ಗುತ್ತಿಗೆದಾರರ ಬಿಲ್‌ಗಳ ಪರಿಶೀಲನೆ ಮತ್ತು ಪಾವತಿ ಪ್ರಕ್ರಿಯೆಯನ್ನು ವೇಗಗೊಳಿಸಿ, ಪಾರದರ್ಶಕ ಹಾಗೂ ಜವಾಬ್ದಾರಿಯುತವಾಗಿಸಲು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಹಲವು ಕ್ರಾಂತಿಕಾರಿ ಸುಧಾರಣೆಗಳನ್ನು ಜಾರಿಗೆ ತರಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಎ) ಹಾಗೂ ಐದೂ ನಗರ ಪಾಲಿಕೆಗಳಲ್ಲಿ ಈ ಹೊಸ ನಿಯಮಗಳು ಏಕರೂಪವಾಗಿ ಅನ್ವಯವಾಗಲಿವೆ. ಸರ್ಕಾರಿ ಅನುದಾನದ ಕಾಮಗಾರಿಗಳು ಮತ್ತು ನಗರ ಪಾಲಿಕೆಗಳ ಸ್ವಂತ ನಿಧಿಯ ಕಾಮಗಾರಿಗಳಿಗೂ ಇವು ಅನ್ವಯಿಸುತ್ತವೆ ಎಂದು ಹೇಳಿದ್ದಾರೆ.
ಮುಖ್ಯ ಸುಧಾರಣೆಗಳು
- ಬಿಲ್ ಪಾವತಿಯಲ್ಲಿ ವಿಳಂಬ ತಪ್ಪಿಸುವುದು
- ಹೆಚ್ಚಿನ ಪಾರದರ್ಶಕತೆ
- ಸ್ವಯಂಚಾಲಿತ ಅನುಮೋದನೆ (Deemed Approval)
- ಕಾಗದರಹಿತ, ನೇರ ಆನ್‌ಲೈನ್ ಪಾವತಿ
- ಎಲ್ಲಾ ಹಂತಗಳಲ್ಲಿ ಕಾಲಮಿತಿ ನಿಗದಿ
- ಕಾಮಗಾರಿಗಳ ಡಿಜಿಟಲ್ ಟ್ರ್ಯಾಕಿಂಗ್
ಸಾರ್ವಜನಿಕ ಕಾಮಗಾರಿಗಳ ಬಿಲ್ ಸಲ್ಲಿಕೆ ಮತ್ತು ಪಾವತಿಯಲ್ಲಿ ಎದುರಾಗುತ್ತಿದ್ದ ಸುದೀರ್ಘ ವಿಳಂಬ ಹಾಗೂ ಅನಿಶ್ಚಿತತೆಗೆ ಮುಕ್ತಿ ನೀಡುವುದು ಈ ಸುಧಾರಣೆಗಳ ಪ್ರಮುಖ ಉದ್ದೇಶ ಎಂದು ಸಚಿವರು ಹೇಳಿದ್ದಾರೆ.
ವೇಗದ ಮತ್ತು ಸರಳ ಬಿಲ್ ವಿಲೇವಾರಿ
ಹೊಸ ವ್ಯವಸ್ಥೆಯಡಿ ಬಿಲ್‌ಗಳು ಸಮಗ್ರ ಆರ್ಥಿಕ ನಿರ್ವಹಣಾ ವ್ಯವಸ್ಥೆ (IFMS) ತಂತ್ರಾಂಶದ ಮೂಲಕ ಹಂತ-ಹಂತವಾಗಿ ವಿಲೇವಾರಿಯಾಗಲಿವೆ. ಮೊದಲು ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ (PMC) ಪರಿಶೀಲಿಸುತ್ತದೆ. ನಂತರ ಸ್ಥಳೀಯ ಇಂಜಿನಿಯರ್‌ಗಳು ತಪಾಸಣೆ ನಡೆಸಿ ದೃಢೀಕರಿಸುತ್ತಾರೆ. ಚೀಫ್ ಇಂಜಿನಿಯರ್ ಅವರಿಂದ ಪ್ರಿ-ಆಡಿಟ್ ಮತ್ತು ಅನುಮೋದನೆ ಬಳಿಕ ಜೇಷ್ಠತೆಯ ಆಧಾರದ ಮೇಲೆ ಪಾವತಿ ನಡೆಯುತ್ತದೆ.
ನೇರ ಮತ್ತು ಕಾಗದರಹಿತ ಪಾವತಿ
ಗುತ್ತಿಗೆದಾರರ ನೋಂದಾಯಿತ ಬ್ಯಾಂಕ್ ಖಾತೆಗಳಿಗೆ IFMS ತಂತ್ರಾಂಶದ ಮೂಲಕ OTP ಆಧಾರಿತ ದೃಢೀಕರಣದೊಂದಿಗೆ ನೇರವಾಗಿ ಹಣ ಜಮಾ ಆಗಲಿದೆ. ಹಳೆಯ ಮ್ಯಾನುವಲ್ RTGS ವ್ಯವಸ್ಥೆಗೆ ಪೂರ್ಣ ವಿರಾಮ ಬೀಳಲಿದೆ.
ಕಾಲಮಿತಿ ಮತ್ತು ಸ್ವಯಂಚಾಲಿತ ಅನುಮೋದನೆ
ಪ್ರತಿಯೊಂದು ಹಂತಕ್ಕೂ ನಿರ್ದಿಷ್ಟ ಕಾಲಮಿತಿ ನಿಗದಿಪಡಿಸಲಾಗಿದೆ. ಉದಾಹರಣೆಗೆ, ಸ್ಥಳೀಯ ಇಂಜಿನಿಯರ್‌ಗಳು ತಪಾಸಣೆ ನಡೆಸಿ ವರದಿ ನೀಡಲು 7 ದಿನಗಳ ಕಾಲಾವಕಾಶವಿದೆ. ನಿಗದಿತ ಅವಧಿಯಲ್ಲಿ ಕ್ರಮ ಕೈಗೊಳ್ಳದಿದ್ದರೆ, ಬಿಲ್ “ಸ್ವಯಂಚಾಲಿತವಾಗಿ ಅನುಮೋದನೆಗೊಂಡಿದೆ” (Deemed Approved) ಎಂದು ಪರಿಗಣಿಸಿ ಮುಂದಿನ ಹಂತಕ್ಕೆ ಸಾಗಲಿದೆ. ಯಾವುದೇ ಅಧಿಕಾರಿ ವಿಳಂಬ ಮಾಡಿ ಕಾಮಗಾರಿಯಲ್ಲಿ ಲೋಪದೋಷ ಕಂಡುಬಂದರೆ, ಆ ಅಧಿಕಾರಿಯನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ.
ಡಿಜಿಟಲ್ ಕಣ್ಗಾವಲು ಮತ್ತು ಗುಣಮಟ್ಟ
ಟೆಂಡರ್ ಹಂಚಿಕೆಯಿಂದ ಅಂತಿಮ ಪಾವತಿಯವರೆಗಿನ ಎಲ್ಲಾ ಪ್ರಕ್ರಿಯೆಗಳನ್ನು IFMS ಪ್ಲಾಟ್‌ಫಾರ್ಮ್‌ಗೆ ತರಲಾಗುತ್ತಿದೆ. ಇಂಜಿನಿಯರ್‌ಗಳು ಕಾಮಗಾರಿ ಪ್ರಗತಿಯನ್ನು ‘ರಿಯಲ್-ಟೈಮ್ ಇನ್ಫರ್ಮೇಷನ್ ಮಾನಿಟರಿಂಗ್ ಸಿಸ್ಟಮ್’ (RIMS)ನಲ್ಲಿ ದಾಖಲಿಸುವುದು ಕಡ್ಡಾಯ. ನೈಜ ಪ್ರಗತಿಗೆ ಅನುಗುಣವಾಗಿ ಮಾತ್ರ ಬಿಲ್ ವಿಲೇವಾರಿಯಾಗುತ್ತದೆ.
ಅಂತಿಮ ಭದ್ರತಾ ಠೇವಣಿ (FSD) ಬಿಡುಗಡೆಯನ್ನು ಇನ್ನು ಮುಂದೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಹಂತದಲ್ಲೇ ಪೂರ್ಣಗೊಳಿಸಬಹುದು.
ಸಾರ್ವಜನಿಕ ಪಾರದರ್ಶಕತೆ
ಪ್ರತಿ ಕಾಮಗಾರಿ ಸ್ಥಳದಲ್ಲಿ ಜವಾಬ್ದಾರ ಇಂಜಿನಿಯರ್ ಮತ್ತು ಗುತ್ತಿಗೆದಾರರ ಹೆಸರನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು. ಸಾರ್ವಜನಿಕರಿಗಾಗಿ ಆನ್‌ಲೈನ್ ಡ್ಯಾಶ್‌ಬೋರ್ಡ್ ಲಾಂಚ್ ಮಾಡಲಾಗುತ್ತಿದ್ದು, ನಗರದಲ್ಲಿ ನಡೆಯುತ್ತಿರುವ ಮತ್ತು ಪೂರ್ಣಗೊಂಡ ಕಾಮಗಾರಿಗಳ ಸ್ಥಿತಿಗತಿಯನ್ನು ನೇರವಾಗಿ ವೀಕ್ಷಿಸಬಹುದು.
ಆರ್ಥಿಕ ಶಿಸ್ತು ಕಾಪಾಡಲು ಜಿಬಿಎ ಮತ್ತು ನಗರ ಪಾಲಿಕೆಗಳಲ್ಲಿ ಪ್ರತ್ಯೇಕ ‘ಆಂತರಿಕ ಲೆಕ್ಕಪರಿಶೋಧನಾ ವಿಭಾಗ’ವನ್ನು ಸ್ಥಾಪಿಸಲಾಗುತ್ತಿದೆ.
ಈ ಸುಧಾರಣೆಗಳು ಬೆಂಗಳೂರಿನ ಐದೂ ನಗರ ಪಾಲಿಕೆಗಳ ಕಾಮಗಾರಿ ನಿರ್ವಹಣಾ ಶೈಲಿಯಲ್ಲಿ ದೊಡ್ಡ ಬದಲಾವಣೆ ತರಲಿವೆ ಎಂದು ಸಚಿವರು ತಿಳಿಸಿದ್ದಾರೆ.


