ನಗರದ ಕೆರೆಗಳು ಹಾಗೂ ಪರಿಸರವನ್ನು ಪ್ಲಾಸ್ಟಿಕ್ ಮುಕ್ತ ಮತ್ತು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ನಾಗರಿಕರು ಪಾಲಿಕೆಯೊಂದಿಗೆ ಕೈಜೋಡಿಸಬೇಕು ಎಂದು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಕರೆ ನೀಡಿದರು.
ಮಡಿವಾಳ ಕೆರೆ ಆವರಣದಲ್ಲಿ ಬೆಂಗಳೂರು ದಕ್ಷಿಣ ನಗರ ಪಾಲಿಕೆ, ‘ದಿ ಇಂಡಿಯನ್ ಪ್ಲಾಗರ್ಸ್ ಆರ್ಮಿ’ ಹಾಗೂ ಕ್ರೈಸ್ಟ್ ವಿಶ್ವವಿದ್ಯಾಲಯದ ಬನ್ನೇರುಘಟ್ಟ ಕ್ಯಾಂಪಸ್ ವಿದ್ಯಾರ್ಥಿಗಳ ಸಹಯೋಗದಲ್ಲಿ ಆಯೋಜಿಸಿದ್ದ ಬೃಹತ್ ಪ್ಲಾಗಿಂಗ್ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ಲಾಸ್ಟಿಕ್ ತ್ಯಾಜ್ಯದಿಂದ ಜಲಮೂಲಗಳು ಹಾಗೂ ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಗಟ್ಟಲು ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿದೆ. ಕೆರೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕದಂತೆ ನಾಗರಿಕರು ಜವಾಬ್ದಾರಿಯಿಂದ ವರ್ತಿಸಬೇಕು. ಏಕಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ಸಾಧ್ಯವಾದಷ್ಟು ತಿರಸ್ಕರಿಸಿ, ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
75 ನಿಮಿಷಗಳಲ್ಲಿ 120 ಕೆಜಿ ಪ್ಲಾಸ್ಟಿಕ್ ಸಂಗ್ರಹ
ಕಳೆದ ಒಂದು ದಶಕದಿಂದ ಪರಿಸರ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ‘ದಿ ಇಂಡಿಯನ್ ಪ್ಲಾಗರ್ಸ್ ಆರ್ಮಿ’ಯ 1032ನೇ ಪ್ಲಾಗಿಂಗ್ ಅಭಿಯಾನದ ಅಂಗವಾಗಿ ನಡೆದ ಈ ಸ್ವಚ್ಛತಾ ಕಾರ್ಯದಲ್ಲಿ 43 ಮಂದಿ ಪ್ಲಾಗರ್ಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕೇವಲ 75 ನಿಮಿಷಗಳಲ್ಲಿ ಕೆರೆಯ ಸುತ್ತಮುತ್ತಲಿನ ಸುಮಾರು 100 ಮೀಟರ್ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಾಟಲ್ಗಳು, ಹಾಲಿನ ಪ್ಯಾಕೆಟ್ಗಳು, ಚಾಕೊಲೇಟ್ ರ್ಯಾಪರ್ಗಳು ಹಾಗೂ ಪ್ಲಾಸ್ಟಿಕ್ ಸ್ಟ್ರಾಗ್ಗಳು ಸೇರಿದಂತೆ ಒಟ್ಟು 120 ಕೆಜಿ ಏಕಬಳಕೆಯ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಲಾಯಿತು. ಸಂಗ್ರಹಿಸಿದ ತ್ಯಾಜ್ಯವನ್ನು ಪ್ರತ್ಯೇಕ ಚೀಲಗಳಲ್ಲಿ ಶೇಖರಿಸಿ ಪಾಲಿಕೆಯ ಒಣಕಸ ಸಂಗ್ರಹಣಾ ವಾಹನಕ್ಕೆ ಹಸ್ತಾಂತರಿಸಲಾಯಿತು.
ಅಧಿಕಾರಿಗಳು, ಮಾರ್ಷಲ್ಗಳಿಂದಲೂ ಭಾಗವಹಿಸುವಿಕೆ
ಪಾಲಿಕೆ ಆಯುಕ್ತ ಕೆ.ಎನ್. ರಮೇಶ್, ಅಧಿಕಾರಿಗಳು ಹಾಗೂ ಪಾಲಿಕೆಯ ಮಾರ್ಷಲ್ಗಳು ಅಭಿಯಾನದಲ್ಲಿ ಖುದ್ದು ಭಾಗವಹಿಸಿ ಸ್ವಚ್ಛತಾ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಸಂಗ್ರಹಿಸಲಾದ ತ್ಯಾಜ್ಯವನ್ನು ಸ್ಥಳದಲ್ಲೇ ಸಮರ್ಪಕವಾಗಿ ವಿಂಗಡಿಸಿ, ಪಾಲಿಕೆಯ ವಾಹನಗಳ ಮೂಲಕ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಯಿತು.
ಮೂಲದಲ್ಲಿಯೇ ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಣಕ್ಕೆ ಕರೆ
ಅಭಿಯಾನದ ನೇತೃತ್ವ ವಹಿಸಿದ್ದ ಪರಿಸರ ಕಾರ್ಯಕರ್ತ ‘ಪ್ಲಾಗ್ ರಾಜಾ’ ಮಾತನಾಡಿ, ಪ್ಲಾಗಿಂಗ್ ಎಂದರೆ ಕೇವಲ ರಸ್ತೆ ಅಥವಾ ಕೆರೆಗಳಿಂದ ಕಸ ಹೆಕ್ಕುವುದಲ್ಲ. ಕಸ ಉತ್ಪತ್ತಿಯಾಗುವ ಮೂಲದಲ್ಲಿಯೇ ಅದನ್ನು ತಡೆಗಟ್ಟುವುದು ಮುಖ್ಯ. ಕಸ ಮಿಶ್ರಣವಾದರೆ ಮರುಬಳಕೆಗೆ ತೊಂದರೆಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಮನೆಯಿಂದಲೇ ನೀರಿನ ಬಾಟಲಿ ಕೊಂಡೊಯ್ಯುವ ಮೂಲಕ ಏಕಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ನಿರಾಕರಿಸಬೇಕು ಎಂದು ಹೇಳಿದರು.
ಜೀವನಶೈಲಿಯಲ್ಲಿ ಬದಲಾವಣೆ, ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ಬಳಕೆ ನಿರಾಕರಣೆ ಹಾಗೂ ಪ್ರಕೃತಿಯ ಬಗ್ಗೆ ಗೌರವದ ಮನೋಭಾವ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಅವರು ತಿಳಿಸಿದರು.
‘ನನ್ನ ಕಸ ನನ್ನ ಜವಾಬ್ದಾರಿ’ ಪ್ರತಿಜ್ಞೆ
ಕಾರ್ಯಕ್ರಮದ ಅಂಗವಾಗಿ ಆಯುಕ್ತರು, ವಿದ್ಯಾರ್ಥಿಗಳು, ಅಧಿಕಾರಿಗಳು ಹಾಗೂ ಪರಿಸರ ಪ್ರೇಮಿಗಳು ಏಕಬಳಕೆಯ ಪ್ಲಾಸ್ಟಿಕ್ ಬಳಕೆ ನಿರಾಕರಣೆ ಮತ್ತು ಸಮರ್ಪಕ ತ್ಯಾಜ್ಯ ವಿಂಗಡಣೆ ಕುರಿತು ಸಾಮೂಹಿಕ ಪ್ರತಿಜ್ಞೆ ಸ್ವೀಕರಿಸಿದರು.
‘ನನ್ನ ಕಸ ನನ್ನ ಜವಾಬ್ದಾರಿ, ನಮ್ಮೆಲ್ಲರ ಕಸ ನಮ್ಮೆಲ್ಲರ ಜವಾಬ್ದಾರಿ’ ಎಂಬ ಸಂದೇಶದೊಂದಿಗೆ ಸ್ವಚ್ಛ ಬೆಂಗಳೂರು, ಸ್ವಚ್ಛ ಕರ್ನಾಟಕ ಹಾಗೂ ಸ್ವಚ್ಛ ಭಾರತ ನಿರ್ಮಾಣಕ್ಕೆ ಬದ್ಧರಾಗುವ ಸಂಕಲ್ಪ ಮಾಡಲಾಯಿತು.
ನಗರದ ಕೆರೆಗಳು ಹಾಗೂ ಪರಿಸರವನ್ನು ಸ್ವಚ್ಛವಾಗಿಡಲು ನಾಗರಿಕರು, ಶಿಕ್ಷಣ ಸಂಸ್ಥೆಗಳು ಮತ್ತು ಸ್ಥಳೀಯ ಆಡಳಿತ ಒಟ್ಟಾಗಿ ಕಾರ್ಯನಿರ್ವಹಿಸುವುದು ಇಂದಿನ ಅಗತ್ಯವಾಗಿದೆ ಎಂದು ಆಯುಕ್ತ ಕೆ.ಎನ್. ರಮೇಶ್ ಹೇಳಿದರು.


