Homeಕರ್ನಾಟಕಬಂಗಾರ ತ್ಯಜಿಸುವುದು ಅಚ್ಚೆ ದಿನ್, ಬದುಕು ತ್ಯಜಿಸುವುದು ಅಮೃತ್ ಕಾಲ್: ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ

ಬಂಗಾರ ತ್ಯಜಿಸುವುದು ಅಚ್ಚೆ ದಿನ್, ಬದುಕು ತ್ಯಜಿಸುವುದು ಅಮೃತ್ ಕಾಲ್: ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ

ಇದು ಮೋದಿ ಮ್ಯಾಜಿಕ್! ತಮ್ಮ ವೈಫಲ್ಯದ ಆಡಳಿತದ ಕಾರಣಕ್ಕೆ ಜನರಿಂದ ತ್ಯಾಗವನ್ನು ಬಯಸುವುದಕ್ಕೆ “ಅಮೃತ ಕಾಲ” ಎಂದು ಹೆಸರಿಟ್ಟಿದ್ದಾರೆ ಪ್ರಧಾನಿ ಮೋದಿ! ಹೊಣೆಗಾರಿಕೆ ಮತ್ತು ಉತ್ತರದಾಯಿತ್ವದ ಜವಾಬ್ದಾರಿಯನ್ನು ಜನರ ತಲೆಗೆ ವರ್ಗಾಯಿಸುವ ಕಲೆ ಮೋದಿಯವರಿಗೆ ಚೆನ್ನಾಗಿ ತಿಳಿದಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, “ಕೋವಿಡ್ ನಿರ್ವಹಣೆಯ ವೈಫಲ್ಯದ ಸಮಯದಲ್ಲಿ ತಟ್ಟೆ ಬಡಿಯಿರಿ, ದೀಪ ಹಚ್ಚಿರಿ ಎನ್ನುತ್ತಲೇ ಲಕ್ಷಾಂತರ ಮಂದಿಯನ್ನು ಬಲಿ ಕೊಟ್ಟಿದ್ದಾಯ್ತು” ಎಂದು ಕುಟುಕಿದ್ದಾರೆ.

“ನೋಟ್ ಬ್ಯಾನ್ ಸಮಯದಲ್ಲಿ “50 ದಿನಗಳ ಸಮಯ ಕೊಡಿ, ಪರಿಸ್ಥಿತಿ ಸರಿ ಹೋಗದಿದ್ದರೆ ನೀವು ಕೊಡುವ ಶಿಕ್ಷೆಗೆ ನಾನು ಸಿದ್ದ” ಎನ್ನುತ್ತಲೇ ನೂರಾರು ಜನರ ಜೀವಕ್ಕೆ ಕಂಟಕವಾಗಿದ್ದಾಯ್ತು. ಈಗ ಹೊಸ ವರಸೆಯಾಗಿ, ಚಿನ್ನ ಖರೀದಿಸಬೇಡಿ, ಪೆಟ್ರೋಲ್ ಮಿತವಾಗಿ ಬಳಸಿ, ಸರಳ ಜೀವನ ನಡೆಸಿ ಎಂಬ ಉಪದೇಶಗಳು ಶುರುವಾಗಿವೆ, ಈ ಉಪದೇಶಗಳು ಯಾವ ಭೀಕರ ದಿನಗಳ ಮುನ್ಸೂಚನೆ ಎಂದು ರಾಜ್ಯ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

“2024 – “ಕಾಂಗ್ರೆಸ್ ನಿಮ್ಮ ಮಂಗಳಸೂತ್ರವನ್ನು ಕಸಿಯುತ್ತದೆ” 2026 – ಬಂಗಾರದ ಮೇಲಿನ ಆಮದು ಸುಂಕ 6%ನಿಂದ 15%ಗೆ ಏರಿಕೆ, ಬಂಗಾರದ ಬೆಲೆ ಸಾರ್ವಕಾಲಿಕ ಏರಿಕೆ ಹಾಗೂ ಬಂಗಾರ ಖರೀದಿಸಬೇಡಿ ಎಂಬ ಬಿಟ್ಟಿ ಉಪದೇಶ! ಈಗ ಮಂಗಳಸೂತ್ರ ಕಸಿಯಲು ಕೈಹಾಕಿದವರು ಯಾರು? ಇದಕ್ಕೆ ಬಿಜೆಪಿಗರು ಉತ್ತರಿಸುವರೇ?” ಎಂದು ಸವಾಲು ಹಾಕಿದ್ದಾರೆ.

“ಐತಿಹಾಸಿಕ ದಾಖಲೆ ಮಟ್ಟದ ಗ್ಯಾಸ್ ಬೆಲೆ ಏರಿಕೆಯ ನಂತರ ಈಗ ಇಂಧನ ತೈಲಗಳ ಬೆಲೆ ಏರಿಕೆಯ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದೆ. ದುಸ್ತರವಾಗಿರುವ ಜನರ ಬದುಕನ್ನು ಇನ್ನಷ್ಟು ದುಸ್ತರವಾಗಿಸುವ ಅಚ್ಚೆ ದಿನಗಳಲ್ಲಿ ಬಂಗಾರ ತ್ಯಜಿಸುವುದನ್ನು ದೇಶಭಕ್ತಿ ಎನ್ನಲಾಗುತ್ತಿದೆ, ಮುಂದೆ ಅಮೃತ ಕಾಲದಲ್ಲಿ ಬದುಕು ತ್ಯಜಿಸುವುದನ್ನು ದೇಶಭಕ್ತಿ ಎನ್ನಲಾಗುತ್ತದೆ!” ಎಂದು ಕುಟುಕಿದ್ದಾರೆ.

“ಭಾರತವು ಎಕನಾಮಿಕಲ್ ಎಮರ್ಜೆನ್ಸಿ ಸ್ಥಿತಿಯ ಎದುರು ನಿಂತಿದೆಯೇ? ದೇಶದ ಖಜಾನೆಯ ಪರಿಸ್ಥಿತಿ ಹೇಗಿದೆ? ಇಂಧನ ಭದ್ರತೆಗೆ ಸರ್ಕಾರ ಕೈಗೊಂಡ ಕ್ರಮಗಳೇನು? ಬಂಗಾರ ಖರೀದಿಸಬೇಡಿ ಎಂಬ ಹೇಳಿಕೆ ನೀಡುವ ಮುನ್ನ 85 ಬಿಲಿಯನ್ ಡಾಲರ್ ಗಾತ್ರದ ಭಾರತದ ಜ್ಯುವೆಲ್ಲರಿ ಮಾರ್ಕೆಟ್ ನಂಬಿ ಬದುಕುತ್ತಿರುವ ಕುಟುಂಬಗಳ ರಕ್ಷಣೆಯ ಬಗ್ಗೆ ಯೋಚಿಸಿದ್ದಾರೆಯೇ? ಇವರಿಗೆ ಸರ್ಕಾರ ನೀಡುವ ಪರಿಹಾರಗಳೇನು” ಎಂದು ಪ್ರಶ್ನಿಸಿದ್ದಾರೆ.

“ಈ ಎಲ್ಲದರ ಬಗ್ಗೆ ಪ್ರಧಾನಿಯವರು ಶ್ವೇತ ಪತ್ರ ಹೊರಡಿಸಲಿ, ಇಲ್ಲವೇ ವಿಶೇಷ ಅಧಿವೇಶನ ಕರೆದು ಚರ್ಚಿಸಲಿ ಅಥವಾ ಪತ್ರಿಕಾಗೋಷ್ಠಿಯನ್ನಾದರೂ ನಡೆಸಿ ನೈಜ ಪರಿಸ್ಥಿತಿಯನ್ನು ತಿಳಿಸಲಿ” ಎಂದು ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments