‘ನಿರ್ದಿಷ್ಟ ಖಾತೆಯೇ ಬೇಕು’ ಎಂದು ಪಟ್ಟು ಹಿಡಿದಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರು ತಮ್ಮ ಸಚಿವ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಅವರು, “ನನಗೆ ತಮ್ಮ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಿದಕ್ಕೆ ತಮಗೂ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ನನ್ನ ಧನ್ಯವಾದಗಳು. ನಾನು ನನ್ನ ಆತ್ಮಸಾಕ್ಷಿ ವಿರುದ್ಧವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದ ಕಾರಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ” ಎಂದು ಹೇಳಿದ್ದಾರೆ.
“ನನ್ನ ರಾಜೀನಾಮೆಯನ್ನು ಅಂಗೀಕರಿಸಬೇಕೆಂದು ಕೋರುತ್ತೇನೆ. ನಾನು ಶಾಸಕನಾಗಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ” ಎಂದು ವಿವರಿಸಿದ್ದಾರೆ.
ಡಿ ಕೆ ಶಿವಕುಮಾರ್ ಅವರು ರಾಮಲಿಂಗಾರೆಡ್ಡಿ ಅವರಿಗೆ ಜಲಸಂಪನ್ಮೂಲ ಖಾತೆಯನ್ನು ಹಂಚಿಕೆ ಮಾಡಿದ್ದರು. ಇದರಿಂದ ರಾಮಲಿಂಗಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದರು. 2023ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಚನೆಯಾದಾಗ ರಾಮಲಿಂಗಾರೆಡ್ಡಿ ಅವರು ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಪಟ್ಟು ಹಿಡಿದಿದ್ದರು. ಕೊನೆಗೆ ಡಿ ಕೆ ಶಿವಕುಮಾರ್ ಅವರು ಅವರ ಮನವೊಲಿಸಿ “ನಾನು ಮುಖ್ಯಮಂತ್ರಿಯಾದ ಮೇಲೆ ನಿಮಗೆ ನಗರಾಭಿವೃದ್ಧಿ ಖಾತೆ ಕೊಡುವೆ” ಎಂದು ಭರವಸೆ ನೀಡಿದ್ದರು ಎನ್ನುವ ಮಾತುಗಳು ಕೇಳಿಬರುತ್ತಿವೆ.



