Homeಅಂಕಣಎದೆಯ ದನಿ | ಪ್ರಬಲ ಜಾತಿಯ ಠೇಂಕಾರಕ್ಕೆ ಜಾತಿ ಗಣತಿಯೇ ನೆಲಬಾಂಬು

ಎದೆಯ ದನಿ | ಪ್ರಬಲ ಜಾತಿಯ ಠೇಂಕಾರಕ್ಕೆ ಜಾತಿ ಗಣತಿಯೇ ನೆಲಬಾಂಬು

ಮೀಸಲಾತಿಯ ಗೊಂದಲ ದಲಿತ ಸಮುದಾಯಗಳ ಮಧ್ಯೆ ಒಡಕು ಮೂಡಿಸಿದೆ. ಸದ್ಯದಲ್ಲೇ, ಲೋಕಸಭೆ ಚುನಾವಣೆ ಎದುರಾಗಲಿದ್ದು, ಯಾರ ಪರ ನಿಲುವು ತೆಗೆದುಕೊಂಡರೂ ಕಷ್ಟ ಎಂಬ ಇಕ್ಕಟ್ಟಿನ ಸ್ಥಿತಿ ಸಿದ್ದರಾಮಯ್ಯನವರದ್ದಾಗಿದೆ. ತಮ್ಮ ಜೀವಿತಾವಧಿಯ ಕೊನೆಯ ಅಧಿಕಾರ ಅನುಭವಿಸುತ್ತಿರುವ ಸಿದ್ದರಾಮಯ್ಯ ಹೊಸತೊಂದು ಇತಿಹಾಸ ಸೃಷ್ಟಿಸುತ್ತಾರಾ? ಈ ಸುತ್ತ 'ಅಭಿಮನ್ಯು' ಕನ್ನಡ ಮಾಸ ಪತ್ರಿಕೆಯ ಡಿಸೆಂಬರ್‌ ಸಂಚಿಕೆಯಲ್ಲಿ 'ಸಮಗಾರ ಭೀಮವ್ವೆ' ಬರೆದ ಅಗ್ರ ಲೇಖನ ಇಲ್ಲಿದೆ.

ಸುಮಾರು ಎರಡು ಸಾವಿರ ವರ್ಷಗಳಿಂದೀಚೆಗೆ ಜಾತಿಯನ್ನೇ ಉಸಿರಾಡುತ್ತಾ, ಜಾತಿ ವ್ಯವಸ್ಥೆಯ ಕೊಚ್ಚೆಯಲ್ಲೇ ಹೊರಳಾಡುತ್ತಾ, ತಮಗಿಂತ ಅನ್ಯರು ಕೀಳೆಂದು ಬಿಂಬಿಸಲು ಜಾತಿಯನ್ನೇ ಆಧಾರವಾಗಿಸಿಕೊಂಡಿರುವ ಭಾರತೀಯ ಸಮಾಜದಲ್ಲಿ ಜಾತಿಯೊಂದು ಅವಮಾನವೂ ಹೌದು; ಜಾತಿಯೊಂದು ಅಸ್ತ್ರವೂ ಹೌದು.

ಶೋಷಣೆಗೆ ಗುರಿಯಾದ ಸಮುದಾಯಗಳಿಗೆ ಜಾತಿ ಅಸ್ತ್ರವಾಗಿ, ಶೋಷಣೆ ನಿರತ ಸಮಾಜಕ್ಕೆ ಅದು ಅವಮಾನವಾಗಬೇಕಿತ್ತು. 12 ನೇ ಶತಮಾನದಲ್ಲೇ ಕರ್ನಾಟಕ ನೆಲದಲ್ಲಿ ಭುಗಿಲೆದ್ದ ಕಾಯಕ ಜೀವಿಗಳ ಚಳವಳಿ ಅರ್ಥಾತ್ ಶರಣರ ಚಳವಳಿ ಜಾತಿ ವ್ಯವಸ್ಥೆಯನ್ನೇ ಬುಡಮೇಲಾಗಿಸಲು ಪಣತೊಟ್ಟಿತ್ತು. ಈ ಚಳವಳಿ ಮುಂಚೂಣಿ ನಾಯಕರಾದ ಬಸವಣ್ಣನವರು, `ಉತ್ತಮ ಕುಲದಲ್ಲಿ ಹುಟ್ಟಿದನೆಂಬ ಹೊರೆಯ ಹೊರಿಸಿದರಯ್ಯಾ’ ಎಂದಿದ್ದರು. ಅಂದರೆ, ಜಾತಿ ಶ್ರೇಷ್ಠತೆಯನ್ನೇ ಅವಮಾನವೆಂದು ಭಾವಿಸಿದ್ದ ಬಸವಣ್ಣನವರು, ಮಾದಿಗ ಚನ್ನಯ್ಯನ ಮನೆಯ ದಾಸನು, ಡೋಹರ ಕಕ್ಕಯ್ಯನ ಮನೆಯ ದಾಸಿಯು ಬೆರಣಿ ಆರಿಸಲು ಹೋಗಿ, ‘ಕೂಡಿ ಸಂಗವ ಮಾಡಿ ಆನು ಹುಟ್ಟಿದೆ’ ಎಂದು ತಮ್ಮ ಜನ್ಮರಹಸ್ಯವನ್ನು ಬಣ್ಣಿಸಿಕೊಂಡಿದ್ದರು.

ಆ ಕಾಲಕ್ಕೆ ಅತ್ಯಂತ ಕೀಳೆಂದು ಕಾಣಲಾಗುತ್ತಿದ್ದ ಮಾದಿಗ ಮತ್ತು ಡೋಹರ ಸಮುದಾಯದ ಸಂಕರವಲ್ಲ, ಅವರ ಮನೆಯ ದಾಸ-ದಾಸಿಯರು ಸಂಗವ ಮಾಡಿ ಹುಟ್ಟಿದ್ದೆಂದು ಹೇಳುವ ಮೂಲಕ ಜಾತಿ ಹಿರಿಮೆಯನ್ನು ಸುಟ್ಟು ಹಾಕಿದ್ದರು. ಅದಾಗಿ ಶತಮಾನಗಳೇ ಕಳೆದರೂ ಜಾತಿ ವ್ಯವಸ್ಥೆಯ ಹೀನ ಶ್ರೇಣೀಕರಣ ಹೋಗಿಲ್ಲ. ಯಾವ ಬಸವಣ್ಣನವರು ವೈದಿಕ ಧರ್ಮವನ್ನು ತೊರೆದು, ಲಿಂಗಾಯತ ಧರ್ಮವನ್ನು ರೂಪಿಸಿದರೋ ಅದೇ ಲಿಂಗಾಯತರು ಜಾತಿ ರಾಜಕಾರಣವನ್ನು ಮಾಡುತ್ತಿರುವುದು ಮಾತ್ರ ಧರ್ಮ ಸಂಸ್ಥಾಪಕರಿಗೆ ಮಾಡುತ್ತಿರುವ ಆತ್ಮದ್ರೋಹ.

ಜಾತಿ ಶ್ರೇಣೀಕರಣ ವ್ಯವಸ್ಥೆಯೊಳಗೆ ನಿಜವಾಗಿ ಇರಬೇಕಾದ ಆದರ್ಶವೊಂದನ್ನು ಬಸವಣ್ಣನವರು ಮತ್ತು ಶರಣ ಚಳವಳಿಯ ನಾಯಕರು ಅಂದೇ ರೂಪಿಸಿಕೊಟ್ಟು ಹೋದರು. ಅದೇ ಮುಂದುವರಿದಿದ್ದೇ ಆದರೆ, ಜಾತಿಹೀನ-ಸಮತೆಯ ಸಮಾಜವೊಂದು ನಮ್ಮೆದುರು ಇರಬೇಕಾಗಿತ್ತು. ಇವತ್ತೇನಾಗಿದೆ ಎಂದರೆ, ಶೋಷಕ ಜಾತಿಗಳು ತಮ್ಮ ರಾಜಕೀಯ, ಶಿಕ್ಷಣ, ಉದ್ಯೋಗ, ಸಾಮಾಜಿಕ ಅಂತಸ್ತಿಗೆ ಜಾತಿಯನ್ನು ಊರುಗೋಲಾಗಿ ಬಳಸುತ್ತಿವೆ. ಜಾತಿಯ ಕಾರಣಕ್ಕೆ ನಿತ್ಯವೂ ಅಪಮಾನ, ಅನ್ಯಾಯಕ್ಕೆ ಸಿಲುಕಿರುವ ತಳಸ್ತರದ ಸಮುದಾಯಗಳು ಯಾಕಾದರೂ ಈ ಜಾತಿಯಲ್ಲಿ ಹುಟ್ಟಿದ್ದೇವೆ ಎಂಬ ನೋವಿನಿಂದ ಕೊರಗುತ್ತಿದ್ದಾರೆ. ಜಾತಿಯನ್ನು ಅಸ್ತ್ರವಾಗಿ ಮಾಡಿಕೊಳ್ಳುವ ಶಕ್ತಿಯನ್ನೂ ಈ ಸಮುದಾಯಗಳಿಂದ ಕಸಿದುಕೊಂಡು ಬಿಟ್ಟಿರುವುದು ಸದ್ಯದ ದುರಂತ.

ಈ ಹಿನ್ನೆಲೆಯೊಳಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2015ರಲ್ಲಿ ನಡೆಸಿದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಅರ್ಥಾತ್ ಜಾತಿ ಜನಗಣತಿಯನ್ನು ನೋಡಬೇಕಾಗಿದೆ. ಜಾತಿಯನ್ನೇ ಆಧರಿಸಿದ ಸಮಾಜ ವ್ಯವಸ್ಥೆಯಲ್ಲಿ ಎಲ್ಲದಕ್ಕೂ ಜಾತಿಯೇ ಬೇಕು. ಶಿಕ್ಷಣ, ಉದ್ಯೋಗ, ರಾಜಕೀಯ ಎಲ್ಲದಕ್ಕೂ ಜಾತಿಯೇ ಬೇಕು. ಆದರೆ, ಜಾತಿ ಗಣತಿಯ ನಿಖರ ಮಾಹಿತಿ ಪ್ರಬಲ ಜಾತಿಗಳಿಗೆ ಬೇಡವಾಗಿದೆ. ಇದನ್ನು ಪ್ರಶ್ನೆ ಮಾಡಿ, ಚಳವಳಿಯೊಂದನ್ನು ರೂಪಿಸುವ ಹೊಣೆಗಾರಿಕೆ ಹಿಂದುಳಿದವರು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಮೇಲೆ ಇದೆ.

ಕರ್ನಾಟಕದಲ್ಲಿ ಮೀಸಲಾತಿಯ ಯುಗ ಶುರುವಾಗಿದ್ದು ಬ್ರಿಟಿಶರ ಕಾಲದಲ್ಲಿಯೇ. ಶೈಕ್ಷಣಿಕ, ಸಾಮಾಜಿಕ ಮೀಸಲಾತಿ ನೀಡಲು ಸ್ವಾತಂತ್ರ್ಯ ಪೂರ್ವದಲ್ಲೇ ಮಿಲ್ಲರ್ ಆಯೋಗ ರಚಿಸಲಾಗಿತ್ತು. ಅದನ್ನು ಮುಂದುವರಿಸಿದವರು ಕರ್ನಾಟಕ ಕಂಡ ಕ್ರಾಂತಿಕಾರಿ ರಾಜಕಾರಣಿ ದಿವಂಗತ ದೇವರಾಜ ಅರಸರು. ಹಿಂದುಳಿದ ಜಾತಿಗಳಿಗೆ ನ್ಯಾಯಯುತ ಸೌಲಭ್ಯ ಕೊಡಿಸುವುದಕ್ಕೆ ಮುಂದಾದ ಅವರು ಲಕ್ಷ್ಮಣ ಜಿ. ಹಾವನೂರು ಅಧ್ಯಕ್ಷತೆಯಲ್ಲಿ ಹಿಂದುಳಿದ ವರ್ಗಗಳ ಆಯೋಗವೊಂದನ್ನು ರಚಿಸಿದರು.

ಇದನ್ನೂ ಓದಿ: ‘ಅಭಿಮನ್ಯು’ ಕನ್ನಡ ಮಾಸ ಪತ್ರಿಕೆಯ ಡಿಸೆಂಬರ್‌ ಸಂಚಿಕೆಯ ಪಿಡಿಎಫ್‌ ಪ್ರತಿ

ಹಾವನೂರು ವರದಿ ಸಿದ್ಧವಾದಾಗಲೂ ಇದೇ ರೀತಿಯ ವಾತಾವರಣ ಇತ್ತು. ಕಾಂತರಾಜ ವರದಿಗೆ ವಿರೋಧ ವ್ಯಕ್ತವಾಗುವ ರೀತಿಯಲ್ಲಿಯೇ ಹಾವನೂರು ಆಯೋಗದ ವರದಿಯನ್ನು ಒಕ್ಕಲಿಗರು, ಲಿಂಗಾಯತರು ಪ್ರಬಲವಾಗಿ ವಿರೋಧಿಸಿದ್ದರು. ಹಿಂದುಳಿದ ಸಮುದಾಯಗಳ ಅಸ್ಮಿತೆಯ ರಾಜಕಾರಣ ಮಾಡುತ್ತಾ, ಯಾರಿಗೂ ಮಣಿಯದ ಸ್ವಭಾವ ಹೊಂದಿದ್ದ ಅರಸರು, ಹಾವನೂರು ಆಯೋಗದ ವರದಿಯನ್ನು ಜಾರಿ ಮಾಡಿಯೇ ಬಿಟ್ಟರು. ನಂತರ ಕೇಂದ್ರದಲ್ಲಿ ಮಂಡಲ್ ಆಯೋಗದ ವರದಿ ಜಾರಿಗೆ ಮುಂದಾದಾಗ, ಕರ್ನಾಟಕದಲ್ಲೂ ಪ್ರಬಲ ಎರಡು ಜಾತಿಗಳು ಇದನ್ನು ವಿರೋಧಿಸಿದ್ದವು. ಇದರ ಹಿಂದೆ, ಬ್ರಾಹ್ಮಣರ ಹಿಡಿತದಲ್ಲಿರುವ ಆರೆಸ್ಸೆಸ್, ಬಿಜೆಪಿ ನಿಂತಿತ್ತು. ಅದೇ ಹೊತ್ತಿಗೆ ಚಿನ್ನಪ್ಪರೆಡ್ಡಿ ಆಯೋಗದ ವರದಿಯು ಸರ್ಕಾರದ ಮುಂದೆ ಬಂದಿತ್ತು. ಅದು ಕೆಲವು ಲೋಪದೋಷಗಳಿಂದ ಕೂಡಿತ್ತಾದರೂ ಅದರ ಜಾರಿಗೂ ಈ ಪ್ರಬಲ ಜಾತಿಗಳು ಅವಕಾಶ ಕೊಡಲಿಲ್ಲ.

ಈಗ ಸಿದ್ದರಾಮಯ್ಯ ಸರದಿ

ಕರ್ನಾಟಕದ ಶೋಷಿತ ಸಮುದಾಯಗಳ ಏಕೈಕ ಧ್ವನಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು, 2013-18ರ ಅವಧಿಯಲ್ಲಿ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಅದಕ್ಕೂ ಪೂರ್ವದಲ್ಲೇ ಅಂದರೆ 2004-06ರ ಅವಧಿಯಲ್ಲಿ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯೂ ಆಗಿದ್ದರು. ಆ ಅವಧಿಯಲ್ಲಿಯೇ, ಜಾತಿವಾರು ಜನಗಣತಿಗೆ ಚಾಲನೆ ನೀಡಿದ್ದರು. ನಂತರ ಎಚ್ ಡಿ ಕುಮಾರಸ್ವಾಮಿ, ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಗಳಾದರೂ ಇದಕ್ಕೆ ಸೂಕ್ತ ನೆರವು ನೀಡಲಿಲ್ಲ; ಆ ಕೆಲಸ ಮುಂದೆ ಹೋಗಲೂ ಇಲ್ಲ.

2013ರಲ್ಲಿ ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಬಂದಾಗಲೇ ಮತ್ತೆ ಇದಕ್ಕೆ ಅಧಿಕೃತ ಚಾಲನೆ ದೊರೆಯಿತು. ಸಮಾಜ ಕಲ್ಯಾಣ ಸಚಿವರಾಗಿದ್ದ ಎಚ್. ಆಂಜನೇಯ ಕೂಡ ಮುಂದಾಸಕ್ತಿ ವಹಿಸಿದರು. ಹೀಗಾಗಿ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸುವ ಹೊಣೆಯನ್ನು ಆಗ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಎಚ್. ಕಾಂತರಾಜ ಅವರಿಗೆ ವಹಿಸಲಾಯಿತು. ಲಕ್ಷಕ್ಕೂ ಹೆಚ್ಚು ಜನ ಸಮೀಕ್ಷೆಯಲ್ಲಿ ಭಾಗಿಯಾದರು.

2018ರ ಚುನಾವಣೆ ಪೂರ್ವದಲ್ಲಿ ವರದಿ ಭಾಗಶಃ ಪೂರ್ಣಗೊಂಡಿತ್ತು. ವರದಿ ಸ್ವೀಕರಿಸುವ ಮನಸ್ಸು ಸಿದ್ದರಾಮಯ್ಯನವರಿಗೆ ಇತ್ತು. ಆಗಿನ ಸಚಿವ ಸಂಪುಟದಲ್ಲಿಯೂ ಪ್ರಬಲರಾಗಿಯೇ ಇದ್ದ ಲಿಂಗಾಯತ, ಒಕ್ಕಲಿಗ ಸಚಿವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಸಿದ್ದರಾಮಯ್ಯನವರ ಬೆಂಬಲಕ್ಕೆ ಯಾರೊಬ್ಬರೂ ನಿಲ್ಲಿಲ್ಲ. ಚುನಾವಣೆ ಹೊತ್ತಿಗೆ ಸಮುದಾಯಗಳನ್ನು ಎದುರು ಹಾಕಿಕೊಂಡರೆ ಕಷ್ಟ ಎಂಬ ಲೆಕ್ಕಾಚಾರದಲ್ಲಿ ಅದನ್ನು ಸಿದ್ದರಾಮಯ್ಯನವರು ಕೈಬಿಟ್ಟರು. ನಂತರ ನಡೆದ ಚುನಾವಣೆಯಲ್ಲಿ ಸಿದ್ದರಾಮಯ್ಯನವರನ್ನೂ ಜನ ಕೈಬಿಟ್ಟರು. ಅದು ಇತಿಹಾಸ.

ಸಿದ್ದರಾಮಯ್ಯ ಈಗ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿದ್ದಾರೆ. ಸದಾ ಇವರ ಬೆಂಬಲಕ್ಕೆ ನಿಂತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಜಾತಿ ಗಣತಿಯ ಪರ ಧ್ವನಿ ಎತ್ತಿದ್ದಾರೆ. ಬಿಜೆಪಿಯನ್ನು ಸೋಲಿಸಲು ಪಣತೊಟ್ಟು, ರಚನೆಯಾಗಿರುವ ಇಂಡಿಯಾದ ನಾಯಕರು ಜಾತಿಗಣತಿಯ ಪರವಾಗಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಜಾತಿ ಗಣತಿ ವರದಿ ಬಿಡುಗಡೆ ಮಾಡಿದ್ದಾರೆ. ವಿಧಾನಸಭೆ ಚುನಾವಣೆ ನಡೆಯುತ್ತಿರುವ ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್, ಜಾತಿ ಗಣತಿಯ ಆದೇಶ ಹೊರಡಿಸಿದ್ದಾರೆ. ಚುನಾವಣೆ ನಡೆಯುತ್ತಿರುವ ತೆಲಂಗಾಣ, ಮಧ್ಯಪ್ರದೇಶ, ಛತ್ತೀಸಗಢದಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ರಾಹುಲ್ ಗಾಂಧಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ರಾಜ್ಯಗಳಲ್ಲೂ ಜಾತಿ ಗಣತಿ ಮಾಡಿಸುವುದಾಗಿ ಘೋಷಿಸಿದ್ದಾರೆ. ಇದರಿಂದಾಗಿ, ಸಿದ್ದರಾಮಯ್ಯನವರಿಗೆ ಆನೆಬಲ ಬಂದಂತಾಗಿದೆ. ಹೊಸ ಹುರುಪಿನಲ್ಲಿರುವ ಸಿದ್ದರಾಮಯ್ಯ, ಜಾತಿ ಗಣತಿ ವರದಿಯನ್ನು ಸ್ವೀಕರಿಸುವುದಾಗಿ ಹೇಳಿಬಿಟ್ಟಿದ್ದಾರೆ. ಈ ಹಂತದಲ್ಲಿ ಪರ-ವಿರೋಧದ ಚರ್ಚೆ ಹಾಗೂ ಹೋರಾಟಗಳು ತುರುಸು ಪಡೆಯುತ್ತಿವೆ.

ಹಿಂದುಳಿದ ಜಾತಿಗಳ ಒಕ್ಕೂಟ ಹಾಗೂ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಜಾತಿ ಗಣತಿ ವರದಿ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದಿದ್ದರೆ, ರಾಜಕೀಯವಾಗಿ ಪ್ರಬಲ ಜಾತಿಗಳಾದ ಲಿಂಗಾಯತ, ಒಕ್ಕಲಿಗರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೇಲ್ಜಾತಿಗಳಿಗೆ ಶೇ. 10ರಷ್ಟು ಮೀಸಲಾತಿಯಿಂದ ತೃಪ್ತಿಗೊಂಡಿರುವ ಬ್ರಾಹ್ಮಣರು, ಹೇಗೂ ಮೀಸಲಾತಿ ಸಿಕ್ಕಿದೆ; ತಮಗೇಕೆ ಈ ಉಸಾಬರಿ ಎಂದು ತೆಪ್ಪಗಿದ್ದಾರೆ.

ದಲಿತ ಸಂಘಟನೆಗಳು ಜಾತಿಗಣತಿ ವರದಿಯ ಪರವಾಗಿದ್ದರೂ ಸದಾಶಿವ ಆಯೋಗದ ವರದಿ ಅನುಸಾರ ಒಳಮೀಸಲಾತಿ ಜಾರಿಯಾದರೆ, ತಮಗೆ ತೊಂದರೆಯಾಗಲಿದೆ ಎಂದು ಕೂಗೆಬ್ಬಿಸಿರುವ ಕೊರಮ, ಲಂಬಾಣಿ, ಭೋವಿ(ಕೊಲಂಭೋ) ಒಕ್ಕೂಟ ಒಳಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದೆ. ಈ ಮೀಸಲಾತಿಯ ಗೊಂದಲ ದಲಿತ ಸಮುದಾಯಗಳ ಮಧ್ಯೆ ಒಡಕು ಮೂಡಿಸಿದೆ. ಸದ್ಯದಲ್ಲೇ, ಲೋಕಸಭೆ ಚುನಾವಣೆ ಎದುರಾಗಲಿದ್ದು, ಯಾರ ಪರ ನಿಲುವು ತೆಗೆದುಕೊಂಡರೂ ಕಷ್ಟ ಎಂಬ ಇಕ್ಕಟ್ಟಿನ ಸ್ಥಿತಿ ಸಿದ್ದರಾಮಯ್ಯನವರದ್ದಾಗಿದೆ.

ಲಿಂಗಾಯತ-ಒಕ್ಕಲಿಗರ ದ್ವಂದ್ವ ನಿಲುವು

ಆರು ತಿಂಗಳ ಹಿಂದೆ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಕ್ಕಲಿಗ, ಲಿಂಗಾಯತರು ಮೀಸಲಾತಿಯ ದೊಡ್ಡ ಕೂಗೆಬ್ಬಿಸಿದ್ದರು. ತಮಗೆ ನೀಡಿರುವ ಮೀಸಲಾತಿ ಹೆಚ್ಚಿಸಬೇಕು ಎಂದು ಪಟ್ಟು ಹಿಡಿದಿದ್ದರು. ಪರಿಶಿಷ್ಟ ಪಂಗಡದ ಪ್ರಬಲ ಸಮುದಾಯವಾದ ನಾಯಕ ಅಥವಾ ವಾಲ್ಮೀಕಿ ಸಮುದಾಯದವರು ತಮ್ಮ ಮೀಸಲಾತಿ ಹೆಚ್ಚಿಸಬೇಕು ಎಂದು ಹಟಕ್ಕೆ ಬಿದ್ದಿದ್ದರು. ಒಳಮೀಸಲಾತಿ ಜಾರಿಯ ಬೇಡಿಕೆಯೂ ಮುನ್ನೆಲೆಗೆ ಬಂದಿತ್ತು.

ಚುನಾವಣೆಯಲ್ಲಿ ಈ ಮತಬ್ಯಾಂಕ್ ಭದ್ರ ಪಡಿಸಿಕೊಳ್ಳಬೇಕೆಂಬ ಛಲಕ್ಕೆ ಬಿದ್ದಿದ್ದ ಬೊಮ್ಮಾಯಿ, ಮೀಸಲಾತಿ ಕುರಿತ ಹಲವು ತೀರ್ಮಾನಗಳನ್ನು ಕೈಗೊಂಡರು. ಯಾವುದೂ ಅನುಷ್ಠಾನವಾಗದೇ ಇದ್ದರೂ ರಾಜಕೀಯವಾಗಿ ಈ ತೀರ್ಮಾನ ಮಹತ್ವ ಪಡೆದಿತ್ತು. ಮುಸ್ಲಿಂ ಸಮುದಾಯಕ್ಕೆ ಇದ್ದ ಶೇ. 4ರಷ್ಟು ಮೀಸಲಾತಿ ಕಿತ್ತುಕೊಂಡು ಬೊಮ್ಮಾಯಿ ಸರ್ಕಾರ, ಅದರಲ್ಲಿ ತಲಾ ಎರಡನ್ನು ಲಿಂಗಾಯತ-ಒಕ್ಕಲಿಗರಿಗೆ ಹಂಚಿತ್ತು. ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ. 4ರಿಂದ 7ಕ್ಕೆ ಹೆಚ್ಚಿಸಿತ್ತು. ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ. 15ರಿಂದ ಶೇ. 17ಕ್ಕೆ ಹೆಚ್ಚಿಸಿತ್ತು. ಮೇಲ್ಜಾತಿಗೆ ಇರುವ ಶೇ. 10ರಷ್ಟು ಮೀಸಲಾತಿಯಲ್ಲಿ ನಗರ ಒಕ್ಕಲಿಗರಿಗೆ ಪಾಲನ್ನು ನೀಡಿತ್ತು. ಜಾರಿಯಾಗದ, ಆದರೆ, ಚುನಾವಣೆಯಲ್ಲಿ ಕಣ್ಣೊರೆಸುವ ತಂತ್ರವನ್ನು ಬೊಮ್ಮಾಯಿ ಅನುಸರಿಸಿದ್ದರು. ಚುನಾವಣೆಯಲ್ಲಿ ಜನ ಕೈಹಿಡಿಯಲಿಲ್ಲ; ಇವೆಲ್ಲವೂ ಚುನಾವಣೆ ರಾಜಕಾರಣ ಎಂದು ಜನರಿಗೆ ಗೊತ್ತಾಗಿತ್ತು.

ಇಲ್ಲೊಂದು ವೈಚಿತ್ರ್ಯವಿದೆ; ಲಿಂಗಾಯತರು ಮತ್ತು ಒಕ್ಕಲಿಗರು ತಮ್ಮ ಮೀಸಲಾತಿ ಹೆಚ್ಚಳಕ್ಕೆ ಪ್ರಬಲ ಹೋರಾಟ ನಡೆಸುವುದಾಗಿ ಘೋಷಿಸಿದ್ದರು. ಆಗ ಮೀಸಲಾತಿಯ ಲಾಭ ಪಡೆಯುವಾಗ ಯಾವ ನಾಚಿಕೆಯಾಗಲಿ ಈ ಸಮುದಾಯಕ್ಕೆ ಇರಲಿಲ್ಲ. ಜಾತಿ ಗಣತಿ ವರದಿ ಪ್ರಕಟವಾಗಿ, ಜಾತಿವಾರು ಜನಸಂಖ್ಯೆಯ ನಿಖರ ಮಾಹಿತಿ ಜಗತ್ತಿಗೆ ಗೊತ್ತಾದರೆ ಜಾತಿ ಕಾರಣಕ್ಕೆ ತಮಗಿರುವ ಮೀಸಲಾತಿ, ಸೌಲಭ್ಯಗಳು ಕಡಿತಗೊಳ್ಳಲಿವೆ ಎಂಬ ಭಯಕ್ಕೆ ಬಿದ್ದಿರುವ ಪ್ರಬಲ ಜಾತಿಗಳು ಈಗ ವಿರೋಧ ವ್ಯಕ್ತಪಡಿಸುತ್ತಿವೆ.

ಜಾತಿವಾರು ಮೀಸಲಾತಿ ಶಿಕ್ಷಣ, ಉದ್ಯೋಗ, ರಾಜಕೀಯದಲ್ಲಿ ಬೇಕು. ಆದರೆ, ಜಾತಿಯ ನಿಖರ ಮಾಹಿತಿ ಬೇಕಿಲ್ಲ ಎಂಬ ವಾದವೇ ಜನವಿರೋಧಿಯಾದುದು. ಅಂದರೆ, ಜಾತಿಯ ಜನಸಂಖ್ಯೆಗಿಂತ ಹೆಚ್ಚಿನ ಸೌಲಭ್ಯವನ್ನು, ಅನುಕೂಲವನ್ನು ಈ ಎರಡು ಜಾತಿಗಳು ಪಡೆದುಕೊಂಡಿವೆ ಎಂಬುದು ಮೇಲ್ನೋಟಕ್ಕೆ ಕಾಣಿಸುವ ಅಂಶ. ತಮ್ಮ ಜನಸಂಖ್ಯೆ ಅಷ್ಟು ಲಕ್ಷ, ಇಷ್ಟು ಲಕ್ಷ ಎಂದು ಕೊಚ್ಚಿಕೊಂಡು, ಅಂಕಿ ಅಂಶ ಮುಂದಿಟ್ಟು ರಾಜಕೀಯ ಲಾಭ ಗಿಟ್ಟಿಸುವ ಈ ಎರಡು ಸಮುದಾಯಗಳ ನಾಯಕರಿಗೆ, ತಮ್ಮ ಜನಸಂಖ್ಯೆ ನಿಜವಾಗಿಯೂ ಅಷ್ಟೇ ಇದೆ ಎಂಬುದು ಖಚಿತವಿದ್ದರೆ ಜಾತಿಗಣತಿ ವಿರೋಧಿಸುವ ಪ್ರಮೇಯವೇ ಇರುತ್ತಿರಲಿಲ್ಲ.
ಅಸಲಿಗೆ, ತಾವು ಹೇಳುತ್ತಿರುವುದು, ತಾವು ಕ್ಲೇಮು ಮಾಡುತ್ತಿರುವುದು, ತಾವು ಪಡೆದುಕೊಂಡಿರುವುದು ತಮ್ಮ ಜನಸಂಖ್ಯೆಗೆ ಹೋಲಿಸಿದರೆ ಅತಿ ಹೆಚ್ಚು ಎಂಬುದು ಈ ಸಮುದಾಯದ ನಾಯಕರಿಗೆ ಗೊತ್ತಿದೆ. ಅದೇ ಕಾರಣಕ್ಕೆ ಜಾತಿ ಗಣತಿಯನ್ನು ವಿರೋಧಿಸುತ್ತಿರುವುದು ರಹಸ್ಯವೇನಲ್ಲ.

ಯಾವುದೇ ನಾಗರಿಕ ಸಮಾಜ, ತನಗೆ ಸಿಗಬಾರದ್ದು ಸಿಗುತ್ತಿದ್ದರೆ, ಅದರಿಂದ ಅನ್ಯರಿಗೆ ವಂಚನೆಯಾಗುತ್ತಿದ್ದರೆ ಅದನ್ನು ಬಿಟ್ಟುಕೊಡಬೇಕಾದುದು ನ್ಯಾಯಯುತ ಮಾರ್ಗ. ಸಮಾಜದ ಮುಂಚಲನೆಯ ಸಂಕೇತ ಕೂಡ. ಒಂದು ವೇಳೆ, ಬಿಟ್ಟುಕೊಡದೇ ಇದ್ದರೆ ಅದನ್ನು ಕಿತ್ತುಕೊಂಡು ಕೊಡಬೇಕಾದುದು ಸಂವಿಧಾನ ರೀತ್ಯ ಅಸ್ತಿತ್ವಕ್ಕೆ ಬಂದ ಚುನಾಯಿತ ಸರ್ಕಾರದ ಕರ್ತವ್ಯ. ಸಿದ್ದರಾಮಯ್ಯ ಅದನ್ನೇ ಮಾಡಲು ಹೊರಟಿದ್ದಾರೆ.

ಸಾರ್ವಜನಿಕ ಸಂಪತ್ತು ಸಮಾನವಾಗಿ ಹಂಚಿಕೆಯಾಗಬೇಕು. ಅದರಲ್ಲೂ ಸೌಲಭ್ಯ ವಂಚಿತ ಸಮುದಾಯಕ್ಕೆ ಅದು ಸಿಗಬೇಕು. ಹಾಗೆ ಸಿಗಬೇಕಾದರೆ, ಯಾವ ಸಮುದಾಯದ ಜನಸಂಖ್ಯೆ ಎಷ್ಟು? ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಈ ಸಮದಾಯ ಯಾವ ಸ್ತರದಲ್ಲಿದೆ? ಉದ್ಯೋಗದಲ್ಲಿ ಪಡೆದ ಪಾಲೆಷ್ಟು? ಭೂಮಿ-ಉದ್ದಿಮೆಗಳಲ್ಲಿ ಪಾಲೆಷ್ಟು ಎಂಬ ನಿಖರ ಮಾಹಿತಿ ಇದ್ದರಷ್ಟೇ, ಸರ್ಕಾರದ ಸವಲತ್ತು ನ್ಯಾಯಯುತವಾಗಿ ಹಂಚಿಕೆಯಾಗಬಹುದು. ಅದೇ ಕಾರಣಕ್ಕೆ ಸಿದ್ದರಾಮಯ್ಯ ಸಮೀಕ್ಷೆ ಮಾಡಿಸಿದ್ದರು. ಅದರ ವರದಿ ಈಗ ಸಿದ್ಧಗೊಂಡಿದೆ. ವರದಿ ಹೊರಬರುವ ಮೊದಲೇ, ಅದು ಸರಿಯಿಲ್ಲ ಎಂಬ ವಾದವನ್ನು ಪ್ರಬಲ ಜಾತಿಗಳು ಮುಂದಿಟ್ಟಿವೆ. ಪ್ರಬಲ ಜಾತಿಗಳು ಅನಾದಿ ಕಾಲದಿಂದ ಜಾತಿ ಹೆಸರಿನಲ್ಲಿ ದಕ್ಕಿಸಿ, ಉಪಭೋಗಿಸಿಕೊಂಡು ಬಂದ ಸೌಲಭ್ಯಕ್ಕೆ, ಜಾತಿಯ ಠೇಂಕಾರದ ಬುಡಕ್ಕೆ ನೆಲಬಾಂಬು ಇಡುವ ರೀತಿಯಲ್ಲಿ ಜಾತಿ ಗಣತಿ ಇದ್ದೀತು.

ಹೀಗಾಗಿ, ಪ್ರಬಲ ಜಾತಿಗಳು ವಿರೋಧಿಸುತ್ತಿವೆ. ಅದನ್ನು ಲೆಕ್ಕಿಸದೇ ವರದಿ ಸ್ವೀಕರಿಸಿ, ವಿಧಾನಮಂಡಲದಲ್ಲಿ ಮಂಡಿಸಬೇಕು. ವರದಿ ಸ್ವೀಕರಿಸಿದ ಕೂಡಲೇ ಅದು ಜಾರಿಯಾಗಬೇಕೆಂದಿಲ್ಲ. ಅದನ್ನು ವಿರೋಧಿಸಲು ಸಾಕಷ್ಟು ಅವಕಾಶ ಇರುತ್ತದೆ. ವರದಿ ಸರಿಯಿಲ್ಲವೆಂದರೆ, ತಮ್ಮದೇ ಮಾರ್ಗದಲ್ಲಿ ಸರ್ಕಾರವನ್ನು ಮಣಿಸುವ ದಾರಿಗಳು ಒಕ್ಕಲಿಗ ಲಿಂಗಾಯತರಿಗೆ ಇದೆ. ಅದು ಬಹಿರಂಗವಾಗುವುದೇ ಬೇಡ ಎಂಬ ಒತ್ತಡದ ಹಿನ್ನೆಲೆಯೆಂದರೆ, ಅದರಲ್ಲಿ ಸತ್ಯಾಂಶವಿದೆ; ಪ್ರಬಲ ಜಾತಿಗಳು ಹೇಳಿಕೊಳ್ಳುತ್ತಿರುವ ಸಂಖ್ಯೆಯಲ್ಲಿ ಸುಳ್ಳಿದೆ ಎಂಬುದು ಸತ್ಯ. ಹೀಗಾಗಿಯಾದರೂ ವರದಿ ಬಹಿರಂಗವಾಗಲೇಬೇಕಿದೆ.

ಜಾತಿ ಗಣತಿ ವರದಿಯ ಜತೆಗೆ ಸಿದ್ದರಾಮಯ್ಯನವರು ಮಾಡಲೇಬೇಕಾದ ಕೆಲಸ ಮತ್ತೊಂದಿದೆ. ಪರಿಶಿಷ್ಟ ಜಾತಿಯ ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾ. ಸದಾಶಿವ ಆಯೋಗ ನೀಡಿದ ವರದಿಯನ್ನು ಸ್ವೀಕರಿಸಿ ಬಹಿರಂಗಪಡಿಸಬೇಕು. ಈ ವಿಷಯದಲ್ಲಿ ಸಚಿವ ಸಂಪುಟದಲ್ಲಿರುವ ಕೊಲಂಭೋ ಜಾತಿಗಳ ಸಚಿವರ ಮಾತಿಗೆ ಸೊಪ್ಪು ಹಾಕಬಾರದು.

2004ರಲ್ಲಿ ರಚನೆಯಾಗಿ 2012ರಲ್ಲಿ ವರದಿ ನೀಡಿದ ಸದಾಶಿವ ಆಯೋಗದ ವರದಿ ಹಳೆಯದಾಯಿತು ಎಂಬ ವಾದವಿದೆ. ಹಾಗಿದ್ದಲ್ಲಿ, ಮೊದಲು ಸದಾಶಿವ ವರದಿ ಆಯೋಗದ ವರದಿಯನ್ನು ಸ್ವೀಕರಿಸಿ, ಅದರ ಜತೆಗೆ ಕಾಲಮಿತಿಯೊಳಗೆ ಇದೇ ಮಾದರಿಯ ವರದಿಯನ್ನು ಸಿದ್ಧಪಡಿಸುವ ಕೆಲಸವನ್ನೂ ಮಾಡಬೇಕಿದೆ. ಅದರೆ ಜತೆಗೇ, ಮುಸ್ಲಿಂ ಸಮುದಾಯಕ್ಕೆ ನೀಡಿದ್ದ ಶೇ. 4ರಷ್ಟು ಮೀಸಲಾತಿಯನ್ನು ಬೊಮ್ಮಾಯಿ ಕಿತ್ತುಕೊಂಡಿದ್ದರು. ಅದನ್ನು ಮತ್ತೆ ನೀಡಬೇಕಾದ ಹೊಣೆಯೂ ಸಿದ್ದರಾಮಯ್ಯನವರ ಮೇಲಿದೆ. ಈ ಎಲ್ಲವನ್ನೂ ಕಾಲಮಿತಿಯಲ್ಲಿ ಮಾಡಲಿ; ಹಾಗೆ ಮಾಡಿ, ತಮ್ಮ ಜೀವಿತಾವಧಿಯ ಕೊನೆಯ ಅಧಿಕಾರ ಅನುಭವಿಸುತ್ತಿರುವ ಸಿದ್ದರಾಮಯ್ಯ ಹೊಸತೊಂದು ಇತಿಹಾಸವವನ್ನೂ ಸೃಷ್ಟಿಸಲಿ.

ಬರೆಹ: ಸಮಗಾರ ಭೀಮವ್ವೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments