ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಅವರು ಗುರುವಾರ ಮಾಧ್ಯಮಗೋಷ್ಠಿ ನಡೆಸಿ, ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.
ಕಳೆದ 10 ತಿಂಗಳಲ್ಲಿ ಇತರೆ ಇಬ್ಬರು ಆಯುಕ್ತರ 14 ಬಾರಿಯ ಭಿನ್ನಮತವನ್ನು ತಳ್ಳಿಹಾಕಿ ಗೌಪ್ಯವಾಗಿ ಎಸ್ಐಆರ್ ಪ್ರಕ್ರಿಯೆ ನಡೆಸಿರುವುದು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಿದೆ ಎಂದು ಅವರು ಆರೋಪಿಸಿದರು. ಬಿಹಾರದಲ್ಲಿ 63 ಲಕ್ಷ, ಪಶ್ಚಿಮ ಬಂಗಾಳದಲ್ಲಿ 91 ಲಕ್ಷ ಹಾಗೂ ಕರ್ನಾಟಕದಲ್ಲಿ 1.07 ಕೋಟಿ ಮತಗಳನ್ನು ಕಿತ್ತುಹಾಕಲಾಗಿದೆ ಎಂದು ಹೇಳಿದರು.
ರಾಹುಲ್ ಗಾಂಧಿ ಅವರು ಮತಗಳ್ಳತನ ವಿರುದ್ಧ ಧ್ವನಿ ಎತ್ತಿದಾಗ ಜ್ಞಾನೇಶ್ ಕುಮಾರ್ ಅವರು ರಾಹುಲ್ ಗಾಂಧಿ ದೇಶದ ಜನರ ಮುಂದೆ ಕ್ಷಮೆ ಕೋರಬೇಕು ಎಂದು ತಿಳಿಸಿದ್ದರು. ಈಗ ನಡೆದಿರುವ ಅಸಂವಿಧಾನಿಕ ತೀರ್ಮಾನಕ್ಕಾಗಿ ಜ್ಞಾನೇಶ್ ಕುಮಾರ್ ಅವರು ಕ್ಷಮೆಗೆ ಅರ್ಹರಲ್ಲ. ರಾಹುಲ್ ಗಾಂಧಿ ಅವರು 2025ರ ಫೆಬ್ರವರಿಯಲ್ಲಿ ಬರೆದ ಪತ್ರವನ್ನು ನಿರ್ಲಕ್ಷಿಸಿ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಖಂಡಿಸಿದರು. ಫಾರಂ 6ರಲ್ಲಿ ಮಾರ್ಪಾಡುಗಳನ್ನು ಇತರೆ ಆಯುಕ್ತರ ಅನುಮತಿ ಇಲ್ಲದೆಯೇ ಮಾಡಲಾಗಿದೆ ಎಂದೂ ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಜ್ಞಾನೇಶ್ ಕುಮಾರ್ ಆ ಸ್ಥಾನದಲ್ಲಿ ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ. ಸಮಗ್ರ ಸ್ವಾಯತ್ತ ಪರಿಶೀಲನೆ ನಡೆಯಬೇಕು. ಗುರುವಾರ ನಾನು ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ಅವರು 2500 ಮತದಾರರ ಮತವನ್ನು ತೆಗೆದುಹಾಕಬೇಕು ಎಂದು ಬರೆದಿದ್ದ ಪತ್ರವನ್ನು ಬಿಡುಗಡೆ ಮಾಡಿ ಮಾಧ್ಯಮಗೋಷ್ಠಿ ಮಾಡಿದ್ದೆ. ಇಂದು ನನ್ನ ಬಳಿ 65 ಸಾವಿರ ಡಿಲೀಟ್ ಆಗಿರುವ ಮತಗಳಲ್ಲಿ ಅಲ್ಪಸಂಖ್ಯಾತರು ಹಾಗೂ ದಲಿತರ ಮತಗಳು ಹೆಚ್ಚು ಇವೆ. ಬಬಲೇಶ್ವರ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಹಲವು ಕಡೆ ಈ ಪ್ರಕ್ರಿಯೆ ನಡೆದಿದೆ. ಅರ್ಜಿಗಳಲ್ಲಿ ಸಹಿಯೂ ಇಲ್ಲ ಎಂದು ಹರಿಪ್ರಸಾದ್ ಅವರು ತಿಳಿಸಿದರು.
ನಾವು ಚುನಾವಣಾ ಆಯೋಗದ ಬಗ್ಗೆ ಮಾತನಾಡಿದರೆ, ಜ್ಞಾನೇಶ್ ಕುಮಾರ್ ಅವರ ಪರವಾಗಿ ಸಮರ್ಥನೆಗೆ ನಿಲ್ಲುವುದು ಕೇಂದ್ರ ಬಿಜೆಪಿ ನಾಯಕರು. ನಾವು ಚುನಾವಣಾ ಆಯೋಗಕ್ಕೆ ಪ್ರಶ್ನೆ ಮಾಡಿದರೆ ಆಯೋಗದವರೇ ಉತ್ತರ ನೀಡಬೇಕು. ಆದರೆ ಬಿಜೆಪಿಯವರು ಉತ್ತರ ನೀಡುತ್ತಿದ್ದಾರೆ.
ಜ್ಞಾನೇಶ್ ಕುಮಾರ್ ಅವರು ತಕ್ಷಣ ರಾಜೀನಾಮೆ ನೀಡಬೇಕು ಮತ್ತು ಅವರನ್ನು ಬಂಧಿಸಬೇಕು ಎಂದು ಬೇಡಿಕೆ ಇಟ್ಟ ಅವರು, ನಾಳೆ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದರು. ಎಲ್ಲಾ ಪಕ್ಷಗಳಿಗೂ ಆಹ್ವಾನ ನೀಡಿರುವುದಾಗಿ ತಿಳಿಸಿದರು.


