ರೈತರು ಕಷ್ಟದಲ್ಲಿರುವಾಗ ಅವರ ನೆರವಿಗೆ ಬರುವುದು ರಾಜ್ಯ ಸರ್ಕಾರದ ಕರ್ತವ್ಯ. ಎಂಎಸ್ಪಿ ಹಾಗೂ ಎಸ್ಎಪಿ ವಿಚಾರದಲ್ಲಿ ಸರ್ಕಾರ ವಿಳಂಬ ಮಾಡದೆ ತ್ವರಿತವಾಗಿ ನಿರ್ಧಾರ ಕೈಗೊಳ್ಳಬೇಕು. ರೈತರು ಮತ್ತು ಕಾರ್ಖಾನೆಗಳ ನಡುವಿನ ರಿಕವರಿ ಹಾಗೂ ರೇಟ್ ವಿಚಾರದಲ್ಲಿ ಸ್ಪಷ್ಟವಾದ ಫಾರ್ಮುಲಾ ಬಂದರೆ ಮಾತ್ರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರವು ರೈತರ ಹಿತಾಸಕ್ತಿಯನ್ನು ಕಾಪಾಡಲು ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಕಬ್ಬು ಬೆಳೆಗಾರರ ಎಂಎಸ್ಪಿ ಮತ್ತು ರಕ್ಷಣೆಗಾಗಿ ರಚಿಸಲಾಗಿರುವ ಸಮಿತಿಯು ಸೋಮವಾರ ಸಭೆ ಸೇರಲಿದೆ. ಈ ಸಭೆಯಲ್ಲಿ ಎಲ್ಲಾ ರೈತ ಮುಖಂಡರನ್ನು ಕರೆದು ಚರ್ಚಿಸಿ, ಒಂದು ವಾರದೊಳಗೆ ಸೂಕ್ತ ಪರಿಹಾರ ರೂಪಿಸಲಾಗುವುದು ಎಂದರು.
ಸೆಲ್ ಟ್ಯಾಕ್ಸ್ ಹಾಗೂ ಜಿಎಸ್ಟಿ ಮುಖಾಂತರ ಸಾವಿರಾರು ಕೋಟಿ ರೂಪಾಯಿ ರಾಜಸ್ವ ರಾಜ್ಯಕ್ಕೆ ಬರುವುದರಿಂದ, ರೈತರ ಸಮಸ್ಯೆ ಬಗೆಹರಿಸುವಲ್ಲಿ ರಾಜ್ಯ ಸರ್ಕಾರದ ಪಾತ್ರ ಹಾಗೂ ಜವಾಬ್ದಾರಿ ದೊಡ್ಡದಿದೆ. ಕಬ್ಬು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕಾಗಿ ಶೀಘ್ರವೇ ಎಸ್ಎಪಿ ಜಾರಿ ಮಾಡಬೇಕು. ಇದರಿಂದ ಕಬ್ಬಿನ ಬೆಲೆ ಹಾಗೂ ತೂಕದ ಕುರಿತಾದ ಅಸ್ಪಷ್ಟತೆ ನಿವಾರಣೆಯಾಗಿ ರೈತರಿಗೆ ಸ್ಪಷ್ಟ ಅಂದಾಜು ಸಿಗುತ್ತದೆ. ಇತರೆ ರಾಜ್ಯಗಳಲ್ಲಿ ಜಾರಿಯಲ್ಲಿರುವಂತೆ ಬೆಂಬಲ ಬೆಲೆ ಹಾಗೂ ಸಕ್ಕರೆ ಉತ್ಪಾದನೆ ಆಧರಿಸಿ ರಾಜ್ಯ ಸರ್ಕಾರವೂ ಬೆಂಬಲ ಬೆಲೆ ಘೋಷಿಸಲು ಕ್ರಮ ಕೈಗೊಳ್ಳಬೇಕು. ಕಳೆದ ಬಾರಿ ಸಿದ್ದರಾಮಯ್ಯ ಬೆಂಬಲ ಬೆಲೆ ನೀಡಿದ್ದರು ಎಂದು ಹೇಳಿದರು.
ಕಬ್ಬು ಬೆಳೆಗಾರರ ಸಮಸ್ಯೆಗಳು, ಕಾರ್ಖಾನೆಗಳಲ್ಲಿನ ರಿಕವರಿ ದರ ತೂಕ ಹಾಗೂ ಬೆಲೆ ನಿಗದಿಯ ಕುರಿತು ರೈತರು ಮತ್ತು ಕಾರ್ಖಾನೆ ಮಾಲೀಕರ ನಡುವೆ ಸ್ಪಷ್ಟವಾದ ಹಾಗೂ ವ್ಯವಸ್ಥಿತವಾದ ಫಾರ್ಮುಲಾ ರೂಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ತಾಂತ್ರಿಕ ಸಮಿತಿ ರಚನೆ
ಕಾರ್ಖಾನೆಯ ಮಾಲೀಕರು ಮತ್ತು ಕಬ್ಬು ಬೆಳೆಗಾರರು ಸೇರಿ ಒಂದು ಸಣ್ಣ ತಾಂತ್ರಿಕ ಸಮಿತಿಯನ್ನು ರಚಿಸಬೇಕು. ಲ್ಯಾಬ್ನಲ್ಲಿ ಸ್ಯಾಂಪಲ್ಸ್ ತಗೊಂಡು, ಅವರ ಎದುರುಗಡೆನೇ ರಿಕವರಿ ಪ್ರೋಸೆಸ್ ಮಾಡಿದರೆ ರೈತರು ಹಾಗೂ ಕಾರ್ಖಾನೆ ಮಾಲೀಕರು ಒಪ್ಪುವ ರಿಕವರಿ, ತೂಕ ಮತ್ತು ದರ ನಿಗದಿ ಆಗುತ್ತದೆ ಎಂದರು.
ಶಾಶ್ವತ ಫಾರ್ಮುಲಾ:
ಪ್ರತಿ ವರ್ಷ ಕಬ್ಬಿನ ದರ ನಿಗದಿ ಕುರಿತು ಗೊಂದಲ ಉಂಟಾಗದಂತೆ, ಸಕ್ಕರೆ ಮಾರಾಟಕ್ಕೆ ಎಂಎಸ್ಪಿ ಫಾರ್ಮುಲಾ ಮತ್ತು ಕಬ್ಬಿನ ಬೆಲೆಗೆ ಒಂದು ನಿರ್ದಿಷ್ಟ ಫಾರ್ಮುಲಾವನ್ನು ಅಳವಡಿಸಿಕೊಳ್ಳಬೇಕು. ಮಹಾರಾಷ್ಟ್ರದ ಗಡಿಗೆ ಹತ್ತಿರವಿರುವ ಕಬ್ಬು ಬೇರೆಡೆಗೆ ಹೋಗುವುದನ್ನು ತಪ್ಪಿಸಲು, ರಾಜ್ಯ ಸರ್ಕಾರ ಕೂಡ ಕೂಡಲೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಸ್ಟಿಂಗ್ ರಾಜಕೀಯ ಷಡ್ಯಂತ್ರಗಳ ಬಗ್ಗೆ ಎಚ್ಚರಿಕೆ
ಸ್ಟಿಂಗ್ ಆಪರೇಷನ್ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯವಾಗಿ ಎದುರಿಸಲು ಸಾಧ್ಯವಾಗದೆ ಕೆಲವರು ಸ್ಟಿಂಗ್ ಆಪರೇಷನ್ಗಳಂತಹ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ. ಇದು ನೈತಿಕತೆಯ ಅಧಪತನವಾಗಿದೆ. ಒಬ್ಬ ವ್ಯಕ್ತಿಯನ್ನು ರಾಜಕೀಯವಾಗಿ ಎದುರಿಸಬೇಕು ಹೊರತಾಗಿ ಸ್ಟಿಂಗ್ ಮೂಲಕ ರಾಜಕೀಯ ಮೊಟಕುಗೊಳಿಸುವುದು ಬಹಳ ಆತಂಕಕಾರಿ ಇದಕ್ಕೆ ಇತಿಶ್ರೀ ಹಾಡಬೇಕು.
ಮುಖ್ಯಮಂತ್ರಿಗಳು ಇದನ್ನು ಪ್ರಾರಂಭ ಮಾಡಿ ಈಗ ಯಾವುದೊ ಒಂದು ಸಣ್ಣ ತನಿಖೆ ಮಾಡಿದರೆ ಆಗುವುದಿಲ್ಲ. ಅವರು ಐವರು ಸಚಿವರ ಮೇಲೆ ಅನುಮಾನ ಇದೆ ಅಂತ ಹೇಳಿದ್ದರು. ಆ ಐವರು ಸಚಿವರಿಗೆ ಸಂಬಂಧಿಸಿದಂತೆ ಸೂಕ್ತ ತನಿಖೆಯಾಗಬೇಕು ಹೊರತು, ಕೇವಲ ಸಿದ್ದರಾಮಯ್ಯ ಅವರು ಕೊಟ್ಟ ದೂರಿನ ಆಧಾರದ ಮೇಲೆ ತನಿಖೆ ನಡೆಸಿದರೆ ಅದು ಸೀಮಿತವಾದ ತನಿಖೆಯಾಗಲಿದೆ. ಸಂಪೂರ್ಣ ಸತ್ಯ ಹೊರಬರಲು ಸಾಧ್ಯವಿಲ್ಲ. ಸಚಿವರ ಮೇಲಿನ ಸ್ಟಿಂಗ್ ಆಪರೇಷನ್ ಹಾಗೇ ಉಳಿದು ಬಿಡುತ್ತದೆ. ಹೀಗಾಗಿ ಸಮಗ್ರ ತನಿಖೆ ಆಗಬೇಕು.
ರಾಜ್ಯ ಸರ್ಕಾರದ ಅಧಿಕಾರಿಗಳು ಸಚಿವರ ಮೇಲಿನ ತನಿಖೆ ಮಾಡುವುದು ಎಷ್ಟು ಸಮಂಜಸ ಹೀಗಾಗಿ ಇದನ್ನು ಸಿಬಿಐಗೆ ಕೊಡಬೇಕೆಂದು ಆಗ್ರಹಿಸಿದರು.
ತನಿಖೆ ಪ್ರಾರಂಭವಾಗಿ ಒಂದು ವಾರ ಕಳೆಯಿತು. ತನಿಖೆ ಆಮೆ ವೇಗದಲ್ಲಿ ನಡೆಯುತ್ತಿದೆ. ಯಾರು ಪ್ರಸಾರ ಮಾಡುತ್ತಿದ್ದಾರೆ ಅವರನ್ನು ಹಿಡಿಯುತ್ತಿದ್ದಾರೆ. ಯಾರು ತಯಾರು ಮಾಡಿದ್ದಾರೆ. ಯಾರು ಹಣ ಒದಗಿಸಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಬೇಕು. ಇದು ರಾಜ್ಯದಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾಗಿ ಈಗ ವ್ಯವಸ್ಥಿತವಾಗಿ ಮಾಡುವ ಮಟ್ಟಕ್ಕೆ ಬೆಳೆದಿದ್ದು ತಾವು ಏನು ಮಾಡಿದರೂ ಯಾರೂ ಏನೂ ಮಾಡುವುದಿಲ್ಲ ಎನ್ನುವ ಧೈರ್ಯ ಬಂದಿದೆ ಅದು ಹೋಗಬೇಕಿದೆ ಎಂದು ಹೇಳಿದರು.


