Homeಕರ್ನಾಟಕದೇವನಹಳ್ಳಿ ಭೂಸ್ವಾಧೀನ | ಎಕರೆಗೆ ₹2.70 ಕೋಟಿ ಪರಿಹಾರಕ್ಕೆ ಶಿಫಾರಸು

ದೇವನಹಳ್ಳಿ ಭೂಸ್ವಾಧೀನ | ಎಕರೆಗೆ ₹2.70 ಕೋಟಿ ಪರಿಹಾರಕ್ಕೆ ಶಿಫಾರಸು

ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿಯ ಗೋಕರೆಬಚ್ಚೇನಹಳ್ಳಿ ಮತ್ತು ಹ್ಯಾಡಾಳ ಗ್ರಾಮದಲ್ಲಿ ಕೈಗಾರಿಕಾ ಉದ್ದೇಶಕ್ಕೆ ರೈತರು ಸ್ವಯಂಪ್ರೇರಿತವಾಗಿ ಬಿಟ್ಟುಕೊಡಲು ಒಪ್ಪಿರುವ 120 ಎಕರೆ ಜಮೀನಿಗೆ ಪ್ರತೀ ಎಕರೆಗೆ 2.70 ಕೋಟಿ ರೂ. ಪರಿಹಾರವನ್ನು ಭೂದರ ನಿರ್ಧಾರಣಾ ಸಲಹಾ ಸಮಿತಿ ನಿಗದಿಪಡಿಸಿ ಕೆಐಎಡಿಬಿಗೆ ಶಿಫಾರಸು ಮಾಡಿದೆ.

ಕೆಐಎಡಿಬಿ ವಿಶೇಷ ಜಿಲ್ಲಾಧಿಕಾರಿ ಎ.ಎನ್.ರಘುನಂದನ್ ಅಧ್ಯಕ್ಷತೆಯಲ್ಲಿ ಬುಧವಾರ ಇಲ್ಲಿನ ಅರವಿಂದ ಭವನದಲ್ಲಿ ನಡೆದ ಅಧಿಕಾರಿಗಳು ಹಾಗೂ ಭೂಮಾಲೀಕರ ಜಂಟಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈ ತೀರ್ಮಾನವನ್ನು ಕೆಐಎಡಿಬಿ ಮಂಡಳಿಯ ಅನುಮೋದನೆಗಾಗಿ ಕಳಿಸಿ ಕೊಡಲಾಗುವುದು. ಪರಿಹಾರವನ್ನು ಹಣದ ರೂಪದಲ್ಲಿ ತೆಗೆದುಕೊಳ್ಳಲು ಇಷ್ಟವಿಲ್ಲದಿದ್ದರೆ ಪ್ರತೀ ಎಕರೆ ಕೃಷಿ ಜಮೀನಿಗೆ ಅಭಿವೃದ್ಧಿ ಪಡಿಸಿದ ಕೈಗಾರಿಕಾ ಬಡಾವಣೆಯಲ್ಲಿ 10,781 ಚದರ ಅಡಿ ಜಾಗವನ್ನು ಪಡೆದುಕೊಳ್ಳುವುದಕ್ಕೂ ಅವಕಾಶ ನೀಡಲಾಗಿದೆ ಎಂದು ರಘುನಂದನ್ ತಿಳಿಸಿದ್ದಾರೆ.

ಈ ಜಮೀನುಗಳನ್ನು ರೈತರು ತಾವಾಗಿಯೇ ಬಿಟ್ಟುಕೊಡುತ್ತಿದ್ದು, ಈ ಸಂಬಂಧ ಕೆಐಎಡಿಬಿ ಕಾಯ್ದೆಯನುಸಾರ ಇದೇ ತಿಂಗಳ 16ರಂದು ಅಂತಿಮ ಅಧಿಸೂಚನೆ ಹೊರಡಿಸಿ, ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿತ್ತು. ಈಗ ನಿಗದಿಪಡಿಸಿರುವ ಪರಿಹಾರ ದರವು ದೇವನಹಳ್ಳಿ ಭಾಗದಲ್ಲೇ ಅತ್ಯಂತ ಹೆಚ್ಚಿನದಾಗಿದೆ. ಸಂತ್ರಸ್ತ ರೈತರಿಗೆ ನ್ಯಾಯಯತ ಪರಿಹಾರ ಕೊಡಬೇಕೆಂಬುದು ಸರಕಾರದ ಆಶಯವಾಗಿದೆ ಎಂದು ಅವರು ನುಡಿದಿದ್ದಾರೆ.

ಕೆಐಎಡಿಬಿ ಭೂಸ್ವಾಧೀನಾಧಿಕಾರಿ ಸೂರಜ್ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments