Homeಕರ್ನಾಟಕಎಸ್‌ಐಆರ್‌ಗೆ ಕಾಂಗ್ರೆಸ್‌ ಸರ್ಕಾರದಿಂದ ಅಡ್ಡಗಾಲು, ಬಿಎಲ್‌ಒಗಳನ್ನು ನೇಮಿಸದ ಸರ್ಕಾರ: ಆರ್‌.ಅಶೋಕ್

ಎಸ್‌ಐಆರ್‌ಗೆ ಕಾಂಗ್ರೆಸ್‌ ಸರ್ಕಾರದಿಂದ ಅಡ್ಡಗಾಲು, ಬಿಎಲ್‌ಒಗಳನ್ನು ನೇಮಿಸದ ಸರ್ಕಾರ: ಆರ್‌.ಅಶೋಕ್

  • ಬೆಂಗಳೂರಿನ ಶಾಸಕರಿಗೆ ಅನುದಾನ ತಾರತಮ್ಯ, ಇದರಿಂದ ಬ್ರ್ಯಾಂಡ್‌ ಬೆಂಗಳೂರು ನಿರ್ಮಾಣವಾಗಲ್ಲ

ಎಸ್‌ಐಆರ್‌ ವಿರೋಧಿಸುತ್ತಿರುವ ಕಾಂಗ್ರೆಸ್‌ ಸರ್ಕಾರ, ಬಿಎಲ್‌ಒ ಗಳನ್ನು ನೇಮಿಸಲು ಕೂಡ ಅಡ್ಡಗಾಲು ಹಾಕಿದೆ. ಅನೇಕ ಕಡೆ ಅಧಿಕಾರಿಗಳನ್ನು ನೇಮಿಸದೆ ಎಸ್‌ಐಆರ್‌ ನಡೆಯದಂತೆ ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ಆರಂಭವಾಗಿದೆ. ಆದರೆ ಕಾಂಗ್ರೆಸ್‌ ಸರ್ಕಾರ ಬಿಎಲ್‌ಒಗಳನ್ನು ಸರಿಯಾಗಿ ನೇಮಿಸಿಲ್ಲ. ಮೂವತ್ತು ಬಿಎಲ್‌ಒ ಇರಬೇಕಾದಲ್ಲಿ ಕೇವಲ ಹತ್ತು ಮಂದಿ ಕಾಣಿಸುತ್ತಿದ್ದಾರೆ. ಸರ್ಕಾರ ಟಿಎ, ಡಿಎ ನೀಡಿಲ್ಲ, ಹಾಜರಾಗಲು ಅನುಮತಿ ನೀಡಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ ಎಂದು ದೂರಿದರು.

ಮತದಾರರ ಪಟ್ಟಿಯಲ್ಲಿ ನಿಜವಾದ ಮತದಾರರ ಹೆಸರು ಮಾತ್ರ ಇರಬೇಕೆಂಬುದು ಎಸ್‌ಐಆರ್‌ ನ ಉದ್ದೇಶ. ಜಯನಗರದಲ್ಲಿ ಇಪ್ಪತ್ತು ಕಡೆ ಅಧಿಕಾರಿ ಅಲ್ಲದ ಕಾಂಗ್ರೆಸ್‌ ಮುಖಂಡರನ್ನು ಬಿಎಲ್‌ಒ ಆಗಿ ನೇಮಿಸಲಾಗಿದೆ. ಚಾಮರಾಜಪೇಟೆಯಲ್ಲಿ ಮನೆ ಮನೆಗೆ ಹೋಗುವಾಗ ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಅವರ ಫೋಟೊ ತೋರಿಸಿದ್ದಾರೆ. ಬಿಎಲ್‌ಒ ಗಳು ಯಾವುದೇ ಪಕ್ಷದ ಗುರುತು ತೋರಿಸಬಾರದು ಎಂದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕಾಂಗ್ರೆಸ್‌ ಶಾಸಕರಿರುವ ಕಡೆ ಮಾತ್ರ ಹೆಚ್ಚು ಅನುದಾನ ನೀಡಿದ್ದಾರೆ. ಕಾಂಗ್ರೆಸ್‌ ಶಾಸಕರಿರುವ ಕಡೆ 100 ಕೋಟಿ ರೂ. ನೀಡಿದರೆ, ಬಿಜೆಪಿ ಶಾಸಕರಿರುವ ಕಡೆ 40-50 ಲಕ್ಷ ರೂ. ನೀಡಿದ್ದಾರೆ. ಈ ರೀತಿಯ ತಾರತಮ್ಯ ಮಾಡಿ ಅಭಿವೃದ್ಧಿ ಕುಂಠಿತವಾಗುವಂತೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಬಿಜೆಪಿ ಶಾಸಕರು ಹೆಚ್ಚಿದ್ದಾರೆ. ಕೂಡಲೇ ಈ ತಾರತಮ್ಯವನ್ನು ನಿವಾರಿಸಬೇಕು. ಸಚಿವ ಎಂ.ಬಿ.ಪಾಟೀಲ್‌ ಅವರಿಗೆ ಬೆಂಗಳೂರಿನ ಬಗ್ಗೆ ತಿಳಿದಿಲ್ಲ. ಬಿಜೆಪಿ ಸರ್ಕಾರ ಇದ್ದಾಗ ಕಾಂಗ್ರೆಸ್‌ ಶಾಸಕರಿರುವ ಕಡೆ ಹೆಚ್ಚು ಅನುದಾನ ನೀಡಲಾಗಿತ್ತು. ಶಿವಾಜಿನಗರ ಕ್ಷೇತ್ರ, ಹೆಬ್ಬಾಳ ಕ್ಷೇತ್ರಕ್ಕೆ ನಾನೇ 100 ಕೋಟಿ ರೂ. ಅನುದಾನ ಕೊಡಿಸಿದ್ದೆ. ಕಾಂಗ್ರೆಸ್‌ ಸರ್ಕಾರ ತಾರತಮ್ಯ ಮಾಡಿದರೆ ಬ್ರ್ಯಾಂಡ್‌ ಬೆಂಗಳೂರು ಆಗುವುದಿಲ್ಲ ಎಂದರು.

ಮಳೆ ಕೊರತೆ

ರಾಜ್ಯದಲ್ಲಿ ಕಾಂಗ್ರೆಸ್‌ಗೆ ಬರ ಬಂದಿದ್ದು, ಯಾರಿಗೂ ಅನುದಾನ ನೀಡುತ್ತಿಲ್ಲ. ಕೆಲವು ಕಡೆ ಪ್ರವಾಹವಾಗಿದ್ದು, ಅಲ್ಲಿಗೂ ಪರಿಹಾರ ನೀಡಲು ಹಣ ಇಲ್ಲ. ಮಳೆ ಕೊರತೆಗೂ ಕ್ರಮ ವಹಿಸಲು ಹಣ ಇಲ್ಲ. ಅಭಿವೃದ್ಧಿ ಕಡೆ ಗಮನ ಕೊಡಲು ಅಧಿಕಾರಿಗಳ ಸಭೆ ಕೂಡ ಮಾಡಿಲ್ಲ. ಆರ್‌ಎಸ್‌ಎಸ್‌, ಬಿಡದಿಯಲ್ಲಿ ಯಾರ ಆಸ್ತಿ ಎಷ್ಟಿದೆ ಎಂಬಂತಹ ವಿಚಾರಗಳನ್ನೇ ಮಾತಾಡುತ್ತಿದ್ದಾರೆ. ಸಚಿವ ಪ್ರಿಯಾಂಕ್‌ ಖರ್ಗೆ ತಮ್ಮ ಇಲಾಖೆ ಅಥವಾ ಕಲಬುರ್ಗಿಯ ಪ್ರಗತಿ ಬಗ್ಗೆ ಒಮ್ಮೆಯೂ ಮಾತಾಡಿಲ್ಲ. ವಿಧಾನಸಭೆಯಲ್ಲಿ ನಾನು ಹಲವು ಪ್ರಶ್ನೆ ಕೇಳಿದರೂ ಅದಕ್ಕೆ ಸರಿಯಾದ ಉತ್ತರ ನೀಡಿಲ್ಲ. ಚಿತ್ತಾಪುರದಲ್ಲೇ ಅಭಿವೃದ್ಧಿ ಮಾಡಲಾಗದ ಇವರು, 150 ದೇಶಗಳಲ್ಲಿರುವ ಆರ್‌ಎಸ್‌ಎಸ್‌ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ತಾಕತ್ತಿದ್ದರೆ ಮೂರು ವರ್ಷಗಳ ಅಭಿವೃದ್ಧಿ ಬಗ್ಗೆ ಮಾತಾಡಲಿ ಎಂದು ಸವಾಲು ಹಾಕಿದರು.

ಬೆಂಗಳೂರು ವಿಮಾನ ನಿಲ್ದಾಣ, ಮೆಟ್ರೊ ಯೋಜನೆಗೆ ಅಟಲ್‌ ಬಿಹಾರಿ ವಾಜಪೇಯಿ, ಅನಂತಕುಮಾರ್‌ ಮೊದಲಾದ ನಾಯಕರ ಶ್ರಮವೇ ಕಾರಣ. ಕಾಂಗ್ರೆಸ್‌ ಅಭಿವೃದ್ಧಿ ಮಾಡಿದ್ದರೆ ಕಳೆದ ಮೂರು ಲೋಕಸಭೆ ಚುನಾವಣೆಗಳಲ್ಲಿ ಸೋಲುತ್ತಿರಲಿಲ್ಲ. ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್‌ ಸೋತಿದೆ ಎಂದರು.

ಜಿಬಿಎ ಚುನಾವಣೆ

ಜಿಬಿಎ ಚುನಾವಣೆಗೆ ಸಂಬಂಧಿಸಿದ ಉಸ್ತುವಾರಿಗಳ ಸಭೆ ನಡೆಸಿ, ಎಸ್‌ಐಆರ್‌, ಅಭ್ಯರ್ಥಿ ಆಯ್ಕೆ ಮೊದಲಾದ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ಜಿಬಿಎ ಚುನಾವಣೆಯನ್ನು ಕಾಂಗ್ರೆಸ್‌ ಸರ್ಕಾರ ನಡೆಸುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಬಿಜೆಪಿಯಿಂದ ಐದು ಮಹಾ ನಗರಪಾಲಿಕೆಗಳನ್ನು ಗೆಲ್ಲಬೇಕೆಂಬ ಉದ್ದೇಶದಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೂರು ವರ್ಷದಲ್ಲಿ ಬೆಂಗಳೂರಿಗೆ ಕಾಂಗ್ರೆಸ್‌ ಮಾಡಿದ ಅನ್ಯಾಯ, ರಸ್ತೆಗುಂಡಿ, ತೆರಿಗೆ ಹೆಚ್ಚಳ ಮೊದಲಾದ ಸಮಸ್ಯೆಗಳನ್ನು ತೋರಿಸಲು ಸಮಿತಿ ರಚಿಸಲಾಗುತ್ತಿದೆ. ಪ್ರಣಾಳಿಕೆ ರೂಪಿಸಲು ಕೂಡ ಸಮಿತಿ ರಚಿಸಲಾಗುತ್ತಿದೆ ಎಂದು ಹೇಳಿದರು.

ತಾವು ಏನೂ ಹೇಳಿಲ್ಲ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡರು ಹೇಳಿದ್ದಾರೆ. ಯಾರು ಏನು ಹೇಳಿದರೂ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಸಾಧ್ಯವಿಲ್ಲ. ಅದನ್ನು ವರಿಷ್ಠರು ಮಾತ್ರ ತೀರ್ಮಾನಿಸುತ್ತಾರೆ. ಎಲ್ಲರ ಮನೆಯಲ್ಲಿ ದೋಸೆ ತೂತಾದರೆ ಕಾಂಗ್ರೆಸ್‌ನವರದ್ದು ಹಂಚು ತೂತಾಗಿರುವುದರಿಂದ ಅವರ ಬಗ್ಗೆ ಹೇಳಲು ಸಾಧ್ಯವಿಲ್ಲ. ಶಾಸಕ ಎಸ್‌.ಆರ್‌.ವಿಶ್ವನಾಥ್‌ ಕೆಂಪೇಗೌಡ ಜಯಂತಿ ವಿಚಾರದಲ್ಲಿ ಹೇಳಿಕೆ ನೀಡಿದ್ದಾರೆ. ಅದನ್ನು ಅಲ್ಲಿಗೆ ಮುಕ್ತಾಯ ಮಾಡಿದ್ದು, ಆ ರೀತಿ ಯಾರೂ ಮಾತಾಡಬಾರದು ಎಂದು ಸಂದೇಶ ನೀಡಲಾಗಿದೆ. ಅವರು ಪಕ್ಷ ಮುಖ್ಯ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದು, ಇದನ್ನು ಇಲ್ಲಿಗೇ ಅಂತ್ಯ ಮಾಡುತ್ತೇವೆ ಎಂದಿದ್ದಾರೆ ಎಂದರು.

ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲು ಯಾವುದೇ ಶಾಸಕರು ಹೋಗಬೇಕಿಲ್ಲ. ಅಡ್ಡ ಮತದಾನ ಮಾಡಿರುವವರ ವಿರುದ್ಧ ಪಕ್ಷ ಕ್ರಮ ವಹಿಸಲಿದ್ದು, ಅವರ ರಾಜಕೀಯ ಬದುಕು ಅಂತ್ಯವಾಗಲಿದೆ. ಮುಂದೆ ಅವರು ಚುನಾವಣೆಗೆ ಸ್ಪರ್ಧೆ ಮಾಡದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments