Homeಕರ್ನಾಟಕಆಗಸ್ಟ್ ತಿಂಗಳೊಳಗಾಗಿ ಬಾಕಿ ಇರುವ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಿ: ಕೃಷ್ಣ ಬೈರೇಗೌಡ

ಆಗಸ್ಟ್ ತಿಂಗಳೊಳಗಾಗಿ ಬಾಕಿ ಇರುವ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಿ: ಕೃಷ್ಣ ಬೈರೇಗೌಡ

– ಪುನಃ ಒತ್ತುವರಿ ಮಾಡುವವರ ಸಾಮಗ್ರಿಗಳನ್ನು ಜಪ್ತಿ ಮಾಡಿ ದುಪ್ಪಟ್ಟು ದಂಡ ವಿಧಿಸಿ

– ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ

ಜಿಬಿಎ ವ್ಯಾಪ್ತಿಯಲ್ಲಿ ಈವರೆಗೆ 964 ಕಿ.ಮೀ. ಪಾದಚಾರಿ ಮಾರ್ಗಗಳ ಒತ್ತುವರಿಯನ್ನು ತೆರವುಗೊಳಿಸಲಾಗಿದ್ದು, ಬಾಕಿ ಇರುವ ಒತ್ತುವರಿಗಳನ್ನು ಆಗಸ್ಟ್ ತಿಂಗಳೊಳಗಾಗಿ ತೆರವುಗೊಳಿಸುವಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಬಿಎ ವ್ಯಾಪ್ತಿಯಲ್ಲಿ ‘ಪಾದಚಾರಿ ಮಾರ್ಗಗಳ ಒತ್ತುವರಿ ತೆರವು’, ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಹಾಗೂ ‘ಬಿಡಾಡಿ ವಾಹನಗಳ ತೆರವು ಕಾರ್ಯಾಚರಣೆ’ ಕುರಿತು ಇಂದು ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಸುಮಾರು 1,500 ಕಿ.ಮೀ. ಉದ್ದದ ಆರ್ಟಿರಿಯಲ್ ಹಾಗೂ ಸಬ್-ಆರ್ಟಿರಿಯಲ್ ಪ್ರಮುಖ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಪೈಕಿ ಈವರೆಗೆ 964 ಕಿ.ಮೀ. ಉದ್ದದ ಪಾದಚಾರಿ ಮಾರ್ಗಗಳಲ್ಲಿನ ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಬಾಕಿ ಇರುವ ಪಾದಚಾರಿ ಮಾರ್ಗಗಳ ಒತ್ತುವರಿಯನ್ನು ಇದೇ ತಿಂಗಳೊಳಗಾಗಿ ತೆರವುಗೊಳಿಸುವಂತೆ ನಿರ್ದೇಶನ ನೀಡಿದರು.

ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆಯನ್ನು ರೂಪಿಸಿರುವ ಯೋಜನೆಯಂತೆ ಸಮರ್ಪಕವಾಗಿ ಕೈಗೊಳ್ಳಬೇಕು. ಒತ್ತುವರಿ ತೆರವುಗೊಳಿಸಿರುವ ಸ್ಥಳಗಳಲ್ಲಿ ದುರಸ್ತಿ ಕಾರ್ಯವನ್ನೂ ಸಮಾನಾಂತರವಾಗಿ ಕೈಗೊಳ್ಳುವಂತೆ ಸೂಚಿಸಿದರು.

ಪುನಃ ಒತ್ತುವರಿ ಮಾಡುವವರ ವಿರುದ್ಧ ದುಪ್ಪಟ್ಟು ದಂಡ

ನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಿರುವ ಸ್ಥಳಗಳಲ್ಲಿಯೇ ಬೀದಿ ಬದಿ ವ್ಯಾಪಾರಿಗಳು ಪುನಃ ಬಂದು ವ್ಯಾಪಾರ ಮುಂದುವರಿಸುತ್ತಿರುವುದು ಕಂಡುಬರುತ್ತಿದೆ. ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಪುನಃ ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುವವರ ಸಾಮಗ್ರಿಗಳನ್ನು ಜಪ್ತಿ ಮಾಡಿ, ಅವರಿಗೆ ದುಪ್ಪಟ್ಟು ದಂಡ ವಿಧಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪಾದಚಾರಿ ಮಾರ್ಗಗಳ ತೆರವು ಕುರಿತು ಜಂಟಿ ಸಭೆ

ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ಪರಿಣಾಮಕಾರಿಯಾಗಿ ನಡೆಯಬೇಕು. ಒತ್ತುವರಿ ತೆರವುಗೊಳಿಸಿರುವ ಸ್ಥಳಗಳಲ್ಲಿ ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ನಡೆಸಬೇಕು. ಈ ನಿಟ್ಟಿನಲ್ಲಿ ಸದ್ಯದಲ್ಲಿಯೇ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಜಂಟಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ

ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಇದುವರೆಗೆ 4,483 ಸ್ಥಳಗಳಲ್ಲಿ 1,02,002 ಮೆಟ್ರಿಕ್ ಟನ್ ಸಿ & ಡಿ ತ್ಯಾಜ್ಯವನ್ನು ಗುರುತಿಸಲಾಗಿದ್ದು, ಈವರೆಗೆ 1,810 ಸ್ಥಳಗಳಿಂದ 43,492 ಮೆಟ್ರಿಕ್ ಟನ್ ಸಿ & ಡಿ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ. ಈ ಕಾರ್ಯಾಚರಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು. ಅಧಿಕಾರಿಗಳು ಸಮರ್ಪಕವಾಗಿ ಮೇಲ್ವಿಚಾರಣೆ ನಡೆಸಿ ಅಭಿಯಾನ ಯಶಸ್ವಿಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಹೆಬ್ಬಾಳ ಜಂಕ್ಷನ್ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಡಿಎ ವತಿಯಿಂದ ಸಂಪೂರ್ಣ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು. ಹೆಬ್ಬಾಳದಿಂದ ಕೆ.ಆರ್. ಪುರಂವರೆಗೆ ಇರುವ ಹೊರ ವರ್ತುಲ ರಸ್ತೆಯ ಭಾಗದಲ್ಲಿ ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ ಹಾಗೂ ಬೆಂಗಳೂರು ಕೇಂದ್ರ ನಗರ ಪಾಲಿಕೆಗಳು ಜಂಟಿಯಾಗಿ ಸಂಪೂರ್ಣ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಬಿಡಾಡಿ ವಾಹನಗಳ ತೆರವು ಕಾರ್ಯಾಚರಣೆ

ಬಿಡಾಡಿ ವಾಹನಗಳ ತೆರವು ಕಾರ್ಯಾಚರಣೆ ಸಕ್ರಿಯವಾಗಿ ನಡೆಯಬೇಕು. ಆಯಾ ನಗರ ಪಾಲಿಕೆಗಳಲ್ಲಿ ಕಿರಿಯ ಆರೋಗ್ಯ ಪರಿವೀಕ್ಷಕರು, ಪೌರಕಾರ್ಮಿಕರ ಮೇಲ್ವಿಚಾರಕರು ಹಾಗೂ ಮಾರ್ಷಲ್‌ಗಳಿಗೆ ಬಿಡಾಡಿ ವಾಹನಗಳಿಗೆ ನೋಟಿಸ್ ಅಂಟಿಸುವ ಜವಾಬ್ದಾರಿ ನೀಡಬೇಕು. ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಬಿಡಾಡಿ ವಾಹನಗಳ ತೆರವು ಕಾರ್ಯಾಚರಣೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸಮರ್ಪಕವಾಗಿ ಮೇಲ್ವಿಚಾರಣೆ ನಡೆಸಬೇಕು. ನೋಟಿಸ್ ಅಂಟಿಸಿದ ಬಳಿಕ ದಂಡ ಪಾವತಿಸಿ, ಅದೇ ವಾಹನವನ್ನು ಬೇರೆ ಸ್ಥಳದಲ್ಲಿ ನಿಲ್ಲಿಸುತ್ತಿದ್ದಾರೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಈ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಪಾಲಿಕೆಗಳಿಗೆ ಪತ್ರ ಬರೆಯುವಂತೆ ಮುಖ್ಯ ಆಯುಕ್ತರಿಗೆ ಸೂಚಿಸಿದರು.

ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ, ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನ ಹಾಗೂ ಬಿಡಾಡಿ ವಾಹನಗಳ ತೆರವು ಕಾರ್ಯವನ್ನು ಆಗಸ್ಟ್ 30ರೊಳಗಾಗಿ ಪೂರ್ಣಗೊಳಿಸಬೇಕು. ಅದಾದ ಬಳಿಕ ನಾಗರಿಕರಿಗೆ ದೂರುಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಕಾರ್ಯಗಳು ಸಮರ್ಪಕವಾಗಿ ನಡೆಯದಿರುವುದು ಗಮನಕ್ಕೆ ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ಬಿಡಿಎ ಆಯುಕ್ತರಾದ ಮಣಿವಣ್ಣನ್, ಜಲಮಂಡಳಿ ಅಧ್ಯಕ್ಷರಾದ ಮಂಜುಳಾ, ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್., ಪೊಮ್ಮಲ ಸುನೀಲ್ ಕುಮಾರ್, ರಮೇಶ್ ಕೆ.ಎನ್., ಜಿ. ಜಗದೀಶ್, ಡಾ. ರಾಜೇಂದ್ರ ಕೆ.ವಿ., ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಸಿಇಓ ಕರೀಗೌಡ, ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ, ಅಪರ ಆಯುಕ್ತರು, ಮುಖ್ಯ ಅಭಿಯಂತರರು ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments