ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಕಸವನಹಳ್ಳಿ ವಾರ್ಡ್‌ನ ಕೈಕೊಂಡ್ರಹಳ್ಳಿ ಹಾಗೂ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಕಸ ವಿಲೇವಾರಿ ಕಾರ್ಯವೈಖರಿ, ಕಸ ಸಂಗ್ರಹಣಾ ವಾಹನಗಳ ಸಂಚಾರ ಹಾಗೂ ಸ್ಥಳೀಯ ನಿವಾಸಿಗಳ ಮುಂದಾಳತ್ವ ಹಾಗೂ ಸಮುದಾಯ ತ್ಯಾಜ್ಯ ಸಂಸ್ಕರಣಾ ವ್ಯವಸ್ಥೆಗಳನ್ನು ಪಾಲಿಕೆ ಆಯುಕ್ತರಾದ ಶ್ರೀ ಕೆ. ಎನ್. ರಮೇಶ್ ರವರು ಇಂದು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಸಮಗ್ರವಾಗಿ ಪರಿಶೀಲನೆ ನಡೆಸಿದರು.
ಕಸ ಸಂಗ್ರಹಣಾ ಕಾರ್ಯ ಹಾಗೂ ಹಾಜರಾತಿ ಪರಿಶೀಲನೆ
ಕಸವನಹಳ್ಳಿ ವಾರ್ಡ್ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆಗಾಗಿ ನಿಯೋಜಿಸಲಾಗಿರುವ ಒಟ್ಟು 34 ಆಟೋಗಳು ನಿಗದಿತ ಸಮಯಕ್ಕೆ ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಹಾಜರಾತಿ ಪುಸ್ತಕ ಹಾಗೂ ಬಾರ್‌ಕೋಡ್ ಆಧಾರಿತ ಡಿಜಿಟಲ್ ಸ್ಕ್ಯಾನಿಂಗ್ ವ್ಯವಸ್ಥೆಯನ್ನು ಆಯುಕ್ತರು ಪರಿಶೀಲಿಸಿದರು. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನಿತ್ಯ ನಿಗದಿತ ಸಮಯಕ್ಕೆ ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬ್ಲ್ಯಾಕ್ ಸ್ಪಾಟ್ ಮುಕ್ತ ಪ್ರದೇಶಕ್ಕೆ ಸಾಹಸ್ ಎನ್‌ಜಿಒ ಸಹಯೋಗ
ಪ್ರತಿ ನಿತ್ಯ ಕೈಕೊಂಡ್ರಳ್ಳಿಯಲ್ಲಿ ಕಸ ಸಂಗ್ರಹಣೆ ನಿರಂತರವಾಗಿದ್ದು, ಇದರಿಂದ ಯಲ್ಲಮ್ಮ ದೇವಸ್ಥಾನದ ಸುತ್ತಮುತ್ತ ಇದ್ದಂತಹ ಬ್ಲ್ಯಾಕ್ ಸ್ಪಾಟ್ಗಳು ಸಂಪೂರ್ಣ ಕಡಿಮೆಯಾಗಿದೆ ಆದರೂ ಸಹ ಕೆಲವೊಬ್ಬರು ಸಾರ್ವಜನಿಕ ಪ್ರದೇಶಗಳಲ್ಲಿ ಕಸ ಬಿಸಾಕುತ್ತಿದ್ದು ಅಂತವರುಗಳಿಗೆ ಮಾರ್ಷಲ್ ಗಳು ದಂಡ ವಿಧಿಸುವಂತೆ ಸೂಚಿಸಿದರು. ‘ಸಾಹಸ್’ ಎನ್‌ಜಿಒ ಈ ವ್ಯಾಪ್ತಿಯಲ್ಲಿ ಕಸ ವಿಂಗಡಣೆ ಹಾಗೂ ವಿಲೇವಾರಿ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿರುವುದು ಉತ್ತಮ ವಿಷಯ ಎಂದು ಆಯುಕ್ತರು ತಿಳಿಸಿದರು.
ಕೈಕೊಂಡ್ರಳ್ಳಿ ಬಡಾವಣೆಗಳಲ್ಲಿ ಸಮುದಾಯ ಕಾಂಪೋಸ್ಟಿಂಗ್ ಆಯುಕ್ತರ ಮೆಚ್ಚುಗೆ
ಕೈಕೊಂಡ್ರಹಳ್ಳಿಯ ಜಿಆರ್ ಲೇಔಟ್‌ಗೆ ಭೇಟಿ ನೀಡಿದ ಆಯುಕ್ತರು, ಅಲ್ಲಿನ ಸುಮಾರು 30 ಮನೆಗಳು ಒಗ್ಗೂಡಿ ಲೇಔಟ್‌ನ ನಿವಾಸಿಗಳಾದ ಪ್ರವೀಣ್, ಪ್ರಶಾಂತ್ ಹಾಗೂ ನಾಗೇಂದ್ರ ಅವರ ನೇತೃತ್ವದಲ್ಲಿ ದಿನಂಪ್ರತಿ ಸುಮಾರು 15 ರಿಂದ 18 ಕೆಜಿ ಹಸಿ ತ್ಯಾಜ್ಯವನ್ನು ಸ್ಥಳದಲ್ಲೇ ಆನ್-ಸೈಟ್ ಕಾಂಪೋಸ್ಟಿಂಗ್ ಮೂಲಕ ಸಂಸ್ಕರಿಸುತ್ತಿರುವುದನ್ನು ಕಂಡು ಆಯುಕ್ತರು ಶ್ಲಾಘಿಸಿದರು.
ಇನ್ನೊಂದೆಡೆ ರಿಲಯಬಲ್ ಲೈಫ್‌ಸ್ಟೈಲ್ ಲೇಔಟ್‌ನ ನಿವಾಸಿಗಳಾದ ರಮೇಶ್, ಮಹೇಶ್, ಶ್ರೀಮತಿ ದಿವ್ಯ ರವರ ಉಸ್ತುವಾರಿಯಲ್ಲಿ ಬಡಾವಣೆಯಲ್ಲಿನ 350 ಮನೆಗಳಿಂದ ಹಸಿ ಮತ್ತು ಒಣ ಕಸವನ್ನು ಮೂಲದಲ್ಲೇ ವಿಂಗಡಿಸಿ ಬಡಾವಣೆಗೆ ಸೇರಿದ ಖಾಲಿ ಪ್ರದೇಶದಲ್ಲಿ ತ್ಯಾಜ್ಯ ಸಂಸ್ಕರಣೆ ಹಾಗೂ ಕಾಂಪೋಸ್ಟಿಂಗ್ ಅನ್ನು ನಿವಾಸಿಗಳ ಸಂಘ ಹಾಗೂ NGO ಗಳ ಸಹಯೋಗದಲ್ಲಿ ಮಾಡಲಾಗುತ್ತಿರುವುದನ್ನು ಪರಿಶೀಲಿಸಿದ ಆಯುಕ್ತರು ಈ ನಿವಾಸಿಗಳ ನಾಗರೀಕ ಪ್ರಜ್ಞೆ ಹಾಗೂ ಕಸ ಸಂಸ್ಕರಣೆ ಹಾಗೂ ವಿಲೇವಾರಿ ಪ್ರಯತ್ನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಬಡಾವಣೆ ಮರಗಳಿಗೆ ಸಾವಯವ ಗೊಬ್ಬರ ಬಳಕೆ
ಹಲವಾರು ತಿಂಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಘಟಕದಲ್ಲಿ ಉತ್ಪತ್ತಿಯಾಗುವ ಉತ್ತಮ ಗುಣಮಟ್ಟದ ಕಾಂಪೋಸ್ಟ್ ಗೊಬ್ಬರಕ್ಕೆ ಸ್ಥಳೀಯವಾಗಿ ಭಾರಿ ಬೇಡಿಕೆ ವ್ಯಕ್ತವಾಗಿದೆ. ಈ ಸಾವಯವ ಗೊಬ್ಬರವನ್ನು ಲೇಔಟ್‌ನಲ್ಲಿ ನೆಡಲಾಗಿರುವ ಹಣ್ಣಿನ ಮರಗಳು, ಗಿಡಗಳು ಹಾಗೂ ಹಸಿರೀಕರಣಕ್ಕೆ ಬಳಕೆ ಮಾಡಲಾಗುತ್ತಿದ್ದು, ಇದು ಇತರ ಬಡಾವಣೆಗಳಿಗೂ ಮಾದರಿಯಾಗಿದೆ ಎಂದು ಆಯುಕ್ತರು ತಿಳಿಸಿದರು.
ಒಣ ಕೊಂಬೆ ಶ್ರೆಡ್ಡಿಂಗ್ ಯಂತ್ರದ ಚಿಂತನೆ
ಲೇಔಟ್‌ನಲ್ಲಿ ಉದುರುವ ಒಣ ಎಲೆಗಳ ನಿರ್ವಹಣೆಗಾಗಿ ಪ್ರತ್ಯೇಕ ‘ಲೀಫ್ ಕಾಂಪೋಸ್ಟರ್’ ಅಳವಡಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಎಲೆಗಳನ್ನು ಪುಡಿ ಮಾಡಲು ಶ್ರೆಡ್ಡಿಂಗ್ ಯಂತ್ರವನ್ನು ಅಳವಡಿಸಿಕೊಳ್ಳುವ ಮೂಲಕ ಸಂಪೂರ್ಣ ಶೂನ್ಯ ತ್ಯಾಜ್ಯ ಲೇಔಟ್ ಆಗಿ ಪರಿವರ್ತಿಸಲು ಅಸೋಸಿಯೇಷನ್ ಮುಂದಾಗಿದೆ. ಇಂತಹ ಜನಪರ ಹಾಗೂ ಪರಿಸರಸ್ನೇಹಿ ಕಾರ್ಯಗಳಿಗೆ ಪಾಲಿಕೆಯಿಂದ ಅಗತ್ಯ ಸಹಕಾರ ನೀಡುವುದಾಗಿ ಆಯುಕ್ತರು ಹೇಳಿದರು.
ಈ ವೇಳೆ ‘ಸಾಹಸ್’ ಎನ್‌ಜಿಒ ಪ್ರತಿನಿಧಿಗಳು ಹಾಗೂ ಲೇಔಟ್ ನಿವಾಸಿಗಳ ಸಂಘದ ಪದಾಧಿಕಾರಿಗಳು ಹಾಗೂ ಪಾಲಿಕೆಯ ಆರೋಗ್ಯ ಪರಿವೀಕ್ಷಕರು ಹಾಗೂ ಮಾರ್ಷಲ್ ಉಪಸ್ಥಿತರಿದ್ದರು.


