ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನಮ್ಮ ಪಕ್ಷದಲ್ಲಿ ಶಕುನಿ ಇದ್ದ ಹಾಗೆ.
ಬಿ ಎಸ್ ಯಡಿಯೂರಪ್ಪ ನನ್ನ ವಿರುದ್ಧ ದೂರು ನೀಡಿದ್ದಾರೆ. ನನ್ನ ವಿರುದ್ಧ ದೂರು ನೀಡಿದರೂ ಅವರದ್ದು ಏನೂ ನಡೆಯುತ್ತಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕಿಡಿಕಾರಿದರು.
ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ವಿಜಯಪುರ ನಗರದಲ್ಲಿ ವಾಜಪೇಯಿ ಪುತ್ತಳಿಗೆ ಮಾಲಾರ್ಪಣೆ ಮಾಡಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಯತ್ನಾಳ್, “ಯಡಿಯೂರಪ್ಪ ಅವರು ಏನು ಹೇಳುತ್ತಾರೆ ಅದು ಉಲ್ಟಾ ನಡೆದಿರುತ್ತದೆ. ಈ ಹಿಂದೆ ಶೋಭಾ ಕರಂದ್ಲಾಜೆ ಬಿಜೆಪಿ ರಾಜ್ಯಾಧ್ಯಕ್ಷೆಯಾಗಲಿ ಎಂದಿದ್ದರು. ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಪಕ್ಷ ನಾಯಕರಾಗಲು ನಮ್ಮ ಅಭ್ಯಂತರವಿಲ್ಲ ಎಂದು ಬಿ ವೈ ವಿಜಯೇಂದ್ರ ಹೇಳಿದ್ದರು. ಅಷ್ಟರಲ್ಲಿ ಹೈಕಮಾಂಡ್ನಲ್ಲಿ ಎಲ್ಲಾ ಪ್ಯಾಕ್ ಮಾಡಿಕೊಂಡು ಬಂದಿದ್ದರು” ಎಂದು ಕುಟುಕಿದರು.
ರೈತರ ಬರಗಾಲ ಬಯಸುತ್ತಾರೆಂದು ಸಚಿವ ಶಿವಾನಂದ ಪಾಟೀಲ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, “ಇದು ದುರ್ಧೈವ, ಯಾಕಂದರೆ ಶಿವಾನಂದ ಪಾಟೀಲ್ ಈ ಹಿಂದೆ ರೈತರ ಆತ್ಮಹತ್ಯೆ ಬಗ್ಗೆನೂ ಮಾತನಾಡಿದ್ದರು. ಇವತ್ತು ಬರಗಾಲವನ್ನು ರೈತರು ಬಯಸುತ್ತಾರೆ ಅಂತ ಹೇಳಿದ್ದಾರೆ. ಇದನ್ನು ಯಾವ ರೀತಿ ಖಂಡನೆ ಮಾಡಬೇಕು ಗೊತ್ತಾಗುತ್ತಿಲ್ಲ. ಒಬ್ಬ ಜವಾಬ್ದಾರಿಯುತ ಮಂತ್ರಿಗಳು, ಅದರಲ್ಲಿಯೂ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರು ರೈತರ ಬಗ್ಗೆ ಇಷ್ಟು ಹಗುರವಾಗಿ ಮಾತನಾಡಬಾರದು” ಎಂದರು.
ಮೂರನೇ ಟಿಪ್ಪು ಎಂದು ಸಚಿವ ಎಂ ಬಿ ಪಾಟೀಲ್ ಹೇಳಿಕೆ ವಿಚಾರವಾಗಿ ನಾನು ಮೂರನೇ ಟಿಪ್ಪು ಆದರೆ ಎಂ ಬಿ ಪಾಟೀಲ್ ನಾಲ್ಕನೇ ಟಿಪ್ಪು ಸುಲ್ತಾನ್” ಎಂದು ತಿರುಗೇಟು ಕೊಟ್ಟರು.
ಹಿಜಾಬ್ ಆದೇಶ ವಾಪಸ್ ವಿಚಾರವಾಹಿ ಮಾತನಾಡಿ, “ಇದೇ ರೀತಿ ಡ್ರೆಸ್ ಇರಬೇಕು ಎಂದು ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಎಲ್ಲಿಯೂ ಹಸ್ತಕ್ಷೇಪ ಮಾಡಿಲ್ಲ. ಇಡೀ ದೇಶದಲ್ಲಿ ಎಲ್ಲಿಯೂ ಈ ವಿಷಯ ಇಲ್ಲ, ಕರ್ನಾಟಕದಲ್ಲಿ ಯಾಕೆ? ಇದು ಇವರೇ ತೆಗೆದಿದ್ದು, ಈ ವಿಚಾರ ಕಾಂಗ್ರೆಸ್ಗೆ ಲೋಕಸಭೆಯಲ್ಲಿ ನಿಶ್ಚಿತವಾಗಿ ಮುಳುವಾಗುತ್ತದೆ” ಎಂದು ಹೇಳಿದರು.
“ಪ್ರಧಾನಿ ಮೋದಿ ಅವರು 2024ರ ಚುನಾವಣೆ ಒಳಗೆ ಅಥವಾ ಚುನಾವಣೆ ಬಳಿಕ ಸಮಾನ ನಾಗರಿಕತೆಯನ್ನು ಜಾರಿಗೆ ತರಬಹುದು. ನಮ್ಮ ದೇಶದಲ್ಲಿ ಸಮಾನ ನಾಗರಿಕತೆ ತರಬೇಕು ಎಂದು ಸುಪ್ರೀಂ ಕೋರ್ಟ್ ಸಹ ಸಲಹೆ ಕೊಟ್ಟಿದೆ. ಎಲ್ಲರಿಗೂ ಅನುಕೂಲವಾಗುವಂತಹ ಸಮಾನ ನಾಗರಿಕತೆ ಭಾರತದಲ್ಲಿ ಕೆಲವೇ ದಿನಗಳಲ್ಲಿ ಜಾರಿಯಾಗಲಿದೆ” ಎಂದು ಭವಿಷ್ಯ ನುಡಿದರು.