Homeಕರ್ನಾಟಕಪರಿಸರ ಸಂಬಂಧಿ ಅನುಮತಿ ಸಿಕ್ಕರೆ 3 ತಿಂಗಳಲ್ಲಿ ವಿಜಯಪುರ ಏರ್‌ಪೋರ್ಟ್ ಕಾರ್ಯಾರಂಭ: ಎಂ ಬಿ ಪಾಟೀಲ್

ಪರಿಸರ ಸಂಬಂಧಿ ಅನುಮತಿ ಸಿಕ್ಕರೆ 3 ತಿಂಗಳಲ್ಲಿ ವಿಜಯಪುರ ಏರ್‌ಪೋರ್ಟ್ ಕಾರ್ಯಾರಂಭ: ಎಂ ಬಿ ಪಾಟೀಲ್

  • ವಿಜಯಪುರ ವಿಮಾನ ನಿಲ್ದಾಣಕ್ಕೆ ಇದ್ದ ಅಡೆತಡೆ ನಿವಾರಿಸಿದ ಸುಪ್ರೀಂಕೋರ್ಟ್

ಕಾರ್ಯಾರಂಭ‌ ಮಾಡಲು ಸಿದ್ಧವಾಗಿರುವ ವಿಜಯಪುರ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಇದ್ದ ಪರಿಸರ ಸಂಬಂಧಿ ಅನುಮತಿಯ ಅಡೆತಡೆಯನ್ನು ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠವು ಬುಧವಾರ ನೀಡಿರುವ ಅಂತಿಮ‌ ತೀರ್ಪಿನಲ್ಲಿ ನಿವಾರಿಸಿದೆ. ಹೀಗಾಗಿ ಮುಂದಿನ ಪ್ರಕ್ರಿಯೆಗಳು ನಿರೀಕ್ಷೆಯಂತೆ ನಡೆದರೆ ಮೂರು ತಿಂಗಳೊಳಗೆ ವಿಮಾನ‌ ನಿಲ್ದಾಣದ ಲೋಕಾರ್ಪಣೆ ನೆರವೇರಿಸಬಹುದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ‌ ಬಿ ಪಾಟೀಲ್ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಈ ಸಂಬಂಧ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾ.ಜಯಮಾಲ್ಯ ಬಾಗ್ಚಿ ಮತ್ತು ನ್ಯಾ.ವಿಪುಲ್ ಎಂ ಪಾಂಚೋಲಿ ಅವರಿದ್ದ ಪೀಠವು ನೀಡಿರುವ ಅಂತಿಮ ತೀರ್ಪು ಸ್ವಾಗತಾರ್ಹ ಎಂದಿದ್ದಾರೆ.

ಅಲ್ಲದೆ, ಈ ವಿಚಾರದಲ್ಲಿ ವಿಜಯಪುರ ವಿಮಾನ ನಿಲ್ದಾಣ ಯೋಜನೆಯಲ್ಲಿ ಇರುವ ಸಾರ್ವಜನಿಕ ಹಿತಾಸಕ್ತಿಯನ್ನು ತಿಳಿದುಕೊಂಡು, ರಾಜ್ಯದ ಪರವಾಗಿ ವಿಚಾರ ಮಂಡಿಸಿದ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹತಾ, ಹೆಸರಾಂತ ನ್ಯಾಯವಾದಿ ಕಪಿಲ್ ಸಿಬಲ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮತ್ತು ರಾಜ್ಯದ ಪರ ವಕೀಲ ನಿಶಾಂತ್ ಪಾಟೀಲ್ ಅವರಿಗೆ ಸಚಿವರು ವಿಶೇಷ ಧನ್ಯವಾದಗಳನ್ನು ಹೇಳಿದ್ದಾರೆ.

ಖಾಸಗಿ ಸೇರಿದಂತೆ ಸಾರ್ವಜನಿಕ ಹಿತಾಸಕ್ತಿಯ ಯೋಜನೆಗಳನ್ನು ಕೈಗೆತ್ತಿಕೊಳ್ಳುವಾಗಲೇ ಪರಿಸರ ಸಂಬಂಧಿ ಅನುಮೋದನೆಗಳನ್ನು ತೆಗೆದುಕೊಳ್ಳಬೇಕಾದ್ದು ಕಡ್ಡಾಯವಾಗಿದೆ. ಇದನ್ನು ಪಾಲಿಸದ ದೇಶದ ಎಲ್ಲಾ ಯೋಜನೆಗಳನ್ನೂ ರದ್ದುಪಡಿಸುವಂತೆ ಸುಪ್ರೀಂಕೋರ್ಟ್ 2025ರ ಮೇ 16ರಂದು ಆದೇಶಿಸಿತ್ತು. ಇದರಿಂದಾಗಿ ವಿಜಯಪುರ ಏರ್ಪೋರ್ಟ್ ಯೋಜನೆಗೂ ಸಂಕಷ್ಟ ಎದುರಾಗಿತ್ತು. ಆಗ ನಾನು ಮೆಹತಾ, ಸಿಬಲ್ ಮತ್ತು ಪಾಟೀಲ್ ಅವರನ್ನು ಸಂಪರ್ಕಿಸಿ, ಈ ತೊಡಕನ್ನು ನಿವಾರಿಸಲು ಕೇಳಿಕೊಂಡಿದ್ದೆ. ಇಂದಿನ ಅಂತಿಮ ತೀರ್ಪಿನಿಂದ ನಿರಾಳವಾಗಿದ್ದೇನೆ ಎಂದು ಅವರು ನೆನಪಿಸಿಕೊಂಡಿದ್ದಾರೆ.

ಪರಿಸರ ಸಂಬಂಧಿ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಈಗ ಹೇಳಲಾಗಿದೆ. ಹೀಗಾಗಿ ವಿಜಯಪುರ ಏರ್ಪೋರ್ಟ್ ಸಂಬಂಧದ ಅಗತ್ಯ ಅನುಮತಿ ಸಿಗಲು ದಾರಿ ಸುಗಮವಾಗಿದೆ.‌ ಇದಾದ ಬಳಿಕ ನಾಗರಿಕ ವಿಮಾನಯಾನ ಮಹಾನಿರ್ದೇಶಕರು ವಿಜಯಪುರಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಆಗಿರುವ ಕೆಲಸಗಳನ್ನು ಪರಿಶೀಲಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ಸುಪ್ರೀಂಕೋರ್ಟ್ ಈ ವರ್ಷದ ಏ.1ರಂದು ವಿಚಾರಣೆ ನಡೆಸಿದಾಗ, ಪರಿಸರ ಸಂಬಂಧಿ ಅನುಮತಿಗೆ ಕಾಯುತ್ತಿರುವ ಯೋಜನೆಗಳಿಗೆ ತಾತ್ಕಾಲಿಕ ವಿನಾಯಿತಿ ನೀಡಿ, ವಿಸ್ತೃತ ಅಧ್ಯಯನಕ್ಕೆ ಸೂಚಿಸಿ, ಅಂತಿಮ‌ ತೀರ್ಪನ್ನು ಕಾದಿರಿಸಿತ್ತು. ಇವತ್ತು ನೀಡಿರುವ ತೀರ್ಪಿನಲ್ಲಿ ಶಾಶ್ವತ ವಿನಾಯಿತಿ ನೀಡಿದೆ. ಏತನ್ಮಧ್ಯೆ ನಾವು ವಿಜಯಪುರ ಏರ್ಪೋರ್ಟ್ ಸಂಬಂಧ ಪರಿಸರ ಸಂಬಂಧಿ ಅನುಮತಿ ಕೋರಿ ಅರ್ಜಿ ಹಾಕಿದ್ದೇವೆ ಎಂದು ಅವರು ವಿವರಿಸಿದ್ದಾರೆ.

ಪರಿಸರ ಸಂಬಂಧಿ ಒಪ್ಪಿಗೆ ಸಿಕ್ಕಿದ ಬಳಿಕ ನಾಗರಿಕ ವಿಮಾನಯಾನ ಮಹಾನಿರ್ದೇಶಕರು ವಿಜಯಪುರ ವಿಮಾನ ನಿಲ್ದಾಣದಲ್ಲಿ ಆಗಿರುವ ಕೆಲಸಗಳನ್ನು ಪರಿಶೀಲಿಸಲಿದ್ದಾರೆ. ಅದೊಂದು ಪ್ರಕ್ರಿಯೆ ಮುಗಿದರೆ ವಿಮಾನ ನಿಲ್ದಾಣ ಕಾರ್ಯಾರಂಭಕ್ಕೆ ದಾರಿ ಸುಗಮವಾಗಲಿದೆ ಎಂದು ಪಾಟೀಲ ಹೇಳಿದ್ದಾರೆ.

ಈ ವಿಮಾನ ನಿಲ್ದಾಣ ನಿರ್ಮಾಣಕ್ಕೆ 614 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ವಿನಿಯೋಗಿಸಲಾಗಿದೆ. ಇದು ಕಾರ್ಯಾರಂಭ ಮಾಡಿದರೆ ಕಿತ್ತೂರು ಕರ್ನಾಟಕ ಮತ್ತು ನೆರೆ ಹೊರೆ ಪ್ರದೇಶಗಳಿಗೂ ಅನುಕೂಲವಾಗಲಿದೆ ಎಂದು ಪಾಟೀಲ ಪ್ರತಿಪಾದಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments