Homeಕರ್ನಾಟಕಮೂರು ಬ್ಯಾಂಕ್‌ಗಳ ಹಗರಣ | ಸಿಬಿಐ ತನಿಖೆಗೆ ಅನುಮೋದಿಸಿದ ಸಿಎಂ ಸಿದ್ದರಾಮಯ್ಯ

ಮೂರು ಬ್ಯಾಂಕ್‌ಗಳ ಹಗರಣ | ಸಿಬಿಐ ತನಿಖೆಗೆ ಅನುಮೋದಿಸಿದ ಸಿಎಂ ಸಿದ್ದರಾಮಯ್ಯ

ಗುರು ರಾಘವೇಂದ್ರ ಕೋ ಅಪ್ ಬ್ಯಾಂಕ್, ವಸಿಷ್ಠ ಬ್ಯಾಂಕ್ ಮತ್ತು ಗುರು ಸಾರ್ವಭೌಮ ಬ್ಯಾಂಕ್ ಗಳ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ.

ಈ ಬ್ಯಾಂಕ್‌ಗಳಿಂದ ಠೇವಣಿದಾರರಿಗೆ ಆಗಿರುವ ನಷ್ಟ ಮತ್ತು ವಂಚನೆಯ ವಿರುದ್ಧ ಪ್ರತಿಪಕ್ಷದ ನಾಯಕರಾಗಿದ್ದಾಗ ಸಿದ್ದರಾಮಯ್ಯ ಅವರು ಸದನದ ಒಳಗೆ ಮತ್ತು ಹೊರಗೆ ಪ್ರತಿಭಟನೆ ಮಾಡಿ, ಸೂಕ್ತ ತನಿಖೆ ನಡೆಸಿ ಬ್ಯಾಂಕಿನ ಗ್ರಾಹಕರಿಗೆ ಮತ್ತು ಠೇವಣಿದಾರರಿಗೆ ನ್ಯಾಯ ಒದಗಿಸಲು ಆಗ್ರಹಿಸಿದ್ದರು.

ಮೂರೂ ಬ್ಯಾಂಕ್‌ಗಳ ಠೇವಣಿದಾರರು ನಡೆಸಿದ ಪ್ರತಿಭಟನೆಗೆ ವಿರೋಧ ಪಕ್ಷದ ನಾಯಕರಾಗಿದ್ದಾಗ ಸಿದ್ದರಾಮಯ್ಯ ಬೆಂಬಲ ಸೂಚಿಸಿದ್ದರು.

ಹಿನ್ನೆಲೆ

ಚಾಲ್ತಿಯಲ್ಲಿರುವ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಜನರಿಂದ ಠೇವಣಿ ಪಡೆದು ವಂಚಿಸಿದ ಆರೋಪ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ನಿಯಮಿತದ ಮೇಲಿದೆ. ಹೆಚ್ಚಿನ ಬಡ್ಡಿ ಆಸೆಗೆ ಸಾವಿರಾರು ಗ್ರಾಹಕರು ಈ ಸಂಸ್ಥೆಯಲ್ಲಿನೂರಾರು ಕೋಟಿ ರೂ. ಠೇವಣಿ ಇಟ್ಟಿದ್ದರು. ಸಾಲಗಾರರು, ಸಂಸ್ಥೆಯ ಆಡಳಿತ ಮಂಡಳಿ ಮತ್ತು ಉದ್ಯೋಗಿಗಳೊಂದಿಗೆ ಶಾಮೀಲಾಗಿ ನಕಲಿ ಠೇವಣಿ ಹಾಗೂ ನಿಶ್ಚಿತ ಠೇವಣಿಗಳ ಆಧಾರದಲ್ಲಿ ಭಾರಿ ಮೊತ್ತದ ಸಾಲ ಪಡೆದು ಮರು ಪಾವತಿಸದೆ ವಂಚಿಸಿದ್ದರು.

ಈ ಪ್ರಕರಣದಲ್ಲಿ ಸಂಸ್ಥೆಯ ಅಧ್ಯಕ್ಷ ಸೇರಿದಂತೆ ನಾಲ್ಕು ಮಂದಿಯನ್ನು ಬಂಧಿಸಿದ್ದರು. ಅದಕ್ಕೂ ಮೊದಲು ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಬಡ್ಡಿ ಠೇವಣಿದಾರರ ರಕ್ಷಣೆ ಕಾಯಿದೆ-2004 ಮತ್ತು ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ಸಂಸ್ಥೆ ಹಾಗೂ ಇತರರ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದರು. ಬಳಿಕ ಇ.ಡಿ. ಅಧಿಕಾರಿಗಳು 2020ರಲ್ಲಿ ಪಿಎಂಎಲ್‌ಎ ಅಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು.

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ ಸದಸ್ಯ ಯು ಬಿ ವೆಂಕಟೇಶ್‌ ಅವರು ಕೇಳಿದ್ದ ಗಮನಸೆಳೆಯುವ ಸೂಚನೆಗೆ ಉತ್ತರಿಸಿದ್ದ ಸಹಕಾರಿ ಸಚಿವ ಕೆಎನ್​ ರಾಜಣ್ಣ, “ಈ ಪ್ರಕರಣವನ್ನು ಸಿಬಿಐಗೆ ನೀಡಲು ನಿರ್ಧಾರ ಮಾಡಲಾಗಿದೆ. ಆದರೆ, ಕನ್ನಡದಲ್ಲಿರುವ ವಿಷಯಗಳು ಆಂಗ್ಲ ಭಾಷೆಗೆ ಅನುವಾದ ಮಾಡಬೇಕಿರುವುದರಿಂದ ವಿಳಂಬವಾಗಿದೆ. ಅನುವಾದ ಕಾರ್ಯ ಮುಗಿಸಿ ಸಿಬಿಐಗೆ ವಹಿಸಲಾಗುವುದು. ಈ ಬ್ಯಾಂಕನ್ನು ಏಕೆ ಮುಚ್ಚಬಾರದು ಎಂದು ಆರ್‌ಬಿಐ ಕೇಳಿದೆ. ಇದನ್ನು ಮುಚ್ಚಲು ನಮಗೂ ಇಷ್ಟವಿಲ್ಲ. ಆರ್‌ಬಿಐ ಜತೆಗೆ ಪತ್ರ ವ್ಯವಹಾರ ಮಾಡಲಾಗುವುದು” ಎಂದು ತಿಳಿಸಿದ್ದರು.

ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ನಿಯಮಿತದ ಅವ್ಯವಹಾರ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಸಂಸ್ಥೆಯ 114.19 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments