ಶ್ರೀ ಆದಿಚುಂಚನಗಿರಿ ಕ್ಷೇತ್ರದ ಮಹಾಸಂಸ್ಥಾನ ಮಠದಲ್ಲಿ ಆಯೋಜಿಸಿದ್ದ ಪದ್ಮಭೂಷಣ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 53ನೇ ವಾರ್ಷಿಕ ಪಟ್ಟಾಭಿಷೇಕ ಮಹೋತ್ಸವ, ಶ್ರೀ ಗುರು ಸಂಸ್ಮರಣೋತ್ಸವ ಮತ್ತು 47ನೇ ವರ್ಷದ ರಾಜ್ಯಮಟ್ಟದ ಶ್ರೀ ಕಾಲಭೈರವೇಶ್ವರ ಜಾನಪದ ಕಲಾ ಮೇಳದ ಸಮಾರೋಪ ಕಾರ್ಯಕ್ರಮದಲ್ಲಿ ಜಾನಪದ ಕಲೆ ಶಾಶ್ವತವಾಗಿ ಉಳಿಯಲು ಇಂತಹ ಮಹೋತ್ಸವಗಳು ರಾಜ್ಯದ ಎಲ್ಲ ಭಾಗಗಳಲ್ಲಿಯೂ ನಡೆಯಬೇಕು. ಆಗ ಮಾತ್ರವೇ ನಮ್ಮ ಮೂಲ ಸಂಸ್ಕೃತಿ ಶಾಶ್ವತವಾಗಿ ಉಳಿಯಲಿದೆ ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಎಂದು ಹೇಳಿದ್ದಾರೆ.
ಕಲಾವಿದರನ್ನು ಗುರುತಿಸಿ, ಅವರನ್ನು ಗೌರವಿಸುವ ಕೆಲಸದೊಂದಿಗೆ ಅಗತ್ಯ ಸೌಲಭ್ಯಗಳನ್ನು ನೀಡುತ್ತಿರುವ ಆದಿಚುಂಚನಗಿರಿ ಮಠದ ಕಾರ್ಯ ಶ್ಲಾಘನೀಯ ಎಂದು ಸಚಿವರು ಹೊಗಳಿದ್ದಾರೆ.
ನಿಷ್ಕಲ್ಮಷ ಭಕ್ತಿ, ಪ್ರಾರ್ಥನೆಗಳಿಗೆ ಎಂದಿಗೂ ಫಲ ಸಿಗುತ್ತದೆ. ಎಂತಹ ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ಭಕ್ಷ್ಯ ಭೋಜನ ಸವಿದರೂ ಸಿಗದ ಆತ್ಮತೃಪ್ತಿ ಮತ್ತು ನೆಮ್ಮದಿ ಇಂತಹ ಮಠಮಾನ್ಯ, ದೇವಾಲಯಗಳಲ್ಲಿ ದೊರೆಯುತ್ತಿದೆ. ಹಣ, ಅಧಿಕಾರ ಇದ್ದರೆ ನೆಮ್ಮದಿ ದೊರೆಯಲು ಸಾಧ್ಯವೇ ಇಲ್ಲ. ದೇವರ ಸನ್ನಿಧಿಯೇ ನೆಮ್ಮದಿಯ ತಾಣ. ಇಂತಹ ನೆಮ್ಮದಿಯ ತಾಣದಲ್ಲಿ ನಡೆಯುತ್ತಿರುವ ಜಾನಪದ ಮೇಳವು ಸ್ವರ್ಗಕ್ಕೂ ಮಿಗಿಲು ಎಂದು ತಿಳಿಸಿದರು.
ಕಲೆ, ಸಂಸ್ಕಾರ, ಸಂಸ್ಕೃತಿ, ಶಿಕ್ಷಣ, ಅನ್ನದಾನ… ಹೀಗೆ ಎಲ್ಲ ರೀತಿಯಲ್ಲಿಯೂ ಸೇವೆ ಸಲ್ಲಿಸುತ್ತಿರುವ ಆದಿಚುಂಚನಗಿರಿ ಮಠವು ಇನ್ನುಳಿದ ಮಠಗಳಿಗೆ ಮಾದರಿಯಾಗುವ ಮೂಲಕ ಭದ್ರ ಬುನಾದಿ ಹಾಕಿದೆ. ಈ ಮಠದ ಕೈಂಕರ್ಯಗಳು ಹೀಗೆಯೇ ಮುಂದುವರಿಯಲಿ ಎಂದು ಆಶಿಸಿದರು. ಇದೇ ವೇಳೆ ಜಾನಪದ ಕಲಾವಿದರನ್ನು ಶ್ರೀಗಳೊಟ್ಟಿಗೆ ಸೇರಿ ಸಚಿವರು ಅಭಿನಂದಿಸಿದರು.
ಸಮಾರಂಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ, ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶಾಖ ಮಠದ ಶ್ರೀ ಶೇಖರ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಮಂಜುಶ್ರೀ ಸೇರಿದಂತೆ ವಿವಿಧ ಸಂಸ್ಥಾನಗಳ ಮಹಾಸ್ವಾಮೀಜಿಗಳು ಉಪಸ್ಥಿತರಿದ್ದರು.


