ರಾಜ್ಯದ ಎಲ್ಲಾ ಜಿಲ್ಲೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (ಸಿಇಓ) ವಾರದಲ್ಲಿ ಕನಿಷ್ಠ ಎರಡು ದಿನ 4-5 ಗ್ರಾಮಗಳಿಗಾದರೂ ದಿಢೀರ್ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಸೂಚನೆ ನೀಡಿದ್ದಾರೆ.
ಈ ಸಂಬಂಧ ಇಲಾಖೆಯ ಕಾರ್ಯದರ್ಶಿಗೆ ಲಿಖಿತ ಸೂಚನೆ ನೀಡಿರುವ ಸಚಿವರು, ಸಿಇಓಗಳು ಗ್ರಾಮ ಪಂಚಾಯತಿಗಳಿಗೆ ಪೂರ್ವ ಸೂಚನೆ ನೀಡದೇ ಭೇಟಿ ನೀಡಿ ಹಾಜರಾತಿ, ಪಿಡಿಓ ಮತ್ತು ತಾಲೂಕು ಕಾರ್ಯನಿರ್ವಹಣಾಧಿಕಾರಿಗಳ ಕಾರ್ಯವೈಖರಿಯನ್ನು ಪರಾಮರ್ಶಿಸಬೇಕು. ಜೊತೆಗೆ ಜನರ ಆಹ್ವಾನ ಆಲಿಸಿ ಸ್ಥಳದಲ್ಲೇ ಕೆಲವು ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ತಿಳಿಸಿದ್ದಾರೆ.
ರಾಜ್ಯದ 31 ಜಿಲ್ಲೆಗಳಲ್ಲಿ 5,900ಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳಿದ್ದು, 57,879 ವಸತಿ ಪ್ರದೇಶಗಳಿವೆ. ರಾಜ್ಯದ ಒಟ್ಟು ಜನಸಂಖ್ಯೆ 6 ಕೋಟಿ 13 ಲಕ್ಷ ಇದ್ದು, ಇದರಲ್ಲಿ 26,589 ಹಳ್ಳಿಗಳಲ್ಲಿ 4 ಕೋಟಿ 45 ಲಕ್ಷ ಜನರು ವಾಸಿಸುತ್ತಿದ್ದಾರೆ. ಅಂದರೆ ರಾಜ್ಯದ ಮುಕ್ಕಾಲು ಭಾಗ ಜನಸಂಖ್ಯೆ ಗ್ರಾಮೀಣ ಪ್ರದೇಶಗಳಲ್ಲಿದೆ. ಹೀಗಾಗಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಗ್ರಾಮಾಭಿವೃದ್ಧಿಗೆ ವಿಶೇಷ ಗಮನ ಹರಿಸಬೇಕು ಎಂದು ಸಚಿವರು ಒತ್ತಿ ಹೇಳಿದ್ದಾರೆ.
ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು, ಉತ್ತಮ ರಸ್ತೆ, ನೈರ್ಮಲ್ಯ ಹಾಗೂ ವಿಬಿಜಿ ರಾಮ್‌ಜಿ ಅಡಿಯಲ್ಲಿ ಸ್ಥಳದಲ್ಲೇ ಉದ್ಯೋಗ ನೀಡುವ ಬಗ್ಗೆ ಹೆಚ್ಚಿನ ಗಮನ ಹರಿಸಿದರೆ ಗ್ರಾಮಗಳಿಂದ ನಗರಕ್ಕೆ ವಲಸೆ ಹೋಗುವುದು ತಪ್ಪಲಿದೆ. ಇದರಿಂದ ನಗರಗಳ ಮೇಲಿನ ಒತ್ತಡ ಕಡಿಮೆಯಾಗುವುದಲ್ಲದೆ ಗ್ರಾಮಗಳ ಅಭಿವೃದ್ಧಿಯೂ ಸಾಧ್ಯವಾಗುತ್ತದೆ ಎಂದರು.
ಜಲ ಜೀವನ ಮಿಷನ್, ವಿಬಿಜಿ ರಾಮ್‌ಜಿ, ಪ್ರಧಾನಮಂತ್ರಿ ವಸತಿ ಯೋಜನೆ (ಗ್ರಾಮೀಣ), ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಮುಖ್ಯಮಂತ್ರಿಗಳ ರಸ್ತೆ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನ, ಕೆರೆಗಳ ಒತ್ತುವರಿ ತೆರವು ಹಾಗೂ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಛತೆ ಮತ್ತು ಒಣ-ಹಸಿ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿದೆಯೇ ಎಂಬುದನ್ನು ಸಿಇಓಗಳು ನಿಯಮಿತವಾಗಿ ಪರಿಶೀಲಿಸಿದರೆ ಕಾಮಗಾರಿಗಳು ಚುರುಕಾಗಿ ನಡೆಯುತ್ತವೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.


