ತಮಿಳುನಾಡಿಗೆ ಪ್ರತಿದಿನ 12 ಸಾವಿರ ಕ್ಯೂಸೆಕ್ ನೀರು ಬಿಡಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಆದೇಶ ಅತ್ಯಂತ ಖಂಡನಾರ್ಯ. ಇದು ಕರ್ನಾಟಕ ಮತ್ತು ಕನ್ನಡಿಗರಿಗೆ ಮರಣಶಾಸನ ಎಂದು ಜೆಡಿಎಸ್ ಟೀಕಿಸಿದೆ.
ಈಗಾಗಲೇ ಕರ್ನಾಟಕ ಬರದಿಂದ ಕಂಗೆಟ್ಟಿರುವ ಸಂಕಷ್ಟದ ಪರಿಸ್ಥಿತಿಯಲ್ಲಿ, ಮತ್ತೆ 15 ದಿನಗಳಲ್ಲಿ 16 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ಕನ್ನಡಿಗರು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. CWMA ಆದೇಶವನ್ನು ಪ್ರತಿಯೊಬ್ಬ ಕನ್ನಡಿಗರು ಒಕ್ಕೊರಲಿನಿಂದ ವಿರೋಧಿಸಬೇಕಿದೆ ಎಂದು ಎಕ್ಸ್ ಖಾತೆಯಲ್ಲಿ ಬರೆಯಲಾಗಿದೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸ್ಸು ಮತ್ತು ತೀರ್ಪುಗಳು ಪ್ರತಿ ಬಾರಿಯೂ ಕರ್ನಾಟಕದ ಪಾಲಿಗೆ ಕಂಟಕವಾಗುತ್ತಲೇ ಬಂದಿವೆ. ಮೊನ್ನೆಯಷ್ಟೇ ನಿತ್ಯ 3,500 ಕ್ಯೂಸೆಕ್‌ನಂತೆ 15 ದಿನಗಳ ಕಾಲ ನೀರು ಹರಿಸಲು CWMA ತೀರ್ಪು ನೀಡಿತ್ತು. ಈಗ ಮತ್ತೆ 16 ಟಿಎಂಸಿ ನೀರು ತಮಿಳುನಾಡಿಗೆ ಬಿಡಲು ಆದೇಶಿರುವುದು ಅವೈಜ್ಞಾನಿಕ ಮತ್ತು ಅನ್ಯಾಯ ಎಂದು ವಾಗ್ದಾಳಿ ನಡೆಸಿದೆ.
ರಾಜ್ಯದಲ್ಲಿ ಮಳೆಯ ತೀವ್ರ ಕೊರತೆಯಿಂದ ನಮಗೇ ನೀರಿಲ್ಲ. ನಮ್ಮ ರೈತರಿಗೆ ಬೆಳೆ ಬೆಳೆಯಲು ಜಲಾಶಯಗಳಲ್ಲಿ ನೀರಿಲ್ಲ. ಕುಡಿಯುವ ನೀರಿಗೂ ಬರ ಎದುರಾಗಿರುವ ಇಂತಹ ಕಠಿಣ ಸನ್ನಿವೇಶದಲ್ಲಿ ತಮಿಳುನಾಡಿಗೆ ನೀರು ಹರಿಸುವಂತೆ ಹೇಳುವುದು ಯಾವ ನ್ಯಾಯ? ಹೊಣೆಗೇಡಿ ರಾಜ್ಯ ಸರ್ಕಾರಕ್ಕೆ ಇದಾವುದರ ಬಗ್ಗೆಯೂ ಚಿಂತೆ ಇಲ್ಲದಾಗಿದೆ ಎಂದು ಟೀಕಿಸಿದೆ.
ಆದರೆ ಅತ್ತ ಜೆಡಿಎಸ್ ನಾಯಕ ಮತ್ತು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಮಾತನಾಡಿ, ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರದ ನಡೆಯನ್ನು ಟೀಕಿಸಿರುವ ಅವರು, ಸುಪ್ರೀಂಕೋರ್ಟ್ ಆದೇಶ ಪಾಲಿಸುವುದು ರಾಜ್ಯಕ್ಕೆ ಅನಿವಾರ್ಯ. ಈ ವರ್ಷ ಮಳೆ ಕೊರತೆಯಾಗಲಿದೆ ಎನ್ನುವ ಮಾಹಿತಿ ಮೊದಲೇ ಇತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಬಾರಿ ಈ ವಿಷಯ ಪ್ರಸ್ತಾಪಿಸಿದ್ದರು. ಆದಾಗ್ಯೂ, ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವ ವಿಚಾರದಲ್ಲಿ ತಮಿಳುನಾಡಿಗೆ ಹೋಲಿಸಿದರೆ, ರಾಜ್ಯದಲ್ಲಿ ಸರಿಯಾದ ತಯಾರಿ ಆಗಿಲ್ಲ ಎಂದು ಹೇಳಿದ್ದಾರೆ.


