Homeಕರ್ನಾಟಕರೈತರಿಗೆ ಅಪಮಾನ: ವಿಶೇಷ ಅಧಿವೇಶನದಲ್ಲಿ ತಿಪ್ಪೆ ಸಾರಿಸುವ ಕೆಲಸ – ಆರ್. ಅಶೋಕ

ರೈತರಿಗೆ ಅಪಮಾನ: ವಿಶೇಷ ಅಧಿವೇಶನದಲ್ಲಿ ತಿಪ್ಪೆ ಸಾರಿಸುವ ಕೆಲಸ – ಆರ್. ಅಶೋಕ

ವಿಶೇಷ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರ ರೈತರಿಗೆ ₹2,500 ಮಾತ್ರ ಪರಿಹಾರ ನೀಡಿರುವುದು ಅನ್ನದಾತರಿಗೆ ಅಪಮಾನ ಮಾಡಿದಂತೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು “ವಿಶೇಷ ಅಧಿವೇಶನದಲ್ಲಿ ಉತ್ತಮ ಪರಿಹಾರ ಅಥವಾ ಸಾಲಮನ್ನಾ ನೀಡುತ್ತಾರೆ ಎಂದು ನಿರೀಕ್ಷಿಸಿದ್ದೆವು. ಆದರೆ ₹2,500 ನೀಡಿ ಭಿಕ್ಷುಕರಿಗೆ ನೀಡುವಂತೆ ವರ್ತಿಸಲಾಗಿದೆ. ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಎಕರೆಗೆ ₹8,000 ಪರಿಹಾರ ನೀಡಬೇಕು. ಕೋವಿಡ್ ಅಥವಾ ಯುದ್ಧದಂತಹ ಪರಿಸ್ಥಿತಿ ಈಗಿಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ಕಾಮನ್‌ಸೆನ್ಸ್ ಇರಬೇಕಿತ್ತು” ಎಂದು ಹರಿಹಾಯ್ದರು.

“ಬರಗಾಲದಲ್ಲಿ ತಾಯಿಯ ಹೃದಯ ಇಟ್ಟುಕೊಂಡು ಕೆಲಸ ಮಾಡುವುದು ಬಿಟ್ಟು ಕಟುಕರ ಬುದ್ದಿ ತೋರಿಸಲಾಗಿದೆ. ರೈತರು ಭಿಕ್ಷುಕರಲ್ಲ. ಪರಿಹಾರ ನೀಡಲು ಸಾಧ್ಯವಾಗದಿದ್ದರೆ ‘ಪಾಪರ್ ಆಗಿದ್ದೇವೆ’ ಎಂದು ಹೇಳಬೇಕು. ಈ ಅಧಿವೇಶನದ ಪರಿಣಾಮ ರೈತರ ಕೈಗೆ ಚೊಂಬು ನೀಡಿದಂತಾಗಿದೆ. ಇದನ್ನು ಜನತಾ ನ್ಯಾಯಾಲಯಕ್ಕೆ ಕೊಂಡೊಯ್ಯುತ್ತೇವೆ” ಎಂದು ಅವರು ಎಚ್ಚರಿಸಿದರು.

ಸುರಂಗ ರಸ್ತೆ ಯೋಜನೆಯನ್ನು ಸ್ಥಗಿತಗೊಳಿಸಿ ಆ ಹಣವನ್ನು ಬಳಸಿ ಎಕರೆಗೆ ₹25,000 ಪರಿಹಾರ ನೀಡಬೇಕು ಎಂದು ಸಲಹೆ ನೀಡಿದ ಅಶೋಕ “ಇಲ್ಲವಾದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 25 ಸೀಟು ಕೂಡ ಬರುವುದಿಲ್ಲ. ಕಾಂಗ್ರೆಸ್ ಶಾಸಕರು ಈಗಾಗಲೇ ತಿರುಗಿಬಿದ್ದಿದ್ದಾರೆ. ಸಿಎಂ ರೈತರ ಪರವಾಗಿರಲು ಒಳ್ಳೆಯ ಅವಕಾಶವಿದೆ. ಇಲ್ಲವಾದರೆ ಅವರು ರಿಯಲ್ ಎಸ್ಟೇಟ್ ಏಜೆಂಟ್ ಎಂಬುದು ಸ್ಪಷ್ಟವಾಗುತ್ತದೆ” ಎಂದು ಹೇಳಿದರು.

ಮೋದಿ ಸರ್ಕಾರದಿಂದ ಐದು ಪಟ್ಟು ಹೆಚ್ಚು ಪರಿಹಾರ

ಬಿಜೆಪಿ ಆಡಳಿತಾವಧಿಯಲ್ಲಿ ಕೇಂದ್ರ ಮಾರ್ಗಸೂಚಿ ದರ ₹6,800 ಇದ್ದಾಗ ರಾಜ್ಯವೂ ಅಷ್ಟೇ ನೀಡಿತ್ತು. ನೀರಾವರಿ ಜಮೀನಿಗೆ ₹13,500 ಇದ್ದರೆ ರಾಜ್ಯದಿಂದ ₹11,500 ನೀಡಲಾಗಿತ್ತು ಎಂದು ಅಶೋಕ ನೆನಪಿಸಿದರು. ಮನಮೋಹನ್ ಸಿಂಗ್ ಅವಧಿಯಲ್ಲಿ 10 ವರ್ಷದಲ್ಲಿ ಎನ್‌ಡಿಆರ್‌ಎಫ್‌ನಲ್ಲಿ ₹3,233 ಕೋಟಿ ಮತ್ತು ಎಸ್‌ಡಿಆರ್‌ಎಫ್‌ನಲ್ಲಿ ₹812 ಕೋಟಿ ನೀಡಲಾಗಿತ್ತು. ಮೋದಿ ಸರ್ಕಾರ 2015ರಿಂದ 2025ರವರೆಗೆ ₹16,071 ಕೋಟಿ ನೀಡಿದೆ. ಎಸ್‌ಡಿಆರ್‌ಎಫ್‌ನಲ್ಲಿ ₹4,500 ಕೋಟಿ ಸೇರಿ ಒಟ್ಟು ಸುಮಾರು ₹20,000 ಕೋಟಿ ಪರಿಹಾರ ಸಿಕ್ಕಿದೆ. ಕಡಿಮೆ ಪರಿಹಾರ ನೀಡಬೇಕೆಂಬ ನಿಯಮವನ್ನು ಯುಪಿಎ ಸರ್ಕಾರವೇ ಮಾಡಿತ್ತು ಎಂದು ಅವರು ಆರೋಪಿಸಿದರು.

ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ನೀಡಿದ ಪರಿಹಾರವನ್ನೇ ಈಗಲೂ ನೀಡಿದರೆ ಸಾಕು ಎಂದು ಹೇಳಿದ ಅಶೋಕ, ಸಿಎಂ ಶಿವಕುಮಾರ್ ಇನ್ನೂ ಪ್ರತಿಕ್ರಿಯೆ ನೀಡಿಲ್ಲ ಎಂದು ಟೀಕಿಸಿದರು. ಹೆಚ್ಚಿನ ಪರಿಹಾರ ನೀಡದಿದ್ದರೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ನಾಯಕರ ಕೊಲೆ ಯತ್ನ

ಚಿಕ್ಕಬಳ್ಳಾಪುರದಲ್ಲಿ ನಾಲ್ಕು ಭಯೋತ್ಪಾದಕರ ತಂಡ ಬಸನಗೌಡ ಪಾಟೀಲ್ ಯತ್ನಾಳ್, ಪ್ರತಾಪ್ ಸಿಂಹ ಮತ್ತು ಸಿ.ಟಿ. ರವಿ ಅವರನ್ನು ಕೊಲೆ ಮಾಡಲು ಸ್ಕೆಚ್ ಹಾಕಿತ್ತು. ಒಬ್ಬರನ್ನು ಬಂಧಿಸಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಇಂತಹವರ ಸಂಖ್ಯೆ ಹೆಚ್ಚಾಗಿದೆ. ಈ ನಾಯಕರಿಗೆ ಕೂಡಲೇ ಸರ್ಕಾರ ಭದ್ರತೆ ನೀಡಬೇಕು ಎಂದು ಅಶೋಕ ಆಗ್ರಹಿಸಿದರು. ಮಾಜಿ ಸಂಸದ ಪ್ರತಾಪ್ ಸಿಂಹ ಯಾವುದೇ ತಪ್ಪು ಮಾಡಿಲ್ಲ, ಜಾತಿ ನಿಂದನೆ ಮಾಡಿಲ್ಲ ಎಂದು ಹೇಳಿದರು.

ಆರ್ಥಿಕ ಸ್ಥಿತಿ ಮತ್ತು ಇತರ ಟೀಕೆ

ಹಣದ ಕೊರತೆ ಬಗ್ಗೆ ಆರ್ಥಿಕ ಇಲಾಖೆಯ ತಿಳಿವಳಿಕೆ ಪತ್ರ ಸೋರಿಕೆಯಾಗಿರುವುದು ಸಿದ್ದರಾಮಯ್ಯ ಅವರನ್ನು ಮುಜುಗರಕ್ಕೀಡುಮಾಡಲು ಸಿಎಂ ಶಿವಕುಮಾರ್ ಅಥವಾ ಮುಖ್ಯ ಕಾರ್ಯದರ್ಶಿಯಿಂದಲೇ ಆಗಿರಬೇಕು ಎಂದು ಅಶೋಕ ಆರೋಪಿಸಿದರು. ಸರ್ಕಾರ ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳುತ್ತಿದೆ. ₹2 ಲಕ್ಷ ಕೋಟಿ ಬಿಲ್ ಬಾಕಿ ಇದೆ. ಹೊಸ ಘೋಷಣೆಗಳು ಮಾತ್ರ, ಯಾವುದೂ ಈಡೇರಿಲ್ಲ. ಕಳೆದ ನೂರು ದಿನಗಳಲ್ಲಿ ಶೂನ್ಯ ಸಾಧನೆ. ಕಾಂಗ್ರೆಸ್ ಶಾಸಕರೇ ಸರ್ಕಾರದ ಮೇಲೆ ಬೇಸರಗೊಂಡಿದ್ದಾರೆ ಎಂದು ಹೇಳಿದರು.

ಬರದ ಚರ್ಚೆಯಲ್ಲಿ ಸಿಎಂ ಶಿವಕುಮಾರ್ “ಶಾಸಕರು ಎರಡು ಮದುವೆಯಾಗಿದ್ದಾರೆ” ಎಂದು ಹೇಳಿದ್ದು ಅನವಶ್ಯಕವಾಗಿತ್ತು. ಇದು ಎಲ್ಲರ ಮೇಲೆ ತೂಗುಗತ್ತಿಯಾದಂತಾಗಿದೆ ಎಂದು ಅಶೋಕ ಟೀಕಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments