ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ನಗರ ಪಾಲಿಕೆಯ ಅಪರ ಆಯುಕ್ತರು (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಭೇಟಿ ನೀಡಿ ರಸ್ತೆ, ಫುಟ್ಪಾತ್, ಬೀದಿ ದೀಪ, ಮಳೆನೀರು ಚರಂಡಿ, ತ್ಯಾಜ್ಯ ನಿರ್ವಹಣೆ, ರಸ್ತೆ ಗುಂಡಿಗಳು, ರಸ್ತೆ ಕಟಿಂಗ್ ಹಾಗೂ ವಿವಿಧ ಮೂಲಸೌಕರ್ಯ ಕಾಮಗಾರಿಗಳ ಸ್ಥಿತಿಗತಿಗಳನ್ನು ಪರಿಶೀಲಿಸಿದರು.
ಸ್ಥಳ ಪರಿಶೀಲನೆ ವೇಳೆ ಕಂಡುಬಂದ ಸಮಸ್ಯೆಗಳಿಗೆ ಆದ್ಯತೆ ನಿಗದಿಪಡಿಸಿ, ಸಂಬಂಧಿಸಿದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ತ್ವರಿತವಾಗಿ ಪರಿಹಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಲೌರಿ ಜಂಕ್ಷನ್ನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿ ಅಗತ್ಯ ದುರಸ್ತಿ ಕೈಗೊಳ್ಳುವುದು, ಫುಟ್ಪಾತ್ ಅಭಿವೃದ್ಧಿಪಡಿಸುವುದು ಹಾಗೂ ರಸ್ತೆ ಬದಿಯಲ್ಲಿರುವ ನಿರ್ಮಾಣ ತ್ಯಾಜ್ಯ ತೆರವುಗೊಳಿಸುವಂತೆ ಸೂಚಿಸಿದರು. ಫುಟ್ಪಾತ್ ಮೇಲೆ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿರುವ ಕಲ್ಲು ಹಾಗೂ ಇತರೆ ವಸ್ತುಗಳನ್ನು ತೆರವುಗೊಳಿಸಿ, ಅಗತ್ಯವಿರುವ ಕಡೆ ಬೀದಿ ದೀಪಗಳನ್ನು ಅಳವಡಿಸುವಂತೆ ತಿಳಿಸಿದರು.
ಬಿ. ನಾರಾಯಣಪುರ ಮತ್ತು ಕಾಮಧೇನು ನಗರದಲ್ಲಿ ಜಲಮಂಡಳಿಯ ಪೈಪ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿರುವ ಸ್ಥಳಗಳಲ್ಲಿ ರಸ್ತೆ ಪುನರ್ಸ್ಥಾಪನೆಯನ್ನು ತ್ವರಿತವಾಗಿ ಕೈಗೊಳ್ಳಬೇಕು. ರಸ್ತೆ ಗುಂಡಿಗಳನ್ನು ಮುಚ್ಚಿ, ರಸ್ತೆ ಬದಿಯ ತ್ಯಾಜ್ಯ ತೆರವುಗೊಳಿಸಬೇಕು. ಮುಖ್ಯರಸ್ತೆ ಪಕ್ಕದಲ್ಲಿರುವ ನಿರ್ಮಾಣ ತ್ಯಾಜ್ಯ ತೆರವಿಗೆ ಬಿಎಂಆರ್ಸಿಎಲ್ನೊಂದಿಗೆ ಸಮನ್ವಯ ಸಾಧಿಸುವಂತೆ ಸೂಚಿಸಿದರು.
ಔಟರ್ ರಿಂಗ್ ರೋಡ್ನಲ್ಲಿ ವ್ಯಾಪಾರಿಗಳಿಂದ ಫುಟ್ಪಾತ್ ಒತ್ತುವರಿಯಾಗಿರುವ ಪ್ರದೇಶಗಳನ್ನು ತೆರವುಗೊಳಿಸಿ ಪಾದಚಾರಿಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ರಸ್ತೆ ಗುಂಡಿಗಳನ್ನು ಮುಚ್ಚಿ, ಕಾರ್ಯನಿರ್ವಹಿಸದ ಬೀದಿ ದೀಪಗಳನ್ನು ದುರಸ್ತಿಪಡಿಸುವುದರ ಜೊತೆಗೆ ದೀಪಗಳಿಲ್ಲದ ಕಡೆ ಹೊಸ ದೀಪ ಅಳವಡಿಸುವಂತೆ ನಿರ್ದೇಶಿಸಿದರು.
ಬಾಗಮನೆ ಓಲ್ಡ್ ಟೆಕ್ನಾಲಜಿ ಸೆಂಟರ್ ಬಳಿ ಸುಮಾರು 300 ಮೀಟರ್ ಉದ್ದದ ಫುಟ್ಪಾತ್ ಪ್ರದೇಶದಲ್ಲಿ ಅಗತ್ಯ ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದರು. ಮುಖ್ಯರಸ್ತೆಯ ಗುಂಡಿಗಳನ್ನು ಮುಚ್ಚಿ, ಫುಟ್ಪಾತ್ನಲ್ಲಿರುವ ನಿರ್ಮಾಣ ತ್ಯಾಜ್ಯ ತೆರವುಗೊಳಿಸುವಂತೆ ಸೂಚಿಸಿದರು.
ಕಿಮ್ಸ್ ಆಸ್ಪತ್ರೆ ಬಳಿಯ ಔಟರ್ ರಿಂಗ್ ರೋಡ್ನ ಫ್ಲೈಓವರ್ ಕೆಳಭಾಗವನ್ನು ಸುಂದರವಾಗಿ ಅಭಿವೃದ್ಧಿಪಡಿಸಬೇಕು. ಹಾಳಾಗಿರುವ ಸ್ಲ್ಯಾಬ್ಗಳನ್ನು ದುರಸ್ತಿಪಡಿಸಿ, ಅಗತ್ಯವಿರುವ ಕಡೆ ಕಲ್ವರ್ಟ್ ಹಾಗೂ ಗ್ರೇಟಿಂಗ್ಗಳನ್ನು ದುರಸ್ತಿ ಅಥವಾ ಬದಲಾಯಿಸಬೇಕು. ಮಳೆನೀರು ರಸ್ತೆಗೆ ಹರಿದುಬರದಂತೆ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.
ರಾಗ ಅಪಾರ್ಟ್ಮೆಂಟ್ ಹಾಗೂ ಗುರುಕುಲ ರಸ್ತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಫುಟ್ಪಾತ್ ಒತ್ತುವರಿ ತೆರವು, ಸಿ&ಡಿ ತ್ಯಾಜ್ಯ ತೆರವು ಹಾಗೂ ರಸ್ತೆ ಗುಂಡಿಗಳ ದುರಸ್ತಿಗೆ ಆದ್ಯತೆ ನೀಡುವಂತೆ ನಿರ್ದೇಶಿಸಿದರು. ರಸ್ತೆ ಮತ್ತು ಫುಟ್ಪಾತ್ ಆಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿರುವ ತೆಂಗಿನಕಾಯಿ ಅಂಗಡಿಗಳ ವಿರುದ್ಧ ನಿಯಮಾನುಸಾರ ದಂಡ ವಿಧಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಕಗ್ಗದಾಸಪುರ ಮುಖ್ಯರಸ್ತೆ, ರಂಗನಾಥ ಲೇಔಟ್ ಹಾಗೂ ಕಗ್ಗದಾಸಪುರ ರೈಲ್ವೆ ಜಂಕ್ಷನ್ಗಳಲ್ಲಿ ರಸ್ತೆ ಗುಂಡಿ, ಫುಟ್ಪಾತ್ ಸ್ಲ್ಯಾಬ್, ಬೀದಿ ದೀಪ ಹಾಗೂ ಮಳೆನೀರು ಚರಂಡಿ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವಂತೆ ತಿಳಿಸಿದರು. ಬಾಕಿ ಉಳಿದಿರುವ ಬ್ಲಾಕ್ಸ್ಪಾಟ್ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದರು. ಫುಟ್ಪಾತ್ಗೆ ಅಡ್ಡಿಯಾಗಿರುವ ವಿದ್ಯುತ್ ಪರಿವರ್ತಕದ ಕುರಿತು ಬೆಸ್ಕಾಂ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.
ಕಗ್ಗದಾಸಪುರ ರೈಲ್ವೆ ಜಂಕ್ಷನ್ನಲ್ಲಿ ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್ಗಳ ವಿರುದ್ಧ ನಿರಂತರ ಕ್ರಮ ಕೈಗೊಳ್ಳಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ರಸ್ತೆಯಲ್ಲಿ ಸಂಚರಿಸುವ ಜಾನುವಾರುಗಳ ನಿಯಂತ್ರಣಕ್ಕೆ ಪಶುಸಂಗೋಪನಾ ಇಲಾಖೆಯೊಂದಿಗೆ ಸಮನ್ವಯ ಸಾಧಿಸುವಂತೆ ತಿಳಿಸಿದರು.
ವಿಜ್ಞಾನ ನಗರದಲ್ಲಿ ಫುಟ್ಪಾತ್ ಒತ್ತುವರಿ ತೆರವುಗೊಳಿಸಿ ಪಾದಚಾರಿಗಳ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ತಿಪ್ಪಸಂದ್ರ ಜಂಕ್ಷನ್ನಲ್ಲಿ ಹಾನಿಗೊಳಗಾದ ಬೆಸ್ಕಾಂ ಕಂಬದ ಭಾಗವನ್ನು ತೆರವುಗೊಳಿಸಿ, ಸುರಕ್ಷಿತ ಸ್ಥಳದಲ್ಲಿ ಕಂಬ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಬಸವಣ್ಣನವರ ಬಸ್ಸ್ಟಾಪ್ ಬಳಿ ರಸ್ತೆ ಗುಂಡಿ ಹಾಗೂ ಹಾನಿಗೊಳಗಾದ ಜಂಕ್ಷನ್ ದುರಸ್ತಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ನಿರ್ದೇಶಿಸಿದರು.
ವಿಭೂತಿಪುರದ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಬಳಿ ಗುರುತಿಸಿರುವ ಬ್ಲಾಕ್ಸ್ಪಾಟ್ನ್ನು ತೆರವುಗೊಳಿಸಿ, ಮತ್ತೆ ತ್ಯಾಜ್ಯ ಸಂಗ್ರಹವಾಗದಂತೆ ನಿರಂತರ ಸ್ವಚ್ಛತೆ ಕಾಪಾಡುವಂತೆ ತಿಳಿಸಿದರು. ಎಚ್ಎಎಲ್ ಈಸ್ಟ್ ಪ್ರೈಮರಿ ಮತ್ತು ಹೈಸ್ಕೂಲ್ ಬಳಿ ಕಸದ ವಾಹನಗಳ ನಿಲುಗಡೆಯಿಂದ ಉಂಟಾಗುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಹಾಗೂ ರಸ್ತೆ ಬದಿಯ ನಿರ್ಮಾಣ ತ್ಯಾಜ್ಯವನ್ನು ತೆರವುಗೊಳಿಸುವಂತೆ ಸೂಚಿಸಿದರು.
ಎಚ್ಎಎಲ್ ಮ್ಯೂಸಿಯಂ–ಬಸವನಗರ ಮುಖ್ಯರಸ್ತೆ ಬಳಿ ಸುರಿದಿರುವ ನಿರ್ಮಾಣ ತ್ಯಾಜ್ಯವನ್ನು ತೆರವುಗೊಳಿಸಿ, ಮುಂದೆ ಅದೇ ಸ್ಥಳದಲ್ಲಿ ತ್ಯಾಜ್ಯ ಸುರಿಯದಂತೆ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.
ಯಮಲೂರಿನಲ್ಲಿ ರಸ್ತೆ ಗುಂಡಿ ದುರಸ್ತಿ, ಫುಟ್ಪಾತ್ ಅಭಿವೃದ್ಧಿ ಹಾಗೂ ರಸ್ತೆ ಕಟಿಂಗ್ ಬಳಿಕ ಪುನರ್ಸ್ಥಾಪನೆಗೆ ಆದ್ಯತೆ ನೀಡುವಂತೆ ಸೂಚಿಸಿದರು. ಕೆಂಪಾಪುರದಲ್ಲಿ ಜಲಮಂಡಳಿ ಕಾಮಗಾರಿಯಿಂದ ಹಾನಿಗೊಳಗಾದ ರಸ್ತೆ ಭಾಗಗಳನ್ನು ಪುನರ್ಸ್ಥಾಪಿಸಿ, ನಿರ್ಮಾಣ ತ್ಯಾಜ್ಯ ತೆರವುಗೊಳಿಸುವಂತೆ ತಿಳಿಸಿದರು.
ಬೇಲೂರು ರಸ್ತೆಯಲ್ಲಿ ಬೀದಿ ದೀಪಗಳ ಕಂಬಗಳಿಲ್ಲದ ಕಡೆ ಹೊಸ ಕಂಬಗಳನ್ನು ಅಳವಡಿಸಿ, ದೀಪಗಳು ಕಾರ್ಯನಿರ್ವಹಿಸದ ಸ್ಥಳಗಳಲ್ಲಿ ದುರಸ್ತಿ ಕೈಗೊಳ್ಳುವಂತೆ ಸೂಚಿಸಿದರು. ಮುರುಗೇಶ್ ಪಾಳ್ಯದ ವಿಂಡ್ ಟನಲ್ ರಸ್ತೆಯಲ್ಲಿ ಸಂಗ್ರಹವಾಗಿರುವ ತ್ಯಾಜ್ಯ ತೆರವುಗೊಳಿಸಿ ಬ್ಲಾಕ್ಸ್ಪಾಟ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ನಿರ್ದೇಶಿಸಿದರು.
ನಗರದ ವಿವಿಧ ಪ್ರದೇಶಗಳ ಮೂಲಸೌಕರ್ಯ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಶೀಲಿಸಿ, ಸಾರ್ವಜನಿಕರಿಗೆ ತೊಂದರೆ ಉಂಟುಮಾಡುತ್ತಿರುವ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಲ್ಪಿಸುವುದು ಹಾಗೂ ಸಂಬಂಧಿಸಿದ ಇಲಾಖೆಗಳ ನಡುವೆ ಸಮನ್ವಯ ಹೆಚ್ಚಿಸುವುದಕ್ಕೆ ಆದ್ಯತೆ ನೀಡಲಾಗಿದೆ.
ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಸಂಬಂಧಿಸಿದ ವಿಭಾಗಗಳ ಅಧಿಕಾರಿಗಳು, ಎಂಜಿನಿಯರ್ಗಳು, ಮಾರ್ಷಲ್ಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.


