- ಕಾವೇರಿ ಬಿಕ್ಕಟ್ಟು ನಿರ್ವಹಣೆಯಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಸಂಪೂರ್ಣ ವಿಫಲ
- ಸಂಸದರ ಸಭೆ, ಸರ್ವಪಕ್ಷ ಸಭೆಯಲ್ಲಿ ವಕೀಲರಿಗೆ ಮುಖ್ಯಮಂತ್ರಿಯಿಂದ ಅಪಮಾನ!
- ಸಂಕಷ್ಟ ಸೂತ್ರ ರೂಪಿಸುವುದಕ್ಕೆ ನಿಮ್ಮ ಪ್ರಯತ್ನವೇನು ಎಂದು ಪ್ರಶ್ನಿಸಿದ ಕುಮಾರಸ್ವಾಮಿ
- ಕಾವೇರಿ ವಿಷಯ ಬಿಟ್ಟು ಖರ್ಗೆ, ವೇಣುಗೋಪಾಲ್, ಸುರ್ಜೀವಲಾ ಮನೆ ಗೇಟ್ ಕಾಯುತ್ತಿದ್ದಾರೆ!!
ಕಾವೇರಿ ವಿಚಾರದಲ್ಲಿ ನಿರಂತರವಾಗಿ ತಪ್ಪು ಹೆಜ್ಜೆಗಳನ್ನು ಇರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರವು ನಮ್ಮ ಕಾನೂನು ಪಂಡಿತರನ್ನು ಕತ್ತಲೆಯಲ್ಲಿಟ್ಟಿದೆ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.
ನವದೆಹಲಿಯಲ್ಲಿ ತುರ್ತು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರು; ರಾಜ್ಯದ ಪರವಾಗಿ ಸುಪ್ರೀಂ ಕೋರ್ಟ್ ಮತ್ತು ಪ್ರಾಧಿಕಾರ, ಸಮಿತಿಗಳ ಮುಂದೆ ರಾಜ್ಯದ ಪರವಾಗಿ ವಾದ ಮಾಡುತ್ತಿರುವ ಹಿರಿಯ ವಕೀಲರನ್ನು ಸರಕಾರ ಗೌರವಯುತವಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಅತೀವ ಬೇಸರ ವ್ಯಕ್ತಪಡಿಸಿದರು.
ನವದೆಹಲಿಯ ಕರ್ನಾಟಕ ಭವನದಲ್ಲಿ ಮುಖ್ಯಮಂತ್ರಿಗಳು ಕರೆದಿದ್ದ ಸಂಸದರ ಸಭೆಯಲ್ಲಿ ಹಿರಿಯ ವಕೀಲ ಮೋಹನ್ ಕಾತರಕಿ ಅವರಿಗೆ ಕೂರಲು ಕುರ್ಚಿಯನ್ನೇ ನೀಡಲಿಲ್ಲ. ಅವರು ಬೇಸರದಿಂದ ಸಭೆಯಿಂದ ಹೊರಟು ಹೋದ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಅದಾದ ಮೇಲೆ ಬೆಂಗಳೂರಿನ ಕೃಷ್ಣಾ ಕಚೇರಿಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಕೂಡ ಕಾನೂನು ಪಂಡಿತರನ್ನು ನಮ್ಮ ಮುಖ್ಯಮಂತ್ರಿ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಸಭೆಗೆ ಆರಂಭದಲ್ಲಿಯೇ ಅವರ ಅಭಿಪ್ರಾಯವನ್ನು ಪಡೆಯಬೇಕಿತ್ತು. ಮುಂದಾಲೋಚನೆ, ದೂರದೃಷ್ಟಿ ಇಲ್ಲದೆ ನಮ್ಮ ರಾಜ್ಯದ ಸರಕಾರ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಅದು ಸ್ಪಷ್ಟ ನಿದರ್ಶನ. ಇಂಥ ಸಭೆ ಕರೆದಾಗ ಕಾನೂನು ವಿಚಾರ, ತಾಂತ್ರಿಕ ವಿಚಾರಗಳನ್ನು ಸಭೆಯ ಮುಂದೆ ಮಂಡಿಸಬೇಕಿತ್ತು. ಮುಖ್ಯಮಂತ್ರಿಗಳು ಅದನ್ನು ಮಾಡದೇ ತಾವೇ ಸರ್ವವನ್ನೂ ಬಲ್ಲವರಂತೆ ಮಾತನಾಡುತ್ತ ಹೋದರು. ಕಾನೂನು ಪರಿಣಿತರನ್ನು ಹೀಗೆ ನಿರ್ಲಕ್ಷ್ಯ ಮಾಡಿದರೆ ಹೇಗೆ? ಎಂದು ಖಾರವಾಗಿ ಪ್ರಶ್ನಿಸಿದರು.
ಕಾವೇರಿ ನದಿ ನೀರಿನ ಬಿಕ್ಕಟ್ಟು ನಿರ್ವಹಣೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ, ಸದಾ ಎಚ್ಚರಿಕೆಯಿಂದ ಇರುವ ತಮಿಳುನಾಡು ಸರಕಾರ, ರಾಜ್ಯ ಸರಕಾರದ ವೈಫಲ್ಯಗಳನ್ನು ತನ್ನ ಅನುಕೂಲಕ್ಕೆ ಬಳಕೆ ಮಾಡಿಕೊಳ್ಳುತ್ತಿದೆ. ಈವರೆಗೂ ಆಗಿರುವ ತಪ್ಪುಗಳಿಂದ ರಾಜ್ಯ ಪಾಠ ಕಲಿಯುವ ಲಕ್ಷಣ ಕಾಣುತ್ತಿಲ್ಲ ಎಂದು ಸಚಿವರು ಕಟುವಾಗಿ ಟೀಕಿಸಿದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಹಾಗೂ ಕಾವೇರಿ ನೀರು ನಿಯಂತ್ರಣಾ ಸಮಿತಿ (CWRC) ಎರಡೂ ಕಡೆಯಿಂದ 15 ದಿನ ತಮಿಳುನಾಡಿಗೆ ದಿನವೂ ತಲಾ 12,000 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂಬ ಆದೇಶ ಬಂದಿದೆ. ಕಾವೇರಿ ನೀರು ಬಿಡುವ ವಿಚಾರದಲ್ಲಿ ಕರ್ನಾಟಕದ ಸಿದ್ದತೆಗಳಿಗಿಂತ
ತಮಿಳುನಾಡಿನ ಸಿದ್ದತೆಗಳು ಬಿರುಸಾಗಿವೆ. ಕರ್ನಾಟಕವು ಜೂನ್ ತಿಂಗಳಿಂದ ನೀರು ಬಿಡಬೇಕಿತ್ತು. ಆದರೆ ತಮಿಳುನಾಡು ಮೇ ತಿಂಗಳಲ್ಲೇ ಪ್ರಾಧಿಕಾರದ ಮುಂದೆ ಹೋಯಿತು. ಆದರೆ, ಕಾನೂನು ಹೋರಾಟಕ್ಕೆ ನಮ್ಮ ತಂಡಕ್ಕೆ ಶಕ್ತಿ ತುಂಬುವುದು ಬಿಟ್ಟು ನಮ್ಮ ಮುಖ್ಯಮಂತ್ರಿ ಕಾವೇರಿ, ಕೃಷ್ಣಾ ನದಿ ಭಾಗದ ರೈತರು ಬೆಳೆ ಹಾಕಬೇಡಿ ಎಂದು ಉಪದೇಶ ಮಾಡಿದರು. ಅದರಿಂದ ನಷ್ಟ ಆಗಿದ್ದು ನಮ್ಮ ರೈತರಿಗೆ. ಬೆಳೆದಿದ್ದ ಬೆಳೆಯನ್ನು ಕೂಡ ನೀರಿಲ್ಲದೆ ಕಳೆದುಕೊಳ್ಳಬೇಕಾಯಿತು ಎಂದು ಸಚಿವ ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.
ಕಾವೇರಿ ವಿಷಯದಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುವ ಬಗ್ಗೆ ತಮಿಳುನಾಡಿಗೂ ಮತ್ತು ನಮಗೂ ಇರುವ ವ್ಯತ್ಯಾಸಗಳ ಬಗ್ಗೆ ಹೇಳುತ್ತಿದ್ದೇನೆ. ಅದನ್ನು ಸರಿಪಡಿಸಿಕೊಂಡರೆ ಉತ್ತಮ. ಸಂಕಷ್ಟ ಸೂತ್ರದ ಬಗ್ಗೆ ಸಂಕಷ್ಟ ಸೂತ್ರದ ಬಗ್ಗೆ ಇದುವರೆಗೂ ಸುಪ್ರೀಂ ಕೋರ್ಟ್ ಯಾವುದೇ ಆದೇಶ ನೀಡಿಲ್ಲ. ಅಲ್ಲದೆ ಕಾವೇರಿ ಸಮಿತಿ ಮತ್ತು ಕಾವೇರಿ ಪ್ರಾಧಿಕಾರ ಇದರ ಬಗ್ಗೆ ಯಾವುದೇ ಕ್ರಮ ವಯಸ್ಸಿಲ್ಲ. ರಾಜ್ಯವು ಸಂಕಷ್ಟ ಸೂತ್ರ ರೂಪಿಸುವ ಬಗ್ಗೆ ಒತ್ತಡ ಹೇರಬೇಕಿತ್ತು. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗೋದಕ್ಕೂ ಮೊದಲು ಮೂರು ವರ್ಷ ಜಲಸಂಪನ್ಮೂಲ ಸಚಿವರಾಗಿದ್ದರು. ಆ ಸಂದರ್ಭದಲ್ಲಿ ಅವರು ಏನು ಮಾಡುತ್ತಿದ್ದರು ಎಂದು ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.
ಕಾವೇರಿ ವಿಷಯ ಬಿಟ್ಟು ಖರ್ಗೆ, ವೇಣುಗೋಪಾಲ್, ಸುರ್ಜೀವಲಾ ಮನೆ ಗೇಟ್ ಕಾಯುತ್ತಿದ್ದಾರೆ!!
ಇವರ ಹಣೆಬರಹ ಎಲ್ಲಿಗೆ ಬಂದು ನಿಂತಿದೆ ಎಂದರೆ, ಮೂರು ವರ್ಷಗಳ ಕಾಲ ಮುಖ್ಯಮಂತ್ರಿ ಕುರ್ಚಿಗಾಗಿ ಕಾದಾಟ ನಡೆಸಿದರು. ಇವರು ಮುಖ್ಯಮಂತ್ರಿಯಾದ ಮೇಲೆ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಬಗ್ಗೆಯೇ ಸಮಯ ವ್ಯರ್ಥವಾಯಿತು. ಇವರ ಆದ್ಯತೆ ಕಾವೇರಿಗಿಂತ ಕ್ಯಾಬಿನೆಟ್ ಮೇಲೆ ಜಾಸ್ತಿಯಾಗಿದೆ. ದಿನ ಬೆಳಗಾದರೆ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್ ಮತ್ತು ರಂದೀಪ್ ಸಿಂಗ್ ಸುರ್ಜೀವಾಲ ಅವರ ಮನೆಗಳ ಗೇಟುಗಳನ್ನು ಕಾಯುವುದೇ ಇವರ ಕೆಲಸ ಆಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು ಕೇಂದ್ರ ಸಚಿವರು.
ತಮಿಳುನಾಡಿನವರು ಆಡಳಿತಾತ್ಮಕವಾಗಿ ಮತ್ತು ಕಾನೂನಾತ್ಮಕವಾಗಿ ಎಲ್ಲಾ ರೀತಿಯಲ್ಲೂ ಕಾವೇರಿಯ ಮೇಲೆ ಪಟ್ಟು ಸಾಧಿಸುತ್ತಿದ್ದಾರೆ ಕರ್ನಾಟಕ ಸರ್ಕಾರ ಮಾತ್ರ ಕಾಂಗ್ರೆಸ್ ಆಡಳಿತದಲ್ಲಿ ನಿದ್ರೆ ಮಾಡುತ್ತಿದೆ ಎಂದು ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.
ನಮ್ಮ ರೈತರ ಹಿತ ಗಮನದಲ್ಲಿಟ್ಟುಕೊಂಡು ಎಷ್ಟು ನೀರು ಬಿಡಬೇಕು ಎಂಬ ಬಗ್ಗೆ ಪಾರದರ್ಶಕವಾಗಿ ಕೆಲಸ ಮಾಡುತ್ತೇವೆ ಎಂದು ನಮ್ಮ ಸಿಎಂ ಹೇಳಿದ್ದಾರೆ. ಪಾರದರ್ಶಕತೆ ಎಂದರೆ ತಮಿಳುನಾಡಿಗೆ ನೀರು ಬಿಡುವುದೇ? ಮಳೆ ಬಂದಿದೆ, ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ ಎಂದು ನೀರು ಬಿಡುತ್ತ ಹೋದರೆ ಮುಂದಿನ ದಿನಗಳ ಪರಿಸ್ಥಿತಿ ಏನು. ಬೀಸೋ ದೊಣ್ಣೆ ತಪ್ಪಿಸಿಕೊಳ್ಳುವ ವರ್ತನೆ ಬೇಡ ಎಂದು ನಾನು ಸರ್ವಪಕ್ಷ ಸಭೆಯಲ್ಲಿ ಒತ್ತಿ ಒತ್ತಿ ಹೇಳಿದ್ದೇನೆ. ಆದರೆ ಈ ಸರ್ಕಾರ ತನ್ನ ನಿರ್ಲಕ್ಷ ಧೋರಣೆಯಿಂದ ಪದೇ ಪದೇ ತಪ್ಪುಗಳನ್ನೇ ಮಾಡುತ್ತಿದೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.
ಆರಂಭದಿಂದಲೂ ತಮಿಳುನಾಡು ಇದೇ ರೀತಿಯ ವರಸೆಯನ್ನು ತೋರಿಸಿಕೊಂಡು ಬಂದಿದೆ. ನಾವು ನೀರು ಬಿಟ್ಟು ಕೂಡ ಅವರು ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕುತ್ತಾರೆ. ಅವರೇನು ಮಾಡುತ್ತಾರೆ ಎಂಬ ಬಗ್ಗೆ ಸರ್ಕಾರಕ್ಕೆ ಮುಂದಾಲೋಚನೆ ಇರಬೇಕು. ನೀವು ಎಷ್ಟು ಸ್ಪೀಡು ಇದ್ದೀರಿ ಎಂಬುದನ್ನು ನಾನು ಗಮನಿಸುತ್ತಾ ಬಂದಿದ್ದೇನೆ. ಮುಖ್ಯಮಂತ್ರಿಯಾದ ಮೇಲೆ ತಾವು ನವ ದೆಹಲಿಗೆ ಎಷ್ಟು ಬಾರಿ ಬಂದಿದ್ದೀರಿ? ರಾಷ್ಟ್ರ ರಾಜಧಾನಿಗೆ ಬಂದಾಗ ಕಾವೇರಿ ವಿಚಾರದಲ್ಲಿ ಯಾರನ್ನಾದರೂ ನಮ್ಮ ವಕೀಲರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು ಉಂಟಾ? ಕಾವೇರಿ ವಿಷಯವನ್ನು ಗಾಳಿಗೆ ಬಿಟ್ಟು ನಿಮ್ಮ ಕ್ಯಾಬಿನೆಟ್ಟು ಖಾತೆ ಹಂಚಿಕೆ ಇತ್ಯಾದಿ ವಿಚಾರಗಳನ್ನು ದೊಡ್ಡದು ಮಾಡಿಕೊಂಡು ಮಲ್ಲಿಕಾರ್ಜುನ ಖರ್ಗೆ ವೇಣುಗೋಪಾಲ್ ಮತ್ತು ರಂದೀಪ್ ಸಿಂಗ್ ಸುರ್ಜೀವಾಲ ಅವರ ಸುತ್ತ ಗಿರ್ಕಿ ಹೊಡೆಯುತ್ತಿದೆ. ಕರ್ನಾಟಕದ ಜತೆ ವೇಣುಗೋಪಾಲ್, ಸುರ್ಜೀವಾಲಗೂ ಏನು ಸಂಬಂಧ ಇದೆ? ನಿಮಗೆ ನಿಮ್ಮ ರಾಜಕೀಯವೇ ದೊಡ್ಡದಾಗಿದೆ, ರಾಜ್ಯದ ಹಿತಾಸಕ್ತಿ ಗೌಣವಾಗಿದೆ ಎಂದು ಮುಖ್ಯಮಂತ್ರಿ ಡಿಕೆಶಿ ವಿರುದ್ಧ ಕುಮಾರಸ್ವಾಮಿ ಅವರು ಹರಿಹಾಯ್ದರು.
ಸಾವಿರ ಕೋಟಿ ಯಾರಪ್ಪನ ದುಡ್ಡು?
ಅನಗತ್ಯವಾದ ವಿಷಯಗಳಿಗೆ ಖರ್ಚು ಮಾಡುತ್ತಿದ್ದೀರಿ. ಯಾರಪ್ಪನ ಮನೆಯ ದುಡ್ಡು ಅಂತಾ ಭಾರತ ಜೋಡೋ ಸಂಘಗಳಿಗೆ ಸಾವಿರ ಕೋಟಿ ಹಣ ಕೊಡುತ್ತಿದ್ದೀರಿ? ಕಾವೇರಿ ಕಣಿವೆ ಪ್ರದೇಶದಲ್ಲಿ ರೈತರು ಬೆಳೆ ಹಾಕಿಲ್ಲ. ಅವರಿಗೆ ಸಕಾಲಕ್ಕೆ ನೆರವಾಗಲು ನಿಮಗೆ ಯೋಗ್ಯತೆ ಇಲ್ಲ. ದೆಹಲಿಗೆ ಬಂದು ವೇಣುಗೋಪಾಲ್ ಮತ್ತು ಸುಜೇವಾಲ ಅವರ ಮನೆಗಳ ಗೇಟ್ ಕಾಯಲು ಬರುತ್ತೀರಿ. ಹಿರಿಯ ವಕೀಲರ ಜತೆ ಚರ್ಚೆ ಮಾಡುವುದಕ್ಕೆ ನಿಮಗೆ ಸಮಯ ಇಲ್ಲ, ನಿಮ್ಮ ಪಾರ್ಟಿ ನಾಯಕರ ಮನೆಗಳನ್ನು ಸುತ್ತುವುದಕ್ಕೆ ಸಮಯವಿದೆ! ಕಾವೇರಿ ಸಂಕಷ್ಟ ಸೂತ್ರ ರೂಪಿಸುವುದಕ್ಕೆ ನಿಮ್ಮ ಪ್ರಯತ್ನ ಏನಿದೆ? ವರ್ಷಕ್ಕೆ ತಮಿಳುನಾಡು ಜನ ಮೂರು ಬೆಳೆ ಬೆಳೆಯುತ್ತಾರೆ. ನಾವು ಒಂದು ಬೆಲೆಯನ್ನೂ ಬೆಳೆಯುತ್ತಿಲ್ಲ. ರಾಜಕೀಯ ಮಾಡುವುದಕ್ಕೆ ಹಾಗೂ ರೈತರ ಭೂಮಿಯನ್ನು ಕೊಳ್ಳೆ ಹೊಡೆಯುವುದಕ್ಕೆ ಸಮಯವಿದೆ, ಕಾವೇರಿ ವಿಷಯಕ್ಕೆ ಮಾತ್ರ ನಿಮಗೆ ಪುರುಸೊತ್ತೇ ಇಲ್ಲ ಎಂದು ಕುಮಾರಸ್ವಾಮಿ ಅವರು ಕಿಡಿ ಕಾರಿದರು.
ಮಳೆ ಬಂದು ಜಲಾಶಯಗಳು ತುಂಬಿದಾಗ ನೀರು ಬಿಡುತ್ತೀರಿ, ಜಲಾಶಯಗಳು ಖಾಲಿಯಾದಾಗ ತಮಿಳುನಾಡು ನೀರು ಕೇಳಿದಾಗ ಎಚ್ಚರಗೊಳ್ಳುತ್ತೀರಿ. ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವುದನ್ನು ಬಿಡಿ. ನೆರೆ ರಾಜ್ಯದ ಒತ್ತಡಕ್ಕೆ ಮಣಿಯದಂತೆ ಎಚ್ಚರ ವಹಿಸಿ. ಅಗತ್ಯವಾದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಿ. ಇಷ್ಟು ದಿನ ಕಾವೇರಿ ವಿಷಯವನ್ನು ಲಘುವಾಗಿ ಪರಿಗಣಿಸಿದ್ದೀರಿ. ಇನ್ನು ಮುಂದಾದರೂ ಇಂತಹ ತಪ್ಪು ಮಾಡಬೇಡಿ ಎಂದು ರಾಜ್ಯ ಸರ್ಕಾರಕ್ಕೆ ಸಚಿವರು ಕಿವಿ ಮಾತು ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಸಂಸತ್ ಸದಸ್ಯರಾದ ಎಂ.ಮಲ್ಲೇಶ್ ಬಾಬು, ಶಾಸಕರಾದ ಸಮೃದ್ಧಿ ಮಂಜುನಾಥ್ ಹಾಗೂ ವಿಜಯಪುರ ಜಿಲ್ಲೆಯ ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಬಿ.ಡಿ.ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.


