ತಿದ್ದೀರಿ” ಎಂದು ಆರೋಪಿಸಿದರು.