Homeಕರ್ನಾಟಕಜನ ನಮ್ಮನ್ನು ಗಮನಿಸುತ್ತಿದ್ದಾರೆ ಎಂಬ ಎಚ್ಚರದಲ್ಲಿ ಕೆಲಸ ಮಾಡಿ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್

ಜನ ನಮ್ಮನ್ನು ಗಮನಿಸುತ್ತಿದ್ದಾರೆ ಎಂಬ ಎಚ್ಚರದಲ್ಲಿ ಕೆಲಸ ಮಾಡಿ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್

ನಾವು ರಾಜಕಾರಣಿಗಳು ಐದು ವರ್ಷಕ್ಕೊಮ್ಮೆ ಜನಾದೇಶಕ್ಕಾಗಿ ಜನರ ಬಳಿಕೆ ಹೋಗಬೇಕು. ಅಧಿಕಾರಿಗಳಿಗೆ ಇದರ ಅಗತ್ಯ ಇರುವುದಿಲ್ಲ. ಹಾಗಂಥ ಅಧಿಕಾರಿಗಳು ಮೈ ಮರೆತರೆ, ಕರ್ತವ್ಯ ಮರೆತರೆ ಅದು ಜನತೆಗೆ ಬಗೆಯುವ ದ್ರೋಹವಾಗುತ್ತದೆ ಎಂದು ಸಿಎಂ ಡಿ ಕೆ ಶಿವಕುಮಾರ್ ಹೇಳಿದರು.

ಸುವರ್ಣಸೌಧದಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಮಾತನಾಡುತ್ತ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.

ಅಧಿಕಾರಿ ವರ್ಗ ತಮ್ಮ ಹೊಣೆಗಾರಿಕೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದರೆ ಸರ್ಕಾರದ ಮೇಲೆ ಜನತೆ ಇಟ್ಟಿರುವ ನಿರೀಕ್ಷೆ ಈಡೇರಿದಂತಾಗುತ್ತದೆ. ಸಭೆಯ ನಡುವೆ ಯಾವುದೇ ಅಧಿಕಾರಿ ಮೊಬೈಲ್‌ ನಲ್ಲಿ ಮಾತಾಡುವುದು ಕಂಡು ಬಂದರೆ ಸಂಜೆ ಮೀಟಿಂಗ್‌ ಮುಗಿಯುವ ವೇಳೆಗೆ ನಿಮ್ಮ ಅಮಾನತು ಆದೇಶ ಬರುತ್ತದೆ. ಈ ಎಚ್ಚರಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ಸಭೆಯಲ್ಲಿ ಭಾಗವಹಿಸಿ ಎಂದರು.

ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲೇ ನೆಲೆಸಬೇಕು. ಹಾಗಾದಾಗ ಮಾತ್ರ ನೀವು ಜನರ ಕೈಗೆ ಸಿಗಲು, ಅವರಿಗೆ ಸ್ಪಂದಿಸಲು ನೆರವಾಗುತ್ತದೆ. ಸುಖಾ ಸುಮ್ಮನೆ ಜನರನ್ನು ಕಚೇರಿಯಿಂದ ಕಚೇರಿಗೆ ಅಲೆದಾಡಿಸುವುದನ್ನು ನಾನು ಸಹಿಸುವುದಿಲ್ಲ. ನಿಮ್ಮ ಹಂತದಲ್ಲೇ ಕೆಲಸ ಸರಾಗವಾಗಿ ಆದರೆ ಸಣ್ಣ ಪುಟ್ಟ ಕೆಲಸಗಳಿಗೂ ಜನತೆ ಕಚೇರಿಗೆ ಅಲೆದಾಡುವುದು ತಪ್ಪುತ್ತದೆ ಎಂದು ತಿಳಿಸಿದರು.

ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳ ಬಳಿ ತಮ್ಮ ಅಧೀನ ಅಧಿಕಾರಿಗಳ ಮಾಹಿತಿ ಅಂಗೈ ತುದಿಯಲ್ಲಿ ಇರಬೇಕು. ಯಾವ ಯಾವ ಅಧಿಕಾರಿ ಫೀಲ್ಡ್‌ ವರ್ಕ್‌ಗೆ ಹೋಗಿದ್ದಾರೆ, ಯಾವ ಪ್ರದೇಶಕ್ಕೆ ಹೋಗಿದ್ದಾರೆ, ಜನರ ಬಳಿಗೆ ಹೋಗಿ ಯಾವ ಸಮಸ್ಯೆ ಬಗೆಹರಿಸಿದ್ದಾರೆ ಎನ್ನುವ ನಿತ್ಯದ ಅಪ್‌ಡೇಟ್‌ ನಿಮ್ಮ ಬಳಿ ಇರಬೇಕು. ಈ ರೀತಿಯ ಒಂದು ರಿಜಿಸ್ಟರ್‌ ನಿರ್ವಹಣೆ ಮಾಡುವುದು ಜಿಲ್ಲಾ ಮಟ್ಟದ ಅಧಿಕಾರಿಗಳ ಜವಾಬ್ದಾರಿ ಎಂದರು.

ನಮ್ಮ ಸರ್ಕಾರ ಕ್ರಾಂತಿಕಾರಕ ರೀತಿಯಲ್ಲಿ ಜನರ ಸಮಸ್ಯೆ ಬಗೆಹರಿಸಲು “ಪ್ರಜಾಸೇವಾ ಇಲಾಖೆ”ಯನ್ನು ಸ್ಥಾಪಿಸಿದ್ದೇವೆ. ಶಾಸಕರು, ಜಿಲ್ಲಾ ಮಂತ್ರಿಗಳು, ಅಧಿಕಾರಿಗಳು ನಿಯಮಿತವಾಗಿ ಜನರ ಬಳಿಗೆ ಹೋಗಬೇಕು. ನಾನು ನಿರಂತರವಾಗಿ ಜನ ಸ್ಪಂದನೆ ಕಾರ್ಯಕ್ರಮಗಳನ್ನು ನಡೆಸುತ್ತೇನೆ. ನೀವೂ ಇದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಬೇಕು. ಪ್ರಜಾಸೇವೆ ಇಲಾಖೆಯ ಗೈಡ್‌ ಲೈನ್ಸ್‌ಗಳನ್ನು ಸರಿಯಾಗಿ ಜಾರಿ ಮಾಡಬೇಕು. ಈ ವಿಚಾರದಲ್ಲಿ ನಾನು ಉದಾಸೀನ, ದೌರ್ಜನ್ಯ ಸಹಿಸಲ್ಲ. ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಕೊಡಲು ಸಾಧ್ಯವಿರುವುದನ್ನು ತಪ್ಪದೇ ನೀಡಬೇಕು. ಜನ ಜಿಲ್ಲಾ ಕೇಂದ್ರ, ಬೆಂಗಳೂರಿಗೆ ಅಲೆದಾಡುವುದನ್ನು ತಪ್ಪಿಸಿ ಎಂದು ಸೂಚಿಸಿದರು.

ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆ, ಪಾಲಿಕೆಗಳ ವ್ಯಾಪ್ತಿಯಲ್ಲಿ ಯೋಜನಾಬದ್ದ ಬೆಳವಣಿಗೆ ಆಗಬೇಕು. ಅನುಮತಿ ಪಡೆಯದೆ ಯಾರೂ ಬಡವಾವಣೆಗಳನ್ನು ನಿರ್ಮಿಸಲು ಅವಕಾಶ ಇರಬಾರದು. ಇಡೀ ದೇಶದಲ್ಲಿ ಕ್ರಾಂತಿಕಾರವಾಗಿ ಕಂದಾಯ ಇಲಾಖೆಯಲ್ಲಿ ಬದಲಾವಣೆ ತಂದಿದ್ದೇವೆ. ಯಾರೂ ಕೂಡ ಒಂದು ಪೈಸೆ ಕರ್ಚಿಲ್ಲದಂತೆ ಅವರ ಆಸ್ತಿಗೆ ಇ-ಖಾತೆ ಅವರ ಮನೆ ಬಾಗಿಲಿಗೆ ತಲುಪಿಸುತ್ತಿದ್ದೇವೆ. ಬೆಂಗಳೂರಿನ ಬಳಿಕ ಇಡೀ ರಾಜ್ಯಕ್ಕೆ ಇದು ವಿಸ್ತರಣೆ ಆಗುತ್ತಿದೆ. ನಮ್ಮ ಸರ್ಕಾರದ ಈ ಕ್ರಾಂತಿಕಾರಕ ಯೋಜನೆ ಅಷ್ಟೇ ಪರಿಣಾಮಕಾರಿಯಾಗಿ ತಳಮಟ್ಟದಲ್ಲಿ ಜಾರಿ ಆಗಬೇಕು ಎಂದು ಹೇಳಿದರು.

ಪ್ರಾಥಮಿಕ ಹಂತದಿಂದಲೇ ನನ್ನ ಕ್ಷೇತ್ರದಲ್ಲಿ ನಾನು ಈ ಪ್ರಯೋಗ ಮಾಡಿ ಯಶಸ್ವಿ ಆಗಿದೆ. 20 ಶಾಲೆಗಳು ಅಚ್ಚುಕಟ್ಟಾಗಿ ನಡೆಯುತ್ತಿವೆ. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಇದು ಪರಿಣಾಮಕಾರಿಯಾಗಿ 10-20 ಶಾಲೆಗಳು ಸ್ಥಾಫನೆ ಆಗಬೇಕು ಎನ್ನುವುದು ನನ್ನ ಗುರಿಯಾಗಿದೆ. ನೀವುಗಳು ನನ್ನ ಗುರಿಗಳ ಜೊತೆಗೆ ಹೆಜ್ಜೆ ಹಾಕಿ ಎಂದರು.

ಎಸ್‌ಐಆರ್‌ ವಿಚಾರದಲ್ಲಿ ನಾವು ರಾಜಕಾರಣ ಮಾಡಬಾರದು. ರಾಜ್ಯ ಚುನಾವಣಾಧಿಕಾರಿಗಳು ಎಲ್ಲವನ್ನೂ ಸ್ಪಷ್ಟವಾಗಿ ತಿಳಿಸಿದ್ದಾರೆ. ಭಾರತೀಯ ಚುನಾವಣಾ ಆಯೋಗದ ಕಾರ್ಯಯೋಜನೆಗೆ ನಾವು ಪೂರಕವಾಗಿ ನೆರವು ನೀಡುತ್ತಿದ್ದೇವೆ. ಪ್ರತಿಯೊಬ್ಬರ ಮತದಾನದ ಹಕ್ಕು ಉಳಿಯಬೇಕು. ಇದಕ್ಕೆ ಪೂರಕವಾಗಿ ಯಾರ್ಯಾರಿಗೆ ಯಾವ ಯಾವ ದಾಖಲೆಗಳ ಅಗತ್ಯವಿದೆಯೋ ಅದನ್ನೆಲ್ಲಾ ನಮ್ಮ ಸರ್ಕಾರ ಒದಗಿಸಬೇಕು. ಅಧಿಕಾರಿಗಳು ಗಮನಿಸಬೇಕು. ಮುಖ್ಯವಾಗಿ ಪ್ರತೀ ಮನೆಗೆ ಮೂರು ಬಾರಿ ಬಿಎಲ್‌ಒಗಳು ಭೇಟಿ ನೀಡಿ ಅರ್ಜಿಯನ್ನು ಒದಗಿಸಬೇಕು” ಎಂದು ನಿರ್ದೇಶನ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments