ಮುಂದಿನ ದಿನಗಳಲ್ಲಿ ಪಿಯು ವಿದ್ಯಾರ್ಥಿಗಳಿಗೂ ಉಚಿತ ನೋಟ್‌ಬುಕ್
ಬಜೆಟ್‌ನಲ್ಲಿ ಪ್ರಕಟಿಸಿದಂತೆಯೇ ಪ್ರಸ್ತುತ ಶೈಕ್ಷಣಿಕ ಸಾಲಿನಿಂದ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಪುಸ್ತಕ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ನೋಟ್ ಬುಕ್‌ಗಳನ್ನು ಕೂಡ ಉಚಿತವಾಗಿ ವಿತರಿಸುವ ಉದ್ದೇಶವಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಶಿವಮೊಗ್ಗ ನಗರದ ಸೈನ್ಸ್ ಮೈದಾನದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ʻಕಲಾಂ ಸೆಂಟರ್ʼಗೆ ಭೇಟಿ ನೀಡಿ, ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ನೋಟ್ ಬುಕ್‌ಗಳನ್ನು ಕೂಡ ಉಚಿತವಾಗಿ ವಿತರಿಸುವ ಉದ್ದೇಶವಿದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಕರ್ತವ್ಯ. ಆದರೆ ಎಲ್ಲವನ್ನೂ ಒಮ್ಮೆಲೆ ಮಾಡಲಾಗುವುದಿಲ್ಲ. ಹಂತ ಹಂತವಾಗಿ ರಾಜ್ಯದ ಎಲ್ಲಾ ಶಾಲೆ-ಪಿಯು ಕಾಲೇಜುಗಳಲ್ಲಿಯೂ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡುತ್ತೇವೆ. ಇದಕ್ಕೆ ಅಗತ್ಯವಾದ ಎಲ್ಲ ಸೌಕರ್ಯಗಳನ್ನು ಒದಗಿಸುವುದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಹೇಳಿದ್ದಾರೆ.
ವಿದ್ಯಾರ್ಥಿಗಳೊಂದಿಗೆ ಬೆರೆತು ಅವರ ಮಾತುಗಳನ್ನು ಕೇಳಿಸಿಕೊಂಡ ಸಚಿವರು, ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆ, ಕಾಲೇಜಿನಲ್ಲಿ ತಾವು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಹೇಳಿಕೊಂಡರು. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ʻʻಮಕ್ಕಳೊಂದಿಗೆ ಸಂವಾದ ನಡೆಸುವುದು ನನಗೆ ಯಾವಾಗಲೂ ಖುಷಿಯ ವಿಷಯ. ನಾವು ನಿರೀಕ್ಷಿಸದೇ ಇರುವ ಪ್ರಶ್ನೆ, ಸಮಸ್ಯೆಗಳನ್ನು ಅವರು ನಮ್ಮ ಮುಂದಿಡುತ್ತಾರೆ. ಸಂತೋಷದ ವಾತಾವರಣವನ್ನು ಸೃಷ್ಟಿಸುತ್ತಾರೆ” ಎಂದು ಸಚಿವ ಮಧು ಬಂಗಾರಪ್ಪ ಈ ಸಂವಾದ ಕಾರ್ಯಕ್ರಮದ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಈ ಸಂವಾದ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸಚಿವರ ಜೊತೆಯಲ್ಲಿ ಉಪಸ್ಥಿತರಿದ್ದರು.


