Homeಕರ್ನಾಟಕಭಾರತದ ಅಭಿವೃದ್ಧಿಯ ಹಿಂದಿನ ಶಕ್ತಿಯೇ ಸಂವಿಧಾನ: ಸಚಿವ ಈಶ್ವರ ಖಂಡ್ರೆ

ಭಾರತದ ಅಭಿವೃದ್ಧಿಯ ಹಿಂದಿನ ಶಕ್ತಿಯೇ ಸಂವಿಧಾನ: ಸಚಿವ ಈಶ್ವರ ಖಂಡ್ರೆ

ಮಾನವತಾವಾದಿ ಡಾ. ಅಂಬೇಡ್ಕರ್ ವಿಶ್ವದ ಬೆಳಕು

ಚಿಂತಾಮಣಿಯಲ್ಲಿ ಡಾ. ಅಂಬೇಡ್ಕರ್ ಭವನ ಹಾಗೂ ಅನುಭವ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಯಾವುದೇ ನಿರ್ದಿಷ್ಟ ಧರ್ಮ, ಜಾತಿ, ಪ್ರಾಂತ್ಯಕ್ಕೆ ಸೀಮಿತರಲ್ಲ. ಅವರು ಇಡೀ ವಿಶ್ವಕ್ಕೇ ಬೆಳಕು ನೀಡಿದ ಮಹಾನ್ ಮಾನವತಾವಾದಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆರವರು ಹೇಳಿದ್ದಾರೆ.

ಸ್ವಾತಂತ್ರ್ಯಾನಂತರದ 80 ವರ್ಷಗಳಲ್ಲಿ ಭಾರತ ದೇಶವು ಆರ್ಥಿಕವಾಗಿ ಸಾಮಾಜಿಕವಾಗಿ, ವೈಜ್ಞಾನಿಕವಾಗಿ ಮುಂದುವರಿದಿದ್ದರೆ, ಅದರ ಹಿಂದಿನ ಶಕ್ತಿ ಯಾವುದು ಎಂದರೆ ಅದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ಎಂದರು. ಅರ್ಥಶಾಸ್ತ್ರ, ತತ್ವಶಾಸ್ತ್ರ, ಸಮಾಜಶಾಸ್ತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಭುತ್ವ ಸಾಧಿಸಿದ್ದ ಅಂಬೇಡ್ಕರ್ ಅವರು, ದಮನಿತರಿಗೆ ಧ್ವನಿ ನೀಡಿದರು, ಶ್ರೇಣಿರಹಿತವಾಹಿ, ವರ್ಗಭೇದವಿಲ್ಲದೆ ಎಲ್ಲರಿಗೂ ಸಮಾನವಾಗಿ ಶಿಕ್ಷಣ ನೀಡಿದರೆ ಜಾತಿ ವ್ಯವಸ್ಥೆ ನಿರ್ಮೂಲನೆಯಾಗುತ್ತದೆ ಎಂದು ಅಂಬೇಡ್ಕರ್ ಅವರು ನಂಬಿದ್ದರು. ಇದನ್ನು ನಾವು ಸಾಕಾರಗೊಳಿಸುವಲ್ಲಿ ನಿರತರಾಗಬೇಕು.

ಅಂಬೇಡ್ಕರ್ ಅವರು ಎಲ್ಲ ದಮನಿತರಿಗೂ ಸಾಂವಿಧಾನಿಕ ಹಕ್ಕನ್ನು ನೀಡಿದ್ದಾರೆ. ಆದರೆ, ಇಂದಿಗೂ ಅಸ್ಪೃಶ್ಯತೆ, ಮೌಢ್ಯ ನಮ್ಮ ದೇಶದಲ್ಲಿ ತಾಂಡವವಾಡುತ್ತಿರುವುದು ದುರುದೃಷ್ಟಕರ. ಇತ್ತೀಚೆಗೆ ಎ.ಐ.ಸಿ.ಸಿ. ಅಧ್ಯಕ್ಷರೂ, ನಮ್ಮ ರಾಜ್ಯದ ಮೇರು ನಾಯಕರೂ ಆದ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳ ಶುದ್ಧೀಕರಣ ಮಾಡಿರುವುದು ಅಕ್ಷಮ್ಯ. ಇಂತಹ ಕುಕೃರ್ತ್ಯ ಎಸಗಿದ ಮನುವಾದಿಗಳಿಗೆ ತಕ್ಕ ಶಾಸ್ತಿ ಆಗಬೇಕು ಎಂದು ಆಗ್ರಹಿಸಿದರು.

ಡಾ. ಸುಧಾಕರ್ ಅವರು ಹಲವು ವರ್ಷಗಳ ಶ್ರಮದಿಂದ ಚಿಂತಾಮಣಿಯಲ್ಲಿ ನಿರ್ಮಿಸಿರುವ ಈ ಡಾ. ಅಂಬೇಡ್ಕರ್ ಭವನ, ಬಾಬಾ ಸಾಹೇಬರ ಬಾಲ್ಯದಿಂದ ಹಿಡಿದು ಅವರ ಪರಿನಿರ್ವಾಣದವರೆಗೆ ಸಂಪೂರ್ಣ ಮಾಹಿತಿಯನ್ನು ನೀಡುವ ಸುಂದರ ಸುಸಜ್ಜಿತವಾದ ಅನುಭವ ಕೇಂದ್ರವಾಗಿದೆ. ಈ ಕಲ್ಪನೆಯೇ ಅತ್ಯದ್ಭುತ ಎಂದು ಹೊಗಳಿದರು.
ಮಹಾನ್ ಮಾನವತಾವಾದಿ, ಸಂವಿಧಾನಶಿಲ್ಪಿ ಅಂಬೇಡ್ಕರ್ ಅವರ ಜೀವನದರ್ಶನ ಮಾಡಿಸುವ ಈ ಅನುಭವ ಕೇಂದ್ರ ಮುಂದಿನ ಪೀಳಿಗೆಗೆ ಅತ್ಯಂತ ಅಮೂಲ್ಯವಾದ ಕೆಲಸ. ಈ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡದ್ದು ನನಗೆ ಸಾರ್ಥಕವೆನಿಸುತ್ತಿದೆ ಎಂದರು. ಬೀದರ್ ನಲ್ಲಿ ಕೂಡ ಇದೇ ಮಾದರಿಯಲ್ಲಿ ಡಾ. ಅಂಬೇಡ್ಕರ್ ಅಧ್ಯಯನ ಕೇಂದ್ರ ನಿರ್ಮಿಸುವುದಾಗಿ ತಿಳಿಸಿದರು.

ಕುಡಿಯುವ ನೀರಿಗೆ ಹಣದ ಕೊರತೆ ಇಲ್ಲ

ರಾಜ್ಯ ಸರ್ಕಾರ ಈಗಾಗಲೇ ಗ್ರಾಮೀಣ ಕುಡಿಯುವ ನೀರಿನ ಪೂರೈಕೆಗೆ 117 ಕೋಟಿ ರೂ. ಮುಂಗಡವಾಗಿ ಬಿಡುಗಡೆ ಮಾಡಿದ್ದು,  ಯಾವುದೇ ರೀತಿಯಲ್ಲಿ ಹಣದ ಕೊರತೆ ಇಲ್ಲ. ಮಳೆಯ ಕೊರತೆಯ ನಡುವೆಯೂ ಎಲ್ಲರಿಗೂ ಶುದ್ಧ ಕುಡಿಯುವ ನೀರು ಪೂರೈಸಲು ತಮ್ಮ ಇಲಾಖೆ ಶ್ರಮಿಸುತ್ತಿದೆ ಎಂದರು. ಪ್ರತಿ ನಿತ್ಯ 3 ಲಕ್ಷ ಜನರಿಗೆ ನರೇಗಾದ ಬದಲಾದ ರೂಪ ವಿಬಿಜಿ ರಾಮ್ ಜಿ ಅಡಿಯಲ್ಲಿ ಉದ್ಯೋಗ ನೀಡಲಾಗುತ್ತಿದ್ದು, ಬರದಂತಹ ಪರಿಸ್ಥಿತಿಯನ್ನು ಎದುರಿಸಲಾಗುತ್ತಿದೆ ಸಚಿವರಾದ ಈಶ್ವರ ಖಂಡ್ರೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ವಿ. ಮುನಿಯಪ್ಪ, ಮಾಜಿ ಸಚಿವರಾದ ಡಾ. ಎಂ.ಸಿ. ಸುಧಾಕರ್, ಡಾ.ಎಚ್.ಸಿ. ಮಹಾದೇವಪ್ಪ, ಸಂಸತ್ ಸದಸ್ಯ ಮಲ್ಲೇಶ್ ಬಾಬು ಮತ್ತಿತರರು ಭಾಗಿಯಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments