ಡಿ ಕೆ ಶಿವಕುಮಾರ್ ಶನಿವಾರ ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಹೊಸ ನಾಯಕರಾಗಿ ಆಯ್ಕೆಯಾಗಲಿದ್ದಾರೆ. ಹೊಸ ಸಚಿವ ಸಂಪುಟದ ರಚನೆ ಮತ್ತು ಅಧಿಕಾರ ಬದಲಾವಣೆ ಕುರಿತು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಬ್ಬರೂ ಶುಕ್ರವಾರ ಕಾಂಗ್ರೆಸ್ ವರಿಷ್ಠರೊಂದಿಗೆ ಚರ್ಚಿಸಿ ಬೆಂಗಳೂರಿಗೆ ಆಗಮಿಸಿದ್ದಾರೆ.
ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ, ಹೊಸ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಹಲವು ಶಾಸಕರು ತೀವ್ರ ಲಾಬಿ ನಡೆಸುತ್ತಿರುವ ಬೆನ್ನಲ್ಲೇ, ಶನಿವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದೆ. ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಆಯ್ಕೆಯಾಗುವುದು ಬಹುತೇಕ ಖಚಿತವಿದ್ದು, ಮೇ 31 ಅಥವಾ ಜೂನ್ 1ರಂದು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಎಚ್ ಕೆ ಪಾಟೀಲ್ ಮಾಧ್ಯಮಗಳಿಗೆ ಹೆಳಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು (ಮೇ 30) ಸಂಜೆ 4 ಗಂಟೆಗೆ ಸಿಎಲ್ಪಿ ಸಭೆ ನಡೆಯಲಿದ್ದು, ಎಲ್ಲಾ ಕಾಂಗ್ರೆಸ್ ಶಾಸಕರಿಗೆ ಭಾಗವಹಿಸಲು ಸೂಚನೆ ನೀಡಲಾಗಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಕೂಡ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಡಿಕೆ ಶಿವಕುಮಾರ್ ಅವರು ಸೋಮವಾರ ಗೋಧೂಳಿ ಸಮಯದಲ್ಲಿ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.
ಸಿದ್ದರಾಮಯ್ಯರಿಂದ ಪಟ್ಟಿ ಸಲ್ಲಿಕೆ
ಎರಡು ವರ್ಷಗಳ ಅವಧಿಯ ಮುಂದಿನ ಸರ್ಕಾರದಲ್ಲಿ ತಮ್ಮ ಆಪ್ತವಲಯದ ಶಾಸಕರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಸಿದ್ದರಾಮಯ್ಯ ಅವರು ಇದೇ ವೇಳೆ ರಾಹುಲ್ಗೆ ಮನವಿ ಮಾಡಿದರಲ್ಲದೇ, 15 ಶಾಸಕರ ಪಟ್ಟಿಯನ್ನು ನೀಡಿದರು. ಈ ಪೈಕಿ ಕನಿಷ್ಠ 10 ಮಂದಿಗೆ ಸಚಿವ ಸ್ಥಾನದ ಖಾತ್ರಿ ನೀಡಬೇಕು ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.
ಅದೇ ಪಟ್ಟಿಯಲ್ಲಿ ಕೆ.ಜೆ. ಜಾರ್ಜ್, ಬಿ.ಕೆ. ಹರಿಪ್ರಸಾದ್, ದಿನೇಶ್ ಗುಂಡೂರಾವ್, ಬೈರತಿ ಸುರೇಶ್, ಕೃಷ್ಣ ಬೈರೇಗೌಡ, ರಾಘವೇಂದ್ರ ಇಟ್ನಾಳ, ಎ.ಎಸ್.ಪೊನ್ನಣ್ಣ, ಕೆ.ಎಂ. ಶಿವಲಿಂಗೇಗೌಡ, ಸಂತೋಷ್ ಲಾಡ್, ಯತೀಂದ್ರ ಸಿದ್ದರಾಮಯ್ಯ ಮತ್ತಿತರರ ಹೆಸರುಗಳು ಇವೆ ಎನ್ನಲಾಗ್ತಿದೆ.


