ನೇಕಾರರಿಗೆ ನೇರ ಮಾರುಕಟ್ಟೆ ಒದಗಿಸುವ ಮೇಳಗಳಿಗೆ ಹೆಚ್ಚಿನ ಉತ್ತೇಜನ
ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ‘ಗಾಂಧಿ ಬುನ್ಕರ್ ಮೇಳ’ ರಾಷ್ಟ್ರೀಯ ಕೈಮಗ್ಗ ಮೇಳ–2026ಕ್ಕೆ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, 14 ದಿನಗಳಲ್ಲಿ ಒಟ್ಟು ₹1.54 ಕೋಟಿ ವಹಿವಾಟು ನಡೆದಿದೆ ಎಂದು ಸಕ್ಕರೆ ಮತ್ತು ಜವಳಿ ಸಚಿವ ರುದ್ರಪ್ಪ ಲಮಾಣಿ ತಿಳಿಸಿದ್ದಾರೆ.
ಭಾರತ ಸರ್ಕಾರದ ಜವಳಿ ಸಚಿವಾಲಯದ ರಾಷ್ಟ್ರೀಯ ಕೈಮಗ್ಗ ಅಭಿವೃದ್ಧಿ ಕಾರ್ಯಕ್ರಮ (NHDP) ಅಡಿಯಲ್ಲಿ, ಕರ್ನಾಟಕ ಸರ್ಕಾರದ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಯೋಗದಲ್ಲಿ ಬೆಂಗಳೂರಿನ ಜಾಲಹಳ್ಳಿಯ ಹೆಚ್ಎಂಟಿ ಮೈದಾನದಲ್ಲಿ ಆಗಸ್ಟ್ 28ರಿಂದ ಸೆಪ್ಟೆಂಬರ್ 10ರವರೆಗೆ ರಾಷ್ಟ್ರೀಯ ಕೈಮಗ್ಗ ಮೇಳದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಸಚಿವರು ಮಾತನಾಡಿದರು.
“14 ದಿನಗಳಲ್ಲಿ ₹1.54 ಕೋಟಿ ವಹಿವಾಟು ನಡೆದಿರುವುದು ಕೈಮಗ್ಗ ಉತ್ಪನ್ನಗಳ ಬಗ್ಗೆ ಜನರಲ್ಲಿ ಇರುವ ವಿಶ್ವಾಸ ಮತ್ತು ಬೇಡಿಕೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ನೇಕಾರರು ತಮ್ಮ ಉತ್ಪನ್ನಗಳನ್ನು ಮಧ್ಯವರ್ತಿಗಳ ಅವಲಂಬನೆ ಇಲ್ಲದೆ ನೇರವಾಗಿ ಗ್ರಾಹಕರಿಗೆ ತಲುಪಿಸುವಂತಹ ಮಾರುಕಟ್ಟೆ ವೇದಿಕೆಗಳನ್ನು ಇನ್ನಷ್ಟು ಬಲಪಡಿಸುವುದು ಸರ್ಕಾರದ ಉದ್ದೇಶವಾಗಿದೆ” ಎಂದು ಹೇಳಿದರು.
ಕೈಮಗ್ಗ ಕ್ಷೇತ್ರ ಕೇವಲ ನಮ್ಮ ಪರಂಪರೆ ಮತ್ತು ಸಂಸ್ಕೃತಿಯ ಪ್ರತೀಕವಷ್ಟೇ ಅಲ್ಲದೆ, ರಾಜ್ಯದ ಸಾವಿರಾರು ನೇಕಾರ ಕುಟುಂಬಗಳ ಜೀವನೋಪಾಯದ ಪ್ರಮುಖ ಮೂಲವಾಗಿದೆ. ಕೈಮಗ್ಗ ಉತ್ಪನ್ನಗಳಿಗೆ ನಿರಂತರ ಮಾರುಕಟ್ಟೆ ಒದಗಿಸುವುದು, ನೇಕಾರರ ಆದಾಯ ಹೆಚ್ಚಿಸುವುದು ಹಾಗೂ ಹೊಸ ಗ್ರಾಹಕ ವರ್ಗಗಳನ್ನು ಕೈಮಗ್ಗದತ್ತ ಆಕರ್ಷಿಸುವುದು ಇಂತಹ ಮೇಳಗಳ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
80 ಮಳಿಗೆಗಳು – ದೇಶದ ಕೈಮಗ್ಗ ವೈವಿಧ್ಯ ಒಂದೇ ವೇದಿಕೆಯಲ್ಲಿ
ಮೇಳದಲ್ಲಿ ಒಟ್ಟು 80 ಮಳಿಗೆಗಳು ಭಾಗವಹಿಸಿದ್ದವು. ಅವುಗಳಲ್ಲಿ 50 ಮಳಿಗೆಗಳು ಹೊರರಾಜ್ಯಗಳಿಂದ ಹಾಗೂ 30 ಮಳಿಗೆಗಳು ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ್ದವು.
ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತೆಲಂಗಾಣ, ಬಿಹಾರ, ಮಹಾರಾಷ್ಟ್ರ, ರಾಜಸ್ಥಾನ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ ಸೇರಿದಂತೆ ಹಲವು ರಾಜ್ಯಗಳ ಕೈಮಗ್ಗ ಸಂಸ್ಥೆಗಳು ಹಾಗೂ ನೇಕಾರರು ತಮ್ಮ ವಿಶಿಷ್ಟ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಿದರು.
ಕರ್ನಾಟಕದ ಮೊಳಕಾಲ್ಮುರು, ಇಳಕಲ್, ಉಡುಪಿ ಸೇರಿದಂತೆ ವಿವಿಧ ಪರಂಪರೆಯ ಸೀರೆಗಳು, ಗುಳೇದಗುಡ್ಡ ಖಣ, ನವಲಗುಂದ ಜಮಖಾನೆ, ಕಸೂತಿ ಉತ್ಪನ್ನಗಳು, ರೇಷ್ಮೆ ಮತ್ತು ಹತ್ತಿ ವಸ್ತ್ರಗಳು, ಟವೆಲ್ಗಳು, ಕಂಬಳಿಗಳು ಹಾಗೂ ಇತರೆ ಕೈಮಗ್ಗ ಮತ್ತು ಕರಕುಶಲ ಉತ್ಪನ್ನಗಳು ಗ್ರಾಹಕರ ಗಮನ ಸೆಳೆದವು.
₹45 ಲಕ್ಷ ಕೇಂದ್ರ ಅನುದಾನ
ರಾಷ್ಟ್ರೀಯ ಕೈಮಗ್ಗ ಮೇಳದ ಆಯೋಜನೆಗಾಗಿ ಕೇಂದ್ರ ಸರ್ಕಾರದಿಂದ ₹45 ಲಕ್ಷ ಅನುದಾನ ಒದಗಿಸಲಾಗಿತ್ತು. ರಾಜ್ಯ ಮತ್ತು ಹೊರರಾಜ್ಯಗಳ ನೇಕಾರರು, ಕೈಮಗ್ಗ ಸಹಕಾರ ಸಂಘಗಳು ಹಾಗೂ ಉತ್ಪಾದಕರಿಗೆ ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಪರಿಚಯಿಸಿ ಮಾರಾಟ ಮಾಡಲು ಮೇಳವು ದೊಡ್ಡ ವೇದಿಕೆಯನ್ನು ಕಲ್ಪಿಸಿತು.
“ನೇಕಾರರಿಗೆ ಉತ್ಪಾದನೆಯಷ್ಟೇ ಮುಖ್ಯವಾದದ್ದು ಮಾರುಕಟ್ಟೆ. ಉತ್ತಮ ಉತ್ಪನ್ನಕ್ಕೆ ಉತ್ತಮ ಮಾರುಕಟ್ಟೆ ಸಿಕ್ಕಾಗ ಮಾತ್ರ ನೇಕಾರರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಇಂತಹ ಮೇಳಗಳ ಮೂಲಕ ಗ್ರಾಹಕರು ನೇರವಾಗಿ ನೇಕಾರರಿಂದ ಉತ್ಪನ್ನ ಖರೀದಿಸುವ ಸಂಸ್ಕೃತಿಯನ್ನು ಬೆಳೆಸಬೇಕು” ಎಂದು ಸಚಿವರು ಕರೆ ನೀಡಿದರು.
ಮೇಳದಲ್ಲಿ ಉತ್ತಮ ವಹಿವಾಟು ನಡೆಸಿದ ಹಾಗೂ ಗುಣಮಟ್ಟದ ಕೈಮಗ್ಗ ಉತ್ಪನ್ನಗಳನ್ನು ಪ್ರದರ್ಶಿಸಿದ ನೇಕಾರರು ಮತ್ತು ಸಂಸ್ಥೆಗಳನ್ನು ಪ್ರೋತ್ಸಾಹಿಸಲಾಯಿತು. ಕೈಮಗ್ಗ ಉತ್ಪನ್ನಗಳನ್ನು ಖರೀದಿಸುವ ಮೂಲಕ ನೇಕಾರರನ್ನು ಬೆಂಬಲಿಸುವುದು ನಮ್ಮ ಪರಂಪರೆಯನ್ನು ಉಳಿಸುವುದರ ಜೊತೆಗೆ ಗ್ರಾಮೀಣ ಆರ್ಥಿಕತೆಗೆ ನೇರ ಬೆಂಬಲ ನೀಡಿದಂತಾಗುತ್ತದೆ ಎಂದು ಸಚಿವ ರುದ್ರಪ್ಪ ಲಮಾಣಿ ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾಗೇಂದ್ರ ಕುಮಾರ್, ಕಾವೇರಿ ಹ್ಯಾಂಡ್ಲೂಮ್ಸ್ ಅಧ್ಯಕ್ಷ ಬಿ.ಜೆ. ಗಣೇಶ್ ಹಾಗೂ ಕಾವೇರಿ ಹ್ಯಾಂಡ್ಲೂಮ್ಸ್ ವ್ಯವಸ್ಥಾಪಕ ನಿರ್ದೇಶಕಿ ಸೌಮ್ಯ. ಎಂ ಸೇರಿದಂತೆ ಕೈಮಗ್ಗ ಮತ್ತು ಜವಳಿ ಇಲಾಖೆಯ ಹಿರಿಯ ಅಧಿಕಾರಿಗಳು, ವಿವಿಧ ಕೈಮಗ್ಗ ಸಹಕಾರ ಸಂಘಗಳ ಪ್ರತಿನಿಧಿಗಳು, ನೇಕಾರರು ಹಾಗೂ ಉದ್ಯಮಿಗಳು ಉಪಸ್ಥಿತರಿದ್ದರು.


