ಭಾರತದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ನಕಲಿ ರಾಷ್ಟ್ರೀಯವಾದಿ ಬಿಜೆಪಿಯಿಂದ ರಾಷ್ಟ್ರಭಕ್ತಿ ಹಾಗೂ ದೇಶಭಕ್ತಿ ಕಲಿಯುವ ಅಗತ್ಯವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದ್ದಾರೆ.
ಸರ್ಕಾರದ ವಿವಿಧ ಕಾರ್ಯಕ್ರಮಗಳಲ್ಲಿ ‘ವಂದೇ ಮಾತರಂ’ ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವಂತೆ ಸರ್ಕಾರ ಆದೇಶಿಸಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಸರ್ಕಾರ, ರಾಷ್ಟ್ರಪತಿ, ಪ್ರಧಾನಿ ಹಾಗೂ ರಾಜ್ಯಪಾಲರು ಭಾಗವಹಿಸುವ ಕಾರ್ಯಕ್ರಮಗಳನ್ನು ಹೊರತುಪಡಿಸಿ ಇತರ ಸರ್ಕಾರಿ ಸಮಾರಂಭಗಳಲ್ಲಿ ಮೊದಲ ಎರಡು ಚರಣಗಳನ್ನು ಹಾಡುವಂತೆ ಸೂಚಿಸಲಾಗಿದೆ ಎಂದರು.
ಬ್ರಿಟಿಷರ ದಾಸ್ಯದಿಂದ ಭಾರತ ಮಾತೆಯನ್ನು ಬಂಧಮುಕ್ತಗೊಳಿಸುವ ಉದ್ದೇಶದಿಂದ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಸ್ವಾತಂತ್ರ್ಯ ಚಳವಳಿಯಲ್ಲಿ ‘ವಂದೇ ಮಾತರಂ’ ಗೀತೆಯನ್ನು ಹಾಡುವ ಮೂಲಕ ದೇಶದ ಯುವಜನರಲ್ಲಿ ದೇಶಪ್ರೇಮದ ಕಿಚ್ಚು ಹೊತ್ತಿಸಿದವರು ಕಾಂಗ್ರೆಸ್ ನಾಯಕರು ಎಂದು ಹೇಳಿದರು.
ಸ್ವಾತಂತ್ರ್ಯಪೂರ್ವದಲ್ಲಿಯೇ 1937ರ ಕಾಂಗ್ರೆಸ್ ನಿರ್ಣಯದಲ್ಲಿ ‘ವಂದೇ ಮಾತರಂ’ನ ಎರಡು ಚರಣಗಳನ್ನು ಹಾಡುವ ಕುರಿತು ನಿಲುವು ತೆಗೆದುಕೊಳ್ಳಲಾಗಿತ್ತು. ಕಾಂಗ್ರೆಸ್ ಸರ್ಕಾರ ಇಂದಿಗೂ ಅದೇ ನಿಲುವಿಗೆ ಬದ್ಧವಾಗಿದೆ ಎಂದು ತಿಳಿಸಿದರು.
ಇಷ್ಟು ವರ್ಷಗಳ ಕಾಲ ‘ವಂದೇ ಮಾತರಂ’ನ ಆರು ಚರಣಗಳ ವಿಚಾರದ ಬಗ್ಗೆ ಮೌನವಾಗಿದ್ದ ಬಿಜೆಪಿ ಇದೀಗ ಏಕಾಏಕಿ ಈ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿರುವುದು ಏಕೆ ಎಂದು ಪ್ರಶ್ನಿಸಿದ ಅವರು, ಸುಮಾರು 90 ವರ್ಷಗಳಿಂದ ಬಿಜೆಪಿ ಈ ವಿಚಾರದ ಬಗ್ಗೆ ಏಕೆ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ರಾಜ್ಯಕ್ಕೆ ನ್ಯಾಯಯುತವಾಗಿ ದೊರೆಯಬೇಕಾದ ಅನುದಾನವನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ಬಿಜೆಪಿಯವರು ರಾಜ್ಯದ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ರಾಜ್ಯಕ್ಕೆ ಅಗತ್ಯ ಅನುದಾನ ಕೊಡಿಸುವ ಬದಲು, ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ಈಶ್ವರ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದರು.


