Homeಕರ್ನಾಟಕಜೆಜೆಎಂ ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿ ಇಲ್ಲ: ಈಶ್ವರ ಖಂಡ್ರೆ

ಜೆಜೆಎಂ ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿ ಇಲ್ಲ: ಈಶ್ವರ ಖಂಡ್ರೆ

ಗ್ರಾಮೀಣ ಕುಡಿಯುವ ನೀರಿಗೆ 67 ಕೋಟಿ ರೂ. ಯೋಜನೆ

ಜಲ ಜೀವನ ಅಭಿಯಾನದ ಅಡಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗಳು ಅವಧಿ ಮುಗಿದರೂ ಪೂರ್ಣವಾಗದಿರುವ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಂಗಳೂರಿನ ಇಲಾಖೆಯ ಆಯುಕ್ತಾಲಯದಲ್ಲಿಂದು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕೇಂದ್ರ ಸರ್ಕಾರದ ಮಾನದಂಡಗಳ ಕಟ್ಟುನಿಟ್ಟಿನ ಪಾಲನೆ ಆಗದಿದ್ದರೆ, ರಾಜ್ಯದ ಮೇಲೆ ಆರ್ಥಿಕ ಹೊರೆ ಬೀಳುತ್ತದೆ. ಹೀಗಾಗಿ ಎಲ್ಲ ಕಾಮಗಾರಿಗಳನ್ನೂ ನಿಗದಿತ ಗಡುವಿನೊಳಗೆ ಪೂರ್ಣಗೊಳಿಸಲೇಬೇಕು ಎಂದು ಸ್ಪಷ್ಟ ಸೂಚನೆ ನೀಡಿದರು.

ಏಕಗ್ರಾಮ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ 67 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. 39 ಸಾವಿರ ಏಕ ಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ 130ಕ್ಕೂ ಅಧಿಕ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಅನುಷ್ಠಾನವಾಗುತ್ತಿದೆಯಾದರೂ ಕಾಮಗಾರಿ ವಿಳಂಬವಾಗಿರುವ ಕಾರಣ ಯೋಜನೆ ಉದ್ದೇಶವೇ ವಿಫಲವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಎಲ್ಲ ಉಳಿಕೆ ಕಾಮಗಾರಿಗಳನ್ನು ಮುಂದಿನ ವರ್ಷ ಮಾರ್ಚ್ ಅಂತ್ಯದೊಳಗೆ ಮುಗಿಸಲೇಬೇಕು ಎಂದು ಗಡುವು ನೀಡಿದ ಈಶ್ವರ ಖಂಡ್ರೆ, ಈ ಬಗ್ಗೆ ಗುತ್ತಿಗೆದಾರರಿಂದ ಮುಚ್ಚಳಿಕೆ ಬರೆಸಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.ಈಗ ನಡೆಯುತ್ತಿರುವ ಹಲವು ಕಾಮಗಾರಿಗಳಿಗೆ ನಿಗದಿ ಮಾಡಲಾಗಿದ್ದ ಅವಧಿ ಮುಗಿದಿದ್ದರೂ, ಕಾಮಗಾರಿ ಪೂರ್ಣಗೊಂಡಿಲ್ಲ. ಅಧಿಕಾರಿಗಳು ಏನು ಮಾಡುತ್ತಿದ್ದೀರಿ. ಕೇವಲ ನೋಟಿಸ್ ನೀಡಿದರೆ ಸಾಲದು. ಅಂತಿಮ ನೋಟಿಸ್ ನೀಡಿ ಕ್ರಮ ವಹಿಸಿ ಎಂದು ಗುಡುಗಿದರು.

ಗುತ್ತಿಗೆದಾರರಿಗೆ ನೋಟಿಸ್ ನೀಡಲು ಸೂಚನೆ

ಏಕಗ್ರಾಮ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರರು ಅವಧಿ ಮುಗಿದರೂ ಕಾಮಗಾರಿ ಮುಗಿಸದೇ ಇದ್ದರೆ ಅವರಿಗೆ ನೋಟಿಸ್ ನೀಡಿ ನಿರ್ದಿಷ್ಟ ದಿನದೊಳಗೆ ಪೂರ್ಣಗೊಳಿಸಲು ತಿಳಿಸಿ. ಇಲ್ಲವಾದರೆ, ನಿಯಮಾನುಸಾರ ಅವರ ವಿರುದ್ಧ ಕ್ರಮ ಜರುಗಿಸಿ, ಆ ಗುತ್ತಿಗೆಯನ್ನೇ ರದ್ದು ಮಾಡಿ ಬೇರೆಯವರಿಗೆ ಕಾಮಗಾರಿ ವಹಿಸಿ ಎಂದು ಸೂಚಿಸಿದರು.

ಸಂಬಂಧಿತ ಅಧಿಕಾರಿಗಳು, ಎಂಜಿನಿಯರುಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಏಕಗ್ರಾಮ ಮತ್ತು ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಗಳ ಪ್ರಗತಿಯನ್ನು ವಾರಕ್ಕೆ ಒಮ್ಮೆಯಾದರೂ ಖುದ್ದು ಪರಿಶೀಲಿಸಬೇಕು. ಕಾಮಗಾರಿ ವಿಳಂಬವಾಗುತ್ತಿದ್ದರೆ ಆಯಾ ಹಂತದಲ್ಲೇ ನೋಟಿಸ್ ನೀಡಿ, ತ್ವರಿತವಾಗಿ ಮತ್ತು ಗುಣಮಟ್ಟದ ಕಾಮಗಾರಿ ನಡೆಯುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಕರ್ತವ್ಯಲೋಪ ಎಸಗಿದ ಎಂಜಿನಿಯರುಗಳ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಯಾವುದೇ ಕಾರಣಕ್ಕೂ ಕಾಮಗಾರಿಯ ಗುಣಮಟ್ಟದಲ್ಲಿ ರಾಜೀ ಆಗಬಾರದು. ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ದೂರುಗಳು ಬಂದರೆ, ನಿಷ್ಪಕ್ಷಪಾತ ತನಿಖೆ ನಡೆಸಿ ಗುತ್ತಿಗೆದಾರರ ವಿರುದ್ಧವಷ್ಟೇ ಅಲ್ಲ, ನಿರ್ವಹಿಸಿದ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಿ ಎಂದು ನಿರ್ದೇಶನ ನೀಡಿದರು.

ಕುಡಿಯುವ ನೀರಿನ ಯೋಜನೆ ಕಾಮಗಾರಿಗಳಲ್ಲಿ ವಿಳಂಬವಾದರೆ ಅದರ ಮೂಲ ಉದ್ದೇಶವೇ ವಿಫಲವಾಗುತ್ತದೆ. ಸರ್ಕಾರದ ವಿರುದ್ಧ ಜನಾಭಿಪ್ರಾಯವೂ ಪ್ರತೀಕೂಲವಾಗುತ್ತದೆ. ಅರಣ್ಯಭೂಮಿ, ರಾಷ್ಟ್ರೀಯ ಹೆದ್ದಾರಿಗಳನ್ನು ದಾಟಿ ಕೊಳವೆ ಮಾರ್ಗ ಅಳವಡಿಸುವ ಯೋಜನೆಗಳಿದ್ದರೆ ವಿಳಂಬ ಆಗುತ್ತದೆ. ಅಂತಹ ಸಮಸ್ಯೆ ಬಗೆಹರಿಸಲು ಪ್ರತ್ಯೇಕ ಸಭೆ ನಡೆಸಲಾಗುವುದು. ಆದರೆ, ಅನಗತ್ಯ ವಿಳಂಬವನ್ನು ಸಹಿಸಿಕೊಳ್ಳುವುದಿಲ್ಲ ಎಂದು ಈಶ್ವರ ಖಂಡ್ರೆ ಸ್ಪಷ್ಟಪಡಿಸಿದರು.

ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿ ಸಮೀರ್ ಶುಕ್ಲ, ಗುತ್ತಿಗೆದಾರರು, ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ವಿವಿಧ ಜಿಲ್ಲೆಗಳ ಸಿಇಓಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments