ಡಯಾಲಿಸಿಸ್ ಸೇವೆಯಲ್ಲಿ ಸಮಸ್ಯೆಯಾಗಲು ಮೂಲ ಕಾರಣ ಹಿಂದಿನ ಸರ್ಕಾರದ ಅವಧಿಯಲ್ಲಿ ನೇಮಕ ಗೊಂಡಿರುವ ಎರಡು ಏಜೆನ್ಸಿಗಳು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆರೋಪಿಸಿದರು.
ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, “ನಾನು ಆರೋಗ್ಯ ಸಚಿವನಾದ ಬಳಿಕ ಡಯಾಲಿಸಿಸ್ ಕೇಂದ್ರಗಳ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಹೆಚ್ಚು ಒತ್ತು ನೀಡಿ ಕೆಲಸ ಮಾಡುತ್ತಿರುವೆ” ಎಂದರು.
“ಹಿಂದಿನ ಸರ್ಕಾರ ಎರಡು ಏಜೆನ್ಸಿಯವರಿಗೆ ಡಯಾಲಿಸಿಸ್ ನಿರ್ವಹಣೆಗೆ ಕೊಟ್ಟಿತ್ತು. ಅದರಲ್ಲಿ ಬಿಅರ್‌ಎಸ್‌ನವರು ಅರ್ಧದಲ್ಲೇ ಕಾರ್ಯ ಸ್ಥಗಿತಗೊಳಿಸಿದ್ದರು. ಬಳಿಕ ಇಎಸ್‌ಕೆಇಜಿ ಸ್ಥೆಯವರಿಗೆ ನೀಡಲಾಗಿತ್ತು. ಈ ಸಂಸ್ಥೆಯವರು ಡಯಾಲಿಸಿಸ್ ಕೇಂದ್ರಗಳನ್ನ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬುದರ ಬಗ್ಗೆ ಸಾರ್ವಜನಿಕರು, ಹಾಗೂ ಸಿಬ್ಬಂದಿಗಳಿಂದ ಸಾಕಷ್ಟು ದೂರುಗಳು ಬಂದಿದ್ದವು” ಎಂದರು.
“ಡಯಾಲಿಸಿದ್ ಕೇಂದ್ರಗಳಲ್ಲಿ ವೈದ್ಯರನ್ನ ನೇಮಿಸಿರಲಿಲ್ಲ. ಅಲ್ಲದೇ ಏಜೆನ್ಸಿಯವರು ಸಿಬ್ಬಂದಿಗಳಿಗೆ ಸಂಬಳ ಸರಿಯಾಗಿ ಕೊಡುತ್ತಿರಲಿಲ್ಲ. ಇಎಸ್ಸೈ,ಪಿಎಫ್ ಕಟ್ಟಿರಲಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು” ಎಂದು ತಿಳಿಸಿದರು.
“ಡಯಾಲಿಸಿಸ್ ಆರೋಗ್ಯ ಸೇವೆ ಸಮರ್ಪಕವಾಗಿ ನಡೆಸುವ ನಿಟ್ಟಿನಲ್ಲಿ ನಾವು ನಾಲ್ಕು ವಿಭಾಗವಾರು ಹೊಸ ಟೆಂಡರ್ ದಾರರನ್ನ ಆಹ್ವಾನಿಸಿ, ಬಹುತೇಕ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದ್ದೇವೆ. ರಾಜ್ಯದ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳ ಡಯಾಲಿಸಿಸ್ ಕೇಂದ್ರಗಳಲ್ಲಿ ಪಿಪಿಪಿ ಮಾದರಿಯಲ್ಲಿ ಹೊಸ ಯಂತ್ರಗಳನ್ನ ಅಳವಡಿಸಲು ಕ್ರಮವಹಿಸಲಾಗಿದೆ. ಸೊಂಕು ರಹಿತವಾದ, ಏಕ ಬಳಕೆಯ ಸುಮಾರು 800 ಡಯಾಲಿಸಿಸ್ ಯಂತ್ರಗಳನ್ನ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ” ಎಂದು ಮಾಹಿತಿ ನೀಡಿದರು.
“ಹೊಸ ಏಜನ್ಸಿಯವರು ಹೊಸ ಯಂತ್ರಗಳನ್ನ ಹಾಕಿ ಸೇವೆ ಆರಂಭಿಸಬೇಕು. ಒಂದು ವೇಳೆ ಇವರು ಯಂತ್ರಗಳನ್ನ ಹಾಕಲು ಮುಂದೆ ಬರಲ್ಲ ಎಂಬ ಶಂಕೆಗಳು ವ್ಯಕ್ತವಾದರೆ, ಪರ್ಯಾಯ ಮಾರ್ಗವಾಗಿ ಸರ್ಕಾರವೇ ಯಂತ್ರಗಳನ್ನ ಖರೀಧಿಸಿ ಇಲಾಖೆಯಿಂದಲೇ ಡಯಾಲಿಸಿಸ್ ನಿರ್ವಹಣೆ ಮಾಡಬೇಕಾಗುತ್ತದೆ. ಈ ಬಗ್ಗೆಯೂ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ” ಎಂದರು.
“ನಾವು ಸಿಬ್ಬಂದಿಗಳ ಪರವಾಗಿಯೇ ಇದ್ದೇವೆ. ಏಜನ್ಸಿಯವರು ವೇತನ ನೀಡದಿರುವುದು ನನ್ನ ಗಮನಕ್ಕೆ ಬಂದಾಗ ನಾವು ಮಧ್ಯಪ್ರವೇಶ ಮಾಡಿ ಸಿಬ್ಬಂದಿಗಳು ಹಾಗೂ ಸಂಸ್ಥೆಯವರೊಂದಿಗೆ ಚರ್ಚಿಸಿ ವೇತನ ಕೊಡಿಸುವ ಕೆಲಸ ಮಾಡಿದ್ದೇವೆ. ESI, PF ಅನ್ನ ಸಂಸ್ಥೆಯವರು ಕೊಡಬೇಕು. ಎರಡು ಸಂಸ್ಥೆಯವರನ್ನ ಕಪ್ಪು ಪಟ್ಟಿಗೆ ಸೇರಿಸಿ ಬಾಕಿ ಇರುವ ESI, PF ಅನ್ನ ಸಿಬ್ಬಂದಿಗಳಿಗೆ ಕೊಡಿಸುವಂತೆ ಅಧಿಕಾರಿಗಳು ಜೊತೆ ಚರ್ಚಿಸಿದ್ದೇನೆ” ಎಂದು ಹೇಳಿದರು.
“ವ್ಯವಸ್ಥೆ ಸರಿಪಡಿಸುವತ್ತ ಕಾರ್ಯ ನಿರ್ವಹಿಸುತ್ತಿರುವಾಗ ಡಯಾಲಿಸಿಸ್ ಸಿಬ್ಬಂದಿಗಳು ಸಹಕರಿಸಬೇಕು. ಮುಷ್ಕರ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು. ಸದ್ಯಕ್ಕೆ ಡಯಾಲಿಸಿಸ್ ಸೇವೆಯನ್ನ ಆರೋಗ್ಯ ಸಿಬ್ಬಂದಿಗಳಿಂದಲೇ ನಿರ್ವಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ” ಎಂದರು.