Homeಕರ್ನಾಟಕಕೆಪಿಸಿಸಿ ಕಾರ್ಯದರ್ಶಿಗಳ ನೇಮಕಕ್ಕೆ ಹೊಸ ಪ್ರಕ್ರಿಯೆ: ಬಿ.ಕೆ. ಹರಿಪ್ರಸಾದ್

ಕೆಪಿಸಿಸಿ ಕಾರ್ಯದರ್ಶಿಗಳ ನೇಮಕಕ್ಕೆ ಹೊಸ ಪ್ರಕ್ರಿಯೆ: ಬಿ.ಕೆ. ಹರಿಪ್ರಸಾದ್

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಸಂಘಟನೆಯನ್ನು ಪುನರ್‌ರಚಿಸಿ ತಳಮಟ್ಟದಿಂದ ಬಲಪಡಿಸುವ ಉದ್ದೇಶದಿಂದ ಕಾರ್ಯದರ್ಶಿಗಳ ನೇಮಕಾತಿಗೆ ಹೊಸ ಹಾಗೂ ಪಾರದರ್ಶಕ ಪ್ರಕ್ರಿಯೆ ಅನುಸರಿಸಲಾಗಿದೆ. ರಾಜ್ಯಾದ್ಯಂತ ಬಹಿರಂಗವಾಗಿ ಅರ್ಜಿಗಳನ್ನು ಆಹ್ವಾನಿಸಿ, ಸಂದರ್ಶನದ ಮೂಲಕ ಒಟ್ಟು 112 ಕೆಪಿಸಿಸಿ ಕಾರ್ಯದರ್ಶಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತಿಳಿಸಿದರು.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಮಾದರಿಯಲ್ಲಿಯೇ ರಾಜ್ಯದಲ್ಲೂ ಕಾರ್ಯದರ್ಶಿಗಳ ನೇಮಕಾತಿ ಪ್ರಕ್ರಿಯೆ ನಡೆಸಲಾಗಿದೆ. ರಾಜ್ಯದಾದ್ಯಂತ ಒಟ್ಟು 920 ಅರ್ಜಿಗಳು ಸಲ್ಲಿಕೆಯಾಗಿದ್ದು, ಬೆಂಗಳೂರಿನಿಂದಲೇ 308 ಅರ್ಜಿಗಳು ಬಂದಿವೆ. ಹಿರಿಯ ನಾಯಕರ ನೇತೃತ್ವದ ಸಮಿತಿಯು ಎಲ್ಲಾ ಅರ್ಜಿದಾರರನ್ನು ಸಂದರ್ಶನ ಮಾಡಿ ಅರ್ಹರನ್ನು ಆಯ್ಕೆ ಮಾಡಿದೆ ಎಂದರು.

ಸಂದರ್ಶನ ಸಮಿತಿಯಲ್ಲಿ ಡಾ. ಜಿ. ಪರಮೇಶ್ವರ್, ದಿನೇಶ್ ಗುಂಡೂರಾವ್, ಬಿ.ಎಲ್. ಶಂಕರ್, ಎಚ್.ಕೆ. ಪಾಟೀಲ್, ತುಕಾರಾಂ, ಲೋಕಸಭಾ ಸದಸ್ಯರು, ನಜೀರ್ ಅಹಮದ್ ಹಾಗೂ ರಾಣಿ ಸತೀಶ್ ಸೇರಿದಂತೆ ಹಿರಿಯ ನಾಯಕರು ಇದ್ದರು. ಆಯ್ಕೆಯಾದ 112 ಕಾರ್ಯದರ್ಶಿಗಳಿಗೆ ತಲಾ ಎರಡು ವಿಧಾನಸಭಾ ಕ್ಷೇತ್ರಗಳ ಜವಾಬ್ದಾರಿ ನೀಡಲಾಗುತ್ತದೆ. ಅವರು ಮುಂದಿನ ಒಂದೂವರೆ ವರ್ಷಗಳ ಕಾಲ ತಮ್ಮ ಕ್ಷೇತ್ರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇವರಿಗೆ ಸಹಕಾರಿಯಾಗಿ 112 ಕೋಆರ್ಡಿನೇಟರ್‌ಗಳನ್ನೂ ನೇಮಕ ಮಾಡಲಾಗುತ್ತದೆ ಎಂದು ಹೇಳಿದರು.

ಕೆಲಸ ಮಾಡುವವರಿಗೆ ಆದ್ಯತೆ

ಕಾಂಗ್ರೆಸ್ ಪಕ್ಷದಲ್ಲಿ ಮೊದಲ ಬಾರಿಗೆ ಈ ರೀತಿಯ ಬಹಿರಂಗ ಅರ್ಜಿ ಆಹ್ವಾನ ಮತ್ತು ಸಂದರ್ಶನ ಪ್ರಕ್ರಿಯೆ ಅನುಸರಿಸಲಾಗುತ್ತಿದೆ. ಯಾವುದೇ ಗುಂಪುಗಾರಿಕೆ, ವ್ಯಕ್ತಿಗತ ಇಷ್ಟಾನಿಷ್ಟಗಳಿಗೆ ಅವಕಾಶ ನೀಡದೆ, ನೈಜವಾಗಿ ಸಂಘಟನಾ ಕೆಲಸ ಮಾಡುವ ಸಾಮರ್ಥ್ಯ ಇರುವವರಿಗೆ ಅವಕಾಶ ಕಲ್ಪಿಸುವುದು ಇದರ ಉದ್ದೇಶ. ಕಾರ್ಯದರ್ಶಿಗಳಾಗುವವರು ಕನಿಷ್ಠ ಐದು ವರ್ಷಗಳ ಪಕ್ಷದ ಸದಸ್ಯತ್ವ ಹೊಂದಿರಬೇಕು. 2029ರ ಚುನಾವಣೆವರೆಗೂ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ನೇಮಕಾತಿ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಕಚೇರಿಯಲ್ಲಿ ಕುಳಿತು ಆಯ್ಕೆ ಮಾಡುವ ಬದಲು ಜನರ ನಡುವೆ ಕೆಲಸ ಮಾಡುವವರನ್ನು ಗುರುತಿಸಿ ಜವಾಬ್ದಾರಿ ನೀಡಲಾಗುತ್ತಿದೆ. ಒಬಿಸಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರಿಗೂ ಶೇ.33ರಷ್ಟು ಪ್ರಾತಿನಿಧ್ಯ ನೀಡುವ ಉದ್ದೇಶವಿದೆ. ಪ್ರಸ್ತುತ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಒಬ್ಬ ಕಾರ್ಯದರ್ಶಿ ಎಂಬ ಮಾದರಿಯಲ್ಲಿ ಜವಾಬ್ದಾರಿ ಹಂಚಿಕೆ ಮಾಡಲಾಗುತ್ತಿದೆ ಎಂದರು.

ಕಲಬುರಗಿ ವಿಭಾಗದ ಸಂದರ್ಶನ ಮುಂದುವರಿಕೆ

ಕಲಬುರಗಿ ವಿಭಾಗದ ವ್ಯಾಪ್ತಿಗೆ ಬರುವ ಬೀದರ್, ರಾಯಚೂರು, ಕಲಬುರಗಿ, ಬಳ್ಳಾರಿ, ಬಳ್ಳಾರಿ ಗ್ರಾಮಾಂತರ, ವಿಜಯನಗರ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳಿಂದ ಸುಮಾರು 111 ಅರ್ಜಿಗಳು ಸಲ್ಲಿಕೆಯಾಗಿವೆ. ಈ ಎಲ್ಲ ಅರ್ಜಿದಾರರ ಸಂದರ್ಶನ ನಡೆಸಿ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗುವುದು ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ಶೀಘ್ರ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ. ಈಗಾಗಲೇ ವೀಕ್ಷಕರು (Observers) ಬ್ಲಾಕ್ ಮಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಅಧ್ಯಕ್ಷರ ನೇಮಕ ಕುರಿತು ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಅಕ್ಟೋಬರ್ 31ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಲಾಗಿತ್ತು. ಇದೀಗ ನವೆಂಬರ್ ತಿಂಗಳವರೆಗೆ ಕಾಲಾವಕಾಶ ವಿಸ್ತರಿಸಲಾಗಿದ್ದು, ಆದಷ್ಟು ಬೇಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments