ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಅಸಮಾಧಾನ ಕಡಿಮೆಯಾದಂತೆ ಕಾಣುತ್ತಿಲ್ಲ. ವಿಪಕ್ಷ ನಾಯಕ ಅಥವಾ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಉತ್ತರ ಕರ್ನಾಟಕದವರಿಗೆ ನೀಡಬೇಕು ಎಂದು ಯತ್ನಾಳ ಅವರು ತಮ್ಮ ಆಗ್ರಹವನ್ನು ಮುಂದುವರಿಸಿದ್ದಾರೆ.
ಉತ್ತರ ಕರ್ನಾಟಕಕ್ಕೆ ನ್ಯಾಯ ಕೊಡುವವರೆಗೂ ಬಿಜೆಪಿ ಶಾಸಕಾಂಗ ಸಭೆಗೆ ಹೋಗಲ್ಲ ಎಂದು ಖಡಕ್ ಆಗಿ ಎಚ್ಚರಿಸಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, “ಸದನದಲ್ಲಿ ಉತ್ತರ ಕರ್ನಾಟಕ ಭಾಗದ ಜನರ ಸಮಸ್ಯೆ ಬಗ್ಗೆ ಚರ್ಚೆ ಆಗಲಿ. ದಕ್ಷಿಣ ಕರ್ನಾಟಕಕ್ಕೆ ನ್ಯಾಯ ಕೊಟ್ರು, ಆ ಭಾಗದ ನಾಯಕರಿಗೆ ನಾವು ಗುಲಾಮರಲ್ಲ” ಎಂದಿದ್ದಾರೆ.
“ಉತ್ತರ ಕರ್ನಾಟಕಕ್ಕೆ ನ್ಯಾಯ ಕೊಡುವವರೆಗೂ ಬಿಜೆಪಿ ಶಾಸಕಾಂಗ ಸಭೆಗೆ ಬರಲ್ಲ. ಬಹಳಷ್ಟು ಅನಕೂಲ ಇದ್ದವರಿಗೆ ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕನನ್ನು ಮಾಡುತ್ತಾರೆ. ರಾಜ್ಯದ ಜನರ ದೃಷ್ಟಿಯಲ್ಲಿ ನಾನು ಎಲ್ಲ ರೀತಿಯ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕ ಆಗಲು ಸಮರ್ಥನಾಗಿದ್ದೇನೆ” ಎಂದು ಹೇಳಿದ್ದಾರೆ.
“ಉತ್ತರ ಕರ್ನಾಟಕ ಭಾಗಕ್ಕೆ ರಾಜ್ಯಾಧ್ಯಕ್ಷ ಅಥವಾ ವಿರೋಧ ಪಕ್ಷದ ನಾಯಕ ಸ್ಥಾನ ಸಿಗಲೇಬೇಕು. ಅದಕ್ಕೆ ನಾನು ಯಾರ ಮುಲಾಜಿಗೂ ಹೆದರುವುದಿಲ್ಲ. ಉತ್ತರ ಕರ್ನಾಟಕಕ್ಕೆ ಅಪಮಾನ ಮಾಡಲಾಗಿದೆ. ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ಸ್ಥಾನ ಬದಲಾಗುವವರೆಗೂ ನಾನು ಶಾಸಕಾಂಗ ಸಭೆಗೆ ಹೋಗುವುದಿಲ್ಲ” ಎಂದು ಕಡ್ಡಿ ಮುರಿದಂಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ನಾವೇನು ಉತ್ತರ ಕರ್ನಾಟಕದವರು ಗಂಟೆ ಹೊಡಿಬೇಕಾ? ನಮಗೆ ನ್ಯಾಯ ಸಿಗುವವರೆಗೂ ಯಾವುದೇ ಹೋರಾಟಕ್ಕೂ ನಾನು ಸಿದ್ಧ. ಯಾವ ಸ್ಥಾನವನ್ನು ತ್ಯಾಗವನ್ನು ಬೇಕಾದರೂ ಮಾಡುತ್ತೇನೆ” ಎಂದು ಎಂದು ಪರೋಕ್ಷವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂಬುದನ್ನು ಹೇಳಿದ್ದಾರೆ.