Homeಕರ್ನಾಟಕಲಂಚ ಕೇಳುವವರ ವಿರುದ್ಧ ದೂರು ನೀಡಲು ಸಹಾಯವಾಣಿ ಆರಂಭಿಸುತ್ತೇವೆ: ಡಿ ಕೆ ಶಿವಕುಮಾರ್

ಲಂಚ ಕೇಳುವವರ ವಿರುದ್ಧ ದೂರು ನೀಡಲು ಸಹಾಯವಾಣಿ ಆರಂಭಿಸುತ್ತೇವೆ: ಡಿ ಕೆ ಶಿವಕುಮಾರ್

ಯಾರೊಬ್ಬರೂ ಒಂದು ರೂಪಾಯಿ ಲಂಚ ಕೊಡಲು ಹೋಗಬೇಡಿ. ಲಂಚ ಕೇಳುವವರ ವಿರುದ್ಧ ದೂರು ನೀಡಲು ಎಲ್ಲ ಸರ್ಕಾರಿ ಕಚೇರಿಗಳ ಮುಂದೆ ದೂರವಾಣಿ ಸಂಖ್ಯೆಯನ್ನು ಶೀಘ್ರದಲ್ಲೇ ಹಾಕಲಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು.

ಕನಕಪುರದಲ್ಲಿ ನಡೆದ ಜನಸಂಪರ್ಕ ಸಭೆ‌ ಉದ್ಘಾಟಿಸಿ ಮಾತನಾಡಿದ ಅವರು, “ಕಂದಾಯ, ಪಂಚಾಯಿತಿ ಅಧಿಕಾರಿ ಸೇರಿದಂತೆ ಯಾವುದೇ ಸರ್ಕಾರಿ ಅಧಿಕಾರಿಗಳು ಲಂಚ ಕೇಳಿದರೆ ನೇರವಾಗಿ ಜಿಲ್ಲಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ದೂರು ನೀಡಬಹುದು. ಜನರ ಅಹವಾಲುಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು. ನಮ್ಮ ತಾಲ್ಲೂಕಿನಲ್ಲಿ ಉತ್ತಮವಾದ ಆಡಳಿತ ನಡೆಯಬೇಕು. ಈ ಹಿಂದಿನ ತಹಶೀಲ್ದಾರ್ ಇದ್ದಾಗ ಒಂದಷ್ಟು ತೊಂದರೆಗಳು ಇದ್ದವು” ಎಂದರು.

“ಕನಕಪುರ- ರಾಮನಗರ ಜಿಲ್ಲೆಯ ಜನರ ಎಲ್ಲ ಜಮೀನುಗಳಿಗೆ ಸೂಕ್ತ ದಾಖಲೆಗಳನ್ನು ಅಧಿಕಾರಿಗಳು ಮಾಡಿಕೊಡಬೇಕು. ಡ್ರೋನ್ ತಂತ್ರಜ್ಞಾನದ ಮೂಲಕ ಜಮೀನುಗಳ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಈ ಕಾರ್ಯವನ್ನು ಉಯ್ಯಂಬಳ್ಳಿಯಿಂದ ಪ್ರಾರಂಭ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಜಮೀನಿನ ಪೋಡಿ- ಪಹಣಿ ದಾಖಲೆಗಳು ನಿಮ್ಮದೇ ಮೊಬೈಲ್‌ನಲ್ಲಿ ದೊರೆಯುತ್ತದೆ” ಎಂದು ಹೇಳಿದರು.

“ಕನಕಪುರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾಗುತ್ತಿದೆ, ಸ್ವಲ್ಪ ತಡವಾಗಬಹುದು ಆದರೆ ಆದಷ್ಟು ಬೇಗ ಜನರ ಸೇವೆಗೆ ಸಿಗಲಿದೆ. ತಾಯಿ- ಮಕ್ಕಳ ಆಸ್ಪತ್ರೆ ಉದ್ಘಾಟನೆಯಾಗಿ ಆರೋಗ್ಯದ ವಿಚಾರದಲ್ಲಿ ಜನರಿಗೆ ಉತ್ತಮ ಸೌಲಭ್ಯ ದೊರೆಯುತ್ತಿದೆ. ಆದಷ್ಟು ಬೇಗ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ತುಂಬಲಾಗುವುದು” ಎಂದು ತಿಳಿಸಿದರು.

ಜಮೀನು ಮಾರಾಟ ಮಾಡಬೇಡಿ

“ನಿಮ್ಮ ಜಮೀನುಗಳಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಬೆಲೆ ಬರುತ್ತದೆ. ಯಾವುದೇ ಕಾರಣಕ್ಕೂ ನಿಮ್ಮ ಭೂಮಿಗಳನ್ನು ಮಾರಾಟ ಮಾಡಿಕೊಳ್ಳಬೇಡಿ. ಕನಕಪುರ, ಸಾತನೂರು, ಕೋಡಿಹಳ್ಳಿ, ದೊಡ್ಡ ಆಲಹಳ್ಳಿ ಇಲ್ಲೆಲ್ಲಾ ಮೊದಲು ಭೂಮಿಯ ಬೆಲೆ ಎಷ್ಟಿತ್ತು ಈಗ ಎಷ್ಟಿದೆ ಎಂದು ನೀವೆ ಅಂದಾಜು ಮಾಡಿ. ನಾನು ಏನೇನು ಮಾಡಲು ಸಾಧ್ಯ ಆ ಕೆಲಸವನ್ನು ಮಾಡಿದ್ದೇನೆ. ಇದಕ್ಕೆ ಎಷ್ಟೊಂದು ವಿವಾದ ಮಾಡಿದರು. ಇದೆಲ್ಲಾ ಬೆಂಗಳೂರು ಎಂದ ತಕ್ಷಣ ಏನೇನೋ ವ್ಯಾಖ್ಯಾನ ಪ್ರಾರಂಭವಾಯಿತು. ಇದನ್ನ ವಿರೋಧ ಮಾಡುವವರೆಲ್ಲ ಮಾಡಲಿ, ನಾವು ಬೆಂಗಳೂರು ಜಿಲ್ಲೆಯವರಯ ಸೂಕ್ತ ಕಾಲ ಬರುತ್ತದೆ. ನಾನು ನಿಮ್ಮ ಗೌರವ ಉಳಿಸಲು ಏನು ಮಾಡಬೇಕೋ ಮಾಡುತ್ತೇನೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ” ಎಂದು ಭರವಸೆ ನೀಡಿದರು.

1500ಕ್ಕೂ ಹೆಚ್ಚು ಅರ್ಜಿ ವಿಲೇವಾರಿ

ಡಿ ಕೆ ಶಿವಕುಮಾರ್‌ ಅವರು ಬೆಳಗಿನಿಂದ ಸಂಜೆವರೆಗೂ ಇಡೀ ದಿನ ಕನಕಪುರದ ಅಂಬೇಡ್ಕರ್ ಭವನದಲ್ಲಿ ಕುಳಿತು ಸುಮಾರು 1500 ಕ್ಕೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಿದರು.

ಸಂಸದ ಡಿ ಕೆ ಸುರೇಶ್ ಅವರು ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಜನಸಂಪರ್ಕ ಸಭೆಗಳನ್ನು ಮಾಡಿ ಪರಿಹಾರ ಒದಗಿಸಿರುವುದರಿಂದ ಬಹುತೇಕ ಸಮಸ್ಯೆಗಳು ಬಗೆಹರಿದಿವೆ ಎಂದೂ ಹಲವಾರು ಹೇಳಿದರು.

ಶ್ರೀರಕ್ಷಾ ಎಂಬ ಯುವತಿ, ಕೆಲಸ ಮತ್ತು ವಿದ್ಯಾಭ್ಯಾಸ ನಿಮಿತ್ತ ಬಹಳಷ್ಟು ಮಂದಿ ನಿತ್ಯ ಬೆಂಗಳೂರಿಗೆ ಓಡಾಡುತಿದ್ದೇವೆ. ಗೃಹಲಕ್ಷ್ಮಿ ಯೋಜನೆ ಅಡಿ ಬರುವ ದುಡ್ಡು, ಮೆಟ್ರೋ ರೈಲಿಗೆ ಖರ್ಚಾಗುತ್ತಿದೆ. ಹೀಗಾಗಿ ಬೆಂಗಳೂರಿಂದ ಹಾರೋಹಳ್ಳಿವರೆಗೆ ಇರುವ ಬಿಎಂಟಿಸಿ ಬಸ್ ಸೌಲಭ್ಯವನ್ನು ಕನಕಪುರದವರೆಗೆ ವಿಸ್ತರಿಸಿ. ಬೆಳಗ್ಗೆ ಮತ್ತು ಸಂಜೆ 20 ಬಸ್ ಗಳ ಸಂಚಾರ ವ್ಯವಸ್ಥೆ ಮಾಡಿ ಎಂದು ಕೇಳಿಕೊಂಡರು. ಡಿಸಿಎಂ ಅವರು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತನಾಡುವುದಾಗಿ ಭರವಸೆ ನೀಡಿದರು.

ಟಿ ಬೇಕುಪ್ಪೆಯ ಹೊನ್ನೇಗೌಡ, ಸಂಬೇಗೌಡನ ದೊಡ್ಡಿಯ ಮರೀಗೌಡ ತಾವು ಅಂಗವಿಕಲರಾಗಿದ್ದು, ತ್ರಿಚಕ್ರ ವಾಹನ ಕೊಡಿಸುವಂತೆ ಮಾಡಿದ ಮನವಿಗೆ ಸ್ಪಂದಿಸಿದ ಡಿಸಿಎಂ ಅವರು ಸೌಲಭ್ಯ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಕನಕಪುರದ 25 ಮಂದಿ ಪೌರಾಕಾರ್ಮಿಕರು ತಮಗೊಂದು ಮನೆ ಬೇಕೆಂದು ಮನವಿ ಮಾಡಿದಾಗ ಸಕರಾತ್ಮಕವಾಗಿ ಸ್ಪಂದಿಸಿದರು. ಮತ್ತೊಂದು ಸುತ್ತು ಸಮಾಲೋಚನೆ ನಡೆಸಿ ಮನೆ ಸ್ವರೂಪ ತೀರ್ಮಾನಿಸುವ ಭರವಸೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments