Homeಅಂಕಣಜನ ಸುಖದಲ್ಲಿ ತೇಲಾಡುತ್ತಿದ್ದಾರೆ ಪ್ರಭೂ…

ಜನ ಸುಖದಲ್ಲಿ ತೇಲಾಡುತ್ತಿದ್ದಾರೆ ಪ್ರಭೂ…

“ಜನ ಸುಖದಲ್ಲಿ ತೇಲಾಡುತ್ತಿದ್ದಾರೆ ಪ್ರಭೂ…”
“ಮಾನಭಂಗವ ಮಾಡಿ ಮತ್ತೆ ಉಪಚಾರಗಳ ಎಷ್ಟು ಮಾಡಿದರೇನು ಇರಬಾರದಯ್ಯಾ….” ಎಂಬ ಪುರಂದರದಾಸರ ಕೀರ್ತನೆಯನ್ನು ರಾಗ-ತಾಳ-ಲಯಬದ್ಧವಾಗಿ, ನೋವು ತುಂಬಿದ ಧನಿಯಲ್ಲಿ ಗಟ್ಟಿಯಾಗಿ ಹಾಡಿಕೊಳ್ಳುತ್ತಾ ಸಭೆಗೆ ಎಂಟ್ರಿ ಕೊಟ್ಟ ಪಂಗ್ಳಿಯ ಅವತಾರವನ್ನು ಕಂಡು, ಅವನ ಹಾಡನ್ನು ಕೇಳಿ ಸಭಾಸದರು,-ಅಂದರೆ ಜಗ್ಗಿ ಹೊರತಾಗಿ ಉಳಿದವರು-ಭದ್ರಿ, ಸುಕ್ರ, ಗಮಲಿ-ಒಮ್ಮೆಗೇ ದಿಙ್ಮೂಢರಾಗಿಬಿಟ್ಟರು. ಕೆಲವು ಕ್ಷಣಗಳ ಬಳಿಕ ಗಮಲಿಯೇ ಸಾವರಿಸಿಕೊಂಡು, ಅವನಷ್ಟೇ ನೋವಿನ ಧನಿಯಲ್ಲಿ ಕೇಳಿದಳು…

“ಅಂಥದೇನಾಗಿತಲೇ ನಿಂಗೆ…ಯಾರಲೇ ನಿಂಗೆ ಅಷ್ಟು ಅವಮಾನ, ಮಾನಭಂಗ ಮಾಡಿದ್ದೂ…ಇರಬಾರ್ದು ಅಂದ್ರೆ ಎಲ್ಲಾಳಾಗ್ ಓಗ್ತಿಯಲೇ..?”
“ಅದ್ಯಾವ್ ಬಾಯಗೆ ಏನಂತಾ ಯೋಳನಕ್ಕಾ…” ಒತ್ತರಿಸಿ ಬರುವ ಅಳುವನ್ನು ನುಂಗಿಕೊಂಡು ತಲೆ ತಗ್ಗಿಸಿಕೊಂಡೇ ಮಾತನಾಡತೊಡಗಿದ ಪಂಗ್ಳಿ. “ಅಕ್ಕೋ…ಇಲ್ಲಿಗೇ ಬರನಾಂತ ಮನೆಯಿಂದ ಒರಟ್ನಾ…ಅಂಗೇ ದಾರ‍್ಯಾಗೆ ಬರ್ತಾ ಅಲ್ಲಿ ಒಂದ್ ಕಟ್ಟೆ ಮ್ಯಾಲೆ ಈ ಬಿಜೆಪಿ ಪಕ್ಸದ ದೊಡ್ಡದೊಡ್ಡರೆಲ್ಲಾ ಸೇರಿ ಅದೇನೋ ಮಾತಾಡಿಕ್ಯಂತಿದ್ರಾ…ಅದೇನ್ ನೊಡನಾ ಅಂತವಾ ಅಂಗೆ ಅತ್ತಗೋದ್ನಾ…”

ಪಂಗ್ಳಿ ಮಾತನ್ನು ಅರ್ಧಕ್ಕೇ ತಡೆದು ಸಿಟ್ಟಿನಿಂದ ಕೇಳಿದ ಸುಕ್ರ, “ಅಲ್ಲೇನ್ ನೆಕ್ಕಕೋಗಿದ್ಯಲೆ ನೀನೂ…”
“ಏ…ಯೋಳತಂಕ ಸುಮ್ಕೇ ಕೇಳಸ್ಕ್ಯಳಲೆ ಒಂದೀಟೂ…” ಸಿಟ್ಟಾದ ಪಂಗ್ಳಿ.
“ಏ ಅವನ್ ಮಾತೇನ್ ನೀನ್ ಯೋಳಲೆ ಮುಚ್ಕಂಡು..” ದಬಾಯಿಸಿದಳು ಗಮಲಿ.

“ಅಕ್ಕೋ…ಅಲ್ಗೋದ್ನಾ…ಅಲ್ಲೇನಾತ್ ಗೊತ್ತಾ…ಆ ಶೀಮಗ್ಗದ್ ಕಡೆ ಪಾರ್ಟಿ ಐತಲ್ಲ ಅದೂ…ನಾವು ಸೋಲಕೆ ಈ ಕಾಂಗ್ರೆಸ್ನೋರೇ ಕಾರಣ, ಕಾಂಗ್ರೆಸ್ಸಿನ್ ಶಾಶಕ್ರುನ್ನೆಲ್ಲಾ ನಮ್ ಪಕ್ಸಕ್ ಸೇರಿಸ್ಗ್ಯಂಡು ನಾವೆಲ್ಲಾ ಆಳಾಗೋದ್ವಿ. ಶಿಸ್ತೀಗೆ ಎಸರಾಗಿದ್ದ ನಮ್ ಬಿಜೆಪಿ ಪಕ್ಸ ಅವ್ರಿಂದ-ಅಂದ್ರೆ ಕಾಂಗ್ರೆಸ್ಸಿನ್ ಶಾಶಕ್ರಿಂದವಾ-ಕೆಟ್‌ಕೆರಾ ಇಡ್ದೋತ್ ನೋಡ್ರಪಾ… ಇಲ್ದುದ್ರೆ ನಾವೇ ಗೆದ್ದು ಸರ್ಕಾರ ಮಾಡಕ್ಯಂಡು ಆ ಸಿದ್ದರಾಮಯ್ಯನ್ನ, ಆ ಸಿವ್‌ಕುಮಾರುನ್ನ ಮನೀಗ್ ಕಳುಸ್ತುದ್ವಿ. ಎಲ್ಲಾ ಕೆಟ್ಟು ಆಳಾಗೋತು ಅಂತ ಗೋಳಾಡಕ್ ಸುರು ಮಾಡ್ತು… ಅದನ್ ಕೇಳ್ಕ್ಯಂಡು ಪಾಪಾ ಆ ಕಾಂಗ್ರೆಸ್ಸಿನ್ ಶಾಶಕ್ರೆಲ್ಲಾ ತಲೆಮ್ಯಾಲೆ ಕೈಒತ್ಗಂಡು….ನಾನ್ ಈಗೇಳಿನ್ಯಲಾ ಆ ಪದ್ಯ ಏಳ್ಕ್ಯಂತುದ್ರು. ಅದನ್ನೇ ನಾನ್ ಏಳ್ಕ್ಯಂತಾ ಬಂದುದ್ದು ಆಟೆಯಾ…” ಅಂತ ಮಾತು ಮುಗಿಸಿದ ಪಂಗ್ಳಿ.
“ಅಯ್ಯೋ ನಿನ್ ಹಳೆ ಎಂದಾಳಿ ತಂದು…ನಾವೆಲ್ಲ ನಿಂಗೇನೋ ಆತು, ಯಾರೋ ನಿಂಗೆ ಅವ್ಮಾನ ಮಾಡಿದ್ರೇನೋ ಅಂತವಾ ಬೇಜಾರ‍್ಕ್ಯಂಡು ಒದ್ದಾಡಂಗಾತಲೋ…” ಅಂತ ಪಂಗ್ಳಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಸುಕ್ರ. ಭದ್ರಿ, ಗಮಲಿ ಹಣೆಹಣೆ ಚಚ್ಚಿಕೊಂಡರು.

ಇನ್ನೇನು ಗಮಲಿ ಎದ್ದು ಅಡಿಗೆಮನೆ ಕಡೆ ಹೋಗುವವಳಿದ್ದಳು…ಅಷ್ಟರಲ್ಲೇ ಅತ್ಯಂತ ಖುಷಿಖುಷಿಯಾಗಿ…“ನಿಂದಕರಿರಬೇಕಿರಬೇಕೂ…ಹಂದಿ ಇದ್ದರೆ ಕೇರಿ ಹ್ಯಾಂಗೆ ಶುದ್ಧವೋ ಹಂಗೆ ನಿಂದಕರಿರಬೇಕೂ…” ಅಂತ ತಾನೂ ಒಂದು ಪುರಂದರದಾಸರ ಕೀರ್ತನೆಯನ್ನೇ ಹಾಡುತ್ತಾ ಸಭೆಗೆ ಪ್ರವೆಶಿಸಿದ ಜಗ್ಗಿ. ಒಮ್ಮೆ ನಿಂತು ಸಭಾಸದರನ್ನೆಲ್ಲಾ ದಿಟ್ಟಿಸಿ ನೋಡಿ ಮತ್ತೆ ಷುರು ಮಾಡಿದ…‘ಹಂದೀ ಇದ್ದರೆ ಕೇರಿ ಹ್ಯಾಂಗೆ ಶುದ್ಧವೊ ಹಂಗೇ ನಿಂದಕರಿರಬೇಕೂ….’
ಇನ್ನೂ ಆ ಹಾಡನ್ನು ಮುಂದುವರಿಸಲಿದ್ದ ಜಗ್ಗಿಯನ್ನು ಮುಲಾಜಿಲ್ಲದೆ ತಡೆದ ಗಮಲಿ…“ನಿಂಗೇನಾತಲೇ ಇದ್ದುಕ್ಕಿಂದಂಗೇ…ಬೆಳಿಗ್ಗೆ ಚೆನಾಗಿದ್ಯಲೋ…” ಅಂದಳು.

“ಅಕೋ…ನಿಂಗೇನ್ ಗೊತ್ತು ಮಜಾ…ಕಾಂಗ್ರೆಸ್ ಶಾಸಕ್ರನ್ನ ಸೇರಸ್ಕಂಡು ನಮ್ ಒಗ್ತಾನೆಲ್ಲಾ ಕೆಟ್ಟೋತು ಅಂತವಾ ಬಿಜೆಪಿನರು ಬೈದ್ರಂತೆ. ಅದುಕ್ಕೆ..ಕಾಂಗ್ರೆಸ್ಸಿನ್ ವಲಸೆ ಶಾಶಕರೊಬ್ಬರು, ಇಂಗೆಲ್ಲಾ ಮಾತಾಡಿದ್ರೆ ಸರಿಯಿರಕುಲ್ಲ ಅಂತವಾ ಸಿಟ್ಟಾದ್ರಂತೆ. ಅದುಕ್ಕೆ ಅದ್ಯಾರೋ ಮಂತ್ರಿ ಆಗಿದ್ನಲಾ ಆ ಆವೇರಿ ಕಡೇನೂ..ಅವ್ನು ಅಂಗೇಳ್ತುದ್ದ ತಗಾ…ಅದಕ್ಕೆಯಾ ನಾನೂ ಅಂಗೇ ಆ ಪದ್ಯವಾ ಅಡ್ಕ್ಯಂತ ಬಂದೆ…ಈಟೆಯಾ…ನಾನ್ಯಾಕೆ ಇಲ್ಲುದ್ದೆಲ್ಲಾ ಯೋಳನ…” ಅಂತ ಅವನ ಮಾತಿನ ಪ್ರೌಢಿಮೆ, ಸಂಗೀತಜ್ಞಾನದ ಬಗ್ಗೆ ತನ್ನ ಬೆನ್ನನ್ನುತಾನೇ ತಟ್ಟಿಕೊಂಡ ಜಗ್ಗಿ.

“ಅಣಾ…ಬದ್ರಣ್ಣೋ…ಈಗ ನೆಪ್ಪಿಗೆ ಬಂತ್ನೋಡು…ಈ ಬಿಜೆಪಿಯೋರ್ಗೆ ಏನ್ ಕಾಯ್ಲೆ ಆಗಿತಣಾ…” ಸುಕ್ರ ಏನೂ ಅರಿಯದ ಮುಗ್ಧ ಪ್ರಶ್ನೆ ಕೇಳಿದ.
“ಅವ್ರಿಗೇನಾಗಿತೋ…ಎಲ್ಲಾ ಚೆನಾಗೇ ಐದರಲ್ಲೋ…ನಾನ್ ಬೆಳಿಗ್ಗೆ ನೋಡಕ್ಯಂಡ್ ಬಂದಿದಿನೀ…ಓಸಳು ಚೆನಾಗೇ ಇದ್ರಲಾ…ಅದಿರ್ಲೀ..ನಿಂಗ್ಯಾಕಿಂತ ಅನುಮಾನ್ ಬಂತು ಇದ್ದುಕ್ಕಿದ್ದಂಗೆಯಾ…” ಅಂತ ಕೇಳಿದ ಏನೂ ಅರ್ಥವಾಗದೆ ಭದ್ರಿ.

“ಇಲ್ಲಾ ಕಣಣ್ಣೋ…ನಾನ್ ಆಗ್ಲೆ ಅಂಗೇ… ಇಂಗ್ ಬರ್ತಿದ್ನ್ಯಲ್ಲಾ ಅವಾಗ ಆ ಮಂತ್ರಿ ಇಲವೇ…ಅದೇ ಅವ್ರಪ್ಪ ಮುಕ್ಯಮಂತ್ರಿ ಆಗಿರ್ಲುಲ್ವೇ…ಆ ಕೊಡಗಿನ ಕಡೇದು…ಅದು ಅಂಗಂತುತ್ತು. ನಿಮಗೆಲ್ಲ…ಅಂದ್ರೆ ಬಿಜೆಪಿನೋರ್ಗೆ-ಏನ್ ಕಾಯ್ಲೆ ಅಂತ ಯೋಳಿದ್ರೆ ಏನಾರ ಔಸ್ತಿ-ಪೌಸ್ತಿ ತರ್ಸನಾ ಅಂತುತ್ತು. ಅದುಕ್ಕೇ ನಾನ್ ನಿನ್ ಕೇಳಿದ್ದು…ನಂಗೇನ್ ಗೊತ್ತು”
ಭದ್ರಿ ನಕ್ಕು ಹೇಳಿದ…“ಅದಂಗಲ್ಲ ಕಣಲೇ, ಅಕ್ಕಿ ಕೊಟ್ರೂ ಒದ್ದಾಡ್ತೀರೀ, ಅಕ್ಕಿ ಬದಲಿಗೆ ಹಣ ಕೊಡ್ತೀವಿ ಅಂದ್ರೆ ಅದಕ್ಕೂ ಏನಾರಾ ಅಂತೀರಲ್ಲಾ…ನಿಮಗೇನ್ ಕಾಯ್ಲೆ ಆಗಿದ್ದಾತೂ ಅಂತವಾ ದಿನೇಶ್ ಗುಂಡೂರಾವ್ ಗೇಲಿ ಮಾಡಿದರೆ ಅಷ್ಟೆಯಾ…”

ಅಷ್ಟರಲ್ಲೇ ಏನೋ ನೆನಪಿಸಿಕೊಂಡವನಂತೆ ಪಂಗ್ಳಿ, “ಇದೆಂಗೈತ್ ನೋಡು..ಮನ್ನೆ ನಮ್ ಮೋದಿ ತಾತಾರು ಅಮೆರಿಕುಕ್ಕೋಗಿದ್ರಲ್ಲ ಅವಗಾ ಅಲ್ಲಿನ್ ಅದ್ಯಕ್ಸನೇ ನಿಂತ್ಕಂಡು ಆ ಇಟಲೀಲಿ ಮಾಡ್ತರಂತಲ್ಲ ಅದೆಂತದೋ ‘ರಿಸೊಟ್ಟೊ’ ಅದುನ್ನ ಮಾಡಿದ್ನಂತೆ ಮೋದಿ ತಾತಾರ್ಗೆ ಉಣ್ಣಕೆ ಅಂತವಾ. ಅದುನ್ ನೋಡಿ ನಮ್ ಪರ್ದಾನಿಗುಳು, ‘ನಾನ್ ಇಟಲೀದು ಏನ್ನೂ ತಿನ್ನಂಗಿಲ್ಲಾ ಅಂದ್ರೆ ತಿನ್ನಂಗಿಲ್ಲ…’ ಅಂತ ಸ್ವಲ್ಪ ಖಾರವಾಗಿಯೇ ಕೇಳಿದ್ರಂತೆ. ಅದಕ್ಕೆ ಅದ್ಯಕ್ಸುರು ಗಪ್ಪಾಗಿಬುಟ್ರಂತೆ.” ಅಂದ.
“ಅದಿರ್ಲಲೇ…ಒಂದಾರೇಳು ದಿನ ಮೋದಿ ತಾತಾರು ಅಮೆರಿಕುಕ್ಕೋಗಿದ್ರಲ್ಲಾ ವಾಪಸ್ ಬಂದ್‌ಮ್ಯಾಲೆ ಪಕ್ಸದ್ ದೊಡ್ಡೆಜಮಾನ್ರುನ್ನ ಕೇಳಿದ್ರಂತೆ…” ಅಂತ–ಇನ್ನೂ ಏನೋ ಹೇಳಲು ತಿಣುಕಾಡುತ್ತಿದ್ದ ಪಂಗ್ಳಿಯನ್ನು ಅಲ್ಲೆ ತಡೆದು ಕೇಳಿದ ಸುಕ್ರ…“ಏನಂತವಾ..?”

“ಅಯ್…ಯೋಳತಂಕ ತಡೀಬಾರ್ದೆನಲೇ…” ಅಂತ ಗದರಿದ ಪಂಗ್ಳಿ ಮುಂದುವರಿಸಿದ ನಾಟಕೀಯವಾಗಿ…“ಎಲೈ ಮಂತ್ರಿಯೇ ನಮ್ಮ ಅನುಪಸ್ಥಿತಿಯಲ್ಲಿ ಭಾರತದ ಪ್ರಜೆಗಳೆಲ್ಲಾ ಹೇಗಿದ್ದಾರೆ…ಹೇಳುವಂಥವನಾಗು..ಅಂತ ಕೇಳಿದ್ರಂತೆ ಪರ್ದಾನಿಗ್ಳು, ಅದುಕ್ಕೆ ಆ ಮಂತ್ರಿ ಅತ್ಯಂತ ವಿನಮ್ರನಾಗಿ ಕೈ ಮುಗಿದು, ಬಗ್ಗಿ, ಮಹಾಪ್ರಭೂ ಎಲ್ಲಾ ೧೪೦ ಕೋಟಿ ಜನರೂ ಸುಖ-ಸಂತೋಷಗಳಲ್ಲಿ ತೇಲಾಡುತ್ತಿದ್ದಾರೆ. ವಿಶೇಷವಾಗಿ ಕರ್ನಾಟಕದಲ್ಲಂತೂ ಆ ಸಿದ್ದ ಸರ್ಕಾರದ ಗ್ಯಾರಂಟಿಗಳಿಂದಾಗಿ ಜನ ಕೇಕೆ ಹಾಕುತ್ತಿದ್ದಾರಂತೆ…ಆದರೇ…”

“ಏನು ಆ ನಿನ್ನ ಆದರೇ…ರೇ….” ಅಂತ ದೊಡ್ಡವರು ಗಟ್ಟನೆ ಗದರಲಾಗಿ.
ಆಗ ಮಂತ್ರಿವರ್ಯರು ಮೆಲ್ಲಗೆ…“ಅದೇ ಪ್ರಭೂ…ನಮ್ ಪಕ್ಷದ ಕೆಲ ನಾಯಕರು ಹೊಟ್ಟೆ ಉರಿ ಮತ್ತು ನೋವಿನಿಂದ ಬಳಲುತ್ತಿದ್ದಾರಂತೆ…”
“ಅವರಿಗೆ ಸೋಡಾ ಕುಡಿಯಲು ಹೇಳು…” ಅಂದ್ರಂತೆ ಅಂದ ಪಂಗ್ಳಿ. ಪಂಗ್ಳಿಯ ಈ ನಾಟಕದ ಡೈಲಾಗ್‌ಗೆ ಎಲ್ಲರೂ ಸುಸ್ತೋ ಸುಸ್ತು.
“ಅಣೋ…ಇನ್ನೊಂದ್ ತಮಾಶಿ ಗೊತ್ತಾತಾ…ಮನ್ನಿನಗ ದಿಲ್ಲೀನಾಗೆ ಅದೇನೋ ಮೀಟಿಂಗ್ ಇಟ್ಟುದ್ರಂತೆ…ಅದ್ರಾಗೆ ನಮ್ ಲಾಲೂ ಮಾಮಾ ಕೂಡ ಇದ್ರಲ್ಲಾ ಅವ್ರೇನೇಳಿದ್ರು ಗೊತ್ತೇ…ನಮ್ ರಾವುಲ್‌ಗಾಂದೀಗೆ, ‘ನೀನು ಮದ್ಲು ಗಡ್ಡ ಟ್ರಿಮ್ ಮಾಡ್ಕಂಡು ಒಂದು ಮದ್ವೆ ಮಾಡ್ಕಳಪಾ…’ಅಂದ್ರಂತೆ. ರಾವುಲ್‌ಗಾಂದಿ ಅಂಗೇ ಆಗ್ಲೀ ಮಾಮಾ ಮಾಡ್ಕ್ಯಂತಿನೀ ಅಂದುತಂತೆ.’

“ಬದ್ರಣ್ಣೋ…ನಗೊಂದ್ ಡೌಟು….” ತಲೆ ಕೆರೆದುಕೊಂಡ ಪಂಗ್ಳಿ.
“ಯಾವಾಗ್ಲೂ ಇದ್ದುದ್ದೇ ಕಣಲೆ ನಿನ್ ಡೌಟು…ಹೋಗ್ಲಿ ಅದೇನೇಳಲೇ…ನೋಡನಾ….”
“ಅದೇ…ಈ ಎಲೆಕ್ಸನ್ ಆದಮ್ಯಾಕೆ ಒಸ್ತಾಗಿ ಇದಾನ್‌ಸೌದ ಸೇರ್‌ಕ್ಯಂಡುದರಲ್ಲ ಆ ಶಾಶಕ್ರಿಗೆಲ್ಲ ಪಾಟ ಮಾಡಕೆ ಯಾರಾದ್ರೂ ಜಡ್ಜುಗಳ್ನೋ, ಹಿರೇ ಮುತ್ಸದ್ದಿಗ್ಳುನ್ನೋ ಕರಸದ್ ಬಿಟ್ಟು ಪಾಪಾ ಆ ದರ್ಮಸ್ತಳದ ಎಗ್ಗಡೆ, ಅದ್ಯಾರೋ ಮೌಲ್ವಿ ಸಾಬರ‍್ನ ಕರಸಿದ್ರಲ್ಲಾ ಶಾಶಕ್ರಿಗೆ ಅವ್ರೇನ್ ಪಾಟ ಯೋಳಿದ್ರು ಅಂತವಾ…?”
“ಅಯ್ಯಾ…ಪಂಗ್ಳಿ ಮಹಾನುಬಾವಾ…ನಿನ್ನ ಈ ಪ್ರಶ್ನೇನ ಹೋಗಿ ಆ ಖಾದ್ರ್ ಸಾಹೇಬ್ರಿಗೇ ಕೇಳಪ್ಪಾ….ಇದಕ್ಕೆ ಉತ್ರ ಕೊಡಾಕೆ ನಮ್ಮಿಂದ ಆಗಲ್ಲ ಮಾರಾಯಾ…” ಅಂತ ಕೈ ಮುಗಿದ ಭದ್ರಿ.

“ಈಗಾ…ನಮ್ ಪರ್ದಾನ್ ಮಂತ್ರಿಗ್ಳು ಪಾರಿನ್‌ಗೆ ಟೂರ್ ಓದಾಗ ಅವರ್ಗೆ ಇಲ್ಲಿನ್ ವಿಷ್ಯಾ ಗೊತ್ತಾಗಂಗಿರಲ್ಲೇನು. ದಿನಾ ದಿನಾ ಸುದ್ದಿ ಕಳಸಂಗಿಲ್ಲೇನು ಇವ್ರು… ಅದ್ಯಾಕ್ ಅವ್ರಿಗೆ ಗೊತ್ತಾಗ್ಲುಲ್ಲ…?”
“ಏ…ಓಗ್ತಾ ಇರ್ತುತೆ ಕಣಲೇ…ಎಲ್ಲೋ ಮರ್ತಿರಬೇಕು” ಭದ್ರಿಯ ಸಮಜಾಯಿಷಿ.
“ಅಲ್ಲಾ ಎಲೆಕ್ಸನ್ ಆಗಿ ಅತ್ತತ್ರಕ್ಕೆ ಎಲ್ಡ್‌ತಿಂಗ್ಳಾಗ್ತಾ ಬಂತು…ಅವ್ರು-ಅಂದ್ರೆ ಬಿಜೆಪಿನೋರು ಅವತ್ನಿಂದ ಇವತ್ತಿನ್‌ವರ್ಗೂ ಸೋಲಿನ್ ಕಾರ್ಣ ಕಂಡಿಡೀತೀವೀಂತ ದಿನಾ ಮೀಟಿಂಗ್ ಮ್ಯಾಲೆ ಮೀಟಿಂಗ್ ಮಾಡಿ ಉಡುಕ್ತಾನೇ ಐದರೆ…ಆದ್ರೂ ಸೋಲಿನ್ ಕಾರ್ಣ ಯಾರ್ಗೂ ಗೊತ್ತಾಗ್ಲೇ ಇಲ್ವಲ್ಲಾ…ಅದೆಂಗೇ…” ಜಗ್ಗಿಯ ಪ್ರಶ್ನೆ
“ಅಲ್ಲಲೇ…ಅವ್ರಿಗೇ ಇನ್ನೂ ಗೊತ್ತಾಗಿಲ್ಲ ಪಾಪಾ…ನಿಂಗೆಂಗ್ ಗೊತ್ತಾಗ್ತತಲೇ…ಮದ್ಲು ಅವ್ರಿಗ್ ಗೊತ್ತಾಗಿದ್ರೆ ತಾನೇ..ಒಬ್ಬೊಬ್ರು ಒಂದೊಂದ್ ತರಾ ಯೋಳ್ತಾ ಐದರೆ.” ಅಂದ ಭದ್ರಿ.

ಅದೇ ವೇಳೆಗೆ ಚಹಾದೊಂದಿಗೆ ಆಗಮಿಸಿದ ಗಮಲಿ, “ಅದನ್ನೇಳಕೂ ದಿಲ್ಲಿಯಿಂದ ದೊಡ್ಡ ದೊಡ್ಡ ಲೀಡರ್ರುಗ್ಳೇ ಬರ್ಬಕೇನೋಪ್ಪ…” ಎನ್ನುತ್ತಾ ಭದ್ರಿ ಕಡೆ ಓರೆನೋಟ ಬೀರಿದಳು.
ಅದಕ್ಕೆ ಭದ್ರಿ, “ಏ ಇಲ್ಲೇಳು…ತಮಿಳುನಾಡಿನಿಂದ ಮಾಜಿ ಐಪಿಎಸ್, ಹಾಲಿ ರಾಜಕಾರಣಿ ಅಣ್ಣಾಮಲೈ ಅಣ್ಣನ್ ಕರಸ್ತಾರಂತೆ…” ಅಂದ.
ಎಲ್ಲರೂ ಘೊಳ್ಳಂತ ನಕ್ಕರು. ಗಮಲಿ ಚಹಾ ವಿತರಿಸಿದಳು.

  • ಚಿಕ್ಕರಸು ಹುಲ್ಲೂರು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments