Homeಕರ್ನಾಟಕಗ್ರಾಮೀಣಾಭಿವೃದ್ಧಿಗೆ ₹16,000 ಕೋಟಿ ಅನುದಾನ ಐತಿಹಾಸಿಕ: ಈಶ್ವರ ಖಂಡ್ರೆ

ಗ್ರಾಮೀಣಾಭಿವೃದ್ಧಿಗೆ ₹16,000 ಕೋಟಿ ಅನುದಾನ ಐತಿಹಾಸಿಕ: ಈಶ್ವರ ಖಂಡ್ರೆ

ಗ್ರಾಮ ಪಂಚಾಯತಿಗಳ ಸ್ವಾಧೀನ ಮತ್ತು ನಿರ್ವಹಣೆಯಲ್ಲಿರುವ 4828 ಕೆರೆಗಳು 11671 ಎಕರೆಗೆ ಒತ್ತುವರಿ ಆಗಿದ್ದು, ಇದರ ತೆರವಿಗೆ ವಿಶೇಷ ಕಾರ್ಯಪಡೆ ರಚಿಸುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಘೋಷಣೆ ಮಾಡಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಇಂದು ನಡೆದ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆ ಹಾಗೂ ಮುಖ್ಯಮಂತ್ರಿ ಗ್ರಾಮೀಣಾಭಿವೃದ್ಧಿ ಯೋಜನೆಯ 16 ಸಾವಿರ ಕೋಟಿ ರೂ. ಕಾಮಗಾರಿಗಳ ಪ್ರಾರಂಭೋತ್ಸವ ಸಮಾರಂಭದಲ್ಲಿ ಮಾತನಾಡಿದ ಖಂಡ್ರೆ ಅವರು, 5927 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ 32504 ಕೆರೆಗಳಿದ್ದು, 11498 ಕೆರೆಗಳ 26873 ಎಕರೆ ಒತ್ತುವರಿಯಾಗಿತ್ತು. ಈ ಪೈಕಿ 6670 ಕೆರೆಗಳ 15201 ಎಕರೆ ಒತ್ತುವರಿ ತೆರವು ಮಾಡಲಾಗಿದೆ. ಇನ್ನೂ 4828 ಕೆರೆಗಳ 11671 ಎಕರೆ ಒತ್ತುವರಿ ತೆರವು ಮಾಡಬೇಕಾಗಿದೆ ಎಂಬ ಮಾಹಿತಿಯನ್ನು ವಿವರಿಸಿದರು.

ಗ್ರಾಮೀಣ ಕೆರೆಗಳ ಒತ್ತುವರಿ ತೆರವು ಮಾಡಿ, ಕೆರೆ ಹೂಳು ತೆಗೆದು, ರಾಜಕಾಲುವೆಗಳ ಮತ್ತು ಮಳೆ ನೀರು ಕಾಲುವೆಗಳ ಅಡೆತಡೆ ನಿವಾರಿಸಿದರೆ ಮಳೆಗಾಲದಲ್ಲಿ ಕೆರೆಗಳು ತುಂಬುವುದಲ್ಲದೆ, ಅಂತರ್ಜಲ ಮಟ್ಟವೂ ಹೆಚ್ಚಳವಾಗುತ್ತದೆ. ಕೆರೆ ಒತ್ತುವರಿ ತೆರವಿಗೆ ಎಲ್ಲರೂ ಸಹಕರಿಸಬೇಕು, ಶ್ರಮಿಸಬೇಕು ಎಂದು ಸಚಿವರು ಕೋರಿದರು.

ಗ್ರಾಮಾಭಿವೃದ್ಧಿಗೆ ಒತ್ತು: ಈಶ್ವರ ಖಂಡ್ರೆ

ಮಹಾತ್ಮಾ ಗಾಂಧೀಜೀ ಅವರು ಭಾರತ ದೇಶವು ಹಳ್ಳಿಗಳ ದೇಶ, ಗ್ರಾಮಾಭಿವೃದ್ಧಿಯಾಗದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಹಳ್ಳಿಗಳು ಈ ದೇಶದ ಆತ್ಮ ಎಂದು ಹೇಳುತ್ತಿದ್ದರು. ಗಾಂಧೀಜಿ ಅವರ ಈ ಗ್ರಾಮಾಭಿವೃದ್ಧಿಯ ಕಲ್ಪನೆಯನ್ನು ಸಾಕಾರ ಮಾಡಲು ಇಂದು ಒಟ್ಟಾರೆ 16 ಸಾವಿರ ಕೋಟಿ ರೂಪಾಯಿಗಳ ಯೋಜನೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಇದು ಗ್ರಾಮೀಣಾಭಿವೃದ್ಧಿಯಲ್ಲಿ ಐತಿಹಾಸಿಕ ನಿರ್ಣಯವಾಗಿದೆ. ಇದಕ್ಕಾಗಿ ಮುಖ್ಯಮಂತ್ರಿಗಳಿಗೆ, ಉಪ ಮುಖ್ಯಮಂತ್ರಿಗಳಿಗೆ ಹಾಗೂ ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.

ರಸ್ತೆಗಳು ಪ್ರಗತಿಯ ಸೋಪಾನ: ಆರ್ಥಿಕತೆಗೆ ಬಲ- ಈಶ್ವರ ಖಂಡ್ರೆ

ರಸ್ತೆಗಳು ಪ್ರಗತಿಗೆ ಸೋಪಾನ. ಉತ್ತಮ ರಸ್ತೆಗಳಿದ್ದರೆ ಜನರ ಸುಗಮ ಸಂಚಾರವಷ್ಟೇ ಅಲ್ಲ, ಸರಕು ಸಾಗಣೆಯೂ ವೇಗವಾಗಿ ಸಾಗುತ್ತದೆ. ರೈತರಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಲು ಅನುಕೂಲವಾಗಲಿದ್ದು, ಗ್ರಾಮೀಣ ಆರ್ಥಿಕತೆಗೆ ಬಲ ಬರಲಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಮೂಲಸೌಕರ್ಯ ಹಾಗೂ ರಸ್ತೆ ಅಭಿವೃದ್ಧಿಗೆ ಇಂಬು ನೀಡಿ 10 ಸಾವಿರ ರೂ. ವಿನಿಯೋಗಿಸುತ್ತಿರುವುದರಿಂದ ಗ್ರಾಮೀಣ ಭಾಗದ ಆರ್ಥಿಕತೆಗೆ ಬಲ ಬರಲಿದೆ ಎಂದರು.

ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಒಟ್ಟು 199458 ಕಿ.ಮೀ ಉದ್ದದ ರಸ್ತೆ ಇದೆ. ಈ ರಸ್ತೆಗಳ ಪೈಕಿ ಕೆಲವು ಬಿಟಿ ರಸ್ತೆಗಳು ಮಳೆಯಿಂದ, ವಾಹನದಟ್ಟಣೆಯಿಂದ ಹಾಳಾಗಿವೆ. ಅಸ್ತಿತ್ವದಲ್ಲಿರುವ ಬಿಟಿ ರಸ್ತೆಗಳಲ್ಲಿ ಹದಗೆಟ್ಟ ರಸ್ತೆ, ಸಾಧಾರಣ ರಸ್ತೆ ಹಾಗೂ ಉತ್ತಮ ರಸ್ತೆ ಎಂದು ಗುರುತಿಸಿ, ಹಾಳಾದ ರಸ್ತೆಗಳ ಅಭಿವೃದ್ಧಿಗೆ 7000 ಕೋಟಿ ರೂ. ವೆಚ್ಚಮಾಡಲಾಗುತ್ತಿದೆ. ಹೆಚ್ಚಾಗಿ ಹಾಳಾಗಿರುವ ರಸ್ತೆಯನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಲಾಗುವುದು. ಜೊತೆಗೆ ಅಸ್ತಿತ್ವದಲ್ಲಿರುವ ಪ್ರಮುಖ ಗ್ರಾಮೀಣ ರಸ್ತೆಗಳ ಮರು ಡಾಂಬರೀಕರಣಕ್ಕೆ 3000 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ. ಈ ರಸ್ತೆಗಳನ್ನು 3 ವರ್ಷಗಳ ಕಾಲ ನಿರ್ವಹಣೆ ಮಾಡುವ ಜವಾಬ್ದಾರಿಯೊಂದಿಗೆ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.

15 ತಿಂಗಳಲ್ಲಿ ರಸ್ತೆ ಕಾಮಗಾರಿ ಮುಗಿಸಬೇಕು:ಈಶ್ವರ ಖಂಡ್ರೆ

ಇಂದು ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಈ ಸಭೆಗೆ ಕರೆಸಲಾಗಿದೆ. ಕಾರಣ ಸರ್ಕಾರ ಈಗಾಗಲೇ 15000 ಕಿ.ಮೀ. ರಸ್ತೆಯ ಅಭಿವೃದ್ಧಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಮತ್ತೆ ಸಿಇಓಗಳು ಸರ್ಕಾರದ ಅನುಮೋದನೆಗೆ ಕಳಿಸುವ ಅಗತ್ಯವಿಲ್ಲ. ಅವರು ತಮ್ಮ ಹಂತದಲ್ಲೇ ವಿನ್ಯಾಸ, ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ, ಗುಣಮಟ್ಟದ ರಸ್ತೆಗಳನ್ನು ಮಾಡಿಸಬೇಕು. ಈ ಕಾಮಗಾರಿ 15 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಿ, ಗ್ರಾಮೀಣ ಕರ್ನಾಟಕಕ್ಕೆ ಲೋಕಾರ್ಪಣೆ ಮಾಡಬೇಕು ಎಂದು ತಿಳಿಸಿದರು.

ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಒತ್ತು:

ರಸ್ತೆಗಳ ಗುಣಮಟ್ಟ ಕಾಪಾಡಿಕೊಳ್ಳಲು, ರಸ್ತೆ ಕಾಮಗಾರಿಗಳನ್ನು ಪ್ರಗತಿ ಹಂತದಲ್ಲಿ 2 ಬಾರಿ ಮತ್ತು ಪೂರ್ಣಗೊಂಡ ನಂತರ ಒಂದು ಬಾರಿ ಒಟ್ಟು 3 ಬಾರಿ ಪರಿವೀಕ್ಷಣೆ ಮಾಡಲಾಗುತ್ತದೆ. ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಒಟ್ಟಾರೆ ಕಾಮಗಾರಿಗಳ ಶೇ.10 ರಷ್ಟು ಕಾಮಗಾರಿಗಳ ಭೌತಿಕ ಪರಿವೀಕ್ಷಣೆ ನಡೆಸಲೇ ಬೇಕು. ಅದೇ ರೀತಿ ಆಯಾ ತಾಲ್ಲೂಕು ಪಂಚಾಯತ್‌ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಒಟ್ಟಾರೆ ಕಾಮಗಾರಿಗಳ ಶೇ.10 ರಷ್ಟು ಕಾಮಗಾರಿಗಳ ಭೌತಿಕ ಪರಿವೀಕ್ಷಣೆ ನಡೆಸುವಂತೆ ಸೂಚಿಸಲಾಗಿದೆ. ಈ ರೀತಿ ಪರಿವೀಕ್ಷಣೆಗೊಂಡ ಕಾಮಗಾರಿಯ ವರದಿಯೊಂದಿಗೆ ಬಿಲ್ ಅನ್ನು ಎನ್.ಜಿ.ಎಸ್.ಕೆ. ತಂತ್ರಾಂಶದಲ್ಲಿ ಅಪ್ ಲೋಡ್ ಮಾಡಲು ಸೂಚಿಸಲಾಗಿದೆ ಎಂದರು.

ಅದೇ ರೀತಿ ರಾಜ್ಯದ ಗ್ರಾಮಠಾಣಾ ವ್ಯಾಪ್ತಿಯಲ್ಲಿ ಗುಣಮಟ್ಟದ ಸಿಸಿ ರಸ್ತೆ, ಚರಂಡಿ ನಿರ್ಮಾಣಕ್ಕಾಗಿ, ಡಿಆರ್.ಆರ್.ಪಿಯಲ್ಲಿ ಇಲ್ಲದ ಹೊಸ ಗ್ರಾಮೀಣ ರಸ್ತೆ ನಿರ್ಮಾಣಕ್ಕಾಗಿ ಪ್ರತ್ಯೇಕವಾಗಿ 6 ಸಾವಿರ ಕೋಟಿ ರೂ.ಗಳನ್ನು ಸರ್ಕಾರ ಒದಗಿಸುತ್ತಿದೆ ಎಂದು ತಿಳಿಸಿದರು.

ವಿಬಿಜಿ ರಾಮ್ ಜಿ ಯೋಜನೆಯಡಿ ನಿನ್ನೆಯವರೆಗೆ 2 ಕೋಟಿ 68 ಲಕ್ಷ ಮಾನವ ದಿನ ಸೃಜಿಸಲಾಗಿದೆ. ಅಂದರೆ ಪ್ರತಿ ನಿತ್ಯ ಸರಾಸರಿ ಎರಡೂವರೆ ಲಕ್ಷ ಅಕುಶಲ ಕಾರ್ಮಿಕರು ಕೆಲಸ ಮಾಡುತ್ತಿದ್ದು, ತೀವ್ರ ಬರ ಪರಿಸ್ಥಿತಿಯ ಸಮಯದಲ್ಲಿ ಗುಳೆ ಹೋಗುವುದನ್ನು ತಪ್ಪಿಸಲು ಸಾಧ್ಯವಾಗಿದೆ. ವಿಬಿಜಿ ರಾಮ್ ಜಿ ಯೋಜನೆಯಡಿಯಲ್ಲಿ ಗ್ರಾಮೀಣ ಭಾಗದಲ್ಲಿ ಹೆಚ್ಚು ಪ್ರಯಾಣಿಕರು ಬಂದು ಹೋಗುವ 1000 ಬಸ್ ನಿಲುಗಡೆ ಗುರುತಿಸಿ 1000 ತಂಗುದಾಣಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.

ಹಿತಮಿತವಾಗಿ ನೀರು ಬಳಸಲು ಈಶ್ವರ ಖಂಡ್ರೆ ಮನವಿ:

ಈ ವರ್ಷ ಎಲ್ ನಿ ನೋ ಪ್ರಭಾವದಿಂದ ಮಳೆಯ ಕೊರತೆ ಆಗಿದೆ. ರಾಜ್ಯದಲ್ಲಿ 217 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಕುಡಿಯುವ ನೀರಿಗೂ ತತ್ವಾರ ಬಂದಿದೆ. ಬಹುತೇಕ ಗ್ರಾಮೀಣ ಕೆರೆಗಳು ಬತ್ತಿ ಹೋಗಿವೆ. ಎಲ್ಲ ನಾಗರಿಕರೂ ಹಿತ ಮಿತವಾಗಿ ನೀರು ಬಳಕೆ ಮಾಡುವಂತೆ ಮನವಿ ಮಾಡಿದರು.

ಗ್ರಾಮ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಘನ ತ್ಯಾಜ್ಯ, ಹಸಿ ತ್ಯಾಜ್ಯ ಹಾಗೂ ಅಪಾಯಕಾರಿ ತ್ಯಾಜ್ಯಗಳ ವೈಜ್ಞಾನಿಕ ವಿಲೇವಾರಿ ಇಂದಿನ ಅಗತ್ಯವಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಏಕ ಬಳಕೆ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ತಡೆಯಬೇಕು ಎಂದರು.

ವಾಟರ್ ಬಜೆಟಿಂಗ್ ಮಾಡಿದ ಮುಂಚೂಣಿ ರಾಜ್ಯ ಕರ್ನಾಟಕ- ಖಂಡ್ರೆ:

ರಾಜ್ಯದಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಮುಂದಿನ 30 ವರ್ಷಗಳಲ್ಲಿ ಹೆಚ್ಚಾಗುವ ಜನಸಂಖ್ಯೆಗೆ ಅನುಗುಣವಾಗಿ ಮತ್ತು ಮನೆಗಳಿಗೆ, ಕೈಗಾರಿಕೆಗಳಿಗೆ, ಶಾಲೆ, ಕಾಲೇಜು, ಆಸ್ಪತ್ರೆಗಳಿಗೆ ಎಷ್ಟು ನೀರು ಬೇಕು ಎಂದು ಅಂದಾಜು ಮಾಡಿ, ಲಭ್ಯವಿರುವ ಮೇಲ್ಮೈ ನೀರನ್ನು ಸಮರ್ಪಕವಾಗಿ ಪೂರೈಕೆ ಮಾಡಲು ಅಲ್ಪಕಾಲೀನ, ಮಧ್ಯಕಾಲೀನ ಮತ್ತು ದೀರ್ಘಕಾಲೀನ ಯೋಜನೆಯಾಗಿ ವಾಟರ್ ಬಜೆಟಿಂಗ್ ಮಾಡಲಾಗುತ್ತಿದೆ. ನೆನೆಗುದಿಗೆ ಬಿದ್ದಿರುವ ಜಲ ಜೀವನ ಮಿಷನ್ ಯೋಜನೆಗಳಾದ ಏಕ ಗ್ರಾಮ ಕುಡಿಯುವ ನೀರಿನಯೋಜನೆ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿಗೆ ಮತ್ತೆ ವೇಗ ನೀಡಲಾಗಿದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments